ಕಳೆದ ವರ್ಷ 2013 ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಿತು. ಭಾರತದ ಚೆಸ್ ಸಾಮ್ರಾಟ ವಿಶ್ವನಾಥನ್ ಆನಂದ್ ಮತ್ತು ಚೆಸ್ ಜಗತ್ತಿನ ಯುವ ಪ್ರತಿಭೆ 23 ವರ್ಷದ ಮ್ಯಾಗನಸ್ ಕಾರ್ಲ್ ಸನ್ ನಡುವಿನ ಕಾದಾಟ ಎಂದೇ ಈ ಪಂದ್ಯಾವಳಿ ಬಿಂಬಿತವಾಗಿತ್ತು. ಅನುಭವ ಮತ್ತು ಯುವ ಪ್ರತಿಭೆಯ ನಡುವಿನ ಕಾಳಗದಲ್ಲಿ ಕಾರ್ಲ್ ಸನ್ ವಿಜಯಿಯಾಗಿ ನೂತನ ವಿಶ್ವ ಚಾಂಪಿಯನ್ ಯಾಗಿ ಹೊರಹೊಮ್ಮಿದರು. ಆನಂದ್ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಸಹ ಗೆಲ್ಲಲಿಲ್ಲ ತಮ್ಮ ಸ್ವಯಂ ಪ್ರೇರಿತ ತಪ್ಪಿಂದಾಗಿ ಆನಂದ್ ಪಂದ್ಯಗಳನ್ನು ಸೋತರು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ತಮ್ಮ ಘನತೆ ತಕ್ಕ ಆಟವನ್ನು ಆಡಲಿಲ್ಲ. ಆನಂದ್ ರ ತಪ್ಪುಗಳನ್ನು ಸದುಪಯೋಗ ಪಡಿಸಿಕೊಂಡ ಯುವ ಆಟಗಾರ ಕಾರ್ಲ್ ಸನ್ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಚೆಸ್ ವಿಮರ್ಶಕ ರು ಆನಂದ್ ಯುಗ ಮುಗಿದು ಕಾರ್ಲ್ ಸನ್ ಯುಗ ಆರಂಭವಾಯಿತೆಂದು ವಿಶ್ಲೇಷಣೆ ಮಾಡಿದರು. ಮಾದ್ಯಮಗಳು ಆನಂದ್ ಇನ್ನು ನಿವೃತ್ತಿ ಗೊಳ್ಳುವುದು ಒಳ್ಳೆಯದು ಎಂದು ಟೀಕಿಸಿದವು. ನಮ್ಮ ಭಾರತೀಯ ಮಾದ್ಯಮಗಳ ಮನಸ್ಥಿತಿಯೇ ಅಂತದ್ದು ಜಯಗಳಿಸಿದಾಗ ವ್ಯಕ್ತಿ ಅಥವಾ ತಂಡವನ್ನು ಅಟ್ಟಕ್ಕೇರಿಸುವುದು ಮತ್ತು ಸೋತಾಗ ಮನಸೋಇಚ್ಛೆ ಟೀಕಿಸುವುದು.ಇದು ಬಿಟ್ಟರೆ ಮತ್ಯಾವ ಕೆಲಸವನ್ನು ಅವು ಮಾಡುವುದಿಲ್ಲ. ಚೆಸ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಆನಂದ್ ಗೆ ಆತ್ಮ ವಿಶ್ವಾಸ ವನ್ನು ತುಂಬುವ ಪ್ರಯತ್ನವನ್ನು ಯಾರು ಮಾಡಲಿಲ್ಲ. ಸೋಲಿನ ನಂತರ ಪ್ರತಿಕ್ರಿಯಿಸಿದ ಆನಂದ್ “ ನನ್ನ ತಪ್ಪುಗಳನ್ನು ctrl+x ಮಾಡುವ ಸಮಯವಿದು” ಎಂದು ತನ್ನ ತಪ್ಪುಗಳಿಂದ ಹೊರಬರುತ್ತೆನೆಂದು ಆತ್ಮ ವಿಶ್ವಾಸದಿಂದ ನುಡಿದರು.
ಸೋಲಿನಿಂದ ಧೃತಿಗೆಡದೆ ಅಭ್ಯಾಸ ಮಾಡಿದ ಆನಂದ್ ಇಂದು ತನ್ನ ಎಂದಿನ ಲಯಕ್ಕೆ ಮರಳಿದ್ದಾರೆ. 2014 ರ ಕೊನೆಯಲ್ಲಿ ನಡೆಯುವ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ಕಾರ್ಲ್ ಸನ್ ಗೆ ಎದುರಾಳಿ ಯನ್ನು ಹುಡುಕುವ ಸಲುವಾಗಿ ನಡೆಯುತ್ತಿರುವ Candidates2014 ಪಂದ್ಯಾವಳಿಯಲ್ಲಿ ಆನಂದ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಎರಡು ಗೆಲವು ಮತ್ತು ಎಂಟು ಡ್ರಾ ಸಾಧಿಸಿರುವ ಆನಂದ್ 6 ಅಂಕಗಳೊಂದಿಗೆ ಅಗ್ರ ಸ್ಥಾನಿಯಾಗಿದ್ದಾರೆ. ಉಳಿದ ಪಂದ್ಯಗಳಲ್ಲಿ ಬಿಳಿ ಕಾಯಿಗಳಿಂದ ಆಟವಾಡುವ ಅವಕಾಶ ಆನಂದ್ ಗಿರುವುದರಿಂದ ಅವರು ಈ ಪಂದ್ಯಾವಳಿಯನ್ನು ಗೆಲ್ಲುವುದು ಬಹುತೇಕ ಖಚಿತ ಹಾಗೂ ಮತ್ತೊಮ್ಮೆ ಆನಂದ್ ಮತ್ತು ಕಾರ್ಲ್ ಸನ್ ನಡುವೆ ವಿಶ್ವ ಚಾಂಪಿಯನ್ ಶಿಪ್ ಗಾಗಿ ಕಾದಾಟ ನಡೆಯುವುದರಲ್ಲಿ ಸಂಶಯವೇ ಇಲ್ಲ. ಈ ಪಂದ್ಯಾವಳಿ ಯಲ್ಲಿ ಆನಂದ್ ಸಾಕಷ್ಟು ಕಲಿತಿದ್ದಾರೆ. ಹಿಂದಿನ ಟೂರ್ನಿ ಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡಿರುವ ಆನಂದ್ “ ಪಂದ್ಯಾವಳಿಯ ಶ್ರೇಷ್ಟ ಮತ್ತು ಅಜೇಯ ಆಟಗಾರ ” ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ನಾನು ಕಂಡಂತೆ ಭಾರತೀಯ ಕ್ರೀಡಾ ಜಗತ್ತಿನಲ್ಲಿ ಟೀಕೆಗಳಿಗೆ ತಮ್ಮ ಪ್ರದರ್ಶನದಿಂದ ಉತ್ತರಕೊಡುವ ಶ್ರೇಷ್ಠ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್ ಮತ್ತು ವಿಶ್ವನಾಥನ್ ಆನಂದ್. ತಮ್ಮ ಬ್ಯಾಟಿಂಗ್ ಫಾರ್ಮ್ ಕಳೆದುಕೊಂದಾಗ ಸಚಿನ್ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಆಟದತ್ತ ಗಮನಹರಿಸಿ ಫಾರ್ಮ್ ಕಂಡುಕೊಂಡು ಟೀಕಾಕಾರಿಗೆ ತಮ್ಮ ಬ್ಯಾಟ್ ನಿಂದಲೇ ಉತ್ತರಿಸಿದ್ದಾರೆ. ಅದೇ ರೀತಿ ಆನಂದ್ ಸಹ ಟೀಕೆಗಳ ಕಡೆ ಗಮನಹರಿಸದೇ ತಮ್ಮ ಪ್ರದರ್ಶನವನ್ನು ಉತ್ತಮ ಪಡಿಸಿಕೊಂಡು ಚೆಸ್ ನಲ್ಲಿ ಭಾರತಕ್ಕೆ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಹಣಕ್ಕಾಗಿ ಕ್ರೀಡೆಯ ಘನತೆಯನ್ನು ಹಾಳು ಮಾಡುತ್ತಿರುವ ಕ್ರಿಕೆಟ್ ಆಟಗಾರ ಮುಂದೆ ಆನಂದ್ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಚೆಸ್ ಆಡಲು ಸೂಕ್ತ ವಾತಾವರಣ ಬಯಸಿ ಆನಂದ್ ಸ್ಪೇನ್ ನಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರು ಚೆಸ್ ನಲ್ಲಿ ಭಾರತವನ್ನೇ ಪ್ರತಿನಿಧಿಸುತ್ತಾರೆ. ಸರ್ಕಾರ ತಮಗೇ ಉತ್ತಮ ಸೌಲಭ್ಯ ಕಲ್ಪಿಸಿಲ್ಲ ಎಂಬ ನೆಪವೊಡ್ಡಿ ಆನಂದ್ ಬೇರೆ ದೇಶಕ್ಕೆ ಆಡಬಹುದಿತ್ತು ಆದರೆ ಆನಂದ್ ಹಾಗೇ ಮಾಡಲಿಲ್ಲ. ಭಾರತಕ್ಕಾಗಿ ಆಡುವುದು ನನ್ನ ಹೆಮ್ಮೆ ಎಂದು ಅವರು ಹೇಳಿಕೊಂಡಿದ್ದಾರೆ.ಅವರ ದೇಶಭಕ್ತಿ ಗೆ ನನ್ನದೊಂದು ಸಲಾಂ.
ಚೆಸ್ ಉಗಮವಾಗಿದ್ದು ಭಾರತದಲ್ಲಿಯೇ. ಆದರೆ ಚೆಸ್ ನ ಮೂಲಕ ಭಾರತ ಇಂದು ಜಗತ್ತಿನಲ್ಲಿ ಗುರುತಿಕೊಂಡರೆ ಅದಕ್ಕೆ ಕಾರಣ ವಿಶ್ವನಾಥನ್ ಆನಂದ್. ರಷ್ಯ, ನಾರ್ವೆ ಮುಂತಾದ ಐರೋಪ್ಯ ದೇಶಗಳು ಚೆಸ್ ನಲ್ಲಿ ಪ್ರಭುತ್ವ ಸಾಧಿಸಿದ್ದ ಸಮಯದಲ್ಲಿ ಆನಂದ್ ಚೆಸ್ ದಿಗ್ಗಜ ಆಟಗಾರರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿ ಚೆಸ್ ನಲ್ಲಿ ಭಾರತವೇನು ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು.
ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್, 1997, 1998, 2003 ಮತ್ತು 2004 ರಲ್ಲಿ ಚೆಸ್ ಆಸ್ಕರ್( ವಿಶ್ವ ಚೆಸ್ ನಲ್ಲಿ ಅತ್ಯುತ್ತಮ ಸಾಧನೆಗೆ ನೀಡುವ ಪ್ರಶಸ್ತಿ) ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದ ಚೆಸ್ ಗೆ ಆನಂದ್ ಕೊಟ್ಟಿರುವ ಕೊಡುಗೆ ಅಪಾರ. ವಯಸ್ಸು 44ಕ್ಕಾದರೂ ಆನಂದ್ ರ ಗೆಲುವಿನ ದಾಹ ಇನ್ನು ನೀಗಿಲ್ಲ. ದೇಶಕ್ಕೆ ತಮ್ಮ ಸೇವೆಯನ್ನು ಚೆಸ್ ನ ಮೂಲಕ ಅವರು ನೀಡುತ್ತಿದ್ದಾರೆ. ಈ ಎಲ್ಲಾ ಸಾಧನೆ ಮಾಡಿರುವ ಆನಂದ್ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಗೆ ಅರ್ಹರು. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಕ್ರಿಕೆಟ್ ದಿಗ್ಗಜ ಸಚಿನ್ ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ನೀಡಿ ಅವರಿಂದ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶ ಸರ್ಕರದ್ದಾಗಿತ್ತು ಆದರೆ ಇದ್ದಕ್ಕೆ ಸಚಿನ್ ಸೊಪ್ಪು ಹಾಕಲಿಲ್ಲ. ಸಚಿನ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದು ನಾನು ಹೇಳುತ್ತಿಲ್ಲ . ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಬುದ್ಧತೆ ಸಾಧಿಸಿರುವ ಸಚಿನ್ ಖಂಡಿತ ಭಾರತ ರತ್ನ ಪ್ರಶಸ್ತಿ ಗೆ ಅರ್ಹರು ಆದರೆ ಸಚಿನ್ ಜೊತೆಗೆ ಆನಂದ್ ಮತ್ತು ದ್ಯಾನ್ ಚಂದ್ ಗೆ ಪ್ರಶಸ್ತಿ ನೀಡಬೇಕಿತ್ತು. ಮುಂದೆ ಬರುವ ಸರ್ಕಾರ ಈ ಬಗ್ಗೆ ಯೋಚಿಸಿ ಆನಂದ್ ಗೆ ಭಾರತ ರತ್ನ ನೀಡಿದರೆ ಅದು ಅವರ ಸಾಧನೆಗೆ ನೀಡುವ ಪುರಸ್ಕಾರ ಎಂದರೆ ತಪ್ಪಿಲ್ಲ.
ಈ ವರ್ಷದ ಕೊನೆಯಲ್ಲಿ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿ ಯಲ್ಲಿ ಮತ್ತೆ ಕಾರ್ಲ್ ಸನ್ ಮತ್ತು ಆನಂದ್ ಮುಖಾಮುಖಿಯಾಗುತ್ತಿದ್ದಾರೆ. ತನ್ನ ಎಂದಿನ ಲಯಕ್ಕೆ ಮರಳಿರುವ ಹುಲಿ ಆನಂದ್ ಈ ಬಾರಿ ಗೆದ್ದು 6 ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ನಾನು ಹಾರೈಸುತ್ತೇನೆ.
ವಿಶಿ ನಿಮಗೆ ಶುಭಾವಾಗಲಿ..
ರವಿತೇಜ ಶಾಸ್ತ್ರೀ.
No comments:
Post a Comment