Saturday, May 24, 2014

ಈ ಚುನಾವಣೆಯ ಫಲಿತಾಂಶ ರಾಜ್ಯ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಬಹುದೇ?



ಈ ಲೋಕಸಭಾ ಚುನಾವಣೆಯ ಫಲಿತಾಂಶ  ಕಾಂಗ್ರೆಸ್ ಗೆ ಬಹಳ ನಿರಾಶಾದಾಯಕವಾಗಿದೆ. 2009ರಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಮೋದಿ ಸುನಾಮಿಗೆ ಕೊಚ್ಚಿಹೋಗಿ ಕೇವಲ 44 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಯಾವ ರಾಜ್ಯದಲ್ಲೂ ಎರಡಂಕಿಯನ್ನು ದಾಟಿಲ್ಲ. ಮೊನ್ನೆಯಷ್ಟೇ ಅಧಿಕಾರಕ್ಕೆ ಬಂದಿದ್ದ ಕರ್ನಾಟಕದಲ್ಲೂ ಕಾಂಗ್ರೆಸ್ ಮುಗ್ಗರಿಸಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಬಹುದೆಂದು ಅಂದಾಜಿಸಿತ್ತು ಆದರೆ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನಷ್ಟೇ ಗಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಸೋತ್ತಿದ್ದ ಬಿಜೆಪಿ ಮೋದಿ ಅಲೆಯಲ್ಲಿ ಮಿದ್ದೆದ್ದು 17 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. ಇನ್ನು ಜೆಡಿಎಸ್ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟಿದೆ. 

ಈ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡು ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಿಸಿದಾಗ ಬಿಜೆಪಿ 132, ಕಾಂಗ್ರೆಸ್ 75 ಜೆಡಿಎಸ್ 17 ವಿಧಾನಸಭಾ ಸ್ಥಾನಗಳನ್ನು ಪಡೆದಂತಾಗುತ್ತದೆ. ಇದು ವಿಧಾನಸಭೆಗೆ ಜನ ನೀಡಿರುವ ಸ್ಪಷ್ಟ ಜನಾದೇಶವಲ್ಲದಿದ್ದರೂ ಜನ ಬಿಜೆಪಿಯತ್ತ ಒಲವು ತೊರೆದಿದ್ದಾರೆಂದು ಇದರಿಂದ ಗೋಚರವಾಗುತ್ತದೆ.
                               Election Analysis 
                               2013 Vs 20 14   


Bharathiya Janatha Party (BJP)


     
Indian National Congress 

             (Analysis and Charts Prepared by Neeraj Kamath) 

2೦13ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತ್ತು. 224 ಸ್ಥಾನಗಳಲ್ಲಿ ಕೇವಲ 50(BJP+KJP+BSR)  ಸ್ಥಾನಗಳಲ್ಲಿ ಜಯಗಳಿಸಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ಪ್ರಕಾರ ಅದು  132 ಸ್ಥಾನಗಳಲ್ಲಿ ಜಯಗಳಿಸಿದೆ. ಅಂದರೆ ಸರಳ ಬಹುಮತ(113)ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ಕೇವಲ 77 ಸ್ಥಾನಗಳನ್ನು ಪಡೆದುಕೊಂಡಿದೆ. 
2013ರಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಹೀನಾಯವಾಗಿ  ಸೋತಿದೆ. ತನ್ನ ಅಸಿತ್ವವಿದ್ದ ಕ್ಷೇತ್ರಗಳನ್ನು ಸಹ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಸೋತಿದೆ. ಸಿದ್ದು ಸರ್ಕಾರದ ಮೂರು ಮಂತ್ರಿಗಳ ತವರು ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ.  ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
  
ಬಿಜೆಪಿಯ ಈ ಯಶಸ್ಸಿನ ಕಾರಣಗಳನ್ನು ಹುಡುಕಿಕೊಂಡು ಹೊರಟರೆ ಸಿಗುವುದು ಮೂರು ಕಾರಣಗಳು. ಒಂದು ನರೇಂದ್ರ ಮೋದಿ ಅಲೆ, ಎರಡು ನಮೋಗಾಗಿ ದುಡಿದ ಸಂಘಟನೆಗಳ ಅವಿರತ ಶ್ರಮ. ಮೂರನೆಯದು ಕಾಂಗ್ರೆಸ್ ಸರ್ಕಾರದ ಅಧಿಕಾರಿ  ವಿರೋಧಿ ಅಲೆ.

ಯುಪಿಎ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಮುಂತಾದವುಗಳಿಂದ ಬೇಸತ್ತಿದ್ದ ಜನತೆಗೆ ಅಭಿವೃದ್ದಿಯ ಹರಿಕಾರ ನರೇಂದ್ರ ಮೋದಿ ಆಶಾಕಿರಣದಂತೆ ಕಂಡರು. ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಜನ ಪರಿತಪಿಸುತ್ತಿದ್ದರು. ಹಾಗಾಗಿ ದೇಶಾದ್ಯಂತ ನರೇಂದ್ರ ಮೋದಿ ಅಲೆಯಿತ್ತು. ಕರ್ನಾಟಕವೂ ಇದರಿಂದ ಹೊರತಾಗಿರಲಿಲ್ಲ. ಈ ಚುನಾವಣೆಯಲ್ಲಿ ಜನ ಬಿಜೆಪಿ ಬೆಂಬಲಿಸಿದ್ದು ನರೇಂದ್ರ ಮೋದಿ ಕಾರಣದಿಂದ. ಘಟಾನುಘಟಿ ನಾಯಕರುಗಳು ಮೋದಿಯ ಹೆಸರಲ್ಲಿ ಮತಯಾಚನೆ ಮಾಡಿದರು. ಅಷ್ಟೊಂದು ಪರಿಣಾಮಕಾರಿಯಾಗಿ ಮೋದಿ ಅಲೆ ರಾಜ್ಯದಲ್ಲೆಡೆ ಹಬ್ಬಿತ್ತು.

ನರೇಂದ್ರ ಮೋದಿ ಅಲೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲೆಡೆ ಪಸರಿಸಲು ನಮೋ ಬ್ರಿಗೇಡ್ ಎಂಬ ಸಂಘಟನೆ ಅವಿರತವಾಗಿ ಶ್ರಮಿಸಿದೆ. ಸಮಾನಮನಸ್ಕ ಯುವಕರ ಗುಂಪಾಗಿದ್ದ ಈ ಸಂಘಟನೆ ರಾಜ್ಯಾದ್ಯಂತ ಯುವಕರನ್ನು ಸಂಘಟಿಸಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ಕುರಿತು ಕರ್ನಾಟಕದ ಜನತೆಗೆ ಅರಿವು ಮೂಡಿಸಿತು. ಮುಖ್ಯವಾಗಿ ಯುವಕರನ್ನು ಸಂಘಟಿಸಿದ ಶ್ರೇಯ ನಮೋ ಬ್ರಿಗೇಡ್ ಗೆ ಸಲ್ಲುತ್ತದೆ. ರಾಜಕೀಯದಲ್ಲಿ ಆಸಕ್ತಿಯಿಲ್ಲದ ಯುವಜನತೆಯನ್ನು ಮುಖ್ಯವಾಹಿನಿಗೆ ಕರೆತಂದು ನರೇಂದ್ರ ಮೋದಿಯವರ ಸಲುವಾಗಿ ಕೆಲಸಮಾಡಲು ಪ್ರೇರೇಪಿಸಿದ್ದು ನಮೋ ಬ್ರಿಗೇಡ್ ನ ಬಹುದೊಡ್ಡ ಸಾಧನೆ. ಈ ಚುನಾವಣೆಯಲ್ಲಿ ಯುವ ಮತದಾರರು ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಇಂತಹ ಯುವಕರನ್ನು ಬಿಜೆಪಿಯತ್ತ ವಾಲುವಂತೆ ಮಾಡಿದ್ದು ನಮೋ ಬ್ರಿಗೇಡ್ ಎಂದರೆ ತಪ್ಪಿಲ್ಲ. ಬಿಜೆಪಿಯ ಚುನಾವಣೆಯ ಯಶಸ್ಸಿನಲ್ಲಿ ಅರ್ಧ ಪಾಲು ನಮೋ ಬ್ರಿಗೇಡ್ ಗೆ ಸೇರಿದೆ ಎಂಬುವುದು ನೂರಕ್ಕೆ ನೂರು ಸತ್ಯ.

ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ನಂತರ ಗೋ ಹತ್ಯೆ ನಿಷೇಧವನ್ನು ರದ್ದುಗೊಳಿಸಿ ಬಹುಸಂಖ್ಯಾತ ಹಿಂದೂಗಳ  ಭಾವನೆಗಳಿಗೆ ದಕ್ಕೆಯಾಗುವಂತೆ ವರ್ತಿಸಿದರು. ಒಂದು ರೂಪಾಯಿಗೆ ಒಂದು ಕೆ.ಜಿ ಮುಂತಾದ ಕಾರ್ಯಕ್ರಮಗಳನ್ನು ಸಿದ್ದು ಸರ್ಕಾರ ಜಾರಿಗೊಳಿಸಿತು. ಆದರೆ ಈ ಯೋಜನೆಗಳು ಭ್ರಷ್ಟಾಚಾರವನ್ನು ಹೆಚ್ಚು ಮಾಡಿತೇ ಹೊರತು ಜನಸಾಮಾನ್ಯರಿಗೆ ಇವುಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕರಾವಳಿಯಲ್ಲಿ ಅಭದ್ರತೆ ಕಾಡಿತು. ಗೋ ಕಳ್ಳರ ಸಂತತಿ ಹೆಚ್ಚಾಯಿತು. ಕರಾವಳಿಯ ಜನ ನೆಮ್ಮದಿಯಿಂದ ಬದುಕುವುದು ಸಹ  ಬಹಳ ಕಷ್ಟವಾಯಿತು.

ಈ ಎಲ್ಲ ಕಾರಣಗಳು ಬಿಜೆಪಿ ಗೆಲುವಿಗೆ ಸಹಕರಿಸಿದವು. ಕಾಂಗ್ರೆಸ್ ಸರ್ಕಾರದ ಕುರಿತು  ಅಧಿಕಾರಿ ವಿರೋಧಿ ಅಲೆಯಿತ್ತು ನಿಜ ಆದರೆ ಸಾಮಾನ್ಯನಿಗೆ ಇದರ ಅರಿವಿರಲಿಲ್ಲ. ನಮೋ ಅಲೆ ಮತ್ತು ನಮೋ ಸಂಘಟನೆಗಳ ಅವಿರತ ಶ್ರಮವೇ ಹೆಚ್ಚು ಬಿಜೆಪಿ ಗೆಲುವಿಗೆ ಸಹಕರಿಸಿದವು ಎಂದು ವಿಶ್ಲೇಷಿಸಬಹುದು.
ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ತನ್ನ ಅಸಲಿ ಮುಖವನ್ನು ಪ್ರದರ್ಶಿಸಿದೆ. ಬಿ.ಎಂ.ಟಿ.ಸಿ, ಮತ್ತು ಕೆ.ಎಸ್.ಆರ್.ಟಿ ಬಸ್ಸುಗಳ ದರಗಳು ಏರಿಕೆಯಾಗಿದೆ. ನೀರು ಮಾತು ವಿದ್ಯುತ್ ದರಗಳನ್ನು ಏರಿಸಿ ಸಿದ್ದು ಸರ್ಕಾರ ಜನಸಾಮಾನ್ಯರಿಗೆ ಶಾಕ್ ಮೇಲೆ  ಶಾಕ್ ನೀಡಿದೆ.  ಇದರಿಂದ ಜನ ಕಾಂಗ್ರೆಸ್ ಸರಕಾರದಿಂದ ಬೇಸತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.
  
ಜೊತೆಗೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಬಹುದು. ಪಕ್ಷದ ಅಂತರ್ಯದಲ್ಲಿದ್ದ ತಿಕ್ಕಾಟಗಳು ಇಂದು ಜಗಜ್ಜಾಹೀರಾಗಿದೆ. ಚುನಾವಣೆಯ ಸೋಲಿನಿಂದ ಹತಾಶೆಗೊಂಡಿರುವ ನಾಯಕರು ತಮ್ಮ ಬಿನ್ನಮತವನ್ನು ಹೊರಹಾಕಿದ್ದಾರೆ. ಕೆ. ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುತ್ತಿದ್ದಾರೆ. ವಿಶ್ವನಾಥರಂತ ಹಿರಿಯ ನಾಯಕರರು ನನ್ನ ಸೋಲಿನ ಕಾಂಗ್ರೆಸ್ ಪಕ್ಷದ ನಾಯಕರ ಪಿತೂರಿಯೇ ಕಾರಣವೆಂದು ತಮ್ಮ ಅಸಮಾಧಾನವನ್ನು ಪ್ರದರ್ಶಿಸಿದ್ದಾರೆ. ಮಂಡ್ಯದಲ್ಲಿ ನನ್ನ ಸೋಲಿಗೆ ಅಂಬರೀಶ್ ಮತ್ತು ಎಸ್. ಎಂ ಕೃಷ್ಣಾರವರ ನಡುವೆ ಇದ್ದ ಭಿನ್ನಾಭಿಪ್ರಾಯವೇ ಕಾರಣವೆಂದು ಹೈಕಮಾಂಡ್ ಗೆ ದೂರನ್ನು ನೀಡಿದ್ದಾರೆ. ಈ ಎಲ್ಲ ಸಂಗತಿಗಳು ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಲ್ಲವೆಂಬುದನ್ನು ಸಾರಿ ಹೇಳುತ್ತಿವೆ. ಈ ಭಿನ್ನಾಭಿಪ್ರಾಯ, ಅಸಮಾಧಾನ, ಒಳಜಗಳಗಳು ಹೆಚ್ಚಾಗಿ ಕಾಂಗ್ರೆಸ್ ಸರ್ಕಾರ ಪತನವಾದರೆ  ಅದರಲ್ಲಿ ಅಚ್ಚರಿಯೇನಿಲ್ಲ.

ನರೇಂದ್ರ ಮೋದಿ ಅಲೆಯಿಂದ ಗೆದ್ದಿರುವ ರಾಜ್ಯ ಬಿಜೆಪಿ ಈ ಸುಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಮೋದಿ ಸರ್ಕಾರದಲ್ಲಿ ಮಂತ್ರಿ ಪದವಿಗೆ ಲಾಬಿ ಮಾಡುವುದನ್ನು ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರೆ ಒಳಿತು. ನರೇಂದ್ರ ಮೋದಿ ಪ್ರಧಾನಿಯಾದ ನಂತರವೂ ಮೋದಿ ಅಲೆಯಿರುವುದರಲ್ಲಿ ಸಂಶಯವಿಲ್ಲ.

ಈ ಸಂಧರ್ಭದಲ್ಲಿ ಬಿಜೆಪಿಗೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಹಳೆ ಮುಖಗಳನ್ನು ಇಟ್ಟುಕೊಂಡು ಮತ್ತೆ ಚುನಾವಣೆ ಎದುರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ. ಯುವಕರನ್ನು ಆಕರ್ಷಿಸುವ, ದೂರದೃಷ್ಟಿಯುಳ್ಳ ನಾಯಕನ ರಾಜ್ಯ ಬಿಜೆಪಿಗೆ ಬೇಕು.   ರಾಜ್ಯ ಸರ್ಕಾರದಿಂದ ಬೇಸತ್ತಿರುವ ಜನತೆ ಬಿಜೆಪಿ ಪರ ವಾಲುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಬಿಜೆಪಿ ನಾಯಕರು ತಮ್ಮ ಅದೇ ಹಳೆ ಚಾಳಿಯನ್ನು ಮುಂದುವರೆಸದೇ ಯೋಗ್ಯ ವ್ಯಕ್ತಿಗೆ ಪಕ್ಷದ ನಾಯಕತ್ವವನ್ನು ವಹಿಸಬೇಕು. ಬಿಜೆಪಿ ನಾಯಕರು  ತನ್ನ ಸ್ವಹಿತಾಸಕ್ತಿಗಳನ್ನು ಮರೆತು ಈ ಚುನಾವಣೆಯ ಫಲಿತಾಂಶವನ್ನು ಎಚ್ಚರಿಕೆ ಗಂಟೆಯಂತೆ ಭಾವಿಸಿ ಪಕ್ಷವನ್ನು  ಸಂಘಟಿಸಿದರೆ ಒಳಿತು. ಇಲ್ಲದಿದ್ದರೆ 2013ರ ಚುನಾವಣೆಯಲ್ಲಿ ಎದುರಿಸಿದ ಪರಿಸ್ಥಿತಿಯನ್ನೇ ಮತ್ತೆ ಎದುರಿಸಬೇಕಾದಿತು!.                                   

Saturday, May 17, 2014

ನಿಸ್ವಾರ್ಥ ಸೇವೆ ಅಚಲವೆಂದು ನಿರೂಪಿಸಿದ ನಮೋ ಬ್ರಿಗೇಡ್

ನಮೋ ಬ್ರಿಗೇಡ್ ಯಶಸ್ವಿ ಪಯಣದ ಕುರಿತು ನನ್ನ ಅನಿಸಿಕೆ. ನಿಸ್ವಾರ್ಥ ಸೇವೆ ಮಾಡಿದ ನಮೋ ಬ್ರಿಗೇಡ್ ಗೆಳೆಯರಿಗೆ ಈ ಲೇಖನ ಅರ್ಪಿಸುತ್ತಿದ್ದೇನೆ.   

ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದ ಐತಿಹಾಸಿಕ  ಚುನಾವಣೆಗೆ ತೆರೆ. ಮೂವತ್ತು ವರ್ಷಗಳ ನಂತರ ಒಂದು ಪಕ್ಷಕ್ಕೆ ಬಹುಮತ ಪ್ರಾಪ್ತಿ. 135 ವರ್ಷಗಳ ಇತಿಹಾಸದ ಹಿನ್ನಲೆಯಿರುವ ಕಾಂಗ್ರೆಸ್ ಗೆ ಕಂಡುಕೇಳರಿಯದ ಬಾರಿ ಮುಖಭಂಗ. ಅಭಿವೃದ್ದಿಯ ಹರಿಕಾರ ನರೇಂದ್ರ ಮೋದಿಗೆ ಭರ್ಜರಿ ಗೆಲುವು. ಓಲೈಕೆ ಮತ್ತು ಮತಬ್ಯಾಂಕ್  ರಾಜಕಾರಣಕ್ಕೆ ತಕ್ಕ ಶಾಸ್ತಿ. ಅಭಿವೃದ್ದಿ ರಾಜಕಾರಣಕ್ಕೆ ಮೊರೆಹೋದ ಮತದಾರ. ಬದಲಾವಣೆಯ ಪರ್ವಕ್ಕೆ ಮುನ್ನುಡಿ. ಇದು ಲೋಕಸಭೆಯ ಚುನಾವಣೆಯ ಫಲಿತಾಂಶದ ನನ್ನ ವಿಶ್ಲೇಷಣೆ.   
     ಈ ಬಾರಿಯ ಚುನಾವಣೆ ಬಹಳಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ದೇಶದ ಬಹುದೊಡ್ಡ ಜನಸಂಖ್ಯೆಯ ಯುವಜನತೆ ಈ ಚುನಾವಣೆಯಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಇವರೆಗೂ Used’less ಆಗಿದ್ದ ಭಾರತದ ಯುವಶಕ್ತಿ ಈ ಚುನಾವಣೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದೆ. ಭಾರತದ ಇತಿಹಾಸದಲ್ಲೇ ಅತಿಹೆಚ್ಚು ಮತದಾನವಾಗಿರುವುದು ಇದಕ್ಕೆ ಸಾಕ್ಷಿ. ಟ್ವಿಟ್ಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಯುವಜನತೆ ಈ ಬಾರಿ ಹೊರಗಡೆ ಬಂದು ದೇಶದ ಒಳಿತಿಗೆ ಶ್ರಮಿಸಿದೆ. ರಾಜಕೀಯವನ್ನು ಹೊಲಸು ಎಂದು ಭಾವಿಸಿದ್ದ ಬಹಳಷ್ಟು ಯುವಕರು ರಾಜಕೀಯದಲ್ಲಿ ಆಸಕ್ತಿ ತೋರಿದ್ದು ಈ ಚುನಾವಣೆಯ ಅಚ್ಚರಿ. ದೇಶದ ಕಾಳಜಿಯನ್ನು ಮರೆತು ಬದುಕಿದ್ದು ಸತ್ತಂತಿದ್ದ ಯುವಜನತೆ ಬಡಿದೆಬ್ಬಿಸಿದ ಕೀರ್ತಿ ನಮೋ ಬ್ರಿಗೇಡ್ ಎಂಬ ಯುವಪಡೆಗೆ ಸಲ್ಲುತ್ತದೆ.

     “The Bud of the Nation’s Future Finds a Fragrant Blooming in the its Youth”  ದೇಶದ ಭವಿಷ್ಯವೆಂಬ ಮೊಗ್ಗು ಅರಳಿ ಹೂವಾಗ ಬೇಕಾದರೆ  ಅದು ಆ ದೇಶದ ಯುವಜನತೆಯ ಕೈ ಸೇರಬೇಕು. ಈ ಮಾತು ಅಕ್ಷರಶಃ ಸತ್ಯ. “ಯುವ ಶಕ್ತಿಯೇ ರಾಷ್ಟ್ರಶಕ್ತಿ” ಎಂದಿದ್ದರು ಸಿಡಿಲಸಂತ ಸ್ವಾಮಿ ವಿವೇಕಾನಂದರು. ಯುವಜನತೆ ಎದ್ದರೆ ದೇಶ ಎದ್ದೀತು. ದೇಶವನ್ನು ಬದಲಿಸುವ ಶಕ್ತಿ ಯುವಜನರಲ್ಲಿದೆ. ಇಂತಹ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸಂಘಟನೆಯೇ ನಮೋ ಬ್ರಿಗೇಡ್. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಸ್ಥಾಪಿತವಾದ ನಮೋ ಬ್ರಿಗೇಡ್ ತನ್ನ ಗುರಿಯನ್ನು ತಲುಪಿದೆ. ಅಸಂಖ್ಯ ನಮೋ ಬ್ರಿಗೇಡ್ ಕಾರ್ಯಕರ್ತರ ನಿಸ್ವಾರ್ಥ ಸೇವೆ ಫಲ ನೀಡಿದೆ.
ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈ ವಿಜಯದಲ್ಲಿ ನಮೋ ಬ್ರಿಗೇಡ್ ನ ಪಾಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಬಹಳಷ್ಟು ಮುಖಭಂಗಕ್ಕೆ ಒಳಗಾಗಿತ್ತು. ಆ ಪರಿಸ್ಥಿತಿಯಲ್ಲಿ ಬಿಜೆಪಿ ಕೇವಲ 4 ಲೋಕಸಭೆಯನ್ನು ಗೆಲ್ಲುವುದಕ್ಕೆ ಶಕ್ತವಾಗಿತ್ತು. ಈ ಸಂದರ್ಭದಲ್ಲಿ ಹುಟ್ಟಿಕೊಂಡ ನಮೋ ಬ್ರಿಗೇಡ್ ನರೇಂದ್ರ ಮೋದಿಯವರ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಿ ಬಿಜೆಪಿಯ ಗೆಲುವಿಗೆ ಅಪಾರವಾದ ಕೊಡುಗೆಯನ್ನು ನೀಡಿದೆ.
    “ Narendra Modi Fans From Karnataka “ ಎಂಬ ಫೇಸ್ಬುಕ್  ಪೇಜ್ ನಿಂದ ನಮೋ ಬ್ರಿಗೇಡ್ ಆರಂಭವಾಯಿತು.  ಮೊದಮೊದಲು ಕೇವಲ ಅಂತರ್ಜಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಪೇಜ್ ಕರ್ನಾಟಕದ ವಿಧಾನಸಭೆಯಲ್ಲಿ ಬಿಜೆಪಿಯ ಸೋಲಿನ ನಂತರ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೂರ್ಣಪ್ರಮಾಣದ ಸಂಘಟನೆಯಾಗಿ ಮಾರ್ಪಟ್ಟಿತು. ಕರ್ನಾಟಕದ ಎಲ್ಲ ಉತ್ಸಾಹಿ ತರುಣರನ್ನು ಒಗ್ಗೂಡಿಸಿ ಒಂದು ಏಕ ಮಾತ್ರ ಉದ್ದೇಶಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೇ ತನ್ನ ನಿಸ್ವಾರ್ಥ ಸೇವೆಯನ್ನು ಮಾಡಿದೆ.
    ಮತದಾರನ ನೋಂದಣಿ ಅಭಿಯಾನಯನ್ನು ಕೈಗೆತ್ತಿಕೊಂಡು ರಾಜ್ಯದಲ್ಲೆಡೆ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ಅಭಿವೃದ್ದಿಯನ್ನು ಮನೆಮನೆಗೆ ತಲುಪಿಸುವ ನಮೋ ತೇರು, ನರೇಂದ್ರ ಮೋದಿಯ ಸಾಧನೆ, ಅಭಿವೃದ್ದಿ, ನಾಯಕತ್ವ ಗುಣಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ನಡೆದ ಗೀತಕಥನ “ನಮೋ ಭಾರತ್”, ಕಮಿಟ್ಮೆಂಟ್ ಕಾರ್ಡ್ ಅಭಿಯಾನ, ನಮ್ಮ ಮನೆ ನಮೋ ಮನೆ ಮುಂತಾದ ಎಲ್ಲಾ ಯಶಸ್ವಿ ಕಾರ್ಯಕ್ರಮಗಳ ರೂವಾರಿ ನಮೋ ಬ್ರಿಗೇಡ್.
   ನಮೋ ಬ್ರಿಗೇಡ್ ನ ಲಕ್ಷಾಂತರ ಕಾರ್ಯಕರ್ತರು ತಮ್ಮ ಸ್ವಾರ್ಥವನ್ನು ಬದಿಗೊತ್ತಿ, ದೇಶಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಬಹಳಷ್ಟು ಯುವಕರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಈ ಎಲ್ಲ ಯುವಕರ ಗುರಿ ಒಂದೇ ಆಗಿತ್ತು. ಅದು ಪ್ರಗತಿಯ ಭಾರತವನ್ನು ಕಾಣುವುದು. ಈ ಕನಸು ನನಸಾಗುವ ದಿನಗಳು ಹತ್ತಿರದಲ್ಲಿದೆ. ನಮೋ ಬ್ರಿಗೇಡ್ ನ ಗುರಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದಾಗಿತ್ತು. ಆ ಗುರಿ ಈಡೇರಿದೆ. ಈ ಸಂಘಟನೆಯ ಗೆಲುವು ಯುವಶಕ್ತಿಯ ಗೆಲುವು, ನಿಸ್ವಾರ್ಥ ಸೇವೆಯ ಗೆಲುವು. ಈ ವಿಜಯ ಎಲ್ಲ ನಮೋ ಬ್ರಿಗೇಡ್ ಕಾರ್ಯಕರ್ತರಿಗೆ ಸೇರಿದ್ದು. ಎಲ್ಲ ನಮೋ ನಮೋ ಬ್ರಿಗೇಡ್ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.
    ಈ ನಮೋ ಬ್ರಿಗೇಡ್ ಎಂಬ ಯುವ ಪಡೆಯ ಸದಸ್ಯನಾಗಿದದ್ದು ನನ್ನ ಭಾಗ್ಯ. ನಿಸ್ವಾರ್ಥ ಸೇವೆ ಮಾಡಲು ಅವಕಾಶವನ್ನಿತ್ತ ನಮೋ ಬ್ರಿಗೇಡ್ ಗೆ ನಾನು ಚಿರಋಣಿ. ನಮೋ ಬ್ರಿಗೇಡ್ ಗಾಗಿ ಶ್ರಮಿಸಿದ ಚಕ್ರವರ್ತಿ ಸೂಲಿಬೆಲೆ, ಸಂಚಾಲಕರಾದ ನರೇಶ್ ಶೈಣೈ ರವರಿಗೆ ಧನ್ಯವಾದಗಳು.    
ನಮೋ ಬ್ರಿಗೇಡ್ ನನಗೆ ಬಹಳಷ್ಟು ಸ್ನೇಹಿತರನ್ನು ನೀಡಿದೆ. ಅವರಿಗೆ ನಾನು ಧನ್ಯ. ನೇರ ಮಾತಿನ, ಮಧುರ ಹೃದಯದ  ನೀರಜ್, ಸರಳ ಸ್ವಭಾವದ ಮೃದು ಹೃದಯಿ ಚೇತನ್, ಹಾಸ್ಯ ಪ್ರವೃತಿಯ ರಾಘು ಅಣ್ಣ, ಉತ್ತಮ ಬರಹಗಾರ, ಚಿಂತಕ, ಮೌನಮೂರ್ತಿ ರಾಜೇಶ್ ರಾವ್, ನಗುಮುಖದ ಭರತ್, ಕಲ್ಯಾಣ್ ಜೀ, ವಿನಯ್(ನನ್ನ ಬಗ್ಗೆ ನಿಮಗೆ ಅಸಮಾಧಾನವಿರಬಹುದು ಅದಕ್ಕೆ ಕ್ಷಮೆಯಿರಲಿ) ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.
     ಹಾಗಯೇ, ವಿಜಯನಗರದಲ್ಲಿ ನಮೋ ಬ್ರಿಗೇಡ್ ಕೆಲಸ ಮಾಡುವಾಗ ಪ್ರೀತಿತೋರಿದ ವಿಜಯನಗರದ ಗೆಳಯರಾದ ಶ್ರೀನಿವಾಸ್, ಮಂಜುನಾಥ್, ಪ್ರವೀಣ್, ಬಾಲಾಜಿ, ಅಪತ್ಕಾಲದಲ್ಲಿ ನಮೋ ಬ್ರಿಗೇಡ್ ಗೆ ಸಹಕರಿಸಿದ ನಮೋ ಬ್ರಿಗೇಡ್ ನ ‘ಅನ್ನದಾತ’, ಹಿರಿಯರಾದ ಆನಂದ್ ಜೀ ಗೆ ಮತ್ತು ಆತ್ಮೀಯ ಸ್ನೇಹಿತರಾದ ಪ್ರಶಾಂತ್ ಗೆ, ಅಶ್ವಿನ್, ನಾಗಾ ನರಸಿಂಹ, ಚರಣ್ ,ಮನೋಜ್, ಹರೀಶರಿಗೆ  ಪ್ರೀತಿಯ ಗೆಳೆಯರಾದ ನಿಶಿತ್, ಆದರ್ಶ್ ಗೆ, ಫೇಸ್ಬುಕ್ ಗೆಳಯ ಅಕ್ಷತ್ ಗೆ, ಹುಡುಗಿಯರು ದೇಶದ ಬಗ್ಗೆ ಕಾಳಜಿ ವಹಿಸುವುದು ವಿರಳ ಇಂತಹ ಸಂದರ್ಭದಲ್ಲಿ ದೇಶಕಾರ್ಯದಲ್ಲಿ ಕೈ ಜೋಡಿಸಿರುವ ಅರ್ಪಿತ, ಸುಶ್ಮಿತಾ,ಪ್ರಿಯ, ಸಂಜನಾ, ನಮೋ ಬ್ರಿಗೇಡ್ ಫೇಸ್ಬುಕ್ ಪೇಜ್ ನ ಯಶಸ್ಸಿನ ರೂವಾರಿ ಶ್ರೀಕಾಂತ್ ರಿಗೆ  (ಅವರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿಲ್ಲ ಫೇಸ್ಬುಕ್ ಮೂಲಕ ಪರಿಚಿತರು), ಟ್ವಿಟ್ಟರ್ ನಲ್ಲಿ ನಮೋ ಬ್ರಿಗೇಡ್ ನ ಕುರಿತು ಜಾಗೃತಿ ಮೂಡಿಸಿರುವ ಹಿರಿಯರಾದ ಕಿರಣ್ ಕೆ. ಎಸ್ ರವರಿಗೆ  ಮತ್ತು ಎಲ್ಲಾ ನಮೋ ಬ್ರಿಗೇಡ್ ಗೆಳೆಯರಿಗೂ ನನ್ನ ಅನಂತ ಧನ್ಯವಾದಗಳು.         
ನಿಮಗಾಗಿ ಈ ಸಾಲುಗಳನ್ನು ಅರ್ಪಿಸುತ್ತಿದ್ದೇನೆ                                                           
 ಓ ದೇಶಭಕ್ತ ಗೆಳೆಯರೇ
ನಿಮಗಿದೋ ನನ್ನ ವಂದನೆ
ಗುರಿ ಸಾಧಿಸಿದ್ದಕ್ಕೆ ಅಭಿನಂದನೆ
ನಿಮ್ಮ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ
ರಾಷ್ಟ್ರಕಾರ್ಯಕ್ಕೆ ನಿಮ್ಮ ಹೃದಯ ಮಿಡಿಯುತಿರಲಿ.

ಜೈ ಹಿಂದ್
ರವಿತೇಜ ಶಾಸ್ತ್ರೀ    

Tuesday, May 6, 2014

ಅಸಾಮಾನ್ಯ ರಾಷ್ಟ್ರಭಕ್ತ ವಿದ್ಯಾನ೦ದ ಶೆಣೈ

ವಿದ್ಯಾನಂದರನ್ನು ನೋಡುವ ಭಾಗ್ಯ ನನಗಂತೂ ಸಿಗಲಿಲ್ಲ. ಅವರ ಉಪನ್ಯಾಸಕ್ಕೆ ನಾನು ತೃಪ್ತಿಪಡಬೇಕಾಗಿದೆ. ಅವರನ್ನು ಕಂಡ ಹಿರಿಯರ ಲೇಖನವನ್ನು ನನ್ನ ಬ್ಲಾಗ್ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. 

ಲೇಖಕರು: ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ

      

ವಿದ್ಯಾನ೦ದರು ಅ೦ದ ತಕ್ಷಣ ಕರ್ನಾಟಕದಲ್ಲಿ ಒಮ್ಮೆಲೇ ಇಬ್ಬರು ದಿಗ್ಗಜರು ನೆನಪಿಗೆ ಬರುತ್ತಾರೆ. ಒಬ್ಬರು ವಿದ್ಯಾನ೦ದ ಭೂಷಣರು (ಸ್ವಾಮೀಜಿ), ಇನ್ನೊಬ್ಬರು ವಿದ್ಯಾನ೦ದ ಶೆಣೈ ಅವರು. ಇಬ್ಬರೂ ಹೆಚ್ಚೂ ಕಡಿಮೆ ಒ೦ದೇ ಪ್ರದೇಶದವರು, ಅವಿಭಜಿತ ದ.ಕ.ಜಿಲ್ಲೆಯವರು. ಸ೦ಗೀತ ಇಷ್ಟಪಡುವವರಿಗೆಲ್ಲಾ ವಿದ್ಯಾಭೂಷಣರು ಚಿರಪರಿಚಿತರಾದರೆ, "ಭಾರತ ದರ್ಶನ" ಕೇಳಿದವರೆಲ್ಲರಿಗೂ ವಿದ್ಯಾನ೦ದ ಶೆಣೈ ಅವರನ್ನು ಒಮ್ಮೆಯಾದರೂ ನೋಡಬೇಕೆನಿಸಿರುತ್ತದೆ.


 ವಿದ್ಯಾನ೦ದ ಶೆಣೈ ಒಬ್ಬ ಅದ್ಭುತ ಮಾತುಗಾರ ಅಷ್ಟೇ ಅಲ್ಲ. ಅವರೊಬ್ಬ ಅಸಾಮಾನ್ಯ ದೇಶಭಕ್ತ, ಅಷ್ಟೇ ಸರಳ ವ್ಯಕ್ತಿ. ಕ೦ಚಿನ ಕ೦ಠದ, ಸರಾಗವಾಗಿ ಹಲವು ಭಾಷೆಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ನಮ್ಮ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಪ್ರಚ೦ಡ ಭಾಷಣಕಾರ ಆಗಿದ್ದರು, ಅತ್ಯುತ್ತಮ ಸ೦ಘಟಕರಾಗಿದ್ದರು. ಚಿಕ್ಕ೦ದಿನಿ೦ದಲೇ ಸ೦ಘದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡಿದ್ದ ಇವರು ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎ೦ದು ಸ೦ಸಾರವನ್ನು ಕಟ್ಟಿಕೊಳ್ಳಲೇ ಇಲ್ಲ.
   ದು೦ಡು ಮುಖದ, ಸ್ವಲ್ಪ ಕಪ್ಪಗೆ ಚಹರೆ ಇದ್ದ, ಸಾಮಾನ್ಯ ಎತ್ತರದ, ಹೊರ ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರ೦ತೆ ಕಾಣಿಸುತ್ತಿದ್ದ, ಸದಾ ಬಿಳಿ ಪೈಜಾಮ ಜುಬ್ಬಾ/ಅ೦ಗಿ ಧರಿಸುತ್ತಿದ್ದ ಆ ಧೀಮ೦ತ ವ್ಯಕ್ತಿಯನ್ನು ಹೊಸಬರಾರೂ ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ. ಆದರೆ ಅವರು ಭಾಷಣಕ್ಕೆ ಎದ್ದು ನಿ೦ತರೆ೦ದರೆ ಸಭೆಯಲ್ಲಿ ಮಾತು ಬರದ, ಅಳುತ್ತಿರುವ ಪುಟಾಣಿ ಮಕ್ಕಳೂ ಅಳುನಿಲ್ಲಿಸಿ ಬೆರಳು ಚೀಪುತ್ತಾ ಅವರ ಮಾತನ್ನು ಆಲಿಸುತ್ತಿದ್ದವು ಅ೦ದರೆ ಅವರ ಧ್ವನಿಗೆ ಎ೦ಥಾ ಶಕ್ತಿ ಇರಬೇಕು? ಅವರ ಹಲವು ಸಭೆಗಳಲ್ಲಿ ಕುಳಿತಿದ್ದ ನಾನು ಅವರ ಭಾಷಣ ಮುಗಿಯುವವರೆಗೂ ಅಕ್ಕಪಕ್ಕದಲ್ಲಿ ಯಾರೂ ಮಾತನಾಡಿದ್ದು, ಎದ್ದು ಹೋಗಿದ್ದು ನೋಡಿಲ್ಲ.

ಸಾಷ್ಟಾಂಗ ನಮಸ್ಕಾರ ಮಾಡಿದ ರಾಜ್ :

ನಿಮಗೆ ಗೊತ್ತಾ? ಕನ್ನಡದ ವರನಟ ದಿ.ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ "ಕೇಳಿ" ತರಿಸಿಕೊ೦ಡರು. ಅದರಲ್ಲಿ ವಿದ್ಯಾನ೦ದರ "ಭಾರತ ದರ್ಶನ" ಕ್ಯಾಸೆಟ್ಟೂ ಒ೦ದು! ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸ೦ಘಪರಿವಾರದ ತ೦ಡ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, "ನನಗೆ "ಭಾರತ ದರ್ಶನ" ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊ೦ಡು ಬನ್ನಿ" ಅ೦ದರ೦ತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿಯತ್ತ ಎಲ್ಲರೂ ಕೈತೋರಿದರು. ವಿದ್ಯಾನ೦ದರು ಸರಳ ನಗೆ ಬೀರುತ್ತಾ ಕೈಮುಗಿದರು. ತಕ್ಷಣ ರಾಜಣ್ಣ ಮಾಡಿದ್ದೇನು ಗೊತ್ತೆ? ಎದ್ದು ಹೋಗಿ ವಿದ್ಯಾನ೦ದರಿಗೆ ಉದ್ದ೦ಡ ನಮಸ್ಕಾರ ಹಾಕಿದರ೦ತೆ! "ನೀವು ಬಹಳ ದೊಡ್ಡವರು, ಎ೦ಥಾ ಕ೦ಠವಪ್ಪಾ, ಎಷ್ಟು ತಿಳಿದುಕೊ೦ಡಿದ್ದೀರಿ, ನೀವು ನಮ್ಮ ಮನೆಗೆ ಬ೦ದಿರುವು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ" ಅ೦ದರ೦ತೆ. ಪರಸ್ಪರ ಅಪ್ಪಿ ಕೊ೦ಡಾಗ ಕನ್ನಡದ ಎರಡು ಮಹಾನ್ ದಿಗ್ಗಜರ ಮಿಲನವಾಯಿತು.
  ಇ೦ಥಾ ಅದ್ಭುತ ವ್ಯಕ್ತಿತ್ವದವರನ್ನು ಹತ್ತಿರದಿ೦ದ ಭೇಟಿಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ. ಈಗೊ೦ದು ಹನ್ನೆರೆಡು ವರ್ಷಗಳ ಹಿ೦ದಿನ ಮಾತು. ಬೆ೦ಗಳೂರು ಎನ್ನಾರ್ ಕಾಲೊನಿಯ ಗೋಖಲೆ ಸಾರ್ವಜನಿಕ ಸ೦ಸ್ಥೆಯಲ್ಲಿ ಅವರ ಭಾಷಣದ ಏರ್ಪಾಡಾಗಿತ್ತು. ಸಭಾಭವನದ ಹಿ೦ದೆ ವಿದ್ಯಾರ್ಥಿಗಳಿಗಾಗಿ ಒ೦ದು ಹಾಸ್ಟೆಲ್ ಇತ್ತು. ನಾನು ಬಿ.ಎಮ್.ಎಸ್. ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ವ್ಯಾಸ೦ಗ ಮಾಡುತ್ತಾ ಅಲ್ಲಿ ಉಳಿದುಕೊ೦ಡಿದ್ದೆ. ಶಿಸ್ತಿನ ಸಿಪಾಯಿಯಾಗಿದ್ದ ವಿದ್ಯಾನ೦ದ ಶೆಣೈಯವರು ಸಮಯಕ್ಕೆ ಮುಕ್ಕಾಲು ಗಂಟೆ ಮೊದಲೇ ಬ೦ದಿದ್ದರು. ಸ೦ಸ್ಥೆಯ ಕಾರ್ಯದರ್ಶಿ (ದಿ) ಸುಬ್ಬರಾಯರು ನನ್ನನ್ನು ಕರೆದು "ಒಮ್ಮೆ ಸ೦ಸ್ಥೆಯಲ್ಲಿ ಸುತ್ತಾಡಿಸಿಕೊ೦ಡು ಬಾ" ಎ೦ದು ಅಪ್ಪಣೆ ಕೊಡಿಸಿದರು. ನಾನು ಅವರಿಗೆ ನಮಸ್ಕರಿಸಿ ಒ೦ದೊ೦ದೇ ಜಾಗಗಳನ್ನು ತೋರಿಸುತ್ತಾ ಹಾಸ್ಟೆಲಿನ ಹತ್ತಿರ ಬ೦ದೆ.
 ಭಾನುವಾರವಾದ್ದರಿ೦ದ ಎಲ್ಲ ವಿದ್ಯಾರ್ಥಿಗಳೂ ಬಾಗಿಲು ತೆಗೆದಿದ್ದರು. ಅವರು ಹೊರಗಿನಿ೦ದಲೇ ಒ೦ದೊ೦ದೇ ಕೋಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಹುಡುಗರು ಒಳಗೆ ಬನ್ನಿರೆ೦ದರೂ ಯಾರ ಕೋಣೆಗೂ ಹೋಗಲಿಲ್ಲ. ಮು೦ದೆ ಕೊನೆಯಲ್ಲಿ ಅರ್ಧ ಬಾಗಿಲು ತೆರೆದ ಕೋಣೆಯೊ೦ದಿತ್ತು, ಹೊರಗಡೆ ಗೋಡೆ, ಕಿಟಕಿಯನ್ನು ಪರೀಕ್ಷಿಸಿ ನೋಡಿದಮೇಲೆ, ಒಳಗೆ ನೋಡಬಹುದೇ ಎನ್ನುತ್ತಾ ಬಾಗಿಲು ಪೂರ್ಣ ತೆಗೆದರು, ಒಳಗೆ ಹೋಗಿಬಿಟ್ಟರು, ಅದು ನನ್ನ ಕೋಣೆಯಾಗಿತ್ತು! ಎದುರಿಗೆ ಅವರಿಗೆ ಕಾಣಿಸಿದ್ದು "ಓ೦" ಎ೦ದು ಸ೦ಸ್ಕೃತದಲ್ಲಿ ಬರೆದಿದ್ದ ದೊಡ್ಡ ವಾಲ್ ಪೋಸ್ಟರ್, ದೇವತಾಮೂರ್ತಿ, ಫೋಟೋಗಳು, ಪುಸ್ತಕಗಳು, ಗ್ಯಾಸ್ ಸ್ಟೊವ್, ಅಡುಗೆ ಸಾಮಾನು, ಪಾತ್ರೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಿಟ್ಟಿದ್ದು, ಕೋಣೆಯಲ್ಲಿ ಕಸ, ಧೂಳು, ಜೇಡರಬಲೆ ಇಲ್ಲದಿರುವುದು ಬಹುಶಃ ಹಿಡಿಸಿತು. "ಕೋಣೆಯನ್ನು ಚೆನ್ನಾಗಿ ಇಟ್ಟುಕೊ೦ಡಿದ್ದೀಯ" ಅ೦ದರು. ಮ೦ಚದ ಮೇಲೆ ಕುಳಿತು ಜೊತೆಯಲ್ಲೇ ಬ೦ದಿದ್ದ ವಿದ್ಯಾರ್ಥಿಗಳನ್ನೂ ಉದ್ದೇಶಿಸಿ ಶಿಸ್ತು, ನಡತೆ, ಶ್ರದ್ಧೆಯಬಗ್ಗೆ ನಾಲ್ಕುಮಾತು ಹೇಳಿದರು. ರೂಮಿನ ಹೊರಗೂ ಒ೦ದೂ ಜೇಡರಬಲೆ ಇಲ್ಲದ೦ತೆ ಗುಡಿಸಿ, ತೊಳೆದು, ಅಕ್ಕಪಕ್ಕ ಸ್ವಚ್ಚಗೊಳಿಸಿ, ಗಿಡಗಳನ್ನೂ ಬೆಳೆಸಿದ್ದಾಗ ಬೇರೆ ಹುಡುಗರು "ಹಾಸ್ಟೆಲ್ ನ ಉದ್ದಾರ ಮಾಡುವವ" ಅ೦ತ ಹೀಯಾಳಿಸುತ್ತಿದ್ದಕ್ಕೆ ಈಗ ತಕ್ಕ ಉತ್ತರ ಸಿಕ್ಕ ಸ೦ತೋಷವಾಗಿತ್ತು. ಅರ್ಧ ಗಂಟೆ ಕುಳಿತಿದ್ದು ನ೦ತರ ಸಭೆಗೆ ಕರೆಬ೦ದದ್ದರಿ೦ದ ಹೊರಟರು. ಅವತ್ತಿನ ಭಾಷಣಕ್ಕೆ ಸುಮಾರು 800 ಜನ ಸೇರಿದ್ದರು.
    ಇದಾಗಿ ಒ೦ದು ವರ್ಷದ ಮೇಲೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಹೋಗುವ ರೈಲಿನಲ್ಲಿ, ಮೊದಲೇ ಕಾದಿರಿಸಿದ್ದ ಸೀಟು ಹುಡುಕುತ್ತಾ ಹೋಗುತ್ತಿದ್ದೆ. ಅಲ್ಲೊ೦ದು ಕಡೆ ವಿದ್ಯಾನ೦ದರು "ಬೈಠಕ್" ಮಾಡಿಕೊ೦ಡು ಕುಳಿತಿದ್ದರು. ನನ್ನ ಕಣ್ಣಲ್ಲಿ ಫಕ್ಕನೆ ಹೊಳಪು ಮೂಡಿತಾದರೂ, ಅಕ್ಕಪಕ್ಕದಲ್ಲಿ ಯಾರೋ ದೊಡ್ಡವರೆಲ್ಲಾ ಇದ್ದಾರೆ, ಈಗ ಮಾತನಾಡಿಸುವುದು ಸರಿಯಲ್ಲ, ಅದೂ ಅಲ್ಲದೆ ನನ್ನನ್ನು ಅಕಸ್ಮಾತ್ ಗುರುತಿಸದೇ ಹೋದರೆ? ಸರಿಯಲ್ಲವೆ೦ದುಕೊ೦ಡು ಸೀಟು ಹುಡುಕಲು ಮು೦ದೆ ಹೆಜ್ಜೆ ಇಟ್ಟೆ. "ವೆ೦ಕಟೇಶ್" ಎ೦ದು ಯಾರೋ ಕರೆದ೦ತಾಯಿತು. ಹಿ೦ದಿರುಗಿ ನೋಡಿದರೆ ವಿದ್ಯಾನ೦ದರು ನನ್ನತ್ತ ಕೈ ತೋರಿಸಿ ಕರೆಯುತ್ತಿದ್ದಾರೆ! ಎ೦ಥಹಾ ಜ್ಞಾಪಕ ಶಕ್ತಿ, ಹೆಸರು ಹಿಡಿದು ಕರೆಯುವಷ್ಟು? ನಾನು ಹಿ೦ತಿರುಗಿ ಹೋಗಿ ಪಾದಕ್ಕೆ ನಮಸ್ಕರಿಸಿದೆ. ನ೦ತರ ಜತೆಗೇ ಬ೦ದಿದ್ದ ನನ್ನ ಹಿರಿಯ ಅಣ್ಣನನ್ನು ಪರಿಚಯ ಮಾಡಿಕೊಟ್ಟೆ. ವಿದ್ಯಾನ೦ದರು ನನ್ನ ಅಣ್ಣನ ಹತ್ತಿರ "ನೀವು ಪುಣ್ಯವ೦ತರಪ್ಪಾ, ಒಳ್ಳೆಯ ತಮ್ಮನನ್ನು ಪಡೆದಿದ್ದೀರಿ" ಎನ್ನುತ್ತಾ ಅಲ್ಲಿದ್ದ ಬೇರೆಯವರಿಗೂ ಪರಿಚಯ ಮಾಡಿಸಿದರು. ಅಷ್ಟೊ೦ದು ಹಿರಿಯರ ನಡುವೆ ಅದಕ್ಕಿ೦ತಾ ಇನ್ನಾವ ಸರ್ಟಿಫಿಕೇಟು ಬೇಕೆನಿಸಲಿಲ್ಲ. ಅದು ಮರೆಯಲಾಗದ ಹಚ್ಚಹಸುರಿನ೦ಥಾ ಘಟನೆ. ಆಯ್ಯೋ, ಛೇ... ಅದೇ ನನ್ನ ಕೊನೆಯ ಭೇಟಿ, ನ೦ತರ ನನ್ನ ಜತೆಗೆ ಸದಾ ಇರುವುದು ಅವರ ನೆನಪು ಮಾತ್ರ, ಅವರ ಕ್ಯಾಸೆಟ್ಟು ನನ್ನ ಸ೦ಗಾತಿ ಅಷ್ಟೇ.

ಯಾವ ಕ್ಯಾಸೆಟ್ಟು? :


ಒ೦ದೇ ಮಾತಿನಲ್ಲಿ ಹೇಳಬೇಕೆ೦ದರೆ, ನಮ್ಮ ರಾಷ್ಟ್ರದ ಬಗ್ಗೆ, ಅದರ ಇತಿಹಾಸ, ಅದರ ಧರ್ಮ, ಭಾಷೆ, ನದಿಗಳು, ದೇವಾಲಯಗಳು, ಪುಣ್ಯ/ತೀರ್ಥಕ್ಷೇತ್ರಗಳು, ಮಹಾನ್ ವ್ಯಕ್ತಿಗಳು, ಆಚಾರ್ಯರು, ರಾಜವ೦ಶ.....ಒಟ್ಟಿನಲ್ಲಿ ನಮ್ಮ ಭವ್ಯಭಾರತದ ಬಗ್ಗೆ ಸ೦ಪೂರ್ಣ ಸ೦ಕ್ಷಿಪ್ತ ವಿವರಣೆ ನೀಡುತ್ತಾರೆ, ನಿಮಗೆಲ್ಲೂ ಬೇಸರವೆನಿಸಲಾರದು, ಕಾರಣ ಇದೊ೦ದು ಒಣಭಾಷಣ ಮಾಲೆ ಅಲ್ಲವೇ ಅಲ್ಲ. ಎ೦ಥವರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸಫಲವಾಗುತ್ತದೆ, ಈ ಧ್ವನಿಸುರುಳಿ. ವಿದ್ಯಾನ೦ದರು ಯಾವತ್ತೂ ಹೆಸರು ಮಾಡಲು, ಸ್ವಪ್ರಚಾರವನ್ನು ಬಯಸಲಿಲ್ಲ. ಹಣ ಮಾಡುವ ಬಯಕೆ ಇದ್ದಿದ್ದರೆ, ಈಗಿನ ಕಮರ್ಶಿಯಲ್ ಯುಗದಲ್ಲಿ, ಬರೀ ಧ್ವನಿಯಿ೦ದಲೇ ಬಹಳಷ್ಟು ಸ೦ಪಾದಿಸಿಬಿಡಬಹುದಿತ್ತು. ನಮ್ಮಲ್ಲಿ ಆರೆಸ್ಸೆಸ್, ಸ೦ಘಪರಿವಾರವೆ೦ದರೆ ಮೂಗು ಮುರಿಯುವ ಜನರಿ೦ದಾಗಿ ಇ೦ಥ ಮಹಾನ್ ಸಾಧಕರು ಹೆಚ್ಚು ಬೆಳಕಿಗೆ ಬರಲೇ ಇಲ್ಲ. ಇವರು ವಿಧಿವಶರಾದಾಗ ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಯೇ ಬರಲಿಲ್ಲ. ಅದೇ ಒಬ್ಬ ರಾಜಕೀಯ ಪುಢಾರಿ ಸತ್ತಮೇಲೆ ಅವನ ಗುಣಗಾನ ಮಾಡುವುದರಲ್ಲೇ ಕಾಲಕಳೆಯುವ ಮಾಧ್ಯಮಗಳು, ರಜಾಘೋಷಿಸುವ ಸರಕಾರಗಳು, ಮೂರ್ತಿ ಸ್ಥಾಪಿಸಿ ಪೂಜಿಸುವ ಸ೦ಘಸ೦ಸ್ಥೆಗಳು ಹೇಸಿಗೆ ಹುಟ್ಟಿಸುವ೦ಥಾ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ನಮ್ಮಲ್ಲಿ ನಿಜವಾದ ರಾಷ್ಟ್ರಭಕ್ತರಿಗೆ ಏನು ಬೆಲೆ ಕೊಡುತ್ತೇವೆ ಎ೦ದು ಇದರಿ೦ದ ಅರಿವಾಗುತ್ತದೆ. ಅಷ್ಟಕ್ಕೂ ಇವರಾರು ಎ೦ದು ಇನ್ನೂ ಹೆಚ್ಚು ತಿಳಿಯಬೇಕೆ೦ದರೆ ನೀವು "ಭಾರತ ದರ್ಶನ" ಧ್ವನಿಮುದ್ರಣವನ್ನು ಒಮ್ಮೆ ಕೇಳಲೇಬೇಕು.

ಸಂಪೂರ್ಣ ಭಾರತ ದರ್ಶನ ಕೇಳಲು ಈ ಲಿಂಕ್ಗೆ ಭೇಟಿ ಕೊಡಿ. 
https://www.youtube.com/user/Anaamadheya/videos 
 

Saturday, May 3, 2014

ಹುತಾತ್ಮ ಎಂದರೆ ಯಾರು? ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹುತಾತ್ಮರೇ?

ನನ್ನ ತಿಳುವಳಿಕೆಯ ಪ್ರಕಾರ ಯೂವುದೇ ವ್ಯಕ್ತಿ ತನ್ನ ಸ್ವಾರ್ಥವನ್ನು ಬದಿಗೊತ್ತಿ, ದೇಶ ಅಥವಾ ಸಮಾಜಕ್ಕಾಗಿ ಯಾವುದೇ ಅಪೇಕ್ಷೆಯಿಲ್ಲದೆ ಪ್ರಾಣ ತ್ಯಾಗ ಮಾಡಿದರೆ ಆತನನ್ನು ಹುತಾತ್ಮ ಎಂದು ಕರೆಯಬಹುದು.
  ಈ ದೇಶದ ಸ್ವಾತಂತ್ರ್ಯಕ್ಕಾಗಿ ಆರೂವರೆ ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇವರೆಲ್ಲರೂ ಹುತಾತ್ಮರು.
ಭಗತ್ ಸಿಂಗ್,ರಾಜಗುರು, ಸುಖದೇವ್ , ನೇತಾಜಿ,  ಚಂದ್ರಶೇಖರ್ ಅಜಾದ್, ಮದನಲಾಲ್ ಧಿಂಗ್ರಾ, ರಾಮಪ್ರಸಾದ್ ಬಿಸ್ಮಿಲ್, ಚಾಪೇಕರ್ ಸಹೋದರರು, ಮುಂತಾದವರು  ಹುತಾತ್ಮ ರೆಂದು ಕರೆಸಿಕೊಳ್ಳಲು ಅರ್ಹರು.
ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹುತಾತ್ಮ ರೆಂದು ಕಾಂಗ್ರೆಸ್ ಪಕ್ಷ ಹೇಳಿಕೊಳ್ಳುತ್ತದೆ. ಇದು ಸತ್ಯಕ್ಕೆ ದೂರವಾದ ಮಾತು. ಇಂದಿರಾ ಮತ್ತು ರಾಜೀವ್ ತನ್ನ ಸ್ವಯಂ ಕೃತ ತಪ್ಪು ನಿರ್ಧಾರಗಳಿಂದ ಮಡಿದರೆ ಹೊರತು ಅವರು ಹುತಾತ್ಮರಾಗಲಿಲ್ಲ.
 ಇಂದಿರಾಗಾಂಧಿ ಸಿಖ್ಖರ ಭಾವನೆಗಳಿಗೆ ದಕ್ಕೆಯಾಗುವ ನಿರ್ಧಾರಗಳನ್ನು ತೆಗೆದುಕೊಂಡು ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿ ಹತರಾದರು. ಇದು ತ್ಯಾಗವಲ್ಲ.
ರಾಜೀವ್ ಗಾಂಧಿ ಶ್ರೀಲಂಕಾಗೆ ಹೋಗಿ L.T.T.E ಯನ್ನು ಮಟ್ಟಹಾಕುತ್ತೇನೆಂದು ಹೇಳಿಕೆ ನೀಡಿ, ಮುಖ್ಯಸ್ಥ ಪ್ರಭಾಕರನ್ ನ ಟಾರ್ಗೆಟ್ ಆದರು. ಇದರಿಂದಾಗಿ ಅವರು ಬಲಿಯಾಗಬೇಕಾಯಿತು. ರಾಜೀವ್ ಗಾಂಧಿ ತಾನೇ ತಮ್ಮ ಪ್ರಾಣ ಅರ್ಪಿಸಲಿಲ್ಲ.
ಈ ಇಬ್ಬರು ತಮ್ಮ ಸ್ವಯಂಕೃತ ಅಪರಾಧ ಗಳಿಂದಾಗಿ ಬಲಿಯಾದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಯಿತು. ಇಂದಿರಾ ಸತ್ತಾಗ ರಾಜೀವ್ ಪ್ರಧಾನಿಯಾದರು. ರಾಜೀವ್ ಗಾಂಧಿ ಸಾವನ್ನಪ್ಪಿದಾಗ ಕಾಂಗ್ರೆಸ್ ನ ನರಸಿಂಹರಾವ್ ಪ್ರಧಾನಿಯಾದರು.
ರಾಜೀವ್ ಮತ್ತು ಇಂದಿರಾ ಸಾವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನೆಹರು ಕುಟುಂಬಕ್ಕೆ ಲಾಭವಾಗಿದೆಯೇ ಹೊರತು ದೇಶಕ್ಕೆ ಯಾವುದೇ ಲಾಭವಾಗಿಲ್ಲ. ಹಾಗಾಗಿ ಇಂದಿರಾ ಮತ್ತು ರಾಜೀವ್ ಹುತಾತ್ಮ ರಲ್ಲ. ಅವರನ್ನು ಹುತಾತ್ಮ ರೆಂದು ಕರೆಯುವುದು ನಿಜವಾದ ಹುತಾತ್ಮ ರಿಗೆ ಮಾಡಿದ ದ್ರೋಹವೇ ಸರಿ. 


ರವಿತೇಜ ಶಾಸ್ತ್ರೀ  

Thursday, May 1, 2014

ಮ(ಮೌ)ನಮೋಹನ್ ಸಿಂಗ್ ಈ ದೇಶದ ಪ್ರಧಾನಿಯಾಗಿದ್ದು ದುರಂತವಲ್ಲದೇ ಮತ್ತೇನು?


ಭಾರತ ವಿಶ್ವದ ಬಹುದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಎಲ್ಲರೂ ಜನರಿಂದಲೇ ಆಯ್ಕೆಯಾಗುತ್ತಾರೆ. ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬ ಜನ ಪ್ರತಿನಿಧಿಗೂ ತಮ್ಮದೇ ಜವಾಬ್ದಾರಿಗಳಿವೆ. ಈ ಜವಾಬ್ದಾರಿಗಳಲ್ಲಿ ಸ್ವಂತ ನಿರ್ಣಯ ತೆಗೆದುಕೊಳ್ಳಲು ಅವರಿಗೆ  ಸ್ವಾತಂತ್ರ್ಯವಿದೆ. ಆದರೆ ರಾಷ್ಟ್ರಪತಿ ಹುದ್ದೆ ಮಾತ್ರ ಇದಕ್ಕೆ ತದ್ವಿರುದ್ದ. ಉಭಯ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರು ರಾಷ್ಟ್ರಪತಿಯನ್ನು ಆಯ್ಕೆಮಾಡುತ್ತಾರೆ. ರಾಷ್ಟ್ರಪತಿಗಳಿಗೆ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಅವರು ಕೇಂದ್ರ ಮಂತ್ರಿಮಂಡಲದ ಅಣತಿಯಂತೆ ಕಾರ್ಯನಿರ್ವಹಿಸಬೇಕು. ಹಾಗಾಗಿ ರಾಷ್ಟ್ರಪತಿ ಹುದ್ದೆಯನ್ನು “ರಬ್ಬರ್ ಸ್ಟಂಪ್” ಎಂದು ಕರೆಯುವುದು ವಾಡಿಕೆ.  
    ಈಗ ಅಸಲಿ ವಿಷಯಕ್ಕೆ ಬರುವುದಾದರೆ, ಪ್ರಧಾನಿ ಹುದ್ದೆಯನ್ನು ಸಹ ಥೇಟ್ “ರಬ್ಬರ್ ಸ್ಟಂಪ್” ಹುದ್ದೆಯಂತೆ ಮಾಡಿದ ಕೀರ್ತಿ ಅರ್ಥ ಪಂಡಿತ ಡಾ. ಮನಮೋಹನ್ ಸಿಂಗ್ ರವರಿಗೆ ಸಲ್ಲುತ್ತದೆ. 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು, ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯ ಗಾಂಧಿಯವರ ಅಣತಿಯಂತೆ ಆಡಳಿತ ನಿರ್ವಹಿಸುತ್ತಿದ್ದರು ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ.
ಡಾ. ಸಿಂಗ್ ಬಹಳಷ್ಟು ಓದಿಕೊಂಡವರು. 1991 ರಿಂದ 1996 ರವರೆಗೆ ಪಿ,ವಿ ನರಸಿಂಹರಾವ್ ಅವರ ಸಂಪುಟದಲ್ಲಿ ಅರ್ಥಿಕ ಮಂತ್ರಿಯಾಗಿದ್ದರು. ಪಿ.ವಿ ನರಸಿಂಹರಾವ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಭಾರತ ಅರ್ಥಿಕ ಸಂಕಷ್ಟದಲ್ಲಿತ್ತು. ಈ ಸಮಯದಲ್ಲಿ ಯೋಜನಾ ಆಯೋಗದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ರಾಜಕೀಯವೇ ತಿಳಿಯದ ಮನಮೋಹನ್ ಸಿಂಗ್ ರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡ ಪಿ,ವಿ ನರಸಿಂಹರಾವ್, ಡಾ. ಸಿಂಗ್ ರನ್ನು ವಿತ್ತ ಮಂತ್ರಿ ಮಾಡಿದರು. ನರಸಿಂಹರಾವ್ ಅವರ ನೀರಿಕ್ಷೆ  ಹುಸಿಗೊಳಿಸದ ಮನಮೋಹನ್ ಸಿಂಗ್ ಅರ್ಥಿಕ ಸಬಲೀಕರಣ ನೀತಿಗಳನ್ನು ಜಾರಿಗೆ ತಂದು ಉಸಿರಾಡಲು ಕಷ್ಟಪಡುತಿದ್ದ ಭಾರತದ ಆರ್ಥಿಕತೆ ಗೆ ವೆಂಟಿಲೇಟರ್ ಆಳವಡಿಸಿ, ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದರು.
     ಆದರೆ ಹತ್ತು ವರ್ಷಗಳ ಕಾಲ ಪ್ರಧಾನಿಯಾದ ಇದೇ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕೆ ತಲುಪಿತು. ಇಂತಹ ಸಂಧರ್ಭದಲ್ಲಿ ಯಾವುದೇ ದಿಟ್ಟ ನಿರ್ಧಾರಗಳನ್ನು ಡಾ. ಸಿಂಗ್ ತೆಗೆದುಕೊಳ್ಳಲಿಲ್ಲ. ಭಯವಾದಾಗ ತಾಯಿಯ ಸೆರಗಿನ ಆಶ್ರಯ ಪಡೆಯುವ ಮಗುವಿನಂತೆ ಡಾ. ಸಿಂಗ್, ಸೋನಿಯಾ ಆಜ್ಞೆಯನ್ನು ಪಾಲಿಸುತ್ತಾ, ಗುಲಾಮಿ ಪ್ರವೃತ್ತಿಯನ್ನು ರೂಡಿಸಿಕೊಂಡು ಪ್ರಧಾನಿ ಮಾಡಿದ ಋಣವನ್ನು ತೀರಿಸಿದರು.
    ಚೀನಾ ಭಾರತದ ಗಡಿಯಾಚೆಗೆ ತನ್ನ ಸೇನೆಯನ್ನು ನುಗ್ಗಿಸಿತು, ಪಾಕಿಸ್ತಾನ ನಮ್ಮ ವೀರ ಯೋಧರ ಶಿರಚ್ಛೇದನ ಮಾಡಿತು. ಇವು ಭಾರತದ ಸಾರ್ವಭೌಮ್ಯತೆಯನ್ನು ಪ್ರಶ್ನಿಸುವ ಕೃತ್ಯಗಳಾಗಿದ್ದವು. ಆದರೆ ಪ್ರಧಾನಿ ಸಿಂಗ್ ಎದುರಾಳಿಗಳಿಗೆ ಸೂಕ್ತ ಉತ್ತರವನ್ನು ನೀಡಲಿಲ್ಲ. ಅವರು ಮಾತೇ ಆಡಲಿಲ್ಲ. ಮೌನಕ್ಕೆ ಶರಣಾದರು. “ ಮೌನಂ ಸಮ್ಮತಿ ಲಕ್ಷಣಂ” ಎಂಬ ಮಾತಿದೆ ನಿಜ. ಆದರೆ ಭಾರತದ ಮಾನ ಮೂರಾಬಟ್ಟೆ ಹರಾಜುತ್ತಿದ್ದ ಸಂದರ್ಭದಲ್ಲಿ ಮೌನವಹಿಸಿದ್ದು ಪುರುಷ ಲಕ್ಷಣವಲ್ಲ.
    ಪ್ರಧಾನಿ ಕಾರ್ಯಾಲಯದ ಅಧಿಕಾರಿಯಾಗಿದ್ದ ಸಂಜಯ್ ಬರು ತಮ್ಮ ಪುಸ್ತಕ “ The Accidental Prime Minister, Making and Unmaking of Dr. Manamohan Singh”  ದಲ್ಲಿ ಬಹಳಷ್ಟು ಮಾಹಿತಿಗಳನ್ನು ಹೊರಹಾಕಿದ್ದಾರೆ. ಬರು ಹೇಳುವಂತೆ ಪ್ರಧಾನಿ ಸಿಂಗ್, ಸೋನಿಯಾ ಗಾಂಧಿಗಿಂತ ಹೆಚ್ಚು ಜನಪ್ರಿಯರಾಗಲು ಇಚ್ಚಿಸುತ್ತಿರಲಿಲ್ಲವಂತೆ. ಸೋನಿಯಾಗಿಂತ ಕಡಿಮೆ ಪ್ರಭಾವಿ ವ್ಯಕ್ತಿಯಾಗಿರಲು ಅವರು ಬಯಸುತ್ತಿದ್ದರಂತೆ. ಇದು ವಿನಯತೆಯಲ್ಲ, ಅಕ್ಷರಶಃ ಗುಲಾಮಿತನ. ಪ್ರಧಾನಿ ಸಿಂಗ್ ಸೋನಿಯಾಗಾಂಧಿಯವರ ಗುಲಾಮಿಯಾಗಿದ್ದರು ಎಂದರೆ ತಪ್ಪಿಲ್ಲ.
   ಸಂಜಯ್ ಬರು ಹೇಳುವ ಪ್ರಕಾರ, ಸಂಪುಟ ದರ್ಜೆಯ ಸಚಿವರು, ಅತ್ಯಂತ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವಾಗ ಪ್ರಧಾನಿಯವರೊಡನೆ ಚರ್ಚಿಸದೆ, ಪ್ರತಿಯೊಂದನ್ನು ಸೋನಿಯಾ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರಂತೆ. ಇದು ಡಾ. ಸಿಂಗ್ ರ ಅಸಹಾಯಕತೆಯೂ ಅಲ್ಲ, ಸಹನೆಯ ಮಿತಿಯೂ ಅಲ್ಲ. ಪ್ರಧಾನಿ ಸಿಂಗ್ ಸೋನಿಯಾ ಕೈಗೊಂಬೆಯಾಗಿದ್ದರು ಎಂಬುದಕ್ಕೆ ನಿರ್ದರ್ಶನ. ಹೆಸರಿಗಷ್ಟೆ ಸಿಂಗ್ ಪ್ರಧಾನಿಯಾಗಿದ್ದರು ಆದರೆ ಕೀಲಿಕೈ ಸೋನಿಯಾ ಮೇಡಂ ಬಳಿಯಿತ್ತು.
   ಭಾರತದ ಜನರು ಸಹ ಸೋನಿಯಾ ಗಾಂಧಿಯನ್ನೇ ಪ್ರಧಾನಿಯೆಂದು ಭಾವಿಸಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯ ಕ್ಕೆ ಹೋರಾಟಗಳು ನಡೆದಾಗ, ತೆಲಂಗಾಣ ಜನರು ಮನವಿ ಸಲ್ಲಿಸಿದ್ದು ಸೋನಿಯಾಗಾಂಧಿಗೆ. ಪ್ರತಿಭಟನೆಯಾದಾಗ ಸೋನಿಯಾ ಪ್ರತಿಕೃತಿಗಳನ್ನು ದಹಿಸಿದರು.ಆದರೆ  ಪ್ರಧಾನಿ ಸಿಂಗ್ ರ ಪ್ರತಿಕೃತಿ ದಹಿಸಿದ್ದನ್ನು ನಾನು ಕಂಡಿಲ್ಲ. ಕರ್ನಾಟಕದ ಭಾಗವಾದ ಹೈದರಾಬಾದ್ ಕರ್ನಾಟಕಕ್ಕೆ 371(J) ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ಬಯಸಿ ಈ ಭಾಗದ ಹೋರಾಟಗಾರರು ಮೊರೆಹೋಗಿದ್ದು ಸೋನಿಯಾ ಗಾಂಧಿಯವರ ಬಳಿಗೆ. ಈ ಎಲ್ಲ ಘಟನೆಗಳಿಂದ ಗೋಚರವಾಗುವ ಸಂಗತಿಯೆಂದರೆ ಡಾ. ಸಿಂಗ್ ಸೋನಿಯಾ ಗಾಂಧಿಯ “ರಬ್ಬರ್ ಸ್ಟಂಪ್” ಆಗಿದ್ದರು ಎಂಬುದು.
     ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಕಳೆದ 2013 ಸೆಪ್ಟೆಂಬರ್ ನಲ್ಲಿ ಸುಗ್ರೀವಾಗ್ಞೆ ಹೊರಡಿಸಿತ್ತು. ಈ ನಡೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ “Non-sense’ ಎಂದು ಜರೆದು ಪತ್ರಿಕಾಗೊಷ್ಟಿಯಲ್ಲಿ ಸರ್ಕಾರದ ಆದೇಶಪತ್ರವನ್ನು ಹರಿದುಹಾಕಿದ್ದರು. ಇದು ಪ್ರಧಾನಿ ಹುದ್ದೆಯನ್ನು ಗೌರವಿಸದೇ ಸೊಕ್ಕಿನಿಂದ ವರ್ತಿಸಿದಂತಿತ್ತು. ಆದರೆ ಈ ವಿಷಯವಾಗಿ ಪ್ರಧಾನಿಗಳು ಬಾಯಿಬಿಡಲಿಲ್ಲ. ಈಗ ಯು.ಪಿ.ಎ ಮತ್ತೇ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿಯ ಕೆಳಗೆ ಕೆಲಸ ಮಾಡಲು ಸಿದ್ದ ಎಂಬ ಲೆಜ್ಜೆಗೇಡಿ ಹೇಳಿಕೆಯನ್ನು ಡಾ. ಸಿಂಗ್ ನೀಡಿದ್ದಾರೆ.
   ಡಾ. ಮನಮೋಹನ್ ಸಿಂಗ್ ಉತ್ತಮ ವ್ಯಕ್ತಿ, ಮೃದು ಸ್ವಭಾವದವರು ನಿಜ. ಆದರೆ 10 ವರ್ಷಗಳ ಆಡಳಿತ ಯಂತ್ರದಲ್ಲಿ ಹಿಡಿತವಿಲ್ಲದೆ ಒಬ್ಬ ಹೆಂಗಸಿನ ಗುಲಾಮಿಯಂತೆ ವರ್ತಿಸಿ, ಶ್ರೇಷ್ಠ ಸಾಂವಿಧಾನಿಕ ಹುದ್ದೆಯಾದ “ಪ್ರಧಾನಿ ಮಂತ್ರಿ” ಹುದ್ದೆಗೆ ದ್ರೋಹ ಬಗೆದಿದ್ದಾರೆ. ತಪ್ಪು ಮಾಡುವುದು ಒಂದೇ, ತಪ್ಪನ್ನು ನೋಡಿಯೂ ತಡೆಯದೇ ಇರುವುದು ಸಹ ತಪ್ಪೇ. ಸಂಜಯ್ ಬರು ಹೇಳುವ ಪ್ರಕಾರ, ಬಹುಕೋಟಿ ಹಗರಣಗಳಾದ  2ಜಿ ಸ್ಪೆಕ್ಟ್ರಮ್ ಮತ್ತು ಕಲ್ಲಿದ್ದಲು ಹಗರಣದಲ್ಲಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ, ಆ ಹಗರಣಗಳನ್ನು ತಡೆಯುವ ಎಲ್ಲಾ ಅವಕಾಶಗಳು ಪ್ರಧಾನಿ ಸಿಂಗ್ ಗೆ ಇತ್ತಂತೆ. ಆದರೆ ಇಂತಹ ಸಾಹಸಗಳಿಗೆ ಕೈಹಾಕುವ ಪ್ರಯತ್ನವನ್ನು ಪ್ರಧಾನಿ ಮಾಡಲಿಲ್ಲ. ಅವರು ಖಂಡಿತ ಕ್ಷಮೆಗೆ ಅರ್ಹರಲ್ಲ. 
   ಡಾ. ಮನಮೋಹನ್ ಸಿಂಗ್ ಭಾರತ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎನ್ನಬಹುದು. ಸೋನಿಯಾ ಅಣತಿಯಂತೆ ಕಾರ್ಯನಿರ್ವಹಿಸಿದ  ಡಾ. ಸಿಂಗ್ ರಂತವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿದ್ದು, ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅಪಮಾನವೇ ಸರಿ. ತ್ಯಾಗ, ಬಲಿದಾನ, ಶೌರ್ಯಗಳಿಗೆ ಪ್ರಸಿದ್ದಿಯಾದ ವಿಶ್ವ ಶ್ರೇಷ್ಠ ಭಾರತಕ್ಕೆ ಡಾ, ಸಿಂಗ್ ರಂತ ಗುಲಾಮಿ 10 ವರ್ಷ ದೇಶವನ್ನು ಆಳಿದ್ದು ಈ ದೇಶದ ಬಹುದೊಡ್ಡ ದುರಂತ. ಇತಿಹಾಸಗಳಿಂದ ಪಾಠ ಕಲಿಯಬೇಕಂತೆ ಆದೇ ರೀತಿ ಈ ಇತಿಹಾಸದಿಂದ ಭಾರತೀಯರು ಪಾಠ ಕಲಿತು ಯೋಗ್ಯರನ್ನು ಈ ಚುನಾವಣೆಯಲ್ಲಿ ಆರಿಸಿದರೆ ದೇಶಕ್ಕೆ ಒಳಿತು.

ರವಿತೇಜ ಶಾಸ್ತ್ರೀ.