ಇಂದು
ಮನವು ಸಂತೋಷದ ಕಡಲಲ್ಲಿ ತೇಲಾಡುತ್ತಿದೆ. ಸಾರ್ಥಕತೆಯ ಭಾವ ಮನದಲ್ಲಿ ವ್ಯಕ್ತವಾಗುತ್ತಿದೆ. ಕಾರಣ
ನಮ್ಮ ಸಂಸ್ಥೆ “ಉತ್ತಿಷ್ಠ ಭಾರತ” ಅಧಿಕೃತವಾಗಿ ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಪರಿಷತ್ತಿನ
ಸಭಾಂಗಣದಲ್ಲಿ ಲೋಕಾರ್ಪಣೆಯಾಯಿತು. ಸರಳ, ಸುಂದರ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು. ಆ
ಕಾರ್ಯಕ್ರಮದ ಭಾಗವಾಗಿದ್ದಕ್ಕೆ ಅತೀವ ಸಂತೋಷವಾಗುತ್ತಿದೆ.
“ಸಮರ್ಪಣ್” ಎಂಬ ಹೆಸರಿನಲ್ಲಿ
ಕಾರ್ಯಕ್ರಮ ನಡೆಸಿ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ
ಬಹುಮುಖ್ಯ ಆಕರ್ಷಣೆಯಾಗಿದ್ದವರು ದಿವಗಂತ ಲೆಫ್ಟಿನೆಂಟ್ ಕರ್ನಲ್
ಅಜಿತ್ ಭಂಡಾರ್ಕರ್ ರವರ ಧರ್ಮ ಪತ್ನಿ ಶ್ರೀಮತಿ ಶಕುಂತಲ ಭಂಡಾರ್ಕರ್ ಅವರ ಭಾಷಣ . ಆ ಸ್ಪೂರ್ತಿದಾಯಕ
ಮತ್ತು ಭಾವತ್ಮಕವಾದ ಆ ಭಾಷಣ ನಿಜಕ್ಕೂ ಸ್ಪೂರ್ತಿಯ ಚಿಲುಮೆಯೇ ಸರಿ.
ತಮ್ಮ ಪತಿಯ ಸಂಪೂರ್ಣ ಜೀವನವನ್ನು ಸಭಿಕರ ಮುಂದಿಟ್ಟ ಅವರು ಅಜಿತ್ ಭಂಡಾರ್ಕರ್ ಅವರ ಅವರ
ಕಾರ್ಯಕ್ಷಮತೆ, ಕರ್ತವ್ಯ ನಿಷ್ಠೆ ಕುರಿತು ಬಹಳ ಹೆಮ್ಮೆಯಿಂದ ತಮ್ಮ ಪತಿಯ ಜೊತೆಗಿನ ಒಡನಾಟಗಳನ್ನು
ನಮ್ಮೊಂದಿಗೆ ಹಂಚಿಕೊಂಡರು.
ತಮ್ಮ ಪತಿಯ ಸಾವಿನ ಸುದ್ದಿ ತಿಳಿದ ಪ್ರಸಂಗವನ್ನು ನೆನೆದು ಆಕೆ ಭಾವುಕರಾದರು. ಅಂದು ವಾರಾಂತ್ಯದ ದಿವಸ. ದೀಪಾವಳಿಯ ರಜಾದಿನಗಳ ಸಮಯ. ರಜಾದಿನಗಳಿಗೆ ಸಿದ್ದರಾಗಿದ್ದ ಶಕುಂತಲ
ಅವರು ಹಣವನ್ನು ಹೊಂದಿಸಿ ಅಜಿತ್ ರೊಂದಿಗೆ ಶಾಪಿಂಗ್ ಮಾಡಬೇಕೆಂಬ ಹಂಬಲದಿಂದ ಅವರ ಬರುವಿಕೆಗೆ
ಕಾಯುತ್ತಿದ್ದರಂತೆ. ಅಜಿತ್ ಅವರ ಬದಲು ಅಜಿತ್ ಅವರ ಬಹಳಷ್ಟು ಸ್ನೇಹಿತರು ಮನೆಗೆ ಬಂದರು. ಇದರಿಂದ
ಸಂತೋಷಗೊಂಡ ಶಕುಂತಲ ಅವರು ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊ೦ಡರು. ಅಜಿತ್ ರ ವೀರ ಮರಣದ
ಸಾವಿನ ಸುದ್ದಿ ತಿಳಿಸಲು ಬಂದಿದ್ದ ಅತಿಥಿಗಳಿಗೆ ಸುದ್ದಿ ತಿಳಿಸುವುದು ಬಹಳ ಕಷ್ಟಕರವಾಯಿತು. ಕೊನೆಗೆ
ಸಾವಿನ ಸುದ್ದಿ ತಿಳಿದ ಆ ಆಘಾತಕಾರಿ ಕ್ಷಣವನ್ನು ಅವರು
ನೆನೆಯುತ್ತಾ ಬಹಳ ಭಾವುಕರಾದರು.
ತನ್ನ ಪ್ರಿಯ ಪತಿಯನ್ನು ಕಳೆದುಕೊಂಡರೂ ಅವರ ಆತ್ಮಸ್ಥೈರ್ಯ ಕಡಿಮೆಯಾಗಿಲ್ಲ. ತನ್ನ
ಪತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ತ್ಯಾಗ ಮಾಡಿರುವ ಅವರು ಈಗ ತಮ್ಮ ಪ್ರಿಯ ಪುತ್ರನನ್ನು ಸಹ ರಾಷ್ಟ್ರ ಕಾರ್ಯಕ್ಕಾಗಿ ಅಡಿಗೊಳಿಸಿದ್ದಾರೆ. ಶಕುಂತಲ ಅವರ ಪುತ್ರ ಸೈನ್ಯದ ನೇಮಕಾತಿ ಪರೀಕ್ಷೆಯಲ್ಲಿ
ತೇರ್ಗಡೆ ಹೊಂದಿ ಈಗ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ತನ್ನ ತಂದೆ ಸೇವೆ ಸಲ್ಲಿಸಿದ ರೆಜಿಮೆಂಟ್
ನಲ್ಲಿ ಸಲ್ಲಿಸಲಿದ್ದಾರೆ. ಹುತಾತ್ಮ ಯೋಧನ ಪತ್ನಿಗಿಂತ
ಒಬ್ಬ ವೀರ ಯೋಧನ ತಾಯಿಯಗಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಶಕುಂತಲ ಅವರು ಭಾವುಕರಾಗಿ
ನುಡಿದ ಕ್ಷಣಗಳನ್ನು ಜೀವಮಾನದಲ್ಲಿ ನಾನು ಮರೆಯಲು
ಸಾಧ್ಯವಿಲ್ಲ.
ತನ್ನ ಪತಿಯನ್ನು ಕಳೆದುಕೊಂಡರೂ ತನ್ನ ಮಗನನ್ನು ಸೈನಕ್ಕೆ ಸೇರಲು ಪ್ರೇರೇಪಿಸುವ
ತಾಯಿಯ ಮಾತುಗಳು ಸ್ಫೂರ್ತಿಯಾದವು. ಇಂತಹ ಕಥೆಗಳನ್ನು ನಾನು ಕೇಳಿದ್ದೆ, ಓದಿದ್ದೆ ಆದರೆ ಸ್ವತಃ
ಪ್ರತ್ಯಕ್ಷವಾಗಿ ಕಂಡಿದ್ದು ಇದೇ ಮೊದಲು. ನಿಜಕ್ಕೂ ಆಕೆ ವೀರ ಮಾತೆ, ಸಾವಿರಾರು ಮಹಿಳೆಯರಿಗೆ ಆಕೆ
ಆದರ್ಶ.
ಆ ವೀರ ತಾಯಿಯ ಮಾತುಗಳನ್ನು ಆಲಿಸಿದ ನಾನು ನಿಜಕ್ಕೂ ಧನ್ಯ. ಆ ಭಾಹುಕತೆಯ
ಕ್ಷಣಗಳನ್ನು ನಾನೆಂದಿಗೂ ಮರೆಯಾಲಾರೆ.
ವೀರ ತಾಯಿಗೆ ನನ್ನ ನಮನಗಳು.
ರವಿತೇಜ ಶಾಸ್ತ್ರೀ
No comments:
Post a Comment