Sunday, July 27, 2014

ಆಕೆಯ ಭಾವುಕತೆಯ ಮಾತುಗಳಲ್ಲಿ ಮಿಂದೆದ್ದ ಆ ಕ್ಷಣಗಳು !

 ಇಂದು ಮನವು ಸಂತೋಷದ ಕಡಲಲ್ಲಿ ತೇಲಾಡುತ್ತಿದೆ. ಸಾರ್ಥಕತೆಯ ಭಾವ ಮನದಲ್ಲಿ ವ್ಯಕ್ತವಾಗುತ್ತಿದೆ. ಕಾರಣ ನಮ್ಮ ಸಂಸ್ಥೆ “ಉತ್ತಿಷ್ಠ ಭಾರತ” ಅಧಿಕೃತವಾಗಿ ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಸಭಾಂಗಣದಲ್ಲಿ ಲೋಕಾರ್ಪಣೆಯಾಯಿತು. ಸರಳ, ಸುಂದರ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು. ಆ ಕಾರ್ಯಕ್ರಮದ ಭಾಗವಾಗಿದ್ದಕ್ಕೆ ಅತೀವ ಸಂತೋಷವಾಗುತ್ತಿದೆ.

“ಸಮರ್ಪಣ್”  ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ  ಬಹುಮುಖ್ಯ  ಆಕರ್ಷಣೆಯಾಗಿದ್ದವರು ದಿವಗಂತ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ರವರ ಧರ್ಮ ಪತ್ನಿ ಶ್ರೀಮತಿ ಶಕುಂತಲ ಭಂಡಾರ್ಕರ್ ಅವರ ಭಾಷಣ . ಆ ಸ್ಪೂರ್ತಿದಾಯಕ ಮತ್ತು ಭಾವತ್ಮಕವಾದ ಆ ಭಾಷಣ ನಿಜಕ್ಕೂ ಸ್ಪೂರ್ತಿಯ ಚಿಲುಮೆಯೇ ಸರಿ.

ತಮ್ಮ ಪತಿಯ ಸಂಪೂರ್ಣ ಜೀವನವನ್ನು  ಸಭಿಕರ ಮುಂದಿಟ್ಟ ಅವರು ಅಜಿತ್ ಭಂಡಾರ್ಕರ್ ಅವರ ಅವರ ಕಾರ್ಯಕ್ಷಮತೆ, ಕರ್ತವ್ಯ ನಿಷ್ಠೆ ಕುರಿತು ಬಹಳ ಹೆಮ್ಮೆಯಿಂದ ತಮ್ಮ ಪತಿಯ ಜೊತೆಗಿನ ಒಡನಾಟಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ತಮ್ಮ ಪತಿಯ ಸಾವಿನ ಸುದ್ದಿ ತಿಳಿದ ಪ್ರಸಂಗವನ್ನು ನೆನೆದು ಆಕೆ ಭಾವುಕರಾದರು.  ಅಂದು ವಾರಾಂತ್ಯದ ದಿವಸ. ದೀಪಾವಳಿಯ  ರಜಾದಿನಗಳ ಸಮಯ. ರಜಾದಿನಗಳಿಗೆ ಸಿದ್ದರಾಗಿದ್ದ ಶಕುಂತಲ ಅವರು ಹಣವನ್ನು ಹೊಂದಿಸಿ ಅಜಿತ್ ರೊಂದಿಗೆ ಶಾಪಿಂಗ್ ಮಾಡಬೇಕೆಂಬ ಹಂಬಲದಿಂದ ಅವರ ಬರುವಿಕೆಗೆ ಕಾಯುತ್ತಿದ್ದರಂತೆ. ಅಜಿತ್ ಅವರ ಬದಲು ಅಜಿತ್ ಅವರ ಬಹಳಷ್ಟು ಸ್ನೇಹಿತರು ಮನೆಗೆ ಬಂದರು. ಇದರಿಂದ ಸಂತೋಷಗೊಂಡ ಶಕುಂತಲ ಅವರು ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊ೦ಡರು. ಅಜಿತ್ ರ ವೀರ ಮರಣದ ಸಾವಿನ ಸುದ್ದಿ ತಿಳಿಸಲು ಬಂದಿದ್ದ ಅತಿಥಿಗಳಿಗೆ ಸುದ್ದಿ ತಿಳಿಸುವುದು ಬಹಳ ಕಷ್ಟಕರವಾಯಿತು. ಕೊನೆಗೆ ಸಾವಿನ ಸುದ್ದಿ ತಿಳಿದ  ಆ ಆಘಾತಕಾರಿ ಕ್ಷಣವನ್ನು ಅವರು ನೆನೆಯುತ್ತಾ ಬಹಳ ಭಾವುಕರಾದರು.

ತನ್ನ ಪ್ರಿಯ ಪತಿಯನ್ನು ಕಳೆದುಕೊಂಡರೂ ಅವರ ಆತ್ಮಸ್ಥೈರ್ಯ ಕಡಿಮೆಯಾಗಿಲ್ಲ. ತನ್ನ ಪತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ತ್ಯಾಗ ಮಾಡಿರುವ ಅವರು ಈಗ ತಮ್ಮ  ಪ್ರಿಯ ಪುತ್ರನನ್ನು ಸಹ ರಾಷ್ಟ್ರ ಕಾರ್ಯಕ್ಕಾಗಿ ಅಡಿಗೊಳಿಸಿದ್ದಾರೆ.  ಶಕುಂತಲ ಅವರ ಪುತ್ರ ಸೈನ್ಯದ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಈಗ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ತನ್ನ ತಂದೆ ಸೇವೆ ಸಲ್ಲಿಸಿದ ರೆಜಿಮೆಂಟ್ ನಲ್ಲಿ ಸಲ್ಲಿಸಲಿದ್ದಾರೆ.  ಹುತಾತ್ಮ ಯೋಧನ ಪತ್ನಿಗಿಂತ ಒಬ್ಬ ವೀರ ಯೋಧನ ತಾಯಿಯಗಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಶಕುಂತಲ ಅವರು ಭಾವುಕರಾಗಿ ನುಡಿದ ಕ್ಷಣಗಳನ್ನು  ಜೀವಮಾನದಲ್ಲಿ ನಾನು ಮರೆಯಲು ಸಾಧ್ಯವಿಲ್ಲ.
ತನ್ನ ಪತಿಯನ್ನು ಕಳೆದುಕೊಂಡರೂ ತನ್ನ ಮಗನನ್ನು ಸೈನಕ್ಕೆ ಸೇರಲು ಪ್ರೇರೇಪಿಸುವ ತಾಯಿಯ ಮಾತುಗಳು ಸ್ಫೂರ್ತಿಯಾದವು. ಇಂತಹ ಕಥೆಗಳನ್ನು ನಾನು ಕೇಳಿದ್ದೆ, ಓದಿದ್ದೆ ಆದರೆ ಸ್ವತಃ ಪ್ರತ್ಯಕ್ಷವಾಗಿ ಕಂಡಿದ್ದು ಇದೇ ಮೊದಲು. ನಿಜಕ್ಕೂ ಆಕೆ ವೀರ ಮಾತೆ, ಸಾವಿರಾರು ಮಹಿಳೆಯರಿಗೆ ಆಕೆ ಆದರ್ಶ.
ಆ ವೀರ ತಾಯಿಯ ಮಾತುಗಳನ್ನು ಆಲಿಸಿದ ನಾನು ನಿಜಕ್ಕೂ ಧನ್ಯ. ಆ ಭಾಹುಕತೆಯ ಕ್ಷಣಗಳನ್ನು ನಾನೆಂದಿಗೂ ಮರೆಯಾಲಾರೆ.

ವೀರ ತಾಯಿಗೆ ನನ್ನ ನಮನಗಳು.      
ರವಿತೇಜ ಶಾಸ್ತ್ರೀ                                                        



Wednesday, July 23, 2014

ಈ ಕ್ರಾಂತಿವೀರರನ್ನು ಮರೆಯಲು ಸಾಧ್ಯವೇ?


ಇಂದು ಇಬ್ಬರು ಕಾಂತ್ರಿಪುರುಷರ ಜನ್ಮದಿನ. ಒಬ್ಬರು ಲೋಕಮಾನ್ಯ ಬಾಲಗಂಗಾಧರನಾಥ್ ತಿಲಕ್. ಮತ್ತೊಬ್ಬರು ಪುರುಷಸಿಂಹ ಪಂಡಿತ್ ಚಂದ್ರಶೇಖರ್ ಅಜಾದ್.

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಸಾರಿ ಭಿಕ್ಷಾಟನೆಯ ವೇದಿಕೆಯಂತಿದ್ದ ಕಾಂಗ್ರೆಸ್ ಎಂಬ ಬ್ರಿಟಿಷರೆ ಸ್ಥಾಪಿಸಿದ್ದ ಸಂಸ್ಥೆಯನ್ನು ಸ್ವಾತಂತ್ರ್ಯ ಆಂದೋಲನದ ಸಂಸ್ಥೆಯಾಗಿ ಪರಿವರ್ತಿಸಿ ಬ್ರಿಟಿಷರ ತಂತ್ರಕ್ಕೆ ಪ್ರತಿತಂತ್ರ ಹೆಣೆದು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಆಂಗ್ಲರನ್ನು ಕಾಡಿದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್.

ಬಾಲ್ಯದಲ್ಲೇ ಬ್ರಿಟಿಷರಿಗೆ ಸೆಡ್ಡುಹೊಡೆದು ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಗರ್ಜಿಸಿ ಪೋಲಿಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಾ ಆಂಗ್ಲರ ಎದೆಯಲ್ಲಿ ನಡುಕಹುಟ್ಟಿಸಿ, ಸ್ನೇಹಿತನ ಕುತಂತ್ರಕ್ಕೆ ಬಲಿಯಾಗಿ ತನ್ನ ಪಿಸ್ತೂಲಿನಿಂದಲೇ ಗುಂಡುಹಾರಿಸಿಕೊಂಡು ವೀರ ಮರಣಹೊಂದಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್.

ಅಜಾದ್ ಮತ್ತು ತಿಲಕ್ ಇಬ್ಬರೂ ಶ್ರೇಷ್ಠ ಕಾಂತ್ರಿಕಾರಿಗಳು ತಮ್ಮ ನಾಯಕತ್ವದಿಂದ ಅಸಂಖ್ಯ ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದವರು.

ಭಾರತೀಯರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಯತ್ನಿಸಿ ಬ್ರಿಟಿಷ್ ಸರ್ಕಾರ ಕಾಂಗ್ರೆಸ್ ಎಂಬ ಸಂಸ್ಥೆ ಸ್ಥಾಪಿಸಿ ಭಾರತೀಯರು ತಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಸಂಸ್ಥೆಯ ಮೂಲಕ ಸಲ್ಲಿಸಬೇಕೆಂದು ಆದೇಶಿಸಿದರು.
ಈ ಸಂಸ್ಥೆ ಮೊದಮೊದಲು ಭಿಕ್ಷಾಟನೆಯ ವೇದಿಕೆಯಂತಿತ್ತು.ಆದರೆ ಈ ವೇದಿಕೆಯನ್ನು ಸ್ವಾತಂತ್ರ್ಯ ಆಂದೋಲನದ ವೇದಿಕೆಯಾಗಿ ಪರಿವರ್ತಿಸಿದವರು ಲೋಕಮಾನ್ಯ ತಿಲಕ್.

"ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು" ಎಂದು ಘೋಷಿಸಿ ಸಾರ್ವಜನಿಕ ಗಣೇಶೋತ್ಸವ, ಶಿವಾಜಿ ಜಯಂತಿಯನ್ನು ಆಚರಿಸಿ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ ಬ್ರಿಟಿಷರ ವಿರುದ್ದ ಜನಾಂದೋಲನ ಸೃಷ್ಟಿಸಿದ ಕೀರ್ತಿ ಲೋಕಮಾನ್ಯ ತಿಲಕರಿಗೆ ಸಲ್ಲುತ್ತದೆ.

ತಮ್ಮ ಪ್ರಬಲ ನಾಯಕತ್ವದಿಂದ ತಿಲಕರು ಹಲವಾರು ಮಹಾನ್ ಪುರುಷರ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಸ್ವಾತಂತ್ರ್ಯ ವೀರ ಸಾವರ್ಕರ್ ಇಂಗ್ಲೆಂಡ್ಗೆ ಹೋಗಲು ಶಿಫಾರಸ್ಸು ಪತ್ರವನ್ನು ಬರೆದು ಕೊಟ್ಟು ಅವರಲ್ಲಿ ಸ್ಪೂರ್ತಿ ತುಂಬಿ ಸಾವರ್ಕರ್ ಅಪ್ರತಿಮ ಕ್ರಾಂತಿಕಾರಿಯಾಗಲು ಮುನ್ನುಡಿ ಬರೆದವರು ತಿಲಕರು.
ಚಾಪೇಕರ್ ಸಹೋದರರು, ಲಾಲಲಜಪತರಾಯ್, ಗೋಪಾಲಕೃಷ್ಣ ಗೋಖಲೆ ಮುಂತಾದವರು ತಿಲಕರಿಂದ ಪ್ರೇರಿತರಾಗಿದ್ದರು.

ಬಾಲ್ಯದಲ್ಲಿ ಪೋಲಿಸರಿಂದ ಛಡಿ ಏಟು ತಿಂದು ತಾನೆಂದು ಪೋಲಿಸರಿಗೆ ಶರಣಾಗುವುದಿಲ್ಲ. ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಶಪಥ ಮಾಡಿ ಯುವಜನರಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ಮು ಹಬ್ಬಿಸಿದವರು ಅಜಾದ್.

ತನ್ನ ಗುರು ರಾಮಪ್ರಸಾದ್ ಬಿಸ್ಮಿಲ್ ರ ಜೊತೆಗೂಡಿ ಕಾಕೋರಿ ದರೋಡೆಯನ್ನು ಯಶ್ವಸಿಯಾಗಿ ಮುಗಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಹಣ ದೊರಕಿಸಿಕೊಟ್ಟರು.
ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅರ್ಮಿಯ ಮುಂದಾಳತ್ವ ವಹಿಸಿ ದೇಶದಲ್ಲಿ ಕ್ರಾಂತಿಯ ಕಹಳೆ ಊದಿದ ಅಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಬುಟುಕೇಶ್ವರ ದತ್ತ, ಅಶ್ಪಾಕ್ ಉಲ್ಲಾ ಖಾನ್ ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಬೆಳವಣಿಗೆಯ ರೂವಾರಿ ಅಜಾದ್ ಎಂದರೆ ತಪ್ಪಿಲ್ಲ.

ಕಾಕೋರಿ ದರೋಡೆ, ಸ್ಯಾಂಡರ್ಸ್ ಹತ್ಯೆ, ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ ಮುಂತಾದ ಕ್ರಾಂತಿ ಚಟುವಟಿಕೆಗಳಿಗೆ ಯೋಜನೆಯನ್ನು ರೂಪಿಸಿದ್ದು ಅಜಾದ್ ರ ಬುದ್ದಿವಂತಿಕೆ, ಧೈರ್ಯ, ಚಾಕಚಕ್ಯತೆಗಳಿಗೆ ಸಾಕ್ಷಿ.

ಪೋಲಿಸರ ಕೈಗೆ ಸಿಗದೆ ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಅವರಿಗೆ ಮಣ್ಣು ಮರಚಿದ ಏಕೈಕ ಕ್ರಾಂತಿಕಾರಿ ಎಂದರೆ ಅವರು ಅಜಾದ್. ಬಾಲ್ಯದ ಪ್ರತಿಜ್ಞೆಯಂತೆ ಕೊನೆಗೂ ಪೋಲಿಸರ ಕೈಗೆ ಸಿಗದೇ ತನ್ನ ಪಿಸ್ತೂಲಿನಿಂದಲೇ ಗುಂಡುಹಾರಿಸಿಕೊಂಡು ವೀರಮರಣಹೊಂದಿದ ಅಜಾದ್ ಪುರುಷ ಸಿಂಹ.

ಅಜೇಯ ಕ್ರಾಂತಿಕಾರಿ ಅಜಾದ್ ಮತ್ತು ಲೋಕಮಾನ್ಯ ತಿಲಕ್ ಇಬ್ಬರು ಒಂದೇ ದಿನ ಜನಿಸಿದ್ದು ಕಾಕತಾಳೀಯವೋ ಅಥವಾ ಭಾರತೀಯರ ಭಾಗ್ಯವೋ ಗೊತ್ತಿಲ್ಲ. ಈ ಇಬ್ಬರ ಹೋರಾಟ ಮತ್ತು ತ್ಯಾಗ ಬಲಿದಾನಗಳು ನಮಗೆ ಆದರ್ಶ.

ಈ ವೀರಪುತ್ರರನ್ನು ಇಂದು ನೆನೆಯೋಣ.

ವಂದೇಮಾತರಂ

Sunday, July 20, 2014

ಅವರು ನೆತ್ತರು ಹರಿಸಿದ್ದರಿಂದಲೇ ನಾವಿಂದು ಸುಖವಾಗಿರೋದು!!

 ಇಂದು ಜಗತ್ತು ಬರಿ ಸ್ವಾರ್ಥಮಯವಾಗಿಬಿಟ್ಟಿದೆ. ತಾನೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಉಸಾಬರಿ ನಮಗ್ಯಾಕೆ? ಎನ್ನುವ ಭಾವನೆ ಜನರಲ್ಲಿ ತುಂಬಿಹೋಗಿದೆ.  ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದೆ ನಾನ್ಯಾಕೆ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು?  ಅದರಿಂದ ನನಗೇನು ಲಾಭ? ಹೀಗೆ ಲಾಭ- ನಷ್ಟಗಳ ಲೆಕ್ಕಾಚಾರ ಮಾಡುತ್ತದೆ ಮನುಷ್ಯನ ಮನಸ್ಸು. ನಮ್ಮ ಈ ಸುಖ ಸಂತೋಷಗಳ ಹಿಂದೆ ಕಾಣದ ಕೈಗಳು ಅವಿರತವಾಗಿ ದುಡಿಯುತ್ತಿವೆ ಅವರಿಗೆ ನಾವು ಋಣಿಯಾಗಿರಬೇಕು ಎಂಬ ಕೃತಜ್ಞತಾ ಮನೋಭಾವ ಬಿಡಿ, ಆ ಕುರಿತು ಯೋಚನೆಯನ್ನು ಸಹ ನಾವು ಮಾಡುವುದಿಲ್ಲ.


ಬರಿ ನಮ್ಮ  ಜೀವನದ ಬಗ್ಗೆ ಕಾಳಜಿ ವಹಿಸುವ ನಾವು, ಕಾಶ್ಮೀರದ ತುದಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮನ್ನು ಶತ್ರುಗಳಿಂದ ಕಾಪಾಡುವ ಯೋಧನ  ಜೀವನದ ಬಗ್ಗೆ ಯೋಚಿಸುತ್ತೆವೆಯೇ ? ತನ್ನ ಸ್ವಾರ್ಥಗಳನ್ನು ಮರೆತು ದೇಶ ಕಾರ್ಯದಲ್ಲಿ ಮಗ್ನನಾಗಿ; ಚಳಿ,ಗಾಳಿ, ಮಳೆಗಳನ್ನು ಲೆಕ್ಕಿಸದೆ ಆ ವೀರ ಯೋಧ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ. ನಮ್ಮ ಕಷ್ಟ ಕಾರ್ಪಣ್ಯಗಳ ಬಗ್ಗೆಯೇ ಎಂದಿಗೂ ಚಿಂತಿಸುವ ನಾವು, ನಮ್ಮ ರಕ್ಷಕರಾದ ಯೋಧರ ದುಃಖ ದುಮ್ಮಾನಗಳ ಬಗ್ಗೆ ಚಿಂತಿಸುವುದೇ ಇಲ್ಲ.

ಭಾರತದ ತುದಿಯಲ್ಲಿ ಸಿಯಾಚಿನ್ ಎಂಬ ಪ್ರದೇಶವಿದೆ. ಅಲ್ಲಿನ ಉಷ್ಣಾಂಶ  -50 ಡಿಗ್ರಿ ಸೆಲ್ಸಿಯಸ್.  ಅಂದರೆ ಕಲ್ಪನೆ ಮಾಡಲಾಗದಷ್ಟು ಭಯಂಕರ ಚಳಿ ಇರುತ್ತದೆ. ಎಷ್ಟೆಂದರೆ ಮೂತ್ರ ಮಾಡಲು ಮುಂದಾದರೆ ಮೂತ್ರ ನೆಲವನ್ನು ತಾಕುವ ಮೊದಲೇ ಮಂಜುಗಡ್ಡೆಯಾಗುವಷ್ಟು! ಇಂತಹ ಪ್ರದೇಶಗಳಲ್ಲಿಯೂ ಹೊಂದಿಕೊಂಡು ನಮ್ಮ ಯೋಧರು ದೇಶದ ಗಡಿ ರಕ್ಷಣೆ ಮಾಡುತ್ತಾರೆ. ಯೋಧರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯ, ಉತ್ತಮ ವೇತನವಿದೆ ಹಾಗಾಗಿ ಅವರು ಸಂಬಳಕ್ಕಾಗಿ ದುಡಿಯುತ್ತಾರೆ,  ದೇಶಕ್ಕಾಗಿ ಅಲ್ಲ ಎಂದು ಕೆಲವರು ಉಡಾಫೆಯ ಉತ್ತರವನ್ನು ನೀಡುತ್ತಾರೆ.   ಸಂಬಳಕ್ಕಾಗಿ , ಹಣಕ್ಕಾಗಿ ಸೇನೆಗೆ ಸೇರಬೇಕೆಂದೇನೂ ಇಲ್ಲ, ಇಂದಿನ ಯುಗದಲ್ಲಿ ಹಣ ಗಳಿಸಲು ಸಾವಿರಾರು ಮಾರ್ಗಗಳಿವೆ. ಹಣಕ್ಕೆ ಹಾತೊರೆಯುವವರು ಅವರಾಗಿದಿದ್ದರೆ  ತಮ್ಮ ಕರ್ತವ್ಯವನ್ನು ಮರೆತು ಮನೆಸೇರಿ ಬಿಡುತ್ತಿದ್ದರು. ಅವರು ತಮ್ಮ  ಕರ್ತವ್ಯವನ್ನು  ಮರೆತು ನಮ್ಮ ನ್ನು ಕಾಯದೇ ಇದ್ದರೆ ನಮ್ಮ ಪರಿಸ್ಥಿತಿ ಒಮ್ಮೆ ಊಹಿಸಿಕೊಳ್ಳಿ.  ನಿಜಕ್ಕೂ ಆ ವೀರ ಯೋಧರಿಂದಲೇ ನಾವು ಸುಖವಾಗಿರೋದು. ನಮ್ಮನ್ನು ಸುಖವಾಗಿರಿಸಲು ಅಸಂಖ್ಯ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನಗಳನ್ನು ನಾವು ಗೌರವಿಸದಿದ್ದರೆ ಹೇಗೆ?


ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ತಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ  ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸಳಿಸಿತು. ಇದೇ ಯುದ್ದದ ಕಾರಣ. ಕ್ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ  ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.

ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ನೆಲೆಗಳನ್ನು  ಮರು ವಶಪಡೆದುಕೊಳ್ಳಲು   ಭಾರತೀಯ ಭೂ ಸೇನೆ ಮತ್ತು ವಾಯುಪಡೆಗಳು ಕಾರ್ಯಚರಣೆ ನಡೆಸಿತು. ಕಾರ್ಯಾಚರಣೆಯಿಂದ ಭಾರತ ಬಹುಪಾಲು ತನ್ನ ನೆಲೆಗಳನ್ನು ಮರು ವಶಪಡಿಸಿಕೊಂಡಿತು. ಸುಮಾರು 527ಕ್ಕೂ ಹೆಚ್ಚು ಯೋಧರು ಕಾಳಗದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. 1363 ಕ್ಕೂ ಹೆಚ್ಚು ಭಾರತೀಯ ಯೋಧರು ಗಾಯಗೊಂಡರು.  ಕ್ಯಾಪ್ಟನ್ ವಿಕ್ರಂ ಭಾತ್ರ,  ಗೋರ್ಖಾ ರೈಫಲ್ಸ್ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನೂಜ್ ನಯ್ಯರ್, ಸರವಣನ್, ರಾಜೇಶ್ ಅಧಿಕಾರಿ ಮುಂತಾದ  ಸೇನಾಧಿಕಾರಿಗಳು ಬಲಿದಾನ ಮಾಡಿದರು.

ಕಾರ್ಗಿಲ್ ಯುದ್ದವೆಂದರೆ  ‘ಶೇರ್ ಷಾ’ ವಿಕ್ರಂ ಭಾತ್ರನನ್ನು  ನೆನೆಯಲೇ ಬೇಕು. ಪಾಕಿಸ್ತಾನ ಆಕ್ರಮಿಸಿದ್ದ ನೆಲೆಯನ್ನು ಮರುವಶಪಡಿಸಿಕೊಳ್ಳಲು ತನ್ನ 5 ಜನ ತಂಡದೊಂದಿಗೆ ಹೊರಟ ‘ಶೇರ್ ಷಾ’ ಒಬ್ಬನೇ ಏಕಾಂಗಿಯಾಗಿ ದಾಳಿ ನಡೆಸಿ  ಐದು ಪಾಕ್ ಸೈನಿಕರನ್ನು ಕೊಂದರು.  ಇದರಿಂದ ಸ್ಪೂರ್ತಿಗೊಂಡ  ವಿಕ್ರಂ ಭಾತ್ರ ತಂಡ ದಾಳಿ ನಡೆಸಿ, ಪಾಯಿಂಟ್ 5140 ವಶಪಡಿಸಿಕೊಂಡರು. ಯಶಸ್ವಿ ಕಾರ್ಯಾಚರಣೆಯ ಧೀರ ವಿಕ್ರಮ್ ಭಾತ್ರ “ ಹೇ ದಿಲ್ ಮಾಂಗೇ ಮೋರ್” ಎಂಬ ಘೋಷಣೆ ಕೂಗಿದರು. ಅಷ್ಟೊಂದು ಪ್ರಖರತೆಯಿಂದ ಕೂಡಿತ್ತು ಆತನ ದೇಶಭಕ್ತಿ. ಭಾರತ ತನ್ನ ನೆಲೆಯನ್ನು ವಶಕ್ಕೆ ಪಡೆದುಕೊಂಡಿತು ಆದರೆ “ ಶೇರ್ ಷಾ” ಹುತಾತ್ಮರಾದರು. ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡ ವಿಕ್ರಂ ಭಾತ್ರ ಮರಣಹೊಂದಿದರು.

ಜುಲೈ ತಿಂಗಳು ಬಂದಾಗ  ಕಾರ್ಗಿಲ್ ಯುದ್ದ ಮತ್ತು ಕ್ಯಾಪ್ಟನ್ ಭಾತ್ರ ನಮಗೆ ನೆನಪಾಗಬೇಕು. ಜುಲೈ 26 1999 ರಂದು ಭಾರತ ಮತ್ತು ಪಾಕಿಸ್ತಾನದ ಕಾರ್ಗಿಲ್ ಯುದ್ದ ಅಂತ್ಯವಾಯಿತು. ಪಾಕಿಸ್ತಾನ ಆಕ್ರಮಿಸಿದ್ದ ಎಲ್ಲ ಭಾರತೀಯ ನೆಲೆಗಳನ್ನು ಭಾರತ ಮರುವಶಕ್ಕೆ ತೆಗೆದುಕೊಂಡಿತು. ಜುಲೈ 26 ರನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಯುದ್ದದಲ್ಲಿ ಮಡಿದ ಅಸಂಖ್ಯ ಯೋಧರನ್ನು ಸ್ಮರಣೆ ಮಾಡಲಾಗುತ್ತದೆ.
ಆ ಯೋಧರ ಬಲಿದಾನಗಳಿಂದಲೇ ನಾವು ಇಂದು ಸುಖವಾಗಿದ್ದೇವೆ. ಅವರು ಅಲ್ಲಿ ನೆತ್ತರು ಹರಿಸಿ ನಮ್ಮನ್ನು ರಕ್ಷಣೆ ಮಾಡಿದ ಪರಿಣಾಮ ನಾವಿಲ್ಲಿ  ಸುರಕ್ಷಿತರಾಗಿದ್ದೇವೆ. ಅವರನ್ನು ನೆನೆಯುವುದು ಎಲ್ಲ ಭಾರತೀಯ ಪ್ರಜೆಗಳ ಕರ್ತವ್ಯ.  2014 ಕ್ಕೆ ಕಾರ್ಗಿಲ್ ಯುದ್ದ ಮುಗಿದು 15 ವರ್ಷಗಳಾಗುತ್ತದೆ. ಆ ವೀರ ಸೇನಾನಿಗಳನ್ನು ನೆನೆಯೋಣ, ಅವರ ತ್ಯಾಗ ಬಲಿದಾನಗಳಿಗೆ ನಾವು ಋಣಿಯಾಗಿರೋಣ.

ವೀರ್ ಜವಾನ್ ಅಮರ್ ರಹೇ

ಜೈ ಹಿಂದ್

ರವಿತೇಜ ಶಾಸ್ತ್ರೀ
                                      
ಉತ್ತಿಷ್ಠ ಭಾರತ