Monday, March 10, 2014

ಎಷ್ಟೇ ಬೆಲೆ ತೆತ್ತು ಪೊರಕೆ ಕೊಂಡರೂ ಅದು ಬಳಕೆಗೆ ಸಿಗುವುದು ಕೇವಲ 49 ದಿನ ಮಾತ್ರ!

ಕಳೆದ ಕೆಲವು ದಿನಗಳಿಂದ ಈ ದೇಶ ಪುಕ್ಕಟೆ ಮನರಂಜನೆಗೆ ಸಾಕ್ಷಿಯಾಗಿದೆ. ಮನರಂಜನೆಯ ಸಂಪೂರ್ಣ ಕ್ರೆಡಿಟ್  ಅರವಿಂದ್ ಕೇಜ್ರಿವಾಲ್ ಮತ್ತು ಆತನ ಪಕ್ಷವಾದ ಆಮ್ ಆದ್ಮಿ ಪಾರ್ಟಿ ಗೆ ಸಲ್ಲುತ್ತದೆ. ಸಾಲು ಸಾಲಾಗಿ ನಡೆದ ಬೃಹನಾಟಕಗಳು ಜನರಿಗೇ ನಯಾಪೈಸೆ ಖರ್ಚಿಲ್ಲದೆ ಮನರಂಜನೆ ಕೊಟ್ಟಿತು. ಈ ನಾಟಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಹಳ ಆತಂಕಕಾರಿ ವಿಷಯಗಳು ಬಹಿರಂಗವಾಗುತ್ತದೆ.

    ಮಾರ್ಚ್ 6 ರಂದು ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗದ ಅನುಮತಿ ಪಡೆಯದೇ ಗುಜರಾತಿನಲ್ಲಿ ರೋಡ್ ಶೋ ಮಾಡಲು ಮುಂದಾದಾಗ ಅಲ್ಲಿನ ಪೊಲೀಸರು ಅರವಿಂದ್ ಕೇಜ್ರಿವಾಲ್ನನ್ನು ತಡೆದು ಪ್ರಶ್ನಿಸಿದರು. ಈ ತಡೆಯನ್ನೇ ಬಂಧನವೆಂದು ಭಾವಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನರೇಂದ್ರ ಮೋದಿಯ ಆಜ್ಞೆಯಂತೆ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆಂದು ಗುಲ್ಲೆಬ್ಬಿಸಿ ದೆಹಲಿಯ ಬಿಜೆಪಿ ಕಚೇರಿಯ ಮುಂದೆ ಜಮಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ಎಸೆದು ನಕ್ಸಲಿಯರಂತೆ ವರ್ತಿಸಿದರು. ಈ ಪ್ರತಿಭಟನೆಯ ಜಾಡು ಹಿಡಿದು ಹೊರಟಾಗ ಈ ಪ್ರತಿಭಟನೆಯ ಹಿಂದಿರುವ ಉದ್ದೇಶ ಅರಿವಾಗುತ್ತದೆ. ಇದೇ ಮಾರ್ಚ್ 6 ರಂದು ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಒಂದು ಸುದ್ದಿಗೋಷ್ಠಿ ನಡೆಯಿತು. ಅಲ್ಲಿ ಸುದ್ದಿಗೋಷ್ಠಿ ನಡೆಸಿದವರು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಅಶ್ವಿನಿ ಕುಮಾರ್ ಉಪಾಧ್ಯಾಯ. ಅವರು ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಕುರಿತು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದರು. ಆಮ್ ಆದ್ಮಿ ಪಕ್ಷ ಮತ್ತು ಅಮೆರಿಕಾದ ಗುಪ್ತಚರ ಸಂಸ್ಥೆ CIAಗೆ ನಂಟಿದೆ. ಭಾರತದಲ್ಲಿರುವ ಬಹುಪಾಲು ಸರ್ಕಾರೇತರ ಸಂಸ್ಥೆಗಳಿಗೆ CIA ನಿಯಂತ್ರಣದಲ್ಲಿರುವ  ಫೋರ್ಡ್ ಫೌ೦ಡೇಷನ್ ನಿಂದ ದೇಣಿಗೆಗಳು ಬರುತ್ತಿವೆ ಹಾಗೂ ಈ ಎಲ್ಲ ಸಂಸ್ಥೆಗಳು ನಕ್ಸಲೀಯರು, ಮಾವೋವಾದಿಗಳು, ಭಯೋತ್ಪಾದಕರು, ಪ್ರತ್ಯೇಕವಾದಿಗಳ ಪರವಾಗಿದೆ ಎಂಬ ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿದರು. ಅರವಿಂದ್ ಕೇಜ್ರಿವಾಲ್ ಹುಟ್ಟಿಹಾಕಿದ  “ಪರಿವರ್ತನ್” ಸಂಸ್ಥೆಯ   ಉದ್ದೇಶವು ಸಹ ಇದೇ ಆಗಿತ್ತು ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸುದ್ದಿಯನ್ನು ದಿಕ್ಕು ತಪ್ಪಿಸುವ ಸಲುವಾಗಿಯೇ  ಅರವಿಂದ್ ಕೇಜ್ರಿವಾಲ್ ಪ್ರತಿಭಟನೆಯ ನಾಟಕವಾಡಿದರು. ಸುದ್ದಿಯನ್ನು ಸಂಪೂರ್ಣವಾಗಿ ಮರೆಮಾಚುವ ಉದ್ದೇಶದಿಂದಲೇ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಯಿತು. ಇನ್ನು ಆಮ್ ಆದ್ಮಿ ಪಕ್ಷವನ್ನು ದತ್ತುತೆಗೆದುಕೊಂಡಿರುವಂತೆ ವರ್ತಿಸುವ   ಮಾಧ್ಯಮಗಳು ಪ್ರತಿಭಟನೆ ಹಿಂಸಾತ್ಮಕವಾಗಲು ಬಿಜೆಪಿ ಕಾರಣವೆಂದು ಸುದ್ದಿ ಬಿತ್ತರಿಸಿದವು. ಈ ಎಲ್ಲ ನಾಟಕಗಳ ಮುಂದೆ ಆಪ್ ನ CIA ನಂಟಿನ ಸುದ್ದಿ ಮಂಕಾಯಿತು.  

    ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ದಿಯನ್ನು ಪರಿಶೀಲಿಸುತ್ತೆಂದು ಅರವಿಂದ್ ಕೇಜ್ರಿವಾಲ್ ಗುಜರಾತಿಗೆ ಹೊರಟರು. ಇದು ಪಿ.ಎಚ್.ಡಿ ಪದವಿಧರನ್ನು ಒಂದನೇ ತರಗತಿಯ ವಿಧ್ಯಾರ್ಥಿ ಪ್ರಶ್ನಿಸಿದಂತಿತ್ತು. 2 ತಿಂಗಳು ಆಡಳಿತ ನಿರ್ವಹಿಸಲು ಆಗದ ಅರವಿಂದ್ ಕೇಜ್ರಿವಾಲ್ 12 ವರ್ಷಗಳಿಂದ ಒಂದು ರಾಜ್ಯವನ್ನು ಮುನ್ನಡೆಸುತ್ತಿರುವ ವ್ಯಕ್ತಿಯನ್ನು ಪ್ರಶ್ನಿಸುವುದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನು? 
                     
   ಇಂದು ಬೆಂಗಳೂರಿನಲ್ಲಿ ವೈದ್ಯರ ಬಳಿ ತಪಾಸಣೆಮಾಡಿಸಿಕೊಳ್ಳಬೇಕೆಂದರೆ ಮೊದಲೇ ಅಪಾಯಿಂಟ್ಮೆಂಟ್ ಪಡೆದುಕೊಳ್ಳಬೇಕು. ಅಂತದರಲ್ಲಿ ಕಳೆದ 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿಯವರನ್ನು ಅವರ ಅನುಮತಿಯಿಲ್ಲದೆ ಭೇಟಿ ಮಾಡುವುದು ಸಾಧ್ಯವೇ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗೆ ಸಾಕಷ್ಟು ಕೆಲಸಗಳಿರುತ್ತವೆ. ಇಂತಹ ಸಣ್ಣ ಸಂಗತಿಯೂ ಭಾರತೀಯ ಕಂದಾಯ ಇಲಾಖೆ( I.R.S)ಯ ಅಧಿಕಾರಿಯಾಗಿದ್ದ  ಅರವಿಂದ್ ಕೇಜ್ರಿವಾಲ್ ಅರ್ಥವಾಗುವುದಿಲ್ಲವೆಂದರೆ ನಂಬುವುದು ಕಷ್ಟ ಸಾಧ್ಯ. 16 ಅಸಂಬದ್ಧ ಪ್ರಶ್ನೆಗಳನ್ನು ಹಿಡಿದು ಹೊರಟ ಅರವಿಂದ್ ಕೇಜ್ರಿವಾಲ್ ನನ್ನು ಆತನ ನೀರಿಕ್ಷೆಯಂತೆ ಗುಜರಾತಿನ ಪೊಲೀಸರು  ದಾರಿಯ ಮಧ್ಯದಲ್ಲೇ ತಡೆದರು.ಈ ನಾಟಕದಿಂದ ನರೇಂದ್ರ ಮೋದಿ ಸಾಮಾನ್ಯ ಜನರಿಗೆ ಸಿಗುವುದಿಲ್ಲವೆಂದು ನಂಬಿಸುವುದು ಅರವಿಂದ್ ಕೇಜ್ರಿವಾಲ್ ರ ಉದ್ದೇಶವಾಗಿತ್ತು. ಆದರೆ ಅರವಿಂದ್ ಕೇಜ್ರಿವಾಲ್ ನ ಈ ನಾಟಕ ಸಂಪೂರ್ಣ ವಿಫಲವಾಯಿತು. ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅರವಿಂದ್ ಕೇಜ್ರಿವಾಲ್ ನ ನಿಜಬಣ್ಣ ಬಯಲಾಯಿತು.

 ಪದೇ ಪದೇ ಮೋದಿ ತನ್ನ ರ್ಯಾಲಿಗಳಿಗೆ ಬಳಸುವ  ಹೆಲಿಕಾಪ್ಟರ್ ನ ಕುರಿತು ಪ್ರಶ್ನಿಸುವ ಕೇಜ್ರಿವಾಲ್, ಮಾರ್ಚ್ 7 ರಂದು ಮೀಡಿಯಾ ಗ್ರೂಪ್ ಪ್ರಾಯೋಜಿಸಿದ  ಐಷಾರಾಮಿ ಖಾಸಗಿ ಜೆಟ್ ನಲ್ಲಿ ಜೈಪುರದಿಂದ ದೆಹಲಿಗೆ ಪ್ರಯಾಣಿಸಿದರು. “ ನುಡಿದಂತೆ ನಡೆ ” ಎನ್ನುವ ಒಂದು ಮಾತಿದೆ. ತಾನು ಆಮ್ ಆದ್ಮಿ ಎಂದು ಬಿಂಬಿಸಿಕೊಳ್ಳುವ ಕೇಜ್ರಿವಾಲ್ ಗೆ  ಐಷಾರಾಮಿ ಜೆಟ್ ಹತ್ತುವ ಮುನ್ನ ವಿ.ಐ.ಪಿ ಸಂಸ್ಕೃತಿಯನ್ನು ನಾನು ವಿರೋಧಿಸುತ್ತೇನೆಂದು ಹಿಂದೇ ಹೇಳಿದ ಮಾತು ನೆನಪಿಗೆ ಬರಲಿಲ್ಲವೇ? “ ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ” ಎನ್ನುವ ಮಾತು ಅರವಿಂದ್ ಕೇಜ್ರಿವಾಲ್ ಸಂಪೂರ್ಣವಾಗಿ ಅನ್ವಯಿಸುತ್ತದೆ. ಬಣ್ಣದ ಬಣ್ಣದ ಮಾತುಗಳನ್ನು ಮಾತನಾಡಿ ಜನರನ್ನು ನಂಬಿಸಿ ಕೊನೆಗೆ ಅವರನ್ನು ಮೋಸ ಮಾಡುವುದೇ ಕಪಟ ನಾಟಕ ಸೂತ್ರಧಾರಿ ಅರವಿಂದ್ ಕೇಜ್ರಿವಾಲ್ ನ ಗುರಿ.

ಭ್ರಷ್ಟಚಾರವನ್ನು ಕಿತ್ತೊಗೆಯುವುದೇ ತನ್ನ ಗುರಿಯೆಂದು ಆಮ್ ಆದ್ಮಿ ಪಕ್ಷ ಕಟ್ಟಿ, ಅಧಿಕಾರಕ್ಕೆ ಬಂದ ಕೇಜ್ರಿವಾಲ್, ಭ್ರಷ್ಟಚಾರ ತೊಲಗಿಸಲು ಮಾಡಿದ ಘನ ಕಾರ್ಯವೇನು?  ಭ್ರಷ್ಟಚಾರ ನಿಗ್ರಹ ಕಾಯ್ದೆ ಜನ ಲೋಕಪಾಲ್ ಮಸೂದೆಯನ್ನು ಕಾನೂನು ಪ್ರಕಾರ ಮಂಡಿಸದೆ ನಾಟಕವಾಡಿ, ಕೊನೆಗೆ ಅದು ಊರ್ಜಿತವಾದ ಮೇಲೆ ಪಲಾಯನವಾದಿಯಂತೆ ರಾಜೀನಾಮೆ ಕೊಟ್ಟು ಓಡಿ ಹೋಗಿದ್ದೇ ಆತನ ಸಾಧನೆ. ಲೋಕಪಾಲ್ ಮಸೂದೆಯನ್ನು ಮಂಡಿಸುವುದೇ ಆತನ ಗುರಿಯಾಗಿದ್ದರೆ, ಹೊರಟ ಮಾಡಿ ಆ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕಿತ್ತು. ಆದರೆ ಆ ಇಚ್ಛಾಶಕ್ತಿ ಅರವಿಂದ್ ಕೇಜ್ರಿವಾಲ್ಗಿರಲಿಲ್ಲ. ಆತನ ಗುರಿ ಲೋಕಸಭೆಯಾಗಿತ್ತೇ ಹೊರತು ಲೋಕಪಾಲ್ ಆಗಿರಲಿಲ್ಲ.



   ಭ್ರಷ್ಟಚಾರದ ಕುರಿತು ಮಾತನಾಡುವ ಕೇಜ್ರಿವಾಲ್, ಕಾಂಗ್ರೆಸ್ ಹಗರಣದ ಸರಮಾಲೆಗಳ ಕುರಿತು ಏಕೆ ಮಾತನಾಡುವುದಿಲ್ಲ? 2G ಸ್ಪೆಕ್ಟ್ರಮ್, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣಗಳ ಬಗ್ಗೆ ಏಕೆ ಸೋನಿಯಾ ಗಾಂಧಿ ಮತ್ತು ಆಕೆಯ ನೇತೃತ್ವದ ಕಾಂಗ್ರೆಸ್ ಗೆ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸುವುದಿಲ್ಲ? ದೆಹಲಿ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಶೀಲಾ ದೀಕ್ಷಿತ್ ಮೇಲೆ ಸಮರ ಸಾರಿದ ಅರವಿಂದ್ ಕೇಜ್ರಿವಾಲ್, ಮತ್ತೇಕೆ ದೀಕ್ಷಿತ್ ಸರ್ಕಾರದ ಹಗರಣಗಳ ಕುರಿತು ದಿವ್ಯ ಮೌನ ವಹಿಸಿದರು? ಶೀಲಾ ದೀಕ್ಷಿತ್ ರನ್ನು ಕೇರಳ ರಾಜ್ಯಪಾಲೆಯಾಗಿ ನೇಮಿಸಿ ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಿದಾಗ ಅರವಿಂದ್ ಕೇಜ್ರಿವಾಲ್ ಈ ನಿರ್ಣಯವನ್ನು ವಿರೋಧಿಸಲಿಲ್ಲ. ಶೀಲಾ ದೀಕ್ಷಿತ್ ಸೋಲಿನ ಹಿಂದೆ ರಹಸ್ಯ ಒಪ್ಪಂದವಿತ್ತೇ ಎಂಬ ಅನುಮಾನ ನನಗೆ ಮೂಡುತ್ತದೆ. ಸೋನಿಯಾ ಆಜ್ಞೆಯಂತೆ ಶೀಲಾ ದೀಕ್ಷಿತ್ ಅರವಿಂದ್ ಕೇಜ್ರಿವಾಲ್ ಎದುರು ಸೋತು ನಂತರ ಕೇರಳ ರಾಜ್ಯಪಾಲೆಯಾಗುವ ಯೋಜನೆ ಮೊದಲೇ ರೂಪಿಸಿದ್ದರು ಎಂಬದನ್ನು ತಳ್ಳಿಹಾಕುವಂತಿಲ್ಲ.

   ಭಾರತದಲ್ಲಿ ರಾಜಕೀಯ ಕ್ರಾಂತಿ ಸೃಷ್ಟಿಸುತ್ತನೆಂದು ರಾಜಕೀಯಕ್ಕೆ ಬಂದ ಕೇಜ್ರಿವಾಲ್ ದೆಹಲಿ ವಿಧಾನಸಭೆಯನ್ನು ಅತಂತ್ರವಾಗಿಸಿದರು. ಮುಂದೆ ಕಾಂಗ್ರೇಸ್ ಬೆಂಬಲ ತೆಗೆದುಕೊಂಡು ಸರ್ಕಾರ ರಚಿಸಿದ ಕೇಜ್ರಿವಾಲ್, ಅಧಿಕಾರ ನಿರ್ವಹಿಸಿದ್ದು 49 ದಿನ ಮಾತ್ರ. ಆಮ್ ಆದ್ಮಿ ಪಕ್ಷ ಬೆಂಬಲಿಸಿದ ದೆಹಲಿಯ ಜನ ಇಂದು ಭ್ರಮನಿರಸನಗೊಂಡಿದ್ದಾರೆ. ದೇಶದಲ್ಲಿ ಸಾಕಷ್ಟು ಕಾಂಗ್ರೆಸ್ ವಿರೋಧಿ ಅಲೆಯಿದೆ. ದೇಶದ ಜನ ಪರ್ಯಾಯ ಸರ್ಕಾರವನ್ನು ಬಯಸುತ್ತಿದ್ದಾರೆ. ಈ ಬೆಳವಣಿಗೆ ಪ್ರತಿಪಕ್ಷ ಬಿಜೆಪಿಗೆ  ವರದಾನವಾಗಿದೆ. ನರೇಂದ್ರ ಮೋದಿ ದೇಶದ ಜನರಿಗೇ ಆಶಾಕಿರಣದಂತೆ ಪ್ರಜ್ವಲಿಸುತ್ತಿದ್ದಾರೆ, ಪ್ರಧಾನಿಗಾದಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.ನರೇಂದ್ರ ಮೋದಿಯವರನ್ನು ತಡೆಯಲು ಕಾಂಗ್ರೆಸ್ ಮತ್ತು ಎ.ಎ.ಪಿ ಹುನ್ನಾರ ಮಾಡಿದೆ. ಕಾಂಗ್ರೆಸ್ ವಿರೋಧಿ ಮತಗಳನ್ನು ಪಡೆಯುವುದು ಆಮ್ ಆದ್ಮಿ ಪಕ್ಷದ ಗುರಿ ಮತ್ತು ಇದಕ್ಕೆ ಕಾಂಗ್ರೆಸ್ ತೆರೆಮರೆಯಲ್ಲಿ ಕೈ ಜೋಡಿಸಿದೆ. ಬಿಜೆಪಿ ಮತಗಳನ್ನು ಕಸಿಯುವುದು ಮತ್ತು ಕೊನೆಗೆ ಆ ಮತಗಳನ್ನು ಕಾಂಗ್ರೆಸ್ ಗೆ  ದಯಪಾಲಿಸುವುದೇ ಆಮ್ ಆದ್ಮಿ ಪಕ್ಷದ ಅಜೆಂಡಾ.

      ಈ ಎಲ್ಲ ವಿಚಾರಗಳಿಂದ  ಜನ ಎಚ್ಚೆತ್ತುಕೊಂಡು, ಎ.ಎ.ಪಿಯ ಕಪಟ ನೀತಿಗೆ ಬಲಿಯಾಗದೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಪ್ರಗತಿಯತ್ತ ಮುನ್ನೆಡೆಸುವ ಸಮರ್ಥ ನಾಯಕನನ್ನು ಬೆಂಬಲಿಸಿದರೆ  ಒಳಿತು. ಇಲ್ಲದೇ ಹೋದರೆ ಪೊರಕೆಯ ಕಡ್ಡಿಗಳಂತೆ,  ದೇಶ ಇಬ್ಬಾಗವಾಗುವ ಪರಿಸ್ಥಿತಿಯನ್ನು  ಎದುರಿಸಬೇಕಾದಿತು! ಆಮ್ ಆದ್ಮಿ ಪಕ್ಷವನ್ನು  ಬೆಂಬಲಿಸುವ  ಮೊದಲು “ಎಷ್ಟೇ ಬೆಲೆ ತೆತ್ತು ಪೊರಕೆ ಕೊಂಡರೂ ಅದು ಬಳಕೆಗೆ ಸಿಗುವುದು ಕೇವಲ 49 ದಿನ ಮಾತ್ರ” ಎಂಬ ಮಾತು ನೆನಪಿರಲಿ.
                                                                 
ರವಿತೇಜ ಶಾಸ್ತ್ರೀ                                          

3 comments: