ಅದು ಲಂಡನ್ ನಗರ. ಇಂಗ್ಲೆಂಡ್ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ
ಎತ್ತರವಾದ ಕಟ್ಟಡಗಳು, ರಾತ್ರಿಯಲಿ ಕಣ್ಸೆಳೆಯುವ ದೀಪಮಾಲೆಗಳು. ಆ ಲಂಡನ್ನಿನಲ್ಲಿ ಒಂದು ರಸ್ತೆ.
ಅದರ ಹೆಸರು ಕ್ರಾಮ್ ವೆಲ್ ರಸ್ತೆ. ಅಲ್ಲೊಂದು ಮನೆ. ಮನೆಯ ಹೆಸರು “ಭಾರತ ಭವನ” ಭವನದ ಮಹಡಿಯ
ಮೇಲೆ ಒಂದು ಕೋಣೆ. ಕೊನೆಯಲ್ಲಿ ಒಂದು ಕಡೆ ಮೇಜಿನ ಮೇಲೆ ಒಂದು ಓಲೆ ಧಗಧಗ ಉರಿಯುತ್ತಿತ್ತು. ಒಲೆಯ
ಮೇಲೆ ಗಾಜಿನ ಪಾತ್ರೆ. ಅದರಲ್ಲಿ ರಾಸಾಯನಿಕ ವಸ್ತುಗಳು. ಉರಿಯುತ್ತಿದ್ದ ಒಲೆಯ ಹತ್ತಿರ ಇಬ್ಬರು
ನಿಂತಿದ್ದರು. ಗಂಭೀರವಾಗಿ ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದರು. ಅವರ ಗಮನ ಎಲ್ಲೊ ಇತ್ತು.
ಉರಿಯುತ್ತಿದ್ದ ಪಾತ್ರೆಯ ಕಾವು ಹೆಚ್ಚಾಗುತ್ತಾ ಹೋಯಿತು. ಪಾತ್ರೆಯಲ್ಲಿನ ರಾಸಾಯನಿಕಗಳು ಹಾರಿ
ಗಾಜಿನ ಪಾತ್ರೆ ಸಿಡಿಯುವ ಅಪಾಯದಲ್ಲಿತ್ತು. ಅಷ್ಟರಲ್ಲಿ ಇಬ್ಬರಲ್ಲಿ ದೊಡ್ಡವರ ಗಮನ ಅತ್ತ ಹೋಯಿತು.
ಅವರು ಕೂಡಲೇ ಏನು ಮಾಡಲು ತೋಚದೆ ಪಾತ್ರೆಯನ್ನು ಕೆಳಗಿಳಿಸಲು ಇಕ್ಕಳ ಹುಡುಕಲಾರಂಭಿಸಿದರು. ಆದರೆ
ರಾಸಾಯನಿಕ ವಸ್ತುಗಳು ಕುಡಿಯುವುದು ಹೆಚ್ಚಾಯಿತು. ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ಸರಕ್ಕನೆ
ಎರಡೂ ಕೈಗಳಲ್ಲಿ ಆ ಗಾಜಿನ ಪಾತ್ರೆಯನ್ನು ಬಿಗಿಯಾಗಿ ಹಿಡಿದು ಒಲೆಯ ಮೇಲಿನಿಂದ ಎತ್ತಿ ಕೆಳಕ್ಕೆ
ಇಳಿಸಿಬಿಟ್ಟ. ಚುರ್ ಅಂತ ಕೈ ಚರ್ಮ ಸುಟ್ಟು ಹೋಯಿತು. ಮಾಂಸ ಸುಟ್ಟ ವಾಸನೆ ಬಂತು ಬೊಬ್ಬೆಗಳು
ಹುಟ್ಟಿಕೊಂಡವು. ಆ ಕೆಲಸ ಸುಲಭವಾಗಿರಲಿಲ್ಲ. ಚೆನ್ನಾಗಿ ಕಾದಿದ್ದ ಅದನ್ನು ಇಳಿಸಲು ಚುರುಕುಬುದ್ದಿ,
ಧೈರ್ಯ ಬೇಕಿತ್ತು. ಇದನ್ನು ಕಂಡ ಮೊದಲನೇ ವ್ಯಕ್ತಿಗೆ ಆನಂದವಾಯಿತು. ಅವರು ಮಾಡುತ್ತಿದ್ದ ಪ್ರಯೋಗ
ಶಾಲಾ ಕಾಲೇಜಿನ ಪ್ರಯೋಗವಾಗಿರಲಿಲ್ಲ. ನಮ್ಮ ದೇಶವನ್ನು ಸ್ವಾತಂತ್ರ್ಯಗೊಳಿಸಲು ಅವರು ಗುಟ್ಟಾಗಿ
ಬ್ರಿಟಿಷ್ ನೆಲದಲ್ಲಿ ಬಾಂಬ್ ತಯಾರಿಸುತ್ತಿದ್ದರು. ಆ ಪಾತ್ರೆಯನ್ನು ತನ್ನ ಕೈಯಿಂದ ಇಳಿಸಿದವನು
ಯಾರು ಗೊತ್ತೇ? ಅವನೇ ಕ್ರಾಂತಿ ಸಿಂಹ ಮದನ್ ಲಾಲ್ ಧಿಂಗ್ರಾ!!. ಅವರ ಜೊತೆಯಿದ್ದ ಮತ್ತೊಬ್ಬರು
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್.
ಮದನಲಾಲ್ ಧಿಂಗ್ರಾ ಸಿಖ್ಖರ ವೀರ ಭೂಮಿ ಪಂಜಾಬಿನ ಅಮೃತಸರದಲ್ಲಿ ಜನಿಸಿದ. ತಂದೆ
ಆಗರ್ಭ ಶ್ರೀಮಂತರು. ಹೆಸರಾಂತ ವೈದ್ಯರಾಗಿದ್ದರು. ಮೂರು ಜನ್ಮಕ್ಕಾಗುವಷ್ಟು ಆಸ್ತಿಯಿತ್ತು.
ಧಿಂಗ್ರಾ ಲಾಹೋರ್, ಅಮೃತಸರಗಳಲ್ಲಿ ತನ್ನ ಪ್ರಾಥಮಿಕ ವಿದ್ಯಾಬ್ಯಾಸ ಮುಗಿಸಿದ. ಇಂಜಿನಿಯರ್
ಆಗಬೇಕೆಂಬ ಕನಸು ಕಂಡಿದ್ದ ಇಂಗ್ಲೆಂಡ್ ಗೆ ಹೋಗಿ ಇಂಜಿನಿಯರ್ ಓದಬೇಕೆಂದು ನಿರ್ಧಾರ ಮಾಡಿಬಿಟ್ಟ. ತಂದೆಗೆ
ಇಷ್ಟವಿಲ್ಲದಿದ್ದರೂ ಇಂಜಿನಿಯರಿಂಗ್ ಓದಲು ಇಂಗ್ಲೆಂಡ್ ಗೆ ಹಾರಿಬಿಟ್ಟ.
ಇಂಗ್ಲೆಂಡ್ ಸಂಸ್ಕೃತಿಗೆ ಧಿಂಗ್ರಾ ಮಾರುಹೋಗಿಬಿಟ್ಟ. ಬೆಲೆಬಾಳುವ ಸೂಟು ಬೂಟುಗಳನ್ನು
ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ
ಚಕ್ಕಂದವಾಡುತ್ತ ಕಾಲ ಕಳೆಯುತ್ತ. ವಿಲಾಸಿ
ಜೀವನವನ್ನು ನಡೆಸುತ್ತ ಇದೇ ಸ್ವರ್ಗವೆಂದು ಧಿಂಗ್ರಾ ಭಾವಿಸಿಬಿಟ್ಟ.
ಅಷ್ಟೊತ್ತಿಗೆ ಸ್ವಯಂಭು ದೇಶಭಕ್ತ ವೀರ ಸಾವರ್ಕರ್ ಆಂಗ್ಲರ ನಾಡಿಗೆ
ಕಾಲಿಟ್ಟಿದ್ದರು. ಭಾರತ ಭವನದ ಮೂಲಕ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿಧ್ಯಾರ್ಥಿಗಳಲ್ಲಿ ದೇಶ
ಭಕ್ತಿಯನ್ನು ತುಂಬುತ್ತಿದ್ದರು. ಭಾರತ ಭವನದ ಸುದ್ದಿ ಧಿಂಗ್ರಾ ಕಿವಿಗೆ ಬಿತ್ತು. ಒಂದು ದಿನ
ಧಿಂಗ್ರಾ ಭಾರತ ಭವನ ಪ್ರವೇಶಿಸಿದ. ಅಲ್ಲಿ ಸಾವರ್ಕರ್ ಭಾಷಣ ಮಾಡುತ್ತಿದ್ದರು. ಅನೇಕ ತರುಣರು
ಕೇಳುತಿದ್ದರು. ಸಾವರ್ಕರ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಭಾಷಣದಲ್ಲಿ ದೇಶಭಕ್ತಿಯ ಜ್ವಾಲೆ
ಪಸರಿಸುತ್ತಿತ್ತು. ಇದನ್ನು ಕೇಳಿದ ಧಿಂಗ್ರಾ ಗೆ ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ಅವರನ್ನು
ಗುರುವಾಗಿ ಸ್ವೀಕರಿಸಿಬಿಟ್ಟ. ಸಾವರ್ಕರ್ ರಿಂದ ಪ್ರಭಾವಿತನಾದ ಧಿಂಗ್ರಾ ಮಹಾನ್ ದೇಶ
ಭಕ್ತನಾಗಿಬಿಟ್ಟ. ಸಾವರ್ಕರ್ ರೆಂದರೆ ಅವನಿಗೆ ಪುಜ್ಯರು. ಅವರು ಹೇಳಿದ್ದೆ ವೇದ ವಾಕ್ಯ. ಅವರ
ಮಾತು ಬಿಟ್ಟು ಬೇರೆ ಯಾರ ಮಾತನ್ನು ಧಿಂಗ್ರಾ ಕೇಳುತ್ತಿರಲಿಲ್ಲ. ಸಾವರ್ಕರ್ ಭಾಷಣವೆಂದರೆ ಅವನಿಗೆ ಪ್ರಾಣ.
ಒಂದು ದಿನ ಸಂಜೆ ಧಿಂಗ್ರಾ ಭಾರತ ಭವನಕ್ಕೆ ಬಂದ. ಒಳಕೋಣೆಯಲ್ಲಿ ಗಂಭೀರವಾದ ಸಭೆ
ನಡೆಯುತ್ತಿತ್ತು. ಧಿಂಗ್ರಾ ಗೆ ಸಭೆಗಳಿಗಿಂತ ಕೆಲಸದ ಮೇಲೆ ಹೆಚ್ಚು ಆಸಕ್ತಿ. ಧಿಂಗ್ರಾ ಸಭೆಗೆ
ಹೋಗಲಿಲ್ಲ. ಒಳಗಡೆಯಿಂದ ಗ್ರಾಮೋ ಫೋನ್ ತಂದು ರಸ್ತೆಯ ಕಡೆಗಿದ್ದ ಕಿಟಕಿಯಲ್ಲಿ ಅದನ್ನು ಹಾಡುವಂತೆ
ಮಾಡಿದ. ರಸ್ತೆಯಲ್ಲಿದ್ದ ಅನೇಕ ಹುಡುಗಿಯರು ಬಂದು ಸೇರಿ ಕುಣಿಯಲಾರಂಭಿಸಿದರು. ಅದರ ಜೊತೆಯಲ್ಲಿ
ಧಿಂಗ್ರಾ ಶಿಳ್ಳೆ ಹೊಡೆದ. ಒಳಗಡೆ ಸಭೆ ಗೆ ಇದರಿಂದ ತುಂಬಾ ಗದ್ದಲವಾಯಿತು. ಸಿಟ್ಟಿಗೆದ್ದ
ಸಾವರ್ಕರ್
“ ಏನಯ್ಯ ಮದನ್, ನಾಚಿಕೆಯಾಗಬೇಕು
ನಿನಗೆ? ಒಳಗೆ ಸಭೆ ನಡೆಯುತ್ತಿದೆ. ಚಕ್ಕರ್ ಹೊಡೆದು ಇಲ್ಲ ನೀನು ಚಕ್ಕಂದ ಆಡುತ್ತಿದ್ದಿಯಾ? ಛೀ
ಛೀ ಬಾಯಲ್ಲಿ ಹೇಳೋದು ಹೋರಾಟ, ಬಲಿದಾನ ಎಂದು, ಮಾಡೋದು ಈ ರೀತಿ ” ಎಂದು ಬೈದರು.
ಧಿಂಗ್ರಾ ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಟುಹೋದ. ಮದನ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಬಿಟ್ಟ. ತಾಯಿ ಭಾರತಿಗಾಗಿ ಬಲಿದಾನಕ್ಕೆ ಸಿದ್ದನಾಗಿಬಿಟ್ಟ.
ಲಂಡನ್ನಿನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆ ಇತ್ತು. ಇಂಗ್ಲೆಂಡ್
ಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವುದು ಈ ಸಂಸ್ಥೆಯ
ಕೆಲಸವಾಗಿತ್ತು. ಈ ಸಂಸ್ಥೆಯ ಮುಖ್ಯ ಅಧಿಕಾರಿ ಸರ್ ವಿಲಿಯಂ ಕರ್ಜನ್ ವಾಲಿ ಎಂಬುವನು ಇದ್ದ. ಈತ
ಗುಲ್ಲೆನರಿ. ಒಳ್ಳೆಯ ರೀತಿಯಲ್ಲಿ ಭಾರತೀಯರ ಸ್ನೇಹ ಸಂಪಾದಿಸಿ ಅವರಲ್ಲಿ ವಿಷ ಬೀಜ ತುಂಬುತ್ತಿದ್ದ.
ಈ ಕರ್ಜನ್ ನನ್ನು ಕೊಲ್ಲಬೇಕೆಂದು ಮದನ್ ನಿಶ್ಚಯಿಸಿದ. ತನ್ನ ತಂದೆಯ ಸಹಾಯದಿಂದ ಇವನ ಸ್ನೇಹ
ಸಂಪಾದಿಸಿ ಅವನ ವಿಶ್ವಾಸವನ್ನೂ ಗಳಿಸಿಬಿಟ್ಟ.
1909ನೇ ಜುಲೈ ಒಂದನೇ ತಾರೀಖು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ನ ವಾರ್ಷಿಕೋತ್ಸವ
ನಡೆಯುತ್ತಿತ್ತು. ಕರ್ಜನ್ ಆ ಸಭೆಗೆ ಬಂದಿದ್ದ. ಮೊದಲೇ ಗುಂಡಿನ ಅಭ್ಯಾಸ ಮಾಡಿದ್ದ ಧಿಂಗ್ರಾ
ಕರ್ಜನ್ ವೇದಿಕೆಯಿಂದ ಇಳಿಯುತ್ತಿದ್ದಂತೆ ಹತ್ತಿರ ಹೋಗಿ ತನ್ನ ಜೇಬಿನಿಂದ ರಿವಾಲ್ವರ್ ತೆಗೆದು
ಕರ್ಜನ್ ನ ಕುತ್ತಿಗೆಗೆ ಗುರಿ ಇಟ್ಟು ಎರಡು ಗುಂಡು ಹೊಡೆದ. ಕುಸಿದ ಕರ್ಜನ್ ನ ಪ್ರಾಣಹಾರಿ
ಹೋಗಿತ್ತು. ಆದರೆ ಧಿಂಗ್ರಾ ನಗುತ್ತ ಶಾಂತನಾಗಿದ್ದ ಆತನ ನಾಡಿ ಎಂದಿನಂತೆ ಸಾಮಾನ್ಯವಾಗಿತ್ತು.
ಶೋಕಿಲಾಲನಾಗಿ ತಿರುಗುತಿದ್ದ ಮದನಲಾಲ್ ವೀರನಾಗಿಬಿಟ್ಟ. ತನ್ನ ಜೀವನವನ್ನು ಸಾರ್ಥಕಗೊಳಿಸಿಬಿಟ್ಟ.
ಲಂಡನ್ ಒಮ್ಮೆಗೆ ನಡುಗಿಹೋಯಿತು. ಸ್ವಾತಂತ್ರ್ಯ ಕ್ರಾಂತಿಯ ಜ್ಯೋತಿ ಬ್ರಿಟಿಷ್ ನೆಲದಲ್ಲೇ ಮೊಳಗಿತ್ತು. ಬ್ರಿಟಿಷ್
ಸರ್ಕಾರ ನಡುಗಿಹೋಯಿತು.
ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಧಿಂಗ್ರಾ ಹುತಾತ್ಮನಾಗಲು
ಸಿದ್ದನಾಗಿದ್ದ. ಮರಣದಂಡನೆ ಶಿಕ್ಷೆ ಪ್ರಾಪ್ತಿಯಾಯಿತು. 1909 ಅಗಸ್ಟ್ 17 ರಂದು ಮರಣದಂಡನೆ ಎಂದು
ನಿರ್ಧರಿಸಲಾಯಿತು. ಗಲ್ಲಿಗೇರುವ ಮುನ್ನ ಧಿಂಗ್ರಾ ಉತ್ಕೃಷ್ಟ ಹೇಳಿಕೆಯನ್ನು ನೀಡಿದ. “ ತಾಯಿ
ಭಾರತಿಯ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ಆ
ತಾಯಿಯ ಸೇವೆ ದೇವರ ಸೇವೆಗೆ ಸಮಾನ. ಆ ತಾಯಿಗೆ ಅಪಮಾನವಾದರೆ ಶ್ರೀ ರಾಮನಿಗೆ ಅಪಮಾನವಾದಂತೆ. ಆ
ತಾಯಿಯ ಈ ದಡ್ಡ ಮಗ ತನ್ನ ರಕ್ತವನ್ನಲ್ಲದೆ ಮತ್ತೇನು ಕೊಡಲು ಸಾಧ್ಯ ಆದ್ದರಿಂದ ನಾನು
ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ತನ್ನ ತಾಯಿ ನಾಡು ಸ್ವತಂತ್ರವಾಗುವ
ವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ
ನೀಡಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ.“
ಲಂಡನ್ ಗೆ ಬಂದು ಇಂಜಿನಿಯರ್ ಆಗಬೇಕೆಂದು ಆಸೆ ಪಟ್ಟಿದ್ದ ಧಿಂಗ್ರಾ ತನ್ನ ಬಲಿದಾನದ
ಮೂಲಕ ಕ್ರಾಂತಿ ಸಿಂಹನಾಗಿಬಿಟ್ಟ. ಧಿಂಗ್ರಾ ತಂದೆ ಆಗರ್ಭ ಶ್ರೀಮಂತರಾಗಿದ್ದರು. ಸಾಕಷ್ಟು
ಆಸ್ತಿಯಿತ್ತು. ಧಿಂಗ್ರಾ ಆದರಲ್ಲೇ ಬದುಕಿಬಿಡಬಹುದಿತ್ತು.
ಆದರೆ ಧಿಂಗ್ರಾ ಸಾಮಾನ್ಯರಲ್ಲಿ ಸಾಮಾನ್ಯನಾಗದೇ ಬಲಿದಾನಗೈದು ಅಜೇಯನಾಗಿಬಿಟ್ಟ.
ಮರುದಿವಸ ಈ ಸುದ್ದಿಯನ್ನು ಓದಿದ ಇಂಗ್ಲೆಂಡ್ ರಾಜಕಾರಣಿ ಚರ್ಚಿಲ್(ಮುಂದೆ ಇಂಗ್ಲೆಡಿನ ಪ್ರಧಾನಿಯಾದ) ನ ಕಣ್ಣು
ಒದ್ದೆಯಾಯಿತು. ಚರ್ಚಿಲ್ ಅಂದು ಬಹಳ ದುಃಖಿತನಾಗಿದ್ದ. ಸಂಜೆ ಹೇಳಿಕೆ ನೀಡಿದ ಚರ್ಚಿಲ್ “ ಮದನ್
ನೀನು ಮಹಾನ್ ದೇಶಭಕ್ತ. ನಿನ್ನಂತವನು ಇಂಗ್ಲೆಂಡ್ ನಲ್ಲಿ ಹುಟ್ಟಬೇಕಿತ್ತು. ಇನ್ನು ಎರಡು ಶತಮಾನಗಳ
ಕಾಲ ನೀನು ಭಾರತೀಯರ ಹೀರೋ ಆಗಿ ಮೆರೆಯುತ್ತಿಯಾ” ಎಂದ. ಆದರೆ ನಮ್ಮ ದುರ್ದೈವೇನು ಗೊತ್ತೇ?
ಮದನಲಾಲ್ ಧಿಂಗ್ರಾ ನಮಗೆ ಗೊತ್ತೇ ಇಲ್ಲ. ಧಿಂಗ್ರಾ ನ ಕುರಿತು ನಮ್ಮ ಪಠ್ಯ ಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ. ಇದು ಬಹಳ ವಿಷಾದನೀಯ ಸಂಗತಿ.
ಧಿಂಗ್ರಾ ಹುತಾತ್ಮನಾಗಿ ಇಂದಿಗೆ 105
ವರ್ಷವಾಯಿತು. ಬಲಿದಾನವನ್ನು ಇಂದು ಸ್ಮರಿಸೋಣ.
ಮದನಲಾಲ್ ಧಿಂಗ್ರಾ ಗೆ ನಮನಗಳು.
ವಂದೇಮಾತರಂ
ರವಿತೇಜ ಶಾಸ್ತ್ರೀ
No comments:
Post a Comment