Sunday, August 10, 2014

“ಯಾನ ”ದೊಂದಿಗಿನ ನನ್ನ ಯಾನ : ಒಂದು ಸುಂದರ ಅನುಭವ

ಮೊದಲ ಬಾರಿಗೆ ಬೈರಪ್ಪನವರ ಕಾದಂಬರಿ ಓದಿದೆ. ಆ ಪಯಣದ ಅನುಭವವನ್ನು ಅಕ್ಷರರೂಪದಲ್ಲಿ ವ್ಯಕ್ತಪಡಿಸಬೇಕಿಸಿತು. ಇದು ಕಾದಂಬರಿಯ ವಿಮರ್ಶೆಯಲ್ಲ. ವಿಮರ್ಶೆ ಮಾಡುವಷ್ಟು ದೊಡ್ಡವನು ನಾನಲ್ಲ. ದೊಡ್ಡ ಕಾದಂಬರಿಕಾರರ ಕಾದಂಬರಿಯ ಕುರಿತು ಈ ಚಿಕ್ಕವನ ಅಭಿಪ್ರಾಯವಷ್ಟೇ.
..................................................................................................................................................

ಯಾನಕ್ಕಿಂತ ಮುಂಚೆ ಬೈರಪ್ಪನವರ ಯಾವುದೇ ಕಾದಂಬರಿಗಳನ್ನು ನಾನು ಓದಿರಲಿಲ್ಲ. ಆವರಣ ಓದಬೇಕೆಂಬ ಆಸೆಯಿತ್ತು, ಆದರೆ ಆಸೆಯಾಗಿಯೇ ಉಳಿದುಬಿಟ್ಟಿತು . ಕಾದಂಬರಿಗಿಂತ ಇತಿಹಾಸ, ಆಧ್ಯಾತ್ಮ  ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕಗಳೇ ನನಗೆ ಇಷ್ಟವಾಗಿತ್ತು. ಅವುಗಳನ್ನಷ್ಟೇ ನಾನು ಓದಿದ್ದೆ. ಬೇರೆ ಪುಸ್ತಕಗಳ ಬಗ್ಗೆ ನನಗೆ ಅಷ್ಟು ಆಸಕ್ತಿಯಿರಲಿಲ್ಲ.
 ಬೈರಪ್ಪನವರ ಹೊಸ  ಕಾದಂಬರಿ ಯಾನ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಕನ್ನಡ ಪ್ರಭದಲ್ಲಿ ಪ್ರಕಟವಾಗಿತ್ತು. ಸುದ್ದಿ ನೋಡಿ ಈ ಬಾರಿ ಬೈರಪ್ಪನವರ ಕಾದಂಬರಿ ಓದಬೇಕೆಂದು ನಿಶ್ಚಯಿಸಿದೆ. ಪುಸ್ತಕ ಬಿಡುಗಡೆಯಾದ ಮಾರನೆ ದಿನವೇ ಪುಸ್ತಕ ಖರೀದಿಸಿದೆ.

ಒಂದು ಪುಸ್ತಕ ಕೊಂಡು ತಂದರೆ ಅದನ್ನು ಒಂದೆರಡು- ಮೂರು ದಿನಗಳಲ್ಲಿ ನಾನು ಮುಗಿಸಿಬಿಡುತ್ತಿದ್ದೆ. ಆದರೆ ಯಾನವನ್ನು ಓದಿ ಮುಗಿಸಲು ಒಂದು ವಾರ ಮತ್ತು ಎರಡು ದಿನ ಬೇಕಾಯಿತು!.
ಪುಸ್ತಕ ತಂದ  ದಿನವೇ ಓದಲು ಆರಂಭಿಸಿದೆ  ಆದರೆ ಮೊದಲಿಗೆ ಅರ್ಥೈಸಿಕೊಳ್ಳಲು ಆಗಲಿಲ್ಲ. ಕಾದಂಬರಿಯ ಆರಂಭ ನನಗೆ ಹಲವು ಗೊಂದಲಗಳನ್ನು ಸೃಷ್ಟಿಸಿತು. ಕ್ರಮೇಣ ಏಕಾಗ್ರತೆಯಿಂದ ಓದಲು ಮುಂದುವರೆಸಿದಾಗ ಯಾನ ನನ್ನನ್ನು ಸಂಪೂರ್ಣವಾಗಿ ಅವರಿಸಿಬಿಟ್ಟಿತು. ಕಾದಂಬರಿಯಲ್ಲಿ ನಾನು ತಲ್ಲೀನನಾಗಿಬಿಟ್ಟೆ!.

ಆಕಾಶ ಮೇದಿನಿಯ ವಿವಾಹ ಪ್ರಸ್ತಾಪದಿಂದ ಕಾದಂಬರಿ ಆರಂಭವಾದಾಗ ಬಹಳ ಗೊಂದಲವಾಯಿತು. ಆಕಾಶ, ಮೇದಿನಿ ಇಬ್ಬರು ಸೋದರ ಸೋದರಿಯರು. ಸೋದರ ಸೋದರಿಯರಿಗೆ ಮದುವೆಯೇ? ಇದು ಹೇಗೆ ಸಾಧ್ಯ? ಪ್ರಕೃತಿಗೆ ವಿರುದ್ದವಲ್ಲವೇ? ಬೈರಪ್ಪನವರು ಏನು ಹೇಳಲು ಹೊರಟಿದ್ದಾರೆ? ಎಂಬೆಲ್ಲ ಗೊಂದಲ, ಪ್ರಶ್ನೆಗಳು ಮನದಲ್ಲಿ ತುಂಬಿಕೊಂಡೆವು. ಗೊಂದಲಗಳನ್ನು ಬದಿಗೆ ಸರಿಸಿ ಓದು ಮುಂದುವರೆಸಿದೆ. ಮುಂದೆ ಬಂದ ಸುದರ್ಶನ್ ಮತ್ತು ಉತ್ತರೆಯ ಕಥೆಗಳು ಬಹಳಷ್ಟು ಕೂತುಹಲಕಾರಿಯಾಗಿದ್ದವು. ಕೊನೆ ಕ್ಷಣದವರೆಗೂ ಆ ಕೂತುಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಾನ ಸಫಲವಾಗಿತ್ತು.
ಬೈರಪ್ಪನವರು ಕಾದಂಬರಿಗೆ ಆರಿಸಿಕೊಂಡಿರುವ ವಸ್ತು ಅಂತರಿಕ್ಷ ಯಾನ. ಯಾನದ ಪ್ರಮುಖ ಪಾತ್ರಗಳಾದ ಸುದರ್ಶನ್ ಮತ್ತು ಉತ್ತರಾ ಸೂರ್ಯನ ಗುರುತ್ವದ ಆಚೆಗೆ ಪ್ರಾಕ್ಸಿಮ ಸೆಂಟರಿಸ್ ಗೆ  ಪಯಣಿಸಿ ಅಲ್ಲಿ ಯಾವುದಾದರೂ ನಕ್ಷತ್ರವಿದೆಯೇ ಎಂದು ಗುರುತಿಸಿ, ಇದ್ದರೆ ಅದು ವಾಸಿಸಲು  ಯೋಗ್ಯವೇ ಎಂದು ಪರೀಕ್ಷಿಸಿ,  ಯಾನಿಗಳಾದ ಸುದರ್ಶನ್ ಮತ್ತು ಉತ್ತರಾ ಒಂದು ಗಂಡು ಮತ್ತು ಹೆಣ್ಣು ಸಂತಾನಗಳನ್ನು ಸೃಷ್ಟಿಸಿ ಅವರು ಅಲ್ಲಿ ಜೀವಿಸುವಂತೆ ಮಾಡುವುದು. ಇದು ಒಂದೆರಡು ವರ್ಷಗಳ ಯಾನವಲ್ಲ, ಸಾವಿರಾರು ವರ್ಷಗಳ ಯಾನ.   ಬೈರಪ್ಪನವರ ಚಿಂತನಾ ಸಾಮರ್ಥ್ಯಕ್ಕೆ ತಲೆಬಾಗಲೇಬೇಕು. ನನ್ನಂತಹ ಸಾಮಾನ್ಯರಿಗೆ ಈ ವಿಷಯಗಳು  ಚಿಂತನೆಗೂ ನಿಲುಕದ ವಿಚಾರ. ಈ ಕಲ್ಪನೆ ನನಗೆ ಬಹಳ ಇಷ್ಟವಾಯಿತು.

 ಯಾನ ಮೇಲ್ನೋಟಕ್ಕೆ ವೈಜ್ಞಾನಿಕ ಕಾದಂಬರಿ  ಎಂದಿನಿಸುತ್ತದೆ ಆದರೆ ಕಾದಂಬರಿಯ ಹೊಳಹೊಕ್ಕರೆ ವಿಜ್ಞಾನದ ಜೊತೆಗೆ ಆಧ್ಯಾತ್ಮ, ಮಾನವೀಯ ಸಂಬಂಧಗಳು, ದೇಶಭಕ್ತಿ ಹೀಗೆ ಎಲ್ಲವೂ ಕಾದಂಬರಿಯಲ್ಲಿದೆ. ರಾಜಕೀಯವು ಇದೆ. ಅಮೇರಿಕ ಸಹ ಇದೆ. ಇಸ್ರೇಲೂ ಇದೆ. ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂದು ಕೇಳುವುದು ಸೂಕ್ತವೆನಿಸುತ್ತದೆ.

ಕಾದಂಬರಿಯಲ್ಲಿ ನನಗೆ ಬಹುವಾಗಿ ಇಷ್ಟವಾದ  ಪಾತ್ರವೆಂದರೆ ವಿಜ್ಞಾನಿ ಡಾ, ಸುದರ್ಶನ್ ರ ಪಾತ್ರ. ಯಾನ ಯಶಸ್ವಿಯಾಗಲು ಉತ್ತರೆ ಸಹಕರಿಸದೆ ತಾನು  ಹತಾಶನಾದಾಗ, ಸುದರ್ಶನ್ ಆಧ್ಯಾತ್ಮದ ತಮ್ಮ ಕಡೆಗೆ ಒಲವನ್ನು ಬದಲಿಸಿ ಹತಾಶೆಗಳನ್ನು ಬಿಟ್ಟು ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಂಡ ಪರಿ ನಿಜಕ್ಕೂ ಅದ್ಭುತ. ವಿಜ್ಞಾನ ಮತ್ತು ಆಧ್ಯಾತ್ಮ ಗಳಿಗೆ ಸಂಬಂಧವಿದೆ  ಎಂಬುದನ್ನು ಬೈರಪ್ಪನವರು ಸುದರ್ಶನ್ ಪಾತ್ರದ ಮೂಲಕ ಹೇಳುತ್ತಾರೆ.  
ಸುದರ್ಶನ್ ಪಾತ್ರದಲ್ಲಿ ಅಚಲ ದೇಶಭಕ್ತಿಯನ್ನು ಸಹ ಕಾಣಬಹುದು. ಯಾನದ ನೌಕೆಯನ್ನು ತಯಾರಿಸಲು ಆತ ಪಟ್ಟ ಶ್ರಮ, ಯಾನವನ್ನು ಯಶಸ್ವಿಯಾಗಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ ಸುದರ್ಶನ್ ರ ಪ್ರತಿ ನಡೆಯಲ್ಲೂ ವ್ಯಕ್ತವಾಗಿದೆ. ಇದು ಅಚಲ ದೇಶ ಭಕ್ತಿಯೇ ಸರಿ.

ನನನ್ನು ಕಾಡಿದ ಪಾತ್ರವೆಂದರೆ ಪೈಲಟ್ ಉತ್ತರೆಯ ಪಾತ್ರ. ಆಕೆಯ ಸ್ವಾಭಿಮಾನ ಬಹಳ ಇಷ್ಟವಾಯಿತು. ಏರ್ ಫೋರ್ಸ್ ನಲ್ಲಿ ಫ್ಲೈಟರ್ ಪೈಲಟ್ ನಂತ ಉನ್ನತ ಹುದ್ದೆಗೆ ಸ್ತ್ರೀ ಗೆ ಸಿಗುವುದು  ಅಸಾಧ್ಯವೆಂದು ತಿಳಿದಾಗ ಆಕೆ ಧೃತಿಗೆಡದೆ ಹೋರಾಡಿ ಉನ್ನತ ಹುದ್ದೆಗೇರಿದ್ದು ಆಕೆಯ ಪ್ರಖರ ಸ್ವಾಭಿಮಾನತೆಗೆ ಸಾಕ್ಷಿ.  ಹೆಣ್ಣು ಸ್ವಾಭಿಮಾನಿಯಾಗಬೇಕೆಂಬ ಸಂದೇಶವನ್ನು ಈ ಪಾತ್ರದ ಬೈರಪ್ಪನವರು ನೀಡಿದ್ದಾರೆ. ಹೆಣ್ಣು ಗಂಡೆಂಬ ಭೇದ ಇರಕೂಡದು ಎಂದು ತಿಳಿಸಿಕೊಡುತ್ತಾರೆ.
ಮೊದಲು ನೂರು ದಿನಗಳ ಯಾನಕ್ಕಾಗಿ ಪೈಲಟ್ ಯಾದವನ್ನು ವಿವಾಹವಾಗಿ ಅದನ್ನು ಮುಗಿಸಿ, ಮತ್ತೊಂದು ಯಾನಕ್ಕೆ ಯಾದವನು ಒಪ್ಪದೇ ಇದ್ದಾಗ ಉತ್ತರೆ ಅನುಭವಿಸಿದ ಮಾನಸಿಕ ತೊಳಲಾಟಗಳನ್ನು ಓದುವಾಗ ಬಹಳ ಖೇದವೆನಿಸಿತು. ಯಾದವ್ ದೂರವಾದರೂ ಬೇರೊಬ್ಬನೊಂದಿಗೆ ಕೂಡುವ ಮನಸ್ಸನ್ನು ಆಕೆ ಮಾಡುವುದಿಲ್ಲ.  ಭಾರತೀಯ ಹೆಣ್ಣಿನ ಅಂತಃಕರಣದ ಭಾವನೆಗಳನ್ನು ಬೈರಪ್ಪನವರು ಉತ್ತರೆ ವ್ಯಕ್ತಪಡಿಸುವ ಅಕ್ರೋಶ, ಸಿಟ್ಟು, ಅಸಹಾಯಕತೆಗಳ ಮೂಲಕ  ವಿವರಿಸುತ್ತಾರೆ.

ಉತ್ತರೆಯ ಪತಿ ಯಾದವನ ಪಾತ್ರ ಗಂಡಸಿನ ಮಾನಸಿಕ ತೊಳಲಾಟಗಳನ್ನು ವ್ಯಕ್ತಪಡಿಸುತ್ತದೆ. ಉತ್ತರೆ ದೂರವಾದ ನಂತರ ಯಾದವ್ ಮತ್ತೊಂದು ಮದುವೆಯಾದರೂ ಉತ್ತರೆ ಅವನ ಮನದಿಂದ ದೂರವಾಗುವುದಿಲ್ಲ. ತನ್ನ ಮಗಳಿಗೆ ಉತ್ತರೆಯ ಹೆಸರನ್ನು ಇಟ್ಟು ಆಕೆಯಲ್ಲಿ ಉತ್ತರೆಯನ್ನು ಕಾಣುವ ಪ್ರಯತ್ನವನ್ನು ಮಾಡುತ್ತಾನೆ. ಕೆಲವು ಕಾದಂಬರಿಕಾರರು ಕೇವಲ ಒಂದು ದೃಷ್ಟಿಯಿಂದ ಅವಲೋಕಿಸಿತ್ತಾರೆ. ಆದರೆ ಬೈರಪ್ಪನವರು ಗಂಡು-ಹೆಣ್ಣು ಇಬ್ಬರ ಭಾವನೆಗಳನ್ನು ಅವಲೋಕಿಸಿ ಆ  ಕುರಿತು ಬೆಳಕು ಚೆಲ್ಲುತ್ತಾರೆ.                             
                                     
ಇನ್ನು ಕಾದಂಬರಿಯಲ್ಲಿ ಅಕ್ಕನ ಪ್ರೀತಿಯಿದೆ, ಸುದರ್ಶನ್ ಮತ್ತು ಅವರ ಅಕ್ಕನ ಸೋದರತ್ವದ ಸಂಬಂಧದಲ್ಲಿ ಅಕ್ಕನ ಪ್ರೀತಿ ಕಾಣಬಹುದಾಗಿದೆ.  ಕಾದಂಬರಿಯಲ್ಲಿ ತಾಯಿಯ ವಾತ್ಸಲ್ಯವೂ ಇದೆ. ಉತ್ತರೆಯ ತಾಯಿಯ ಪಾತ್ರದಲ್ಲಿ ಇದನ್ನು ಕಾಣಬಹುದು.
ಭಾರತದ ಮೇರು ಪರ್ವತ ಹಿಮಾಲಯದ ಸುಂದರ ವರ್ಣನೆ ಕಾದಂಬರಿಯಲ್ಲಿದೆ.  ಮಾಧ್ಯಮಗಳ ಭಟ್ಟಂಗಿತನವೂ ಕಾದಂಬರಿಯಲ್ಲಿದೆ. ಉತ್ತರೆ 100 ದಿನ ಯಾನ ಮುಗಿಸಿ ಬಂದಾಗ ಮಧ್ಯಮಗಳನು ಆಕೆಯನ್ನು ಹೀರೋಯಿನ್ ಮಾಡಿದ ಪ್ರಹಸನದ ಮೂಲಕ ಮಾದ್ಯಮಗಳ ಭಟ್ಟಂಗಿತನವನ್ನು ಬೈರಪ್ಪನವರು ವಿವರಿಸುತ್ತಾರೆ. ಧಾರ್ಮಿಕ ಭಾವನೆಗಳನ್ನು ವಿರೋಧಿಸುವ ಜಾತ್ಯತೀತವಾದಿಗಳ ಸೋಗಲಾಡಿತನವನ್ನು ಬೈರಪ್ಪನವರು ಬೆತ್ತಲುಗೊಳಿಸುತ್ತಾರೆ. ಭಾರತದ ಅಂತರಿಕ್ಷ ಯಾನದ ಮಾಹಿತಿಯನ್ನು ತನ್ನ ಗೂಢಚರ್ಯ ಸಂಸ್ಥೆಗಳ ಸಂಗ್ರಹಿಸುವ ಅಮೇರಿಕಾದ ಕ್ಷುದ್ರ ಬುದ್ದಿ, ಪಾಕಿಸ್ತಾನ ಮತ್ತು ಚೀನಾಗಳ ಕಪಟಿತನ ಹೀಗೆ ರಾಜಕೀಯವೂ ಸೇರಿ ಎಲ್ಲವೂ ಕಾದಂಬರಿಯಲ್ಲಿದೆ.     
ಬೈರಪ್ಪನವರ ಕಾದಂಬರಿ ಯಾನ ವಿಚಾರಗಳ ಸಾಗರ.  ಈ “ಯಾನ” ದ ಯಾನದ ನನಗೆ ಬಹಳ ಇಷ್ಟವಾಯಿತು. ಇದೊಂದು ಸುಂದರ ಯಾನ. ಸುಂದರ ಅನುಭವ.  


ರವಿತೇಜ ಶಾಸ್ತ್ರೀ.                            

No comments:

Post a Comment