ಇಂದು ಇಬ್ಬರು ಕಾಂತ್ರಿಪುರುಷರ ಜನ್ಮದಿನ. ಒಬ್ಬರು ಲೋಕಮಾನ್ಯ ಬಾಲಗಂಗಾಧರನಾಥ್ ತಿಲಕ್. ಮತ್ತೊಬ್ಬರು ಪುರುಷಸಿಂಹ ಪಂಡಿತ್ ಚಂದ್ರಶೇಖರ್ ಅಜಾದ್.
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಸಾರಿ ಭಿಕ್ಷಾಟನೆಯ ವೇದಿಕೆಯಂತಿದ್ದ ಕಾಂಗ್ರೆಸ್ ಎಂಬ ಬ್ರಿಟಿಷರೆ ಸ್ಥಾಪಿಸಿದ್ದ ಸಂಸ್ಥೆಯನ್ನು ಸ್ವಾತಂತ್ರ್ಯ ಆಂದೋಲನದ ಸಂಸ್ಥೆಯಾಗಿ ಪರಿವರ್ತಿಸಿ ಬ್ರಿಟಿಷರ ತಂತ್ರಕ್ಕೆ ಪ್ರತಿತಂತ್ರ ಹೆಣೆದು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಆಂಗ್ಲರನ್ನು ಕಾಡಿದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್.
ಬಾಲ್ಯದಲ್ಲೇ ಬ್ರಿಟಿಷರಿಗೆ ಸೆಡ್ಡುಹೊಡೆದು ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಗರ್ಜಿಸಿ ಪೋಲಿಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಾ ಆಂಗ್ಲರ ಎದೆಯಲ್ಲಿ ನಡುಕಹುಟ್ಟಿಸಿ, ಸ್ನೇಹಿತನ ಕುತಂತ್ರಕ್ಕೆ ಬಲಿಯಾಗಿ ತನ್ನ ಪಿಸ್ತೂಲಿನಿಂದಲೇ ಗುಂಡುಹಾರಿಸಿಕೊಂಡು ವೀರ ಮರಣಹೊಂದಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್.
ಅಜಾದ್ ಮತ್ತು ತಿಲಕ್ ಇಬ್ಬರೂ ಶ್ರೇಷ್ಠ ಕಾಂತ್ರಿಕಾರಿಗಳು ತಮ್ಮ ನಾಯಕತ್ವದಿಂದ ಅಸಂಖ್ಯ ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದವರು.
ಭಾರತೀಯರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಯತ್ನಿಸಿ ಬ್ರಿಟಿಷ್ ಸರ್ಕಾರ ಕಾಂಗ್ರೆಸ್ ಎಂಬ ಸಂಸ್ಥೆ ಸ್ಥಾಪಿಸಿ ಭಾರತೀಯರು ತಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಸಂಸ್ಥೆಯ ಮೂಲಕ ಸಲ್ಲಿಸಬೇಕೆಂದು ಆದೇಶಿಸಿದರು.
ಈ ಸಂಸ್ಥೆ ಮೊದಮೊದಲು ಭಿಕ್ಷಾಟನೆಯ ವೇದಿಕೆಯಂತಿತ್ತು.ಆದರೆ ಈ ವೇದಿಕೆಯನ್ನು ಸ್ವಾತಂತ್ರ್ಯ ಆಂದೋಲನದ ವೇದಿಕೆಯಾಗಿ ಪರಿವರ್ತಿಸಿದವರು ಲೋಕಮಾನ್ಯ ತಿಲಕ್.
"ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು" ಎಂದು ಘೋಷಿಸಿ ಸಾರ್ವಜನಿಕ ಗಣೇಶೋತ್ಸವ, ಶಿವಾಜಿ ಜಯಂತಿಯನ್ನು ಆಚರಿಸಿ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ ಬ್ರಿಟಿಷರ ವಿರುದ್ದ ಜನಾಂದೋಲನ ಸೃಷ್ಟಿಸಿದ ಕೀರ್ತಿ ಲೋಕಮಾನ್ಯ ತಿಲಕರಿಗೆ ಸಲ್ಲುತ್ತದೆ.
ತಮ್ಮ ಪ್ರಬಲ ನಾಯಕತ್ವದಿಂದ ತಿಲಕರು ಹಲವಾರು ಮಹಾನ್ ಪುರುಷರ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಸ್ವಾತಂತ್ರ್ಯ ವೀರ ಸಾವರ್ಕರ್ ಇಂಗ್ಲೆಂಡ್ಗೆ ಹೋಗಲು ಶಿಫಾರಸ್ಸು ಪತ್ರವನ್ನು ಬರೆದು ಕೊಟ್ಟು ಅವರಲ್ಲಿ ಸ್ಪೂರ್ತಿ ತುಂಬಿ ಸಾವರ್ಕರ್ ಅಪ್ರತಿಮ ಕ್ರಾಂತಿಕಾರಿಯಾಗಲು ಮುನ್ನುಡಿ ಬರೆದವರು ತಿಲಕರು.
ಚಾಪೇಕರ್ ಸಹೋದರರು, ಲಾಲಲಜಪತರಾಯ್, ಗೋಪಾಲಕೃಷ್ಣ ಗೋಖಲೆ ಮುಂತಾದವರು ತಿಲಕರಿಂದ ಪ್ರೇರಿತರಾಗಿದ್ದರು.
ಬಾಲ್ಯದಲ್ಲಿ ಪೋಲಿಸರಿಂದ ಛಡಿ ಏಟು ತಿಂದು ತಾನೆಂದು ಪೋಲಿಸರಿಗೆ ಶರಣಾಗುವುದಿಲ್ಲ. ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಶಪಥ ಮಾಡಿ ಯುವಜನರಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ಮು ಹಬ್ಬಿಸಿದವರು ಅಜಾದ್.
ತನ್ನ ಗುರು ರಾಮಪ್ರಸಾದ್ ಬಿಸ್ಮಿಲ್ ರ ಜೊತೆಗೂಡಿ ಕಾಕೋರಿ ದರೋಡೆಯನ್ನು ಯಶ್ವಸಿಯಾಗಿ ಮುಗಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಹಣ ದೊರಕಿಸಿಕೊಟ್ಟರು.
ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅರ್ಮಿಯ ಮುಂದಾಳತ್ವ ವಹಿಸಿ ದೇಶದಲ್ಲಿ ಕ್ರಾಂತಿಯ ಕಹಳೆ ಊದಿದ ಅಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಬುಟುಕೇಶ್ವರ ದತ್ತ, ಅಶ್ಪಾಕ್ ಉಲ್ಲಾ ಖಾನ್ ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಬೆಳವಣಿಗೆಯ ರೂವಾರಿ ಅಜಾದ್ ಎಂದರೆ ತಪ್ಪಿಲ್ಲ.
ಕಾಕೋರಿ ದರೋಡೆ, ಸ್ಯಾಂಡರ್ಸ್ ಹತ್ಯೆ, ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ ಮುಂತಾದ ಕ್ರಾಂತಿ ಚಟುವಟಿಕೆಗಳಿಗೆ ಯೋಜನೆಯನ್ನು ರೂಪಿಸಿದ್ದು ಅಜಾದ್ ರ ಬುದ್ದಿವಂತಿಕೆ, ಧೈರ್ಯ, ಚಾಕಚಕ್ಯತೆಗಳಿಗೆ ಸಾಕ್ಷಿ.
ಪೋಲಿಸರ ಕೈಗೆ ಸಿಗದೆ ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಅವರಿಗೆ ಮಣ್ಣು ಮರಚಿದ ಏಕೈಕ ಕ್ರಾಂತಿಕಾರಿ ಎಂದರೆ ಅವರು ಅಜಾದ್. ಬಾಲ್ಯದ ಪ್ರತಿಜ್ಞೆಯಂತೆ ಕೊನೆಗೂ ಪೋಲಿಸರ ಕೈಗೆ ಸಿಗದೇ ತನ್ನ ಪಿಸ್ತೂಲಿನಿಂದಲೇ ಗುಂಡುಹಾರಿಸಿಕೊಂಡು ವೀರಮರಣಹೊಂದಿದ ಅಜಾದ್ ಪುರುಷ ಸಿಂಹ.
ಅಜೇಯ ಕ್ರಾಂತಿಕಾರಿ ಅಜಾದ್ ಮತ್ತು ಲೋಕಮಾನ್ಯ ತಿಲಕ್ ಇಬ್ಬರು ಒಂದೇ ದಿನ ಜನಿಸಿದ್ದು ಕಾಕತಾಳೀಯವೋ ಅಥವಾ ಭಾರತೀಯರ ಭಾಗ್ಯವೋ ಗೊತ್ತಿಲ್ಲ. ಈ ಇಬ್ಬರ ಹೋರಾಟ ಮತ್ತು ತ್ಯಾಗ ಬಲಿದಾನಗಳು ನಮಗೆ ಆದರ್ಶ.
ಈ ವೀರಪುತ್ರರನ್ನು ಇಂದು ನೆನೆಯೋಣ.
ವಂದೇಮಾತರಂ
No comments:
Post a Comment