Thursday, May 1, 2014

ಮ(ಮೌ)ನಮೋಹನ್ ಸಿಂಗ್ ಈ ದೇಶದ ಪ್ರಧಾನಿಯಾಗಿದ್ದು ದುರಂತವಲ್ಲದೇ ಮತ್ತೇನು?


ಭಾರತ ವಿಶ್ವದ ಬಹುದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಎಲ್ಲರೂ ಜನರಿಂದಲೇ ಆಯ್ಕೆಯಾಗುತ್ತಾರೆ. ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬ ಜನ ಪ್ರತಿನಿಧಿಗೂ ತಮ್ಮದೇ ಜವಾಬ್ದಾರಿಗಳಿವೆ. ಈ ಜವಾಬ್ದಾರಿಗಳಲ್ಲಿ ಸ್ವಂತ ನಿರ್ಣಯ ತೆಗೆದುಕೊಳ್ಳಲು ಅವರಿಗೆ  ಸ್ವಾತಂತ್ರ್ಯವಿದೆ. ಆದರೆ ರಾಷ್ಟ್ರಪತಿ ಹುದ್ದೆ ಮಾತ್ರ ಇದಕ್ಕೆ ತದ್ವಿರುದ್ದ. ಉಭಯ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರು ರಾಷ್ಟ್ರಪತಿಯನ್ನು ಆಯ್ಕೆಮಾಡುತ್ತಾರೆ. ರಾಷ್ಟ್ರಪತಿಗಳಿಗೆ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಅವರು ಕೇಂದ್ರ ಮಂತ್ರಿಮಂಡಲದ ಅಣತಿಯಂತೆ ಕಾರ್ಯನಿರ್ವಹಿಸಬೇಕು. ಹಾಗಾಗಿ ರಾಷ್ಟ್ರಪತಿ ಹುದ್ದೆಯನ್ನು “ರಬ್ಬರ್ ಸ್ಟಂಪ್” ಎಂದು ಕರೆಯುವುದು ವಾಡಿಕೆ.  
    ಈಗ ಅಸಲಿ ವಿಷಯಕ್ಕೆ ಬರುವುದಾದರೆ, ಪ್ರಧಾನಿ ಹುದ್ದೆಯನ್ನು ಸಹ ಥೇಟ್ “ರಬ್ಬರ್ ಸ್ಟಂಪ್” ಹುದ್ದೆಯಂತೆ ಮಾಡಿದ ಕೀರ್ತಿ ಅರ್ಥ ಪಂಡಿತ ಡಾ. ಮನಮೋಹನ್ ಸಿಂಗ್ ರವರಿಗೆ ಸಲ್ಲುತ್ತದೆ. 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು, ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯ ಗಾಂಧಿಯವರ ಅಣತಿಯಂತೆ ಆಡಳಿತ ನಿರ್ವಹಿಸುತ್ತಿದ್ದರು ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ.
ಡಾ. ಸಿಂಗ್ ಬಹಳಷ್ಟು ಓದಿಕೊಂಡವರು. 1991 ರಿಂದ 1996 ರವರೆಗೆ ಪಿ,ವಿ ನರಸಿಂಹರಾವ್ ಅವರ ಸಂಪುಟದಲ್ಲಿ ಅರ್ಥಿಕ ಮಂತ್ರಿಯಾಗಿದ್ದರು. ಪಿ.ವಿ ನರಸಿಂಹರಾವ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಭಾರತ ಅರ್ಥಿಕ ಸಂಕಷ್ಟದಲ್ಲಿತ್ತು. ಈ ಸಮಯದಲ್ಲಿ ಯೋಜನಾ ಆಯೋಗದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ರಾಜಕೀಯವೇ ತಿಳಿಯದ ಮನಮೋಹನ್ ಸಿಂಗ್ ರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡ ಪಿ,ವಿ ನರಸಿಂಹರಾವ್, ಡಾ. ಸಿಂಗ್ ರನ್ನು ವಿತ್ತ ಮಂತ್ರಿ ಮಾಡಿದರು. ನರಸಿಂಹರಾವ್ ಅವರ ನೀರಿಕ್ಷೆ  ಹುಸಿಗೊಳಿಸದ ಮನಮೋಹನ್ ಸಿಂಗ್ ಅರ್ಥಿಕ ಸಬಲೀಕರಣ ನೀತಿಗಳನ್ನು ಜಾರಿಗೆ ತಂದು ಉಸಿರಾಡಲು ಕಷ್ಟಪಡುತಿದ್ದ ಭಾರತದ ಆರ್ಥಿಕತೆ ಗೆ ವೆಂಟಿಲೇಟರ್ ಆಳವಡಿಸಿ, ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದರು.
     ಆದರೆ ಹತ್ತು ವರ್ಷಗಳ ಕಾಲ ಪ್ರಧಾನಿಯಾದ ಇದೇ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕೆ ತಲುಪಿತು. ಇಂತಹ ಸಂಧರ್ಭದಲ್ಲಿ ಯಾವುದೇ ದಿಟ್ಟ ನಿರ್ಧಾರಗಳನ್ನು ಡಾ. ಸಿಂಗ್ ತೆಗೆದುಕೊಳ್ಳಲಿಲ್ಲ. ಭಯವಾದಾಗ ತಾಯಿಯ ಸೆರಗಿನ ಆಶ್ರಯ ಪಡೆಯುವ ಮಗುವಿನಂತೆ ಡಾ. ಸಿಂಗ್, ಸೋನಿಯಾ ಆಜ್ಞೆಯನ್ನು ಪಾಲಿಸುತ್ತಾ, ಗುಲಾಮಿ ಪ್ರವೃತ್ತಿಯನ್ನು ರೂಡಿಸಿಕೊಂಡು ಪ್ರಧಾನಿ ಮಾಡಿದ ಋಣವನ್ನು ತೀರಿಸಿದರು.
    ಚೀನಾ ಭಾರತದ ಗಡಿಯಾಚೆಗೆ ತನ್ನ ಸೇನೆಯನ್ನು ನುಗ್ಗಿಸಿತು, ಪಾಕಿಸ್ತಾನ ನಮ್ಮ ವೀರ ಯೋಧರ ಶಿರಚ್ಛೇದನ ಮಾಡಿತು. ಇವು ಭಾರತದ ಸಾರ್ವಭೌಮ್ಯತೆಯನ್ನು ಪ್ರಶ್ನಿಸುವ ಕೃತ್ಯಗಳಾಗಿದ್ದವು. ಆದರೆ ಪ್ರಧಾನಿ ಸಿಂಗ್ ಎದುರಾಳಿಗಳಿಗೆ ಸೂಕ್ತ ಉತ್ತರವನ್ನು ನೀಡಲಿಲ್ಲ. ಅವರು ಮಾತೇ ಆಡಲಿಲ್ಲ. ಮೌನಕ್ಕೆ ಶರಣಾದರು. “ ಮೌನಂ ಸಮ್ಮತಿ ಲಕ್ಷಣಂ” ಎಂಬ ಮಾತಿದೆ ನಿಜ. ಆದರೆ ಭಾರತದ ಮಾನ ಮೂರಾಬಟ್ಟೆ ಹರಾಜುತ್ತಿದ್ದ ಸಂದರ್ಭದಲ್ಲಿ ಮೌನವಹಿಸಿದ್ದು ಪುರುಷ ಲಕ್ಷಣವಲ್ಲ.
    ಪ್ರಧಾನಿ ಕಾರ್ಯಾಲಯದ ಅಧಿಕಾರಿಯಾಗಿದ್ದ ಸಂಜಯ್ ಬರು ತಮ್ಮ ಪುಸ್ತಕ “ The Accidental Prime Minister, Making and Unmaking of Dr. Manamohan Singh”  ದಲ್ಲಿ ಬಹಳಷ್ಟು ಮಾಹಿತಿಗಳನ್ನು ಹೊರಹಾಕಿದ್ದಾರೆ. ಬರು ಹೇಳುವಂತೆ ಪ್ರಧಾನಿ ಸಿಂಗ್, ಸೋನಿಯಾ ಗಾಂಧಿಗಿಂತ ಹೆಚ್ಚು ಜನಪ್ರಿಯರಾಗಲು ಇಚ್ಚಿಸುತ್ತಿರಲಿಲ್ಲವಂತೆ. ಸೋನಿಯಾಗಿಂತ ಕಡಿಮೆ ಪ್ರಭಾವಿ ವ್ಯಕ್ತಿಯಾಗಿರಲು ಅವರು ಬಯಸುತ್ತಿದ್ದರಂತೆ. ಇದು ವಿನಯತೆಯಲ್ಲ, ಅಕ್ಷರಶಃ ಗುಲಾಮಿತನ. ಪ್ರಧಾನಿ ಸಿಂಗ್ ಸೋನಿಯಾಗಾಂಧಿಯವರ ಗುಲಾಮಿಯಾಗಿದ್ದರು ಎಂದರೆ ತಪ್ಪಿಲ್ಲ.
   ಸಂಜಯ್ ಬರು ಹೇಳುವ ಪ್ರಕಾರ, ಸಂಪುಟ ದರ್ಜೆಯ ಸಚಿವರು, ಅತ್ಯಂತ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವಾಗ ಪ್ರಧಾನಿಯವರೊಡನೆ ಚರ್ಚಿಸದೆ, ಪ್ರತಿಯೊಂದನ್ನು ಸೋನಿಯಾ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರಂತೆ. ಇದು ಡಾ. ಸಿಂಗ್ ರ ಅಸಹಾಯಕತೆಯೂ ಅಲ್ಲ, ಸಹನೆಯ ಮಿತಿಯೂ ಅಲ್ಲ. ಪ್ರಧಾನಿ ಸಿಂಗ್ ಸೋನಿಯಾ ಕೈಗೊಂಬೆಯಾಗಿದ್ದರು ಎಂಬುದಕ್ಕೆ ನಿರ್ದರ್ಶನ. ಹೆಸರಿಗಷ್ಟೆ ಸಿಂಗ್ ಪ್ರಧಾನಿಯಾಗಿದ್ದರು ಆದರೆ ಕೀಲಿಕೈ ಸೋನಿಯಾ ಮೇಡಂ ಬಳಿಯಿತ್ತು.
   ಭಾರತದ ಜನರು ಸಹ ಸೋನಿಯಾ ಗಾಂಧಿಯನ್ನೇ ಪ್ರಧಾನಿಯೆಂದು ಭಾವಿಸಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯ ಕ್ಕೆ ಹೋರಾಟಗಳು ನಡೆದಾಗ, ತೆಲಂಗಾಣ ಜನರು ಮನವಿ ಸಲ್ಲಿಸಿದ್ದು ಸೋನಿಯಾಗಾಂಧಿಗೆ. ಪ್ರತಿಭಟನೆಯಾದಾಗ ಸೋನಿಯಾ ಪ್ರತಿಕೃತಿಗಳನ್ನು ದಹಿಸಿದರು.ಆದರೆ  ಪ್ರಧಾನಿ ಸಿಂಗ್ ರ ಪ್ರತಿಕೃತಿ ದಹಿಸಿದ್ದನ್ನು ನಾನು ಕಂಡಿಲ್ಲ. ಕರ್ನಾಟಕದ ಭಾಗವಾದ ಹೈದರಾಬಾದ್ ಕರ್ನಾಟಕಕ್ಕೆ 371(J) ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ಬಯಸಿ ಈ ಭಾಗದ ಹೋರಾಟಗಾರರು ಮೊರೆಹೋಗಿದ್ದು ಸೋನಿಯಾ ಗಾಂಧಿಯವರ ಬಳಿಗೆ. ಈ ಎಲ್ಲ ಘಟನೆಗಳಿಂದ ಗೋಚರವಾಗುವ ಸಂಗತಿಯೆಂದರೆ ಡಾ. ಸಿಂಗ್ ಸೋನಿಯಾ ಗಾಂಧಿಯ “ರಬ್ಬರ್ ಸ್ಟಂಪ್” ಆಗಿದ್ದರು ಎಂಬುದು.
     ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಕಳೆದ 2013 ಸೆಪ್ಟೆಂಬರ್ ನಲ್ಲಿ ಸುಗ್ರೀವಾಗ್ಞೆ ಹೊರಡಿಸಿತ್ತು. ಈ ನಡೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ “Non-sense’ ಎಂದು ಜರೆದು ಪತ್ರಿಕಾಗೊಷ್ಟಿಯಲ್ಲಿ ಸರ್ಕಾರದ ಆದೇಶಪತ್ರವನ್ನು ಹರಿದುಹಾಕಿದ್ದರು. ಇದು ಪ್ರಧಾನಿ ಹುದ್ದೆಯನ್ನು ಗೌರವಿಸದೇ ಸೊಕ್ಕಿನಿಂದ ವರ್ತಿಸಿದಂತಿತ್ತು. ಆದರೆ ಈ ವಿಷಯವಾಗಿ ಪ್ರಧಾನಿಗಳು ಬಾಯಿಬಿಡಲಿಲ್ಲ. ಈಗ ಯು.ಪಿ.ಎ ಮತ್ತೇ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿಯ ಕೆಳಗೆ ಕೆಲಸ ಮಾಡಲು ಸಿದ್ದ ಎಂಬ ಲೆಜ್ಜೆಗೇಡಿ ಹೇಳಿಕೆಯನ್ನು ಡಾ. ಸಿಂಗ್ ನೀಡಿದ್ದಾರೆ.
   ಡಾ. ಮನಮೋಹನ್ ಸಿಂಗ್ ಉತ್ತಮ ವ್ಯಕ್ತಿ, ಮೃದು ಸ್ವಭಾವದವರು ನಿಜ. ಆದರೆ 10 ವರ್ಷಗಳ ಆಡಳಿತ ಯಂತ್ರದಲ್ಲಿ ಹಿಡಿತವಿಲ್ಲದೆ ಒಬ್ಬ ಹೆಂಗಸಿನ ಗುಲಾಮಿಯಂತೆ ವರ್ತಿಸಿ, ಶ್ರೇಷ್ಠ ಸಾಂವಿಧಾನಿಕ ಹುದ್ದೆಯಾದ “ಪ್ರಧಾನಿ ಮಂತ್ರಿ” ಹುದ್ದೆಗೆ ದ್ರೋಹ ಬಗೆದಿದ್ದಾರೆ. ತಪ್ಪು ಮಾಡುವುದು ಒಂದೇ, ತಪ್ಪನ್ನು ನೋಡಿಯೂ ತಡೆಯದೇ ಇರುವುದು ಸಹ ತಪ್ಪೇ. ಸಂಜಯ್ ಬರು ಹೇಳುವ ಪ್ರಕಾರ, ಬಹುಕೋಟಿ ಹಗರಣಗಳಾದ  2ಜಿ ಸ್ಪೆಕ್ಟ್ರಮ್ ಮತ್ತು ಕಲ್ಲಿದ್ದಲು ಹಗರಣದಲ್ಲಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ, ಆ ಹಗರಣಗಳನ್ನು ತಡೆಯುವ ಎಲ್ಲಾ ಅವಕಾಶಗಳು ಪ್ರಧಾನಿ ಸಿಂಗ್ ಗೆ ಇತ್ತಂತೆ. ಆದರೆ ಇಂತಹ ಸಾಹಸಗಳಿಗೆ ಕೈಹಾಕುವ ಪ್ರಯತ್ನವನ್ನು ಪ್ರಧಾನಿ ಮಾಡಲಿಲ್ಲ. ಅವರು ಖಂಡಿತ ಕ್ಷಮೆಗೆ ಅರ್ಹರಲ್ಲ. 
   ಡಾ. ಮನಮೋಹನ್ ಸಿಂಗ್ ಭಾರತ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎನ್ನಬಹುದು. ಸೋನಿಯಾ ಅಣತಿಯಂತೆ ಕಾರ್ಯನಿರ್ವಹಿಸಿದ  ಡಾ. ಸಿಂಗ್ ರಂತವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿದ್ದು, ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅಪಮಾನವೇ ಸರಿ. ತ್ಯಾಗ, ಬಲಿದಾನ, ಶೌರ್ಯಗಳಿಗೆ ಪ್ರಸಿದ್ದಿಯಾದ ವಿಶ್ವ ಶ್ರೇಷ್ಠ ಭಾರತಕ್ಕೆ ಡಾ, ಸಿಂಗ್ ರಂತ ಗುಲಾಮಿ 10 ವರ್ಷ ದೇಶವನ್ನು ಆಳಿದ್ದು ಈ ದೇಶದ ಬಹುದೊಡ್ಡ ದುರಂತ. ಇತಿಹಾಸಗಳಿಂದ ಪಾಠ ಕಲಿಯಬೇಕಂತೆ ಆದೇ ರೀತಿ ಈ ಇತಿಹಾಸದಿಂದ ಭಾರತೀಯರು ಪಾಠ ಕಲಿತು ಯೋಗ್ಯರನ್ನು ಈ ಚುನಾವಣೆಯಲ್ಲಿ ಆರಿಸಿದರೆ ದೇಶಕ್ಕೆ ಒಳಿತು.

ರವಿತೇಜ ಶಾಸ್ತ್ರೀ.                                                                                      
                                               
                    

No comments:

Post a Comment