Sunday, August 17, 2014

ಆ ಪಂಜಾಬಿನ ಕ್ರಾಂತಿ ಸಿಂಹನಿಗೊಂದು ನಮನ

ಅದು ಲಂಡನ್ ನಗರ. ಇಂಗ್ಲೆಂಡ್ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ ಎತ್ತರವಾದ ಕಟ್ಟಡಗಳು, ರಾತ್ರಿಯಲಿ ಕಣ್ಸೆಳೆಯುವ ದೀಪಮಾಲೆಗಳು. ಆ ಲಂಡನ್ನಿನಲ್ಲಿ ಒಂದು ರಸ್ತೆ. ಅದರ ಹೆಸರು ಕ್ರಾಮ್ ವೆಲ್ ರಸ್ತೆ. ಅಲ್ಲೊಂದು ಮನೆ. ಮನೆಯ ಹೆಸರು “ಭಾರತ ಭವನ” ಭವನದ ಮಹಡಿಯ ಮೇಲೆ ಒಂದು ಕೋಣೆ. ಕೊನೆಯಲ್ಲಿ ಒಂದು ಕಡೆ ಮೇಜಿನ ಮೇಲೆ ಒಂದು ಓಲೆ ಧಗಧಗ ಉರಿಯುತ್ತಿತ್ತು. ಒಲೆಯ ಮೇಲೆ ಗಾಜಿನ ಪಾತ್ರೆ. ಅದರಲ್ಲಿ ರಾಸಾಯನಿಕ ವಸ್ತುಗಳು. ಉರಿಯುತ್ತಿದ್ದ ಒಲೆಯ ಹತ್ತಿರ ಇಬ್ಬರು ನಿಂತಿದ್ದರು. ಗಂಭೀರವಾಗಿ ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದರು. ಅವರ ಗಮನ ಎಲ್ಲೊ ಇತ್ತು. ಉರಿಯುತ್ತಿದ್ದ ಪಾತ್ರೆಯ ಕಾವು ಹೆಚ್ಚಾಗುತ್ತಾ ಹೋಯಿತು. ಪಾತ್ರೆಯಲ್ಲಿನ ರಾಸಾಯನಿಕಗಳು ಹಾರಿ ಗಾಜಿನ ಪಾತ್ರೆ ಸಿಡಿಯುವ ಅಪಾಯದಲ್ಲಿತ್ತು. ಅಷ್ಟರಲ್ಲಿ ಇಬ್ಬರಲ್ಲಿ ದೊಡ್ಡವರ ಗಮನ ಅತ್ತ ಹೋಯಿತು. ಅವರು ಕೂಡಲೇ ಏನು ಮಾಡಲು ತೋಚದೆ ಪಾತ್ರೆಯನ್ನು ಕೆಳಗಿಳಿಸಲು ಇಕ್ಕಳ ಹುಡುಕಲಾರಂಭಿಸಿದರು. ಆದರೆ ರಾಸಾಯನಿಕ ವಸ್ತುಗಳು ಕುಡಿಯುವುದು ಹೆಚ್ಚಾಯಿತು. ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ಸರಕ್ಕನೆ ಎರಡೂ ಕೈಗಳಲ್ಲಿ ಆ ಗಾಜಿನ ಪಾತ್ರೆಯನ್ನು ಬಿಗಿಯಾಗಿ ಹಿಡಿದು ಒಲೆಯ ಮೇಲಿನಿಂದ ಎತ್ತಿ ಕೆಳಕ್ಕೆ ಇಳಿಸಿಬಿಟ್ಟ. ಚುರ್ ಅಂತ ಕೈ ಚರ್ಮ ಸುಟ್ಟು ಹೋಯಿತು. ಮಾಂಸ ಸುಟ್ಟ ವಾಸನೆ ಬಂತು ಬೊಬ್ಬೆಗಳು ಹುಟ್ಟಿಕೊಂಡವು. ಆ ಕೆಲಸ ಸುಲಭವಾಗಿರಲಿಲ್ಲ. ಚೆನ್ನಾಗಿ ಕಾದಿದ್ದ ಅದನ್ನು ಇಳಿಸಲು ಚುರುಕುಬುದ್ದಿ, ಧೈರ್ಯ ಬೇಕಿತ್ತು. ಇದನ್ನು ಕಂಡ ಮೊದಲನೇ ವ್ಯಕ್ತಿಗೆ ಆನಂದವಾಯಿತು. ಅವರು ಮಾಡುತ್ತಿದ್ದ ಪ್ರಯೋಗ ಶಾಲಾ ಕಾಲೇಜಿನ ಪ್ರಯೋಗವಾಗಿರಲಿಲ್ಲ. ನಮ್ಮ ದೇಶವನ್ನು ಸ್ವಾತಂತ್ರ್ಯಗೊಳಿಸಲು ಅವರು ಗುಟ್ಟಾಗಿ ಬ್ರಿಟಿಷ್ ನೆಲದಲ್ಲಿ ಬಾಂಬ್ ತಯಾರಿಸುತ್ತಿದ್ದರು. ಆ ಪಾತ್ರೆಯನ್ನು ತನ್ನ ಕೈಯಿಂದ ಇಳಿಸಿದವನು ಯಾರು ಗೊತ್ತೇ? ಅವನೇ ಕ್ರಾಂತಿ ಸಿಂಹ ಮದನ್ ಲಾಲ್ ಧಿಂಗ್ರಾ!!. ಅವರ ಜೊತೆಯಿದ್ದ ಮತ್ತೊಬ್ಬರು ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್.

ಮದನಲಾಲ್ ಧಿಂಗ್ರಾ ಸಿಖ್ಖರ ವೀರ ಭೂಮಿ ಪಂಜಾಬಿನ ಅಮೃತಸರದಲ್ಲಿ ಜನಿಸಿದ. ತಂದೆ ಆಗರ್ಭ ಶ್ರೀಮಂತರು. ಹೆಸರಾಂತ ವೈದ್ಯರಾಗಿದ್ದರು. ಮೂರು ಜನ್ಮಕ್ಕಾಗುವಷ್ಟು ಆಸ್ತಿಯಿತ್ತು. ಧಿಂಗ್ರಾ ಲಾಹೋರ್, ಅಮೃತಸರಗಳಲ್ಲಿ ತನ್ನ ಪ್ರಾಥಮಿಕ ವಿದ್ಯಾಬ್ಯಾಸ ಮುಗಿಸಿದ. ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದ ಇಂಗ್ಲೆಂಡ್ ಗೆ ಹೋಗಿ ಇಂಜಿನಿಯರ್ ಓದಬೇಕೆಂದು ನಿರ್ಧಾರ ಮಾಡಿಬಿಟ್ಟ. ತಂದೆಗೆ ಇಷ್ಟವಿಲ್ಲದಿದ್ದರೂ ಇಂಜಿನಿಯರಿಂಗ್ ಓದಲು ಇಂಗ್ಲೆಂಡ್ ಗೆ ಹಾರಿಬಿಟ್ಟ.
ಇಂಗ್ಲೆಂಡ್ ಸಂಸ್ಕೃತಿಗೆ ಧಿಂಗ್ರಾ ಮಾರುಹೋಗಿಬಿಟ್ಟ. ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತ್ತ.  ವಿಲಾಸಿ ಜೀವನವನ್ನು ನಡೆಸುತ್ತ ಇದೇ ಸ್ವರ್ಗವೆಂದು ಧಿಂಗ್ರಾ ಭಾವಿಸಿಬಿಟ್ಟ.

ಅಷ್ಟೊತ್ತಿಗೆ ಸ್ವಯಂಭು ದೇಶಭಕ್ತ ವೀರ ಸಾವರ್ಕರ್ ಆಂಗ್ಲರ ನಾಡಿಗೆ ಕಾಲಿಟ್ಟಿದ್ದರು. ಭಾರತ ಭವನದ ಮೂಲಕ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿಧ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ತುಂಬುತ್ತಿದ್ದರು. ಭಾರತ ಭವನದ ಸುದ್ದಿ ಧಿಂಗ್ರಾ ಕಿವಿಗೆ ಬಿತ್ತು. ಒಂದು ದಿನ ಧಿಂಗ್ರಾ ಭಾರತ ಭವನ ಪ್ರವೇಶಿಸಿದ. ಅಲ್ಲಿ ಸಾವರ್ಕರ್ ಭಾಷಣ ಮಾಡುತ್ತಿದ್ದರು. ಅನೇಕ ತರುಣರು ಕೇಳುತಿದ್ದರು. ಸಾವರ್ಕರ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಭಾಷಣದಲ್ಲಿ ದೇಶಭಕ್ತಿಯ ಜ್ವಾಲೆ ಪಸರಿಸುತ್ತಿತ್ತು. ಇದನ್ನು ಕೇಳಿದ ಧಿಂಗ್ರಾ ಗೆ  ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ಅವರನ್ನು ಗುರುವಾಗಿ ಸ್ವೀಕರಿಸಿಬಿಟ್ಟ. ಸಾವರ್ಕರ್ ರಿಂದ ಪ್ರಭಾವಿತನಾದ ಧಿಂಗ್ರಾ ಮಹಾನ್ ದೇಶ ಭಕ್ತನಾಗಿಬಿಟ್ಟ. ಸಾವರ್ಕರ್ ರೆಂದರೆ ಅವನಿಗೆ ಪುಜ್ಯರು. ಅವರು ಹೇಳಿದ್ದೆ ವೇದ ವಾಕ್ಯ. ಅವರ ಮಾತು ಬಿಟ್ಟು ಬೇರೆ ಯಾರ ಮಾತನ್ನು ಧಿಂಗ್ರಾ ಕೇಳುತ್ತಿರಲಿಲ್ಲ.  ಸಾವರ್ಕರ್ ಭಾಷಣವೆಂದರೆ ಅವನಿಗೆ ಪ್ರಾಣ.  
     
ಒಂದು ದಿನ ಸಂಜೆ ಧಿಂಗ್ರಾ ಭಾರತ ಭವನಕ್ಕೆ ಬಂದ. ಒಳಕೋಣೆಯಲ್ಲಿ ಗಂಭೀರವಾದ ಸಭೆ ನಡೆಯುತ್ತಿತ್ತು. ಧಿಂಗ್ರಾ ಗೆ ಸಭೆಗಳಿಗಿಂತ ಕೆಲಸದ ಮೇಲೆ ಹೆಚ್ಚು ಆಸಕ್ತಿ. ಧಿಂಗ್ರಾ ಸಭೆಗೆ ಹೋಗಲಿಲ್ಲ. ಒಳಗಡೆಯಿಂದ ಗ್ರಾಮೋ ಫೋನ್ ತಂದು ರಸ್ತೆಯ ಕಡೆಗಿದ್ದ ಕಿಟಕಿಯಲ್ಲಿ ಅದನ್ನು ಹಾಡುವಂತೆ ಮಾಡಿದ. ರಸ್ತೆಯಲ್ಲಿದ್ದ ಅನೇಕ ಹುಡುಗಿಯರು ಬಂದು ಸೇರಿ ಕುಣಿಯಲಾರಂಭಿಸಿದರು. ಅದರ ಜೊತೆಯಲ್ಲಿ ಧಿಂಗ್ರಾ ಶಿಳ್ಳೆ ಹೊಡೆದ. ಒಳಗಡೆ ಸಭೆ ಗೆ ಇದರಿಂದ ತುಂಬಾ ಗದ್ದಲವಾಯಿತು. ಸಿಟ್ಟಿಗೆದ್ದ ಸಾವರ್ಕರ್
 “ ಏನಯ್ಯ ಮದನ್, ನಾಚಿಕೆಯಾಗಬೇಕು ನಿನಗೆ? ಒಳಗೆ ಸಭೆ ನಡೆಯುತ್ತಿದೆ. ಚಕ್ಕರ್ ಹೊಡೆದು ಇಲ್ಲ ನೀನು ಚಕ್ಕಂದ ಆಡುತ್ತಿದ್ದಿಯಾ? ಛೀ ಛೀ ಬಾಯಲ್ಲಿ ಹೇಳೋದು ಹೋರಾಟ, ಬಲಿದಾನ ಎಂದು, ಮಾಡೋದು ಈ ರೀತಿ ” ಎಂದು ಬೈದರು.
ಧಿಂಗ್ರಾ ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಟುಹೋದ. ಮದನ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಬಿಟ್ಟ. ತಾಯಿ ಭಾರತಿಗಾಗಿ ಬಲಿದಾನಕ್ಕೆ ಸಿದ್ದನಾಗಿಬಿಟ್ಟ.

ಲಂಡನ್ನಿನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆ ಇತ್ತು. ಇಂಗ್ಲೆಂಡ್ ಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವುದು ಈ ಸಂಸ್ಥೆಯ ಕೆಲಸವಾಗಿತ್ತು. ಈ ಸಂಸ್ಥೆಯ ಮುಖ್ಯ ಅಧಿಕಾರಿ ಸರ್ ವಿಲಿಯಂ ಕರ್ಜನ್ ವಾಲಿ ಎಂಬುವನು ಇದ್ದ. ಈತ ಗುಲ್ಲೆನರಿ. ಒಳ್ಳೆಯ ರೀತಿಯಲ್ಲಿ ಭಾರತೀಯರ ಸ್ನೇಹ ಸಂಪಾದಿಸಿ ಅವರಲ್ಲಿ ವಿಷ ಬೀಜ ತುಂಬುತ್ತಿದ್ದ. ಈ ಕರ್ಜನ್ ನನ್ನು ಕೊಲ್ಲಬೇಕೆಂದು ಮದನ್ ನಿಶ್ಚಯಿಸಿದ. ತನ್ನ ತಂದೆಯ ಸಹಾಯದಿಂದ ಇವನ ಸ್ನೇಹ ಸಂಪಾದಿಸಿ ಅವನ ವಿಶ್ವಾಸವನ್ನೂ ಗಳಿಸಿಬಿಟ್ಟ.

1909ನೇ ಜುಲೈ ಒಂದನೇ ತಾರೀಖು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ನ ವಾರ್ಷಿಕೋತ್ಸವ ನಡೆಯುತ್ತಿತ್ತು. ಕರ್ಜನ್ ಆ ಸಭೆಗೆ ಬಂದಿದ್ದ. ಮೊದಲೇ ಗುಂಡಿನ ಅಭ್ಯಾಸ ಮಾಡಿದ್ದ ಧಿಂಗ್ರಾ ಕರ್ಜನ್ ವೇದಿಕೆಯಿಂದ ಇಳಿಯುತ್ತಿದ್ದಂತೆ ಹತ್ತಿರ ಹೋಗಿ ತನ್ನ ಜೇಬಿನಿಂದ ರಿವಾಲ್ವರ್ ತೆಗೆದು ಕರ್ಜನ್ ನ ಕುತ್ತಿಗೆಗೆ ಗುರಿ ಇಟ್ಟು ಎರಡು ಗುಂಡು ಹೊಡೆದ. ಕುಸಿದ ಕರ್ಜನ್ ನ ಪ್ರಾಣಹಾರಿ ಹೋಗಿತ್ತು. ಆದರೆ ಧಿಂಗ್ರಾ ನಗುತ್ತ ಶಾಂತನಾಗಿದ್ದ ಆತನ ನಾಡಿ ಎಂದಿನಂತೆ ಸಾಮಾನ್ಯವಾಗಿತ್ತು.

ಶೋಕಿಲಾಲನಾಗಿ ತಿರುಗುತಿದ್ದ ಮದನಲಾಲ್ ವೀರನಾಗಿಬಿಟ್ಟ. ತನ್ನ ಜೀವನವನ್ನು ಸಾರ್ಥಕಗೊಳಿಸಿಬಿಟ್ಟ. ಲಂಡನ್ ಒಮ್ಮೆಗೆ ನಡುಗಿಹೋಯಿತು. ಸ್ವಾತಂತ್ರ್ಯ ಕ್ರಾಂತಿಯ  ಜ್ಯೋತಿ ಬ್ರಿಟಿಷ್ ನೆಲದಲ್ಲೇ ಮೊಳಗಿತ್ತು. ಬ್ರಿಟಿಷ್ ಸರ್ಕಾರ ನಡುಗಿಹೋಯಿತು.

ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಧಿಂಗ್ರಾ ಹುತಾತ್ಮನಾಗಲು ಸಿದ್ದನಾಗಿದ್ದ. ಮರಣದಂಡನೆ ಶಿಕ್ಷೆ ಪ್ರಾಪ್ತಿಯಾಯಿತು. 1909 ಅಗಸ್ಟ್ 17 ರಂದು ಮರಣದಂಡನೆ ಎಂದು ನಿರ್ಧರಿಸಲಾಯಿತು. ಗಲ್ಲಿಗೇರುವ ಮುನ್ನ ಧಿಂಗ್ರಾ ಉತ್ಕೃಷ್ಟ ಹೇಳಿಕೆಯನ್ನು ನೀಡಿದ. “ ತಾಯಿ ಭಾರತಿಯ ಸೇವೆಯೆಂದರೆ ಪ್ರಭು ಶ್ರೀರಾಮನ  ಸೇವೆ. ಆ ತಾಯಿಯ ಸೇವೆ ದೇವರ ಸೇವೆಗೆ ಸಮಾನ. ಆ ತಾಯಿಗೆ ಅಪಮಾನವಾದರೆ ಶ್ರೀ ರಾಮನಿಗೆ ಅಪಮಾನವಾದಂತೆ. ಆ ತಾಯಿಯ ಈ ದಡ್ಡ ಮಗ ತನ್ನ ರಕ್ತವನ್ನಲ್ಲದೆ ಮತ್ತೇನು ಕೊಡಲು ಸಾಧ್ಯ ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ತನ್ನ ತಾಯಿ ನಾಡು ಸ್ವತಂತ್ರವಾಗುವ ವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ.“

ಲಂಡನ್ ಗೆ ಬಂದು ಇಂಜಿನಿಯರ್ ಆಗಬೇಕೆಂದು ಆಸೆ ಪಟ್ಟಿದ್ದ ಧಿಂಗ್ರಾ ತನ್ನ ಬಲಿದಾನದ ಮೂಲಕ ಕ್ರಾಂತಿ ಸಿಂಹನಾಗಿಬಿಟ್ಟ. ಧಿಂಗ್ರಾ ತಂದೆ ಆಗರ್ಭ ಶ್ರೀಮಂತರಾಗಿದ್ದರು. ಸಾಕಷ್ಟು ಆಸ್ತಿಯಿತ್ತು.  ಧಿಂಗ್ರಾ ಆದರಲ್ಲೇ ಬದುಕಿಬಿಡಬಹುದಿತ್ತು. ಆದರೆ ಧಿಂಗ್ರಾ ಸಾಮಾನ್ಯರಲ್ಲಿ ಸಾಮಾನ್ಯನಾಗದೇ ಬಲಿದಾನಗೈದು ಅಜೇಯನಾಗಿಬಿಟ್ಟ.        

ಮರುದಿವಸ ಈ ಸುದ್ದಿಯನ್ನು ಓದಿದ ಇಂಗ್ಲೆಂಡ್ ರಾಜಕಾರಣಿ  ಚರ್ಚಿಲ್(ಮುಂದೆ ಇಂಗ್ಲೆಡಿನ ಪ್ರಧಾನಿಯಾದ) ನ ಕಣ್ಣು ಒದ್ದೆಯಾಯಿತು. ಚರ್ಚಿಲ್ ಅಂದು ಬಹಳ ದುಃಖಿತನಾಗಿದ್ದ. ಸಂಜೆ ಹೇಳಿಕೆ ನೀಡಿದ ಚರ್ಚಿಲ್ “ ಮದನ್ ನೀನು ಮಹಾನ್ ದೇಶಭಕ್ತ. ನಿನ್ನಂತವನು ಇಂಗ್ಲೆಂಡ್ ನಲ್ಲಿ ಹುಟ್ಟಬೇಕಿತ್ತು. ಇನ್ನು ಎರಡು ಶತಮಾನಗಳ ಕಾಲ ನೀನು ಭಾರತೀಯರ ಹೀರೋ ಆಗಿ ಮೆರೆಯುತ್ತಿಯಾ” ಎಂದ. ಆದರೆ ನಮ್ಮ ದುರ್ದೈವೇನು ಗೊತ್ತೇ? ಮದನಲಾಲ್ ಧಿಂಗ್ರಾ ನಮಗೆ ಗೊತ್ತೇ ಇಲ್ಲ. ಧಿಂಗ್ರಾ ನ ಕುರಿತು ನಮ್ಮ ಪಠ್ಯ ಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ. ಇದು ಬಹಳ ವಿಷಾದನೀಯ ಸಂಗತಿ.

ಧಿಂಗ್ರಾ ಹುತಾತ್ಮನಾಗಿ ಇಂದಿಗೆ 105 ವರ್ಷವಾಯಿತು. ಬಲಿದಾನವನ್ನು ಇಂದು ಸ್ಮರಿಸೋಣ.
ಮದನಲಾಲ್ ಧಿಂಗ್ರಾ ಗೆ ನಮನಗಳು.
ವಂದೇಮಾತರಂ
ರವಿತೇಜ ಶಾಸ್ತ್ರೀ                              

                                                                                                                                      

Sunday, August 10, 2014

“ಯಾನ ”ದೊಂದಿಗಿನ ನನ್ನ ಯಾನ : ಒಂದು ಸುಂದರ ಅನುಭವ

ಮೊದಲ ಬಾರಿಗೆ ಬೈರಪ್ಪನವರ ಕಾದಂಬರಿ ಓದಿದೆ. ಆ ಪಯಣದ ಅನುಭವವನ್ನು ಅಕ್ಷರರೂಪದಲ್ಲಿ ವ್ಯಕ್ತಪಡಿಸಬೇಕಿಸಿತು. ಇದು ಕಾದಂಬರಿಯ ವಿಮರ್ಶೆಯಲ್ಲ. ವಿಮರ್ಶೆ ಮಾಡುವಷ್ಟು ದೊಡ್ಡವನು ನಾನಲ್ಲ. ದೊಡ್ಡ ಕಾದಂಬರಿಕಾರರ ಕಾದಂಬರಿಯ ಕುರಿತು ಈ ಚಿಕ್ಕವನ ಅಭಿಪ್ರಾಯವಷ್ಟೇ.
..................................................................................................................................................

ಯಾನಕ್ಕಿಂತ ಮುಂಚೆ ಬೈರಪ್ಪನವರ ಯಾವುದೇ ಕಾದಂಬರಿಗಳನ್ನು ನಾನು ಓದಿರಲಿಲ್ಲ. ಆವರಣ ಓದಬೇಕೆಂಬ ಆಸೆಯಿತ್ತು, ಆದರೆ ಆಸೆಯಾಗಿಯೇ ಉಳಿದುಬಿಟ್ಟಿತು . ಕಾದಂಬರಿಗಿಂತ ಇತಿಹಾಸ, ಆಧ್ಯಾತ್ಮ  ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕಗಳೇ ನನಗೆ ಇಷ್ಟವಾಗಿತ್ತು. ಅವುಗಳನ್ನಷ್ಟೇ ನಾನು ಓದಿದ್ದೆ. ಬೇರೆ ಪುಸ್ತಕಗಳ ಬಗ್ಗೆ ನನಗೆ ಅಷ್ಟು ಆಸಕ್ತಿಯಿರಲಿಲ್ಲ.
 ಬೈರಪ್ಪನವರ ಹೊಸ  ಕಾದಂಬರಿ ಯಾನ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಕನ್ನಡ ಪ್ರಭದಲ್ಲಿ ಪ್ರಕಟವಾಗಿತ್ತು. ಸುದ್ದಿ ನೋಡಿ ಈ ಬಾರಿ ಬೈರಪ್ಪನವರ ಕಾದಂಬರಿ ಓದಬೇಕೆಂದು ನಿಶ್ಚಯಿಸಿದೆ. ಪುಸ್ತಕ ಬಿಡುಗಡೆಯಾದ ಮಾರನೆ ದಿನವೇ ಪುಸ್ತಕ ಖರೀದಿಸಿದೆ.

ಒಂದು ಪುಸ್ತಕ ಕೊಂಡು ತಂದರೆ ಅದನ್ನು ಒಂದೆರಡು- ಮೂರು ದಿನಗಳಲ್ಲಿ ನಾನು ಮುಗಿಸಿಬಿಡುತ್ತಿದ್ದೆ. ಆದರೆ ಯಾನವನ್ನು ಓದಿ ಮುಗಿಸಲು ಒಂದು ವಾರ ಮತ್ತು ಎರಡು ದಿನ ಬೇಕಾಯಿತು!.
ಪುಸ್ತಕ ತಂದ  ದಿನವೇ ಓದಲು ಆರಂಭಿಸಿದೆ  ಆದರೆ ಮೊದಲಿಗೆ ಅರ್ಥೈಸಿಕೊಳ್ಳಲು ಆಗಲಿಲ್ಲ. ಕಾದಂಬರಿಯ ಆರಂಭ ನನಗೆ ಹಲವು ಗೊಂದಲಗಳನ್ನು ಸೃಷ್ಟಿಸಿತು. ಕ್ರಮೇಣ ಏಕಾಗ್ರತೆಯಿಂದ ಓದಲು ಮುಂದುವರೆಸಿದಾಗ ಯಾನ ನನ್ನನ್ನು ಸಂಪೂರ್ಣವಾಗಿ ಅವರಿಸಿಬಿಟ್ಟಿತು. ಕಾದಂಬರಿಯಲ್ಲಿ ನಾನು ತಲ್ಲೀನನಾಗಿಬಿಟ್ಟೆ!.

ಆಕಾಶ ಮೇದಿನಿಯ ವಿವಾಹ ಪ್ರಸ್ತಾಪದಿಂದ ಕಾದಂಬರಿ ಆರಂಭವಾದಾಗ ಬಹಳ ಗೊಂದಲವಾಯಿತು. ಆಕಾಶ, ಮೇದಿನಿ ಇಬ್ಬರು ಸೋದರ ಸೋದರಿಯರು. ಸೋದರ ಸೋದರಿಯರಿಗೆ ಮದುವೆಯೇ? ಇದು ಹೇಗೆ ಸಾಧ್ಯ? ಪ್ರಕೃತಿಗೆ ವಿರುದ್ದವಲ್ಲವೇ? ಬೈರಪ್ಪನವರು ಏನು ಹೇಳಲು ಹೊರಟಿದ್ದಾರೆ? ಎಂಬೆಲ್ಲ ಗೊಂದಲ, ಪ್ರಶ್ನೆಗಳು ಮನದಲ್ಲಿ ತುಂಬಿಕೊಂಡೆವು. ಗೊಂದಲಗಳನ್ನು ಬದಿಗೆ ಸರಿಸಿ ಓದು ಮುಂದುವರೆಸಿದೆ. ಮುಂದೆ ಬಂದ ಸುದರ್ಶನ್ ಮತ್ತು ಉತ್ತರೆಯ ಕಥೆಗಳು ಬಹಳಷ್ಟು ಕೂತುಹಲಕಾರಿಯಾಗಿದ್ದವು. ಕೊನೆ ಕ್ಷಣದವರೆಗೂ ಆ ಕೂತುಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಾನ ಸಫಲವಾಗಿತ್ತು.
ಬೈರಪ್ಪನವರು ಕಾದಂಬರಿಗೆ ಆರಿಸಿಕೊಂಡಿರುವ ವಸ್ತು ಅಂತರಿಕ್ಷ ಯಾನ. ಯಾನದ ಪ್ರಮುಖ ಪಾತ್ರಗಳಾದ ಸುದರ್ಶನ್ ಮತ್ತು ಉತ್ತರಾ ಸೂರ್ಯನ ಗುರುತ್ವದ ಆಚೆಗೆ ಪ್ರಾಕ್ಸಿಮ ಸೆಂಟರಿಸ್ ಗೆ  ಪಯಣಿಸಿ ಅಲ್ಲಿ ಯಾವುದಾದರೂ ನಕ್ಷತ್ರವಿದೆಯೇ ಎಂದು ಗುರುತಿಸಿ, ಇದ್ದರೆ ಅದು ವಾಸಿಸಲು  ಯೋಗ್ಯವೇ ಎಂದು ಪರೀಕ್ಷಿಸಿ,  ಯಾನಿಗಳಾದ ಸುದರ್ಶನ್ ಮತ್ತು ಉತ್ತರಾ ಒಂದು ಗಂಡು ಮತ್ತು ಹೆಣ್ಣು ಸಂತಾನಗಳನ್ನು ಸೃಷ್ಟಿಸಿ ಅವರು ಅಲ್ಲಿ ಜೀವಿಸುವಂತೆ ಮಾಡುವುದು. ಇದು ಒಂದೆರಡು ವರ್ಷಗಳ ಯಾನವಲ್ಲ, ಸಾವಿರಾರು ವರ್ಷಗಳ ಯಾನ.   ಬೈರಪ್ಪನವರ ಚಿಂತನಾ ಸಾಮರ್ಥ್ಯಕ್ಕೆ ತಲೆಬಾಗಲೇಬೇಕು. ನನ್ನಂತಹ ಸಾಮಾನ್ಯರಿಗೆ ಈ ವಿಷಯಗಳು  ಚಿಂತನೆಗೂ ನಿಲುಕದ ವಿಚಾರ. ಈ ಕಲ್ಪನೆ ನನಗೆ ಬಹಳ ಇಷ್ಟವಾಯಿತು.

 ಯಾನ ಮೇಲ್ನೋಟಕ್ಕೆ ವೈಜ್ಞಾನಿಕ ಕಾದಂಬರಿ  ಎಂದಿನಿಸುತ್ತದೆ ಆದರೆ ಕಾದಂಬರಿಯ ಹೊಳಹೊಕ್ಕರೆ ವಿಜ್ಞಾನದ ಜೊತೆಗೆ ಆಧ್ಯಾತ್ಮ, ಮಾನವೀಯ ಸಂಬಂಧಗಳು, ದೇಶಭಕ್ತಿ ಹೀಗೆ ಎಲ್ಲವೂ ಕಾದಂಬರಿಯಲ್ಲಿದೆ. ರಾಜಕೀಯವು ಇದೆ. ಅಮೇರಿಕ ಸಹ ಇದೆ. ಇಸ್ರೇಲೂ ಇದೆ. ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂದು ಕೇಳುವುದು ಸೂಕ್ತವೆನಿಸುತ್ತದೆ.

ಕಾದಂಬರಿಯಲ್ಲಿ ನನಗೆ ಬಹುವಾಗಿ ಇಷ್ಟವಾದ  ಪಾತ್ರವೆಂದರೆ ವಿಜ್ಞಾನಿ ಡಾ, ಸುದರ್ಶನ್ ರ ಪಾತ್ರ. ಯಾನ ಯಶಸ್ವಿಯಾಗಲು ಉತ್ತರೆ ಸಹಕರಿಸದೆ ತಾನು  ಹತಾಶನಾದಾಗ, ಸುದರ್ಶನ್ ಆಧ್ಯಾತ್ಮದ ತಮ್ಮ ಕಡೆಗೆ ಒಲವನ್ನು ಬದಲಿಸಿ ಹತಾಶೆಗಳನ್ನು ಬಿಟ್ಟು ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಂಡ ಪರಿ ನಿಜಕ್ಕೂ ಅದ್ಭುತ. ವಿಜ್ಞಾನ ಮತ್ತು ಆಧ್ಯಾತ್ಮ ಗಳಿಗೆ ಸಂಬಂಧವಿದೆ  ಎಂಬುದನ್ನು ಬೈರಪ್ಪನವರು ಸುದರ್ಶನ್ ಪಾತ್ರದ ಮೂಲಕ ಹೇಳುತ್ತಾರೆ.  
ಸುದರ್ಶನ್ ಪಾತ್ರದಲ್ಲಿ ಅಚಲ ದೇಶಭಕ್ತಿಯನ್ನು ಸಹ ಕಾಣಬಹುದು. ಯಾನದ ನೌಕೆಯನ್ನು ತಯಾರಿಸಲು ಆತ ಪಟ್ಟ ಶ್ರಮ, ಯಾನವನ್ನು ಯಶಸ್ವಿಯಾಗಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ ಸುದರ್ಶನ್ ರ ಪ್ರತಿ ನಡೆಯಲ್ಲೂ ವ್ಯಕ್ತವಾಗಿದೆ. ಇದು ಅಚಲ ದೇಶ ಭಕ್ತಿಯೇ ಸರಿ.

ನನನ್ನು ಕಾಡಿದ ಪಾತ್ರವೆಂದರೆ ಪೈಲಟ್ ಉತ್ತರೆಯ ಪಾತ್ರ. ಆಕೆಯ ಸ್ವಾಭಿಮಾನ ಬಹಳ ಇಷ್ಟವಾಯಿತು. ಏರ್ ಫೋರ್ಸ್ ನಲ್ಲಿ ಫ್ಲೈಟರ್ ಪೈಲಟ್ ನಂತ ಉನ್ನತ ಹುದ್ದೆಗೆ ಸ್ತ್ರೀ ಗೆ ಸಿಗುವುದು  ಅಸಾಧ್ಯವೆಂದು ತಿಳಿದಾಗ ಆಕೆ ಧೃತಿಗೆಡದೆ ಹೋರಾಡಿ ಉನ್ನತ ಹುದ್ದೆಗೇರಿದ್ದು ಆಕೆಯ ಪ್ರಖರ ಸ್ವಾಭಿಮಾನತೆಗೆ ಸಾಕ್ಷಿ.  ಹೆಣ್ಣು ಸ್ವಾಭಿಮಾನಿಯಾಗಬೇಕೆಂಬ ಸಂದೇಶವನ್ನು ಈ ಪಾತ್ರದ ಬೈರಪ್ಪನವರು ನೀಡಿದ್ದಾರೆ. ಹೆಣ್ಣು ಗಂಡೆಂಬ ಭೇದ ಇರಕೂಡದು ಎಂದು ತಿಳಿಸಿಕೊಡುತ್ತಾರೆ.
ಮೊದಲು ನೂರು ದಿನಗಳ ಯಾನಕ್ಕಾಗಿ ಪೈಲಟ್ ಯಾದವನ್ನು ವಿವಾಹವಾಗಿ ಅದನ್ನು ಮುಗಿಸಿ, ಮತ್ತೊಂದು ಯಾನಕ್ಕೆ ಯಾದವನು ಒಪ್ಪದೇ ಇದ್ದಾಗ ಉತ್ತರೆ ಅನುಭವಿಸಿದ ಮಾನಸಿಕ ತೊಳಲಾಟಗಳನ್ನು ಓದುವಾಗ ಬಹಳ ಖೇದವೆನಿಸಿತು. ಯಾದವ್ ದೂರವಾದರೂ ಬೇರೊಬ್ಬನೊಂದಿಗೆ ಕೂಡುವ ಮನಸ್ಸನ್ನು ಆಕೆ ಮಾಡುವುದಿಲ್ಲ.  ಭಾರತೀಯ ಹೆಣ್ಣಿನ ಅಂತಃಕರಣದ ಭಾವನೆಗಳನ್ನು ಬೈರಪ್ಪನವರು ಉತ್ತರೆ ವ್ಯಕ್ತಪಡಿಸುವ ಅಕ್ರೋಶ, ಸಿಟ್ಟು, ಅಸಹಾಯಕತೆಗಳ ಮೂಲಕ  ವಿವರಿಸುತ್ತಾರೆ.

ಉತ್ತರೆಯ ಪತಿ ಯಾದವನ ಪಾತ್ರ ಗಂಡಸಿನ ಮಾನಸಿಕ ತೊಳಲಾಟಗಳನ್ನು ವ್ಯಕ್ತಪಡಿಸುತ್ತದೆ. ಉತ್ತರೆ ದೂರವಾದ ನಂತರ ಯಾದವ್ ಮತ್ತೊಂದು ಮದುವೆಯಾದರೂ ಉತ್ತರೆ ಅವನ ಮನದಿಂದ ದೂರವಾಗುವುದಿಲ್ಲ. ತನ್ನ ಮಗಳಿಗೆ ಉತ್ತರೆಯ ಹೆಸರನ್ನು ಇಟ್ಟು ಆಕೆಯಲ್ಲಿ ಉತ್ತರೆಯನ್ನು ಕಾಣುವ ಪ್ರಯತ್ನವನ್ನು ಮಾಡುತ್ತಾನೆ. ಕೆಲವು ಕಾದಂಬರಿಕಾರರು ಕೇವಲ ಒಂದು ದೃಷ್ಟಿಯಿಂದ ಅವಲೋಕಿಸಿತ್ತಾರೆ. ಆದರೆ ಬೈರಪ್ಪನವರು ಗಂಡು-ಹೆಣ್ಣು ಇಬ್ಬರ ಭಾವನೆಗಳನ್ನು ಅವಲೋಕಿಸಿ ಆ  ಕುರಿತು ಬೆಳಕು ಚೆಲ್ಲುತ್ತಾರೆ.                             
                                     
ಇನ್ನು ಕಾದಂಬರಿಯಲ್ಲಿ ಅಕ್ಕನ ಪ್ರೀತಿಯಿದೆ, ಸುದರ್ಶನ್ ಮತ್ತು ಅವರ ಅಕ್ಕನ ಸೋದರತ್ವದ ಸಂಬಂಧದಲ್ಲಿ ಅಕ್ಕನ ಪ್ರೀತಿ ಕಾಣಬಹುದಾಗಿದೆ.  ಕಾದಂಬರಿಯಲ್ಲಿ ತಾಯಿಯ ವಾತ್ಸಲ್ಯವೂ ಇದೆ. ಉತ್ತರೆಯ ತಾಯಿಯ ಪಾತ್ರದಲ್ಲಿ ಇದನ್ನು ಕಾಣಬಹುದು.
ಭಾರತದ ಮೇರು ಪರ್ವತ ಹಿಮಾಲಯದ ಸುಂದರ ವರ್ಣನೆ ಕಾದಂಬರಿಯಲ್ಲಿದೆ.  ಮಾಧ್ಯಮಗಳ ಭಟ್ಟಂಗಿತನವೂ ಕಾದಂಬರಿಯಲ್ಲಿದೆ. ಉತ್ತರೆ 100 ದಿನ ಯಾನ ಮುಗಿಸಿ ಬಂದಾಗ ಮಧ್ಯಮಗಳನು ಆಕೆಯನ್ನು ಹೀರೋಯಿನ್ ಮಾಡಿದ ಪ್ರಹಸನದ ಮೂಲಕ ಮಾದ್ಯಮಗಳ ಭಟ್ಟಂಗಿತನವನ್ನು ಬೈರಪ್ಪನವರು ವಿವರಿಸುತ್ತಾರೆ. ಧಾರ್ಮಿಕ ಭಾವನೆಗಳನ್ನು ವಿರೋಧಿಸುವ ಜಾತ್ಯತೀತವಾದಿಗಳ ಸೋಗಲಾಡಿತನವನ್ನು ಬೈರಪ್ಪನವರು ಬೆತ್ತಲುಗೊಳಿಸುತ್ತಾರೆ. ಭಾರತದ ಅಂತರಿಕ್ಷ ಯಾನದ ಮಾಹಿತಿಯನ್ನು ತನ್ನ ಗೂಢಚರ್ಯ ಸಂಸ್ಥೆಗಳ ಸಂಗ್ರಹಿಸುವ ಅಮೇರಿಕಾದ ಕ್ಷುದ್ರ ಬುದ್ದಿ, ಪಾಕಿಸ್ತಾನ ಮತ್ತು ಚೀನಾಗಳ ಕಪಟಿತನ ಹೀಗೆ ರಾಜಕೀಯವೂ ಸೇರಿ ಎಲ್ಲವೂ ಕಾದಂಬರಿಯಲ್ಲಿದೆ.     
ಬೈರಪ್ಪನವರ ಕಾದಂಬರಿ ಯಾನ ವಿಚಾರಗಳ ಸಾಗರ.  ಈ “ಯಾನ” ದ ಯಾನದ ನನಗೆ ಬಹಳ ಇಷ್ಟವಾಯಿತು. ಇದೊಂದು ಸುಂದರ ಯಾನ. ಸುಂದರ ಅನುಭವ.  


ರವಿತೇಜ ಶಾಸ್ತ್ರೀ.