Friday, April 4, 2014

ನಾ ಕಂಡಂತೆ "ಉಳಿದವರು ಕಂಡಂತೆ"



ಉಳಿದವರು ಕಂಡಂತೆ ಕನ್ನಡ ಚಿತ್ರೋದ್ಯಮದಲ್ಲಿ ವಿನೂತನ, ವಿಶಿಷ್ಟ, ಪ್ರಯೋಗಾತ್ಮಕ ಚಿತ್ರ. ಒಳ್ಳೆಯ ಚಿತ್ರವನ್ನು ಚಿತ್ರ ರಸಿಕರಿಗೆ ನೀಡಿದ ರಕ್ಷಿತ್ ಶೆಟ್ಟಿ ಮತ್ತು ತಂಡಕ್ಕೆ ಧನ್ಯವಾದಗಳು. ಚಿತ್ರದಲ್ಲಿ ಹೊಸತನವನ್ನು ಬಯಸುವ ನನ್ನಂತವರಿಗೆ ಸಿನಿಮಾ ಬಹಳ ಇಷ್ಟವಾಗುತ್ತದೆ. ಬರಿ ಹೊಡೆದಾಟ, ಎಳಸು ಪ್ರೀತಿ, ಪ್ರೇಮದ ಕತೆಗಳಿರುವ ಚಿತ್ರಗಳಿಂತ  ಉಳಿದವರು ಕಂಡಂತೆ ಚಿತ್ರ ವಿಭಿನ್ನ.

ಒಂದೇ ಊರಿನ ಹಲವು ಕತೆಗಳನ್ನು ಹಲವರು(ಉಳಿದವರು) ಹೇಗೆ ವಿರ್ಮರ್ಶಿಸುತ್ತಾರೆ ಎಂಬುದು ಚಿತ್ರದ ಕಥಾವಸ್ತು. ಕರಾವಳಿಯ ಸೊಬಗು, ಅಲ್ಲಿನ ಸಂಸ್ಕೃತಿ, ಕಲೆ, ಭಾಷೆ, ಜನಜೀವನ ಎಲ್ಲವನ್ನೂ ಚಿತ್ರದಲ್ಲಿ ಕಾಣಬಹುದು. ಕರಾವಳಿಯ ಮೀನುಗಾರರ ಕತೆ, ವ್ಯಥೆಯನ್ನು ಅಚ್ಚುಕಟ್ಟಾಗಿ ರಕ್ಷಿತ್ ಶೆಟ್ಟಿ ತೋರಿಸಿದ್ದಾರೆ. ಮಂಗಳೂರು ಕನ್ನಡ, ತುಳು, ಕುಂದಾಗನ್ನಡ (ಕುಂದಾಪುರ ಕನ್ನಡ), ಮಂಡ್ಯದ ಕನ್ನಡ ಹೀಗೆ ಹಲವು ಭಾಗದ ಭಾಷೆಗಳು ಚಿತ್ರದಲ್ಲಿದೆ. ಚಿತ್ರತಂಡದ ಶ್ರಮವನ್ನು ಚಿತ್ರದ ಮೇಕಿಂಗ್ ನಿಂದ ಗುರುತಿಸಬಹುದು.

ಚಿತ್ರದ ಸಂಗೀತ ಬಹಳ ಚೆನ್ನಾಗಿದೆ. ಮೊದಲ ಪ್ರಯತ್ನದಲ್ಲೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗೆದ್ದಿದ್ದಾರೆ. ಪೇಪರ್ ಪೇಪರ್ ಮೆಡಿಸಿನ್ ಪೇಪರ್, ಕಾಕಿಗ್ ಬಣ್ಣ ಕಾಂತ, ತಾಯಿಯ ಕುರಿತು ಇರುವ ಹಾಡು ಕಣ್ಣ ಮುಚ್ಚೆ ಮುಂತಾದ ಹಾಡುಗಳು ಕೇಳಲು ಇಂಪಾಗಿವೆ. ಚಿತ್ರದಲ್ಲಿ ಎಲ್ಲ ಕಲಾವಿದರೂ ಚೆನ್ನಾಗಿ ನಟಿಸಿದ್ದಾರೆ. ಕತೆ ಹೇಳುತ್ತಾ confuse ಮಾಡುವ ರಿಚಿ ಪಾತ್ರದ ಮೂಲಕ ರಕ್ಷಿತ್ ಶೆಟ್ಟಿ ಪ್ರೇಕ್ಷಕರನ್ನು confuse ಮಾಡುತ್ತಾರೆ. ಮುನ್ನಾ  ಪಾತ್ರದಲ್ಲಿ ಕಿಶೋರ್ ಮುಗ್ದವಾಗಿ ಕಾಣುತ್ತಾರೆ. ರತ್ನಕ್ಕ ನ ಪಾತ್ರ ಮಾಡಿರುವ ತಾರ ತಮ್ಮ ನಟನೆಯ ಮೂಲಕ ಮಾತೃ ಪ್ರೇಮದ ವಾತ್ಸಲ್ಯ ಲೋಕಕ್ಕೆ ನೋಡುಗರನ್ನು  ಕೊಂಡೊಯ್ಯುತ್ತಾರೆ. ಶೀತಲ್ ಶೆಟ್ಟಿ ಇಲ್ಲಿಯೂ ಸಹ ಪತ್ರಕರ್ತೆ. ಯಜ್ಞಾ ಶೆಟ್ಟಿ ನಗುವುದಕ್ಕಷ್ಟೇ ಸೀಮಿತ. ಬಾಲು ಪಾತ್ರವನ್ನು ಅಚ್ಯುತ್ ಕುಮಾರ್ ಚೆನ್ನಾಗಿ ನಿರ್ವಹಿಸಿದ್ದಾರೆ. ಡೆಮಾಕ್ರಸಿ ಪೋರ ಸೋಹನ್ ನಟನೆ ನೋಡುವುದೇ ಚೆಂದ.

ಕನ್ನಡ ಚಿತ್ರಗಳನ್ನು ಟೀಕಿಸುವ ಮಹಾಶಯರು ಒಮ್ಮೆ ಚಿತ್ರ ನೋಡಬೇಕು. ಸಿನಿಮಾ ಸುಲಭಕ್ಕೆ ಅರ್ಥವಾಗುವುದಿಲ್ಲ. ಪ್ರೇಕ್ಷಕರ ಬುದ್ದಿಯನ್ನು ಖರ್ಚು ಮಾಡಿಸುತ್ತಾರೆ ರಕ್ಷಿತ್ ಶೆಟ್ಟಿ. Innovative ಚಿತ್ರಗಳನ್ನು ಬಯಸುವರು ತಪ್ಪದೇ ಚಿತ್ರ ನೋಡಿ.

ಎಂತಾ ಸಾವೋ..   ಇನ್ನು ಫಿಲ್ಮ್ ನೋಡಿಲ್ವಾ,, ನೋಡದಿದ್ದರೆ ಶೂಟ್ ಮಾಡ್ತೇನೆ..



                                                  

No comments:

Post a Comment