Wednesday, December 25, 2013

ಅಜಾತ ಶತ್ರುವಿನ ಜೀವನಗಾಥೆ



ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅವರು ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ.ಸುಮಾರು ನಾಲ್ಕು  ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದವಾದವರು ಅಟಲ್ ಬಿಹಾರಿ ವಾಜಪೇಯಿ. ಇಂತಹ ಮಹಾನ್ ನಾಯಕನ ಬಗ್ಗೆ ತಿಳಿಸುವುದೇ ಈ ಲೇಖನದ ಆಶಯ.

ಬಾಲ್ಯ ಮತ್ತು ಶಿಕ್ಷಣ:

ಭಾರತ ದೇಶದ ಮಹಾನ್ ನಾಯಕ ಅಟಲ್ ಜಿ ಹುಟ್ಟಿದ್ದು ಮಧ್ಯ ಪ್ರದೇಶದ ಗ್ವಾಲಿಯರನ ಶಿಂಧೆ ದಂಡು ಪ್ರದೇಶದಲ್ಲಿ. ಅವರು ಜನಿಸಿದ್ದು 1924 ಡಿಸೆಂಬರ್ 25 ರಂದು. ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಕೃಷ್ಣ ಬಿಹಾರಿ ವಾಜಪೇಯಿ ಅಧ್ಯಾಪಕರಾಗಿದ್ದರು. ಹಾಗಾಗಿ ಬಹಳ ಚಿಂತೆ ಮಾಡಿ ಮಗುವಿಗೆ ‘ ಅಟಲ್ ಬಿಹಾರಿ ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ ಗಟ್ಟಿ( ಕಾರ್ಯಸಾದಕ) ಎಂದರ್ಥ. ಬಿಹಾರಿ ಎಂದರೆ ವಿಚಾರ ಮಾಡುವವ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿ ಅಟಲ್ ಬಿಹಾರಿ.

ಅಟಲ್ ಜಿಗೆ ಓದಿನಲ್ಲಿ ಬಹಳ ಶ್ರದ್ದೆ. ಸ್ವತಃ ತಂದೆ ಅಧ್ಯಾಪಕರಾಗಿದ್ದರಿಂದ ಶಾಲೆಯಲ್ಲಿ ತಿಳಿಯದ ಪಾಠವನ್ನು ತಂದೆಯ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಯ ಪಾಠಗಳಲ್ಲಿ ನಿರತರಾಗಿರುತ್ತಿದ್ದರು. ಗ್ವಾಲಿಯರನ ಗೋರಖಿ ವಿದ್ಯಾಲಯದಲ್ಲಿ  ಅಟಲ್ ರವರು ಮಿಡಲ್ ಪರೀಕ್ಷೆ ಪಾಸು ಮಾಡಿದರು.ತಮ್ಮ ಶಾಲಾ ದಿನಗಳಲ್ಲೇ ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ಶಾಲೆಯಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಿದ್ದರು. ಯಾವುದೇ ಪರೀಕ್ಷೆಯೇ ಆಗಲಿ ಅಟಲ್ ಜಿ ಕ್ಲಾಸಿಗೆ ಪ್ರಥಮ ರ್ಯಾಂಕ್ ಬರುತ್ತಿದ್ದರು. ಅಟಲ್ ಜಿ ಗೆ ಶಾಲಾ ಪುಸ್ತಕಗಳಿಗಿಂತ ಆಧ್ಯಾತ್ಮಿಕ. ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕಥೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚು ಮೆಚ್ಚು. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಕವಿತೆಗಳನ್ನು ರಚಿಸುತ್ತಿದ್ದರು.
ಆ ಕವಿತೆಗಳನ್ನು ಅಟಲ್ ಕೇಳುತ್ತಿದ್ದರು. ತಂದೆಯಿಂದ ಅಟಲ್ ಜಿ ಮಾತಿನಲ್ಲಿ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ಕಲಿತರು. ಕೃಷ್ಣ ಬಿಹಾರಿ ಅವರ ಮನೆಗೆ ಆರ್ಯ ಸಮಾಜದ ಮುಖಂಡರು, ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಬರುತ್ತಿದ್ದರು. ಈ ವಾತಾವರಣ ಅಟಲ್ ರಲ್ಲಿ ಉಜ್ವಲ ದೇಶಭಕ್ತಿ ಬೆಳೆಯಲು ಕಾರಣವಾಯಿತು ಮತ್ತು ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.
ಗ್ವಾಲಿಯರ್ ದ ವಿಕ್ಟೋರಿಯಾ ಕಾಲೇಜಿನಲ್ಲಿ ಬಿ.ಎ ಪದವಿಗೆ ಸೇರಿ ಹಿಂದಿ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ ಸಾಹಿತ್ಯ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳನ್ನು ಆರಿಸಿಕೊಂಡು ಸತತ ಅಭ್ಯಾಸದಲ್ಲಿ ತೊಡಗಿ ಬಿ.ಎ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಅಟಲ್ ರವರು ಮುಂದೆ ಕಾನಾಪುರದ ಡಿ.ಎ.ಬಿ. ಕಾಲೇಜಿನಿಂದ  ರಾಜ್ಯಶಾಸ್ತ್ರದಲ್ಲಿ ಎಂ.ಎ ಮುಗಿಸಿದರು. ಎಂ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ತಮ್ಮ ಮಗ ನ್ಯಾಯಶಾಸ್ತ್ರದಲ್ಲಿ(L.L.B) ಪದವಿ ಪಡೆದುಕೊಂಡು ವಕೀಲಿ ವೃತ್ತಿ ಮಾಡಬೇಕೆಂಬು ಅಟಲ್ ಜಿ ಅವರ ತಂದೆಯ ಆಸೆಯಾಗಿತ್ತು. ತಂದೆಯ ಒತ್ತಾಯಕ್ಕೆ ಮಣಿದು ಅಟಲ್ ಜಿ ಲಾ ಕಾಲೇಜಿಗೆ ಸೇರಿದರು. ಮಗನನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷ್ಣ ಬಿಹಾರಿ ವಾಜಪೇಯಿಯವರು ಸಹ ಲಾ ಕಾಲೇಜಿಗೆ ಸೇರಿದರು, ಆ ವೇಳೆಗೆ ಅವರು ವೃತ್ತಿಯಿಂದ ನಿವೃತ್ತರಾಗಿದ್ದರು. ಆದರೆ ಅಟಲ್ ಅವರಿಗೆ ಕಾನೂನು ಶಿಕ್ಷಣ ಹಿಡಿಸಲಿಲ್ಲ. ಮಧ್ಯ ದಲ್ಲೇ ಕಾಲೇಜನ್ನು ತ್ಯಜಿಸಿದರು. ತಂದೆ ಕೃಷ್ಣ ಬಿಹಾರಿಯವರು ಹಿಂದೆ ಬೀಳದೆ ಓದು ಮುಗಿಸಿ ಕಾನೂನು ಪದವೀಧರರಾದರು.

ಪತ್ರಿಕೋದ್ಯಮಿಯಾಗಿ ಅಟಲ್ ಜಿ:

ಕಾನೂನು ಪದವಿ ತ್ಯಜಿಸಿದ ಅಟಲ್ ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ  ಸಮಯ ನೀಡಿದರು.ಬೆಳಿಗ್ಗೆ  ಶಾಖೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನಂತರ ಬಿಡುವಿನ ವೇಳೆಯಲ್ಲಿ ಕವನ ರಚಿಸುತ್ತಿದ್ದರು. ಈ ರೀತಿ ಒಂದು ವರ್ಷ ಸಂಘದ ಸೇವೆ ಸಲ್ಲಿಸಿದರು.ಆ ಬಳಿಕ ಅವರ ಗಮನ ಪತ್ರಿಕೊದ್ಯಮದತ್ತ ಹರಿಯಿತು. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ, ವೀರ ಅರ್ಜುನ್ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅಟಲ್ ಜಿ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು.

ರಾಜಕೀಯ ಪ್ರವೇಶ:

ಅಟಲ್ ರವರಿಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯವಾಯಿತು. ಉತ್ಸಾಹಿ ತರುಣನನ್ನು ಬೇಟಿಯಾದ ಮುಖರ್ಜಿಯವರಿಗೆ ಈತ ದೇಶದ ರಾಜಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲನೆಂಬ ನಂಬಿಕೆ ಹುಟ್ಟಿತು. 1951 ರಲ್ಲಿ ಭಾರತೀಯ ಜನ ಸಂಘ ಉದಯವಾಯಿತು. ಅಟಲ್ ಜಿ ಇದರ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಜನ ಸಂಘ ಪಂಡಿತ್ ದೀನದಯಾಳ ಉಪಾಧ್ಯಾಯರ ಮಾರ್ಗ ದರ್ಶನದಲ್ಲಿ ಕಾಂಗ್ರೆಸ್ ಗೆ ಪ್ರಬಲ ವಿರೋಧ ಪಕ್ಷವಾಗಿ ಬೆಳೆಯಿತು. 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಅಟಲ್ ಜಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು. ಮುಂದೆ 1953ರಲ್ಲಿ ಲಕ್ನೋ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ಲೋಕಸಭಾ ಸದಸ್ಯೆ ವಿಜಯ ಲಕ್ಷ್ಮಿ ಪಂಡಿತ್ ರನ್ನು ಭಾರತದ ರಾಯಭಾರಿಯಾಗಿ ಸೋವಿಯತ್ ರಶಿಯಾಗೆ ಕಳುಹಿಸಲಾಯಿತು. ಆಗ ನಡೆದ ಉಪ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಸಿದಾಗ ಅವರಿಗೆ ಕೇವಲ 27 ವರ್ಷ. ಅಟಲ್ ಜಿ ವ್ಯಾಪಕ ಪ್ರಚಾರ ಮಾಡಿ 150ಕ್ಕೂ ಹೆಚ್ಚು ಕಡೆ ಭಾಷಣ ಮಾಡಿದರು ಆದರೆ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ದ ಸೋತರು. ಮತ್ತೆ 1957ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದರು. ಮಥುರಾ ಮತ್ತು ಲಕ್ನೋ ಕ್ಷೇತ್ರಗಳಲ್ಲಿ ಸೋತ ಅಟಲ್ ರವರು ಬಲರಾಮ್ ಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. 1962 ರಲ್ಲಿ ಅಟಲ್ ಜಿ ಸೋತರು ಆದರೆ ಅವರು ಕುಗ್ಗದೆ 1967 ಮತ್ತು 1971 ರಲ್ಲಿ ಪ್ರಚಂಡ ವಿಜಯ ಸಾಧಿಸಿದರು. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಆಗ ಅಟಲ್ ಜಿ ಇಂದಿರಾ ಗಾಂಧಿ ವಿರುದ್ದ ಹೋರಾಡಿ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು. 1977 ರ ಚುನಾವಣೆ ಸಂಧರ್ಭದಲ್ಲಿ ಅಟಲ್ ಜಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು. ಜನ ಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಿದರು. ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಿದರು.

ವಿದೇಶಾಂಗ ಮಂತ್ರಿಯಾಗಿ:


1977 ರಲ್ಲಿ ಇಂದಿರಾ ಸರ್ಕಾರ ಮಣ್ಣು ಮುಕ್ಕಿತು. ಮೊರಾರ್ಜಿ ದೇಸಾಯಿ ನೇತೃತ್ವದ   ಸರ್ಕಾರ ಸ್ಥಾಪನೆಯಾಯಿತು. ಅದರಲ್ಲಿ ಅಟಲ್ ಜಿ ವಿದೇಶಾಂಗ ಸಚಿವರಾದರು.
ಆ ವೇಳೆಯಲ್ಲಿ ಪಾಕಿಸ್ತಾನ. ಚೀನಾ, ರಷಿಯಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದ ಕೀರ್ತಿ ಅಟಲ್ ರಿಗೆ ಸಲ್ಲುತ್ತದೆ. ವಿದೇಶಾಂಗ ಮಂತ್ರಿಯಾಗಿ ವಾಶಿಂಗ್ಟನ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದರು.

ಬಿ.ಜೆ.ಪಿ ಯ ಉದಯ:

ಮೊರಾರ್ಜಿ ದೇಸಾಯಿಯವರ ಸರ್ಕಾರ ಕೇವಲ ಎರಡು ವರ್ಷ ಆಡಳಿತ ನಡೆಸಿತು. ನಂತರ ಸರ್ಕಾರ ಬಿದ್ದುಹೋಯಿತು. 1980ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪಕ್ಷ ತೊರೆದ ಅಟಲ್ ಜಿ ಭಾರತೀಯ ಜನತಾ ಪಕ್ಷ(ಬಿ.ಜೆ. ಪಿ) ಸ್ಥಾಪಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಅಟಲ್ ಜಿ ಗೆದ್ದರು. ಪಕ್ಷವನ್ನು ಬೆಳೆಸಲು ಶ್ರಮ ಪಟ್ಟರು. ಬಿಜೆಪಿಯನ್ನು ಪ್ರಬಲ ರಾಜಕೀಯ ಪಕ್ಷವಾಗಿ ರೂಪಿಸಿದರು. 1984 ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು. ಆದರೆ ಮುಂದೆ ಲಕ್ನೋ ಕ್ಷೇತ್ರದಲ್ಲಿ ಸ್ಪರ್ಧಿಸಿ 1991, 1996, 1998ರಲ್ಲಿ  ಸತತವಾಗಿ ಅದೇ ಕ್ಷೇತ್ರದಿಂದ ಆಯ್ಕೆಯಾದರು. 1996 ರಲ್ಲಿ ಅಟಲ್ ಜಿ ಪ್ರಧಾನಿಯಾದರು ಆದರೆ 13 ದಿನದಲ್ಲೇ  ಬಹುಮತವಿಲ್ಲದೆ ಸರ್ಕಾರ ಬಿದ್ದುಹೋಯಿತು. ಮತ್ತೆ 1998 ರಲ್ಲಿ ಎರಡೆನೇ ಬಾರಿಗೆ ಪ್ರಧಾನಿಯಾದರು. ಆದರೆ ಆ ಸರ್ಕಾರ 13 ತಿಂಗಳಿಗೆ ಅಂತ್ಯವಾಯಿತು. ಈ ಸಂದರ್ಭದಲ್ಲಿ ಅಟಲ್ ಜಿ ಕುದುರೆ ವ್ಯಾಪಾರ ಮಾಡುವ ಹೇಯ ಕೆಲಸ ಮಾಡಲಿಲ್ಲ. ಅವರು ತಮ್ಮ ತತ್ವ ಆದರ್ಶಗಳನ್ನು ಮರೆಯಲಿಲ್ಲ ಅದನ್ನು ತಪ್ಪದೆ ಪಾಲಿಸಿದರು.

ಪೂರ್ಣ ಪ್ರಮಾಣದ ಪ್ರಧಾನಿಯಾಗಿ :

1999ರಲ್ಲಿ ಮತ್ತೆ ಮೂರನೇ ಬಾರಿಗೆ ಅಟಲ್ ಜಿ ಪ್ರಧಾನಿಯಾದರು ಈ ಬಾರಿ 5 ವರ್ಷಗಳ ಕಾಲ ಸರ್ಕಾರ ನಡೆಸಿದರು. ಚಿಕ್ಕ ಚಿಕ್ಕ ಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ನಡೆಸಿದ ಸಾಧನೆ ಅಮೋಘ. 1999-2004 ಈ ಐದು ವರ್ಷ ಭಾರತದ  ಸುವರ್ಣ ಯುಗವೆಂದು ಕರೆದರೆ ಅತಿಶಯೋಕ್ತಿಯಲ್ಲ ವೆನಿಸುತ್ತದೆ.
ಅಟಲ್ ಜಿ ಅಧಿಕಾರವಾಧಿಯಲ್ಲಿ ಭಾರತ ಅಭಿರುದ್ದಿ ಪಥದತ್ತ ಸಾಗಿತು. ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆ, ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಲಾಹೋರ್ ಬಸ್ ಸಂಚಾರ ವ್ಯವಸ್ಥೆ, ದೇಶದ ಮಹಾ ನಗರಗಳನ್ನು ಜೋಡಿಸುವ ಸಲುವಾಗಿ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆ. ಪ್ರತಿ ಹಳ್ಳಿಗೂ ರಸ್ತೆ ನಿರ್ಮಿಸಲು ತಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ,ಈ ಎಲ್ಲ ಯೋಜನೆಗಳ ರೂವಾರಿ ಅಟಲ್ ಜಿ ಯವರೇ. ಅಣ್ವಸ್ತ್ರ ಪರೀಕ್ಷೆ ನಡೆಸಿ ದೇಶದಲ್ಲಿ ವೈಜ್ಞಾನಿಕ ಕ್ರಾಂತಿಯನ್ನು ಹುಟ್ಟು ಹಾಕಿ ವಿಶ್ವದ ಗಮನ ಸೆಳೆದರು.ಪಾಕಿಸ್ತಾನ ವಿರುದ್ದ ನಡೆದ ಕಾರ್ಗಿಲ್ ಯುದ್ದದ ವಿಜಯದ ಶ್ರೇಯ ಅಟಲ್ ರಿಗೆ ಸಲ್ಲ ಬೇಕು. ಪ್ರಧಾನಿಯಾಗಿ ಅಟಲ್ ಜಿ ಭಾರತದ ಅರ್ಥಿಕ, ಸಾಮಾಜಿಕ, ಅಂತರಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ 2004 ರಲ್ಲಿ ಅಟಲ್ ಜಿ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಟಲ್ ಜಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಿದ್ದರೆ ದೇಶ ಮತ್ತಷ್ಟು ಅಭಿರುದ್ದಿಯಾಗುತ್ತಿದ್ದರಲ್ಲಿ ಸಂಶಯವಿಲ್ಲ. ಈ ದೇಶದ ದೌರ್ಭಾಗ್ಯವೋ ಅಥವಾ ಅಟಲ್ ಜಿ ಯವರ ದುರದೃಷ್ಟವೋ ಗೊತ್ತಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ. ಇದೆ ಸಂದರ್ಭದಲ್ಲಿ ಅಟಲ್ ಜಿ ಯವರ ಅರೋಗ್ಯ ಕೈ ಕೊಟ್ಟಿತು. ಅವರು ರಾಜಕೀಯದಿಂದ ಹಿಂದೆ ಸರಿದರು. ಮಹಾನ್ ನಾಯಕನ ಅನುಪಸ್ಥಿತಿ ದೇಶಕ್ಕೆ ಕಾಡಿತು.

ಪ್ರಖರ ವಾಗ್ಮಿ, ಉತ್ತಮ ಸಂಸದೀಯ ಪಟು:

ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರು. ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಒಂದು ಸಮಸ್ಯೆಯ ಕುರಿತು ಚೆನ್ನಾಗಿ ಆಲೋಚಿಸಿ ತರ್ಕಬದ್ದವಾಗಿ  ವ್ಯಾಖ್ಯಾನ ಮಾಡುತ್ತಿದ್ದರು. ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು.
ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದರು. ಕಳೆದ ನಲವತ್ತು ವರ್ಷದ ಅವಧಿಯಲ್ಲಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣ ಸುಮಾರು 500 ಪುಟಗಳಿಗಿಂತಲೂ ಅಧಿಕ. ಉದ್ರಿಕ್ತ ಅಥವಾ ಉದ್ರೇಕವಾದ ಭಾವನೆ ಅವರ ಅವರ ಮಾತುಗಳಲ್ಲಿ ಕಂಡುಬರುವುದಿಲ್ಲ. ಅವರು ಆಡಿದ ಮಾತು ಮಾತಲ್ಲ ಅದು ಮುತ್ತು. ಆ ಸರಳ ಮಾತುಗಾರಿಕೆ ಶುದ್ದ ಸ್ವಚ್ಛ ಮಧುರ ಹಾಗೂ ಕಾವ್ಯಮಯ. ನೆಹರು ಅಟಲ್ ಜಿ ಯವರ ವಾಕ್ ಚಾತುರ್ಯ ಕಂಡು ಬೆರಗಾಗಿದ್ದರು. ಒಮ್ಮೆ ನೆಹರು ಸರ್ಕಾರದ ವಿದೇಶಾಂಗ ನೀತಿಯನ್ನು ಖಂಡಿಸುತ್ತಾ ಅಟಲ್ ಜಿ  ಹಿಂದಿಯಲ್ಲಿ ಮಾತನಾಡಿದರಂತೆ. ಆಗ ಅಟಲ್ ಜಿ ಯವರ ಮಾತನ್ನು ಆಲಿಸಿದ ನೆಹರು ಹಿಂದಿಯಲ್ಲೇ ಸಮಾಧಾನ ನೀಡಿದರಂತೆ. ನೆಹರು ಅಟಲ್ ಜಿ ಯನ್ನು ಉದಯೋನ್ಮುಖ ರಾಜಕಾರಣಿ ಎಂದು ವಿದೇಶೀ ಗಣ್ಯರಿಗೆ ಪರಿಚಯ ಮಾಡಿಕೊಡುತ್ತಿದ್ದರಂತೆ. 1994 ರಲ್ಲಿ ಅಟಲ್ ಜಿಯವರಿಗೆ ಸರ್ವ ಶ್ರೇಷ್ಟ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರಳ ಮತ್ತು  ಸ್ನೇಹ ಜೀವಿ:


ಅಟಲ್ ಜಿ ಸರಳ ಜೀವಿಯಾಗಿದ್ದರು. ಅವರ ನೆಚ್ಚಿನ ಉಡುಪು ಕುರ್ತಾ-ಪೈಜಾಮ್ ಮತ್ತು ಕುರ್ತಾ ಧೋತಿ. ಅಪರೂಪಕೊಮ್ಮೆ ಸೂಟ್ ಧರಿಸುತ್ತಿದ್ದರು. ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿದೇಶೀ ಉಡುಪು ಧರಿಸುತ್ತಿದ್ದರು.
ಅಟಲ್ ರವರು ಬಾಲ್ಯದಿಂದಲೇ ಸ್ನೇಹ ಜೀವಿಯಾಗಿದ್ದರು.ಅವರು ಯಾರನ್ನು ದ್ವೆಷಿಸಿದವರಲ್ಲ, ಯಾರೊಂದಿಗೂ ಜಗಳವಾಡಿದವರಲ್ಲ. ಎಲ್.ಕೆ ಅಡ್ವಾಣಿ, ಜಸ್ವಂತ್ ಸಿಂಗ್, ಎನ್.ಎಂ ಘಟಾಟೆ, ಬೈರೋನ್ ಸಿಂಗ್ ಷೇಕವಾತ್, ಮುಕುಂದ ಮೋದಿ ಮುಂತಾದವರು ಅಟಲ್ ರ ಆಪ್ತಮಿತ್ರರು.
ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಟಲ್ ರವರರಿಗೆ ಸ್ನೇಹಿತರಿದ್ದಾರೆ. ವಾಜಪೇಯಿ ಅವರ ಸರಳ ವ್ಯಕ್ತಿತ್ವ ಆದರ್ಶ ವಿಚಾರಗಳಿಂದ ದೇಶ ವಿದೇಶಗಳಲ್ಲಿ ಸ್ನೇಹಜೀವಿ ಎಂದೇ ಪ್ರಸಿದ್ದರಾಗಿದ್ದಾರೆ. ಶತ್ರು ರಾಷ್ಟ್ರ ಪಾಕಿಸ್ತಾನಿಯರು ಕೂಡ ವಾಜಪೇಯಿ ಅವರ ಸ್ನೇಹಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿಯೇ ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಚಾರ ಆರಂಭಿಸಿದ್ದು. ಇದು ಅವರ ಸ್ನೇಹಕ್ಕೆ ಹಿಡಿದ ಕನ್ನಡಿಯಾಗಿದೆ.1999 ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೋತಾಗ ಪಾಕ್ ಪ್ರಧಾನಿ ನವಾಜ್ ಷರೀಫ್ ನನ್ನು ಸೇನಾಧಿಕಾರಿ ಪ್ರವೇಜ್ ಮುಷರಫ್  ಸೆರೆಯಲ್ಲಿ ಇಟ್ಟಾಗ, ಷರೀಫ್ ಮಗ ಅಟಲ್ ಜಿ ಯವರಲ್ಲಿ ತನ್ನ ತಂದೆಯನ್ನು ಉಳಿಸಿಕೊಡಿ ಎಂದು ವಿನಂತಿಸಿದಾಗ, ಮಾನವೀಯತೆ ಆಧಾರದ ಮೇಲೆ ಆತನ ಮನವಿ ಅಟಲ್ ಬಿಹಾರಿ ವಾಜಪೇಯಿಯವರ ಹೃದಯಕ್ಕೆ ನಾಟಿತು. ಇದು ಎಂತ ವಿಪರ್ಯಾಸ! ಯಾವ ವೈರಿ ದೇಶವು ತಮ್ಮ ವಿರುದ್ದ ಹೊರಡುತ್ತಿತ್ತೋ ಮತ್ತು ಯಾರು ಅದರ ಮುಂದಾಳು ಆಗಿದ್ದರೋ ಅವರ ಮಗನೇ ವಿನಂತಿಸಿಕೊಂಡಾಗ ಹಿಂದಿನದನ್ನು ಲೆಕ್ಕಿಸದೇ ಅವನ ತಂದೆಯನ್ನು ರಕ್ಷಿಸಲು ಅವರ ಮುಂದೆ ಬಂದರು
.ಇದರಿಂದಲೇ ಅವರನನ್ನು ಭಾರತದ ಅಜಾತ ಶತ್ರು ಎಂದು ಕರೆಯುವುದು. ಅಟಲ್ ಜಿ ಸ್ನೇಹ ಜೀವಿಯಾಗಿದ್ದರಿಂದಲೇ ಅವರು ಬಹು ಪಕ್ಷಗಳನ್ನು ಕೂಡಿಸಿಕೊಂಡು ದಕ್ಷ ಆಡಳಿತ ನೀಡಲು ಸಾಧ್ಯವಾಗಿದ್ದು.

ಸ್ವಂತ ಮನೆ ಕಟ್ಟಿಕೊಳ್ಳದ ರಾಜಕಾರಣಿ :

ಅಟಲ್ ರವರು ಲಾಲ್ ಬಹದ್ದೂರ್ ಶಾಸ್ತ್ರೀಯವರಂತೆ ಸ್ವಂತ ಮನೆ ಹೊಂದಿರಲಿಲ್ಲ.  ಗ್ವಾಲಿಯರ್ನಲ್ಲಿ ಇದ್ದ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಈಗ ಅದು ಸಾರ್ವಜನಿಕ ಗ್ರಂಥಾಲಯ. ಇಂದಿನವರೆಗೂ ಅಟಲ್ ರವರಿಗೆ ಸ್ವಂತ ಮನೆಯಿಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕಿಯದಲ್ಲಿದ್ದು ಇನ್ನು ಸ್ವಂತ ಮನೆ ಹೊಂದದಿರುವುದು ಅಚ್ಚರಿಯ ಸಂಗತಿ. ಅಟಲ್ ರವರು ಅನೇಕ ವರ್ಷಗಳ ಕಾಲ ಪಕ್ಷದ ಕಛೇರಿಯಲ್ಲೇ ಮಲಗುತ್ತಿದ್ದರು. ಪಕ್ಷದ ಕಾರ್ಯಾಲಯವೇ ಅವರ ಮನೆಯಾಗಿತ್ತು.

ಅಟಲ್ ಜಿ ಬ್ರಹ್ಮಚಾರಿಯೇ, ಸಾರಾಯಿ ಪ್ರಿಯರೇ?      

ಅಟಲ್ ಜಿ ಬ್ರಹ್ಮಚಾರಿಯೇ?, ಅವರು ಅವಿವಾಹಿತರೇ? ಅವರು ಸಾರಾಯಿ ಕುಡಿಯುತ್ತಾರೆಯೇ? ಅನೇಕರ ಮನಸ್ಸಿನಲ್ಲಿ ಈ ಪ್ರಶ್ನೆಗಳು ಸುಳಿದಾಡಿದ್ದು ಉಂಟು. ಕೆಲವರು ಇದನ್ನೇ ದೊಡ್ಡ ವಿಷಯ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿಯವರು ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದವರು. ಅವರು ಯಾವ ಹೆಣ್ಣನ್ನೂ ಕೆಟ್ಟ ಕಣ್ಣಿನಿಂದ ನೋಡದೆ ಅವರೆಲ್ಲರೂ ನನ್ನ ಸಹೋದರಿಯರು ಎಂದು ಹೇಳುತ್ತಿದ್ದರು. ಅವರು ಜೀವನ ಪೂರ್ತಿ ಅವಿವಾಹಿತರಾಗಿ ಉಳಿದರು.
ಅಟಲ್ ರವರು ವಿದೇಶಾಂಗ ಮಂತ್ರಿಯಾಗಿದ್ದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ರಶಿಯಾಕ್ಕೆ ಹೋದಾಗ ಅಟಲ್ ರವರು ಭಾರತೀಯ ವಿದ್ಯಾರ್ಥಿಗಳಿಗೆ ಕುಡಿಯಲು ಪ್ರಚೋದಿಸಿದರು ಎಂದು ಅವರು ರಾಜಕೀಯ ವಿರೋಧಿಗಳು ಗಲಾಟೆ ಮಾಡಿದರು. ಆದರೆ ಅಂದು ಅಲ್ಲಿ ಅಟಲ್ ರವರು ವಿದ್ಯಾರ್ಥಿಗಳಿಗೆ ಕುಡಿಯಿರಿ ಕುಡಿಯಿರಿ ಮದ್ಯವಲ್ಲ, ಸ್ವಮೂತ್ರ ಎಂದು ಹೇಳಿದ್ದರು. ಅದನ್ನೇ ತಪ್ಪಾಗಿ ಅರ್ಥೈಸಲಾಗಿತ್ತು.

ಅಟಲ್ ಜಿ ಭಾರತ ರತ್ನ ಪ್ರಶಸ್ತಿಗೆ ಅರ್ಹರೇ?           

ಬಿ.ಜೆ.ಪಿ ಪಕ್ಷ ತಾವು 2014ರ ಚುನಾವಣೆಯಲ್ಲಿ ಗೆದ್ದರೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿಕೆ ಕೊಟ್ಟಿತು. ಆಗ ಒಬ್ಬ ಕಾಂಗ್ರೆಸ್ ನಾಯಕರು  ಈ ರೀತಿಹೇಳಿಕೆಕೊಟ್ಟರು. ಚಲೇಜಾವ್  ಚಳುವಳಿ ಸಮಯದಲ್ಲಿ ಬಂಧನವಾದಾಗ ಅಟಲ್ ಬಿಹಾರಿ ವಾಜಪೇಯಿ ‘ ನಾನು ನಿರಪರಾಧಿ ನನನ್ನು ಬಿಟ್ಟು ಬಿಡಿ ’ ಎಂದು ಪೋಲೀಸರ ಎದುರು ಬೇಡಿಕೊಂಡಿದ್ದರು ಆಗಾಗಿ ಅವರು  ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದರು. ಆದರೆ ಅಂದು ಅಟಲ್ ಜಿ ಅಪ್ಪನ ಕಣ್ಣು ತಪ್ಪಿಸಿ ಚಳುವಳಿಯಲ್ಲಿ ಭಾಗವಹಿಸಿ ಬಾಲ ಅಪರಾಧಿಯಾಗಿ 24 ದಿನ ಸೆರೆವಾಸ ಅನುಭವಿಸಿದ್ದರು. ಈ ಕುರಿತು ಅಟಲ್ ಜಿ ಒಮ್ಮೆ ತಮ್ಮ ಹಾಸ್ಯ ಮಾತಿನ ಶೈಲಿಯಿಂದ ಹೇಳಿದ್ದರು. ತನ್ನ ಇಡೀ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಅಟಲ್ ಜಿ ಖಂಡಿತ  ಭಾರತ ರತ್ನ ಪ್ರಶಸ್ತಿಗೆ ಅರ್ಹರು.
ದೇಶಕ್ಕೆ ಅವರ ಕೊಡುಗೆ ಅಪಾರ. ಅಟಲ್ ಜಿ ಎಂದಿಗೂ ಪ್ರಶಸ್ತಿ ಬಯಸಿದವರಲ್ಲ. ಅವರು ಎಂದಿಗೂ ಪ್ರಶಸ್ತಿ ಹಿಂದೆ ಬೀಳಲಿಲ್ಲ.  ನೆಹರು, ಇಂದಿರಾಗಾಂಧಿ ತಮಗೇ ತಾವೇ ತಮ್ಮ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿಕೊಂಡು ಪ್ರಶಸ್ತಿ ಪಡೆದುಕೊಂಡರು.ಆದರೆ ಅಟಲ್ ಜಿ ಹಾಗೇ ಮಾಡಲಿಲ್ಲ. ಇವರ ಮುಂದೆ ಅಟಲ್ ಜಿ ವಿಶಿಷ್ಟವಾಗಿ ಕಾಣುತ್ತಾರೆ. ಸರ್ಕಾರ ಅವರಿಗೆ ಭಾರತ ರತ್ನ ಕೊಡಲಿ ಅಥವಾ ಬಿಡಲಿ ಆದರೆ ಅಟಲ್ ಜಿ ಎಂದಿಗೂ 128 ಕೋಟಿ ಜನರ ಭಾರತ ರತ್ನ ಎಂಬ ಮಾತು ನೂರಕ್ಕೆ ನೂರು ಸತ್ಯ.

ಉಪಸಂಹಾರ:

ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25 ರಂದು ಜನಿಸಿದರು. ಡಿಸೆಂಬರ್ 25  ಏಸು ಜನ್ಮ ತಾಳಿದ ದಿನವು ಹೌದು. ಆದುದರಿಂದ ಭಾರತೀಯರ ಉದ್ದಾರಕ್ಕಾಗಿ ಜನ್ಮತಾಳಿದ ಏಸು ಅಟಲ್ ಜಿ ಎಂದರೆ ತಪ್ಪಿಲ್ಲ. ಇಂದು ಅವರ 90ನೇ ವರ್ಷದ ಜನುಮ ದಿನ, ಈ ದೇಶಕ್ಕೆ ಅವರ ಅನುಪಸ್ಥಿತಿ ಬಹಳವಾಗಿ ಕಾಡುತ್ತಿದೆ.ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದರೆ ದೇಶ ಇಂದು ಇಂತಹ ಶೋಚನೀಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.ಇಂದು ಪ್ರತಿಯೋಬ್ಬ ಭಾರತೀಯ ಪ್ರಜೆಯೂ ಅವರನ್ನು ನೆನೆಯಬೇಕು.  ಮಹಾನ್ ನಾಯಕ, ಕವಿ, ರಾಜಕೀಯ ಮುತ್ಸದಿ, ಸ್ನೇಹ ಜೀವಿ, ಸರಳ ಜೀವಿ. ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ನನ್ನ ನಮನಗಳು.
ಜೈ ಹಿಂದ್

ರವಿತೇಜ ಶಾಸ್ತ್ರೀ.            

Monday, December 16, 2013

ದೇಶದ ಆಶಾಕಿರಣ ನರೇಂದ್ರ ಮೋದಿ

ನಾನು ಪ್ರಥಮ ಪಿಯುಸಿ ವಾಣಿಜ್ಯ ಓದುವಾಗ Economics ವಿಷಯದಲ್ಲಿ ಪ್ರಪಂಚದ ಎಲ್ಲ ಆರ್ಥಿಕತೆಯ ಬಗ್ಗೆ ಪ್ರಥಮ ಅಧ್ಯಾಯದಲ್ಲಿ ಇತ್ತು. ಆರ್ಥಿಕತೆಯಲ್ಲಿ Advanced Economy ಅಥವಾ  Developed Economy ಮತ್ತು Developing Economy ಎಂಬ ವಿಂಗಡಣೆಯಿತ್ತು. ಭಾರತವನ್ನು  Developing Economy ಎಂಬುದಾಗಿ ಸೇರಿಸಲಾಗಿತ್ತು. Advanced Economyಯಲ್ಲಿ ಅಮೇರಿಕಾ, ರಶಿಯಾ, ಇಂಗ್ಲೆಂಡ್ ದೇಶಗಳ ಹೆಸರಿತ್ತು. ಇದನ್ನು ಓದುವಾಗ ನನಗೆ ಭಾರತವೇಕೆ Advanced Economy ಅಲ್ಲ ಎಂಬ ವಿಷಯ ಬಹಳ ಕಾಡಿತ್ತು. ಭಾರತ Advanced Economy ಆಗಬೇಕೆಂಬ ಕನಸು ನನಗೆ ಹುಟ್ಟಿಕೊಂಡಿತು ಆದರೆ ಆ ಕನಸು ನನಸಾಗುವುದು ಅಸಾಧ್ಯ ಎಂಬ ಭಾವನೆ ನನಗಿತ್ತು. ಆದರೆ ನಾನು ಪದವಿ ವ್ಯಾಸಂಗ ಮಾಡುವಾಗ ಸಂಘದ ಪರಿಚಯವಾಗಿ ಭಾರತದ ಕುರಿತು ಹೆಮ್ಮೆ, ಗೌರವ, ಭಕ್ತಿ ನನ್ನಲ್ಲಿ ಬೆಳೆದಾಗ ಭಾರತ  ಬಲಿಷ್ಠ ಆರ್ಥಿಕತೆಯ ದೇಶವಾಗುತ್ತೆ ಮತ್ತು ನನ್ನ ಕನಸು ನನಸಾಗುತ್ತದೆ ಎಂಬ ನಂಬಿಕೆ ಬಲವಾಯಿತು. ಈ ಕುರಿತು ನಾನು ಕಾಲೇಜಿನಲ್ಲಿ ಒಮ್ಮೆ ಸೆಮಿನಾರ್ ಮಾಡಿ ಬಹಳ ಆತ್ಮ ವಿಶ್ವಾಸದಿಂದ ಭಾರತ 2030 ರಲ್ಲಿ ವಿಶ್ವದ ಬಲಿಷ್ಠ ದೇಶವಾಗುತ್ತೆ ಎಂದು ಹೇಳಿದ್ದೆ. ಆದರೆ ಈ ಕುರಿತು ನನಗೆ ಸ್ಪಷ್ಟ ನಿಲುವು  ಇರಲಿಲ್ಲ. ದೇಶದ ಕುರಿತು ನನಗಿದ್ದ ಅಭಿಮಾನ ನಾನು  ಆ ರೀತಿ ಹೇಳುವ ಹಾಗೇ ಮಾಡಿತ್ತು. ಭಾರತ ಬಲಿಷ್ಠ ಅರ್ಥಿಕ ದೇಶವಾಗಬೇಕಾದರೆ ನಾವೇನು ಮಾಡಬೇಕು, ಅದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ನನ್ನ ಬಳಿ ಆಗ ಉತ್ತರವಿರಲಿಲ್ಲ. ಆದರೆ ಆ ಎಲ್ಲ ಪ್ರಶ್ನೆಗಳಿಗೆ ಈಗ ನಾನು ಉತ್ತರ ಕಂಡುಕೊಂಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿ ಯಾದಾಗ ಮಾತ್ರ ಈ ದೇಶ ವಿಶ್ವದ ಬಲಿಷ್ಠ ಆರ್ಥಿಕತೆಯಾಗಲು ಸಾಧ್ಯ. ಇದು ಮೋದಿಯವರ ಅಭಿಮಾನದಿಂದ ಬಂದ ಅತಿಶಯೋಕ್ತಿಯ ಉತ್ತರ ಅಲ್ಲ.

 ಒಂದು ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಅಂಶಗಳೆಂದರೆ ಆ ದೇಶದ ಜನರ ತಲಾದಾಯ(per capita income), ಸಮಗ್ರ ದೇಶೀಯ ಉತ್ಪನ್ನ(Gross Domestic Product(G.D.P) ಮತ್ತು ವಿದೇಶಿ ವಿನಿಮಯ(Foreign Exchange). ಈ ಎಲ್ಲದರಲ್ಲೂ ಗುಜರಾತ್ ಭಾರತಕ್ಕಿಂತ ಮುಂದಿದೆ. ಗುಜರಾತಿನ ರಪ್ತಿನ ಪ್ರಮಾಣ ಭಾರತಕ್ಕಿಂತ ಹೆಚ್ಚು. ನರೇಂದ್ರ ಮೋದಿ ವಿಶ್ವ ಬಂಡವಾಳ ಹೂಡಿಕೆಯ ಸಮಾವೇಶ ಆಯೋಜಿಸಿದರೆ ಇಡೀ ವಿಶ್ವವೇ ಗುಜರಾತಿನಲ್ಲಿ ಹೂಡಿಕೆ ಮಾಡಲು ವಿಶ್ವವೇ ಮುಗಿಬೀಳುತ್ತದೆ. 12 ವರ್ಷದ ಹಿಂದೆ ಭೂಕಂಪ, ಕೋಮು ಗಲಭೆಗಳಿಂದ ತತ್ತರಿಸಿದ್ದ ಗುಜರಾತನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿದ ಮೋದಿಯ ಸಾಧನೆ ಅಮೋಘ. ನರೇಂದ್ರ ಮೋದಿಯವರ ದೂರದೃಶಿತ್ವ, ರಾಷ್ಟ್ರಭಕ್ತಿ,ಪ್ರಭಾವಿ ನಾಯಕತ್ವ , ಸದಾ ಜನರ ಯೋಗಕ್ಷೇಮ ಬಯಸುವ ಅವರ ವ್ಯಕ್ತಿತ್ವ ಅವರನ್ನು ಈ ಸ್ಥಾನದಲ್ಲಿ ಕೂರಿಸಿದೆ. ಈ ಗುಣಗಳಿಂದ ಮೋದಿ ದೇಶದ ಆಶಾಕಿರಣದಂತೆ ಭಾಸವಾಗುತ್ತಾರೆ. ದೇಶ ಕಂಡ ಮಹಾನ್ ನಾಯಕರಾದ ಶಾಸ್ತ್ರೀಜಿ, ಸರ್ದಾರ್ ಪಟೇಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಗಳನ್ನು ಅಳವಡಿಸಿಕೊಂಡಿರುವ ಮೋದಿ ಪ್ರಸ್ತುತ ಸ್ಥಿತಿಗೆ ಮಹಾನ್ ನಾಯಕರಂತೆ ಗೋಚರಿಸುತ್ತಾರೆ. ಇಂತಹ ನಾಯಕ ದೇಶವಾಳಿದರೆ ಭಾರತ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಸಂಶಯವಿಲ್ಲ. ಭಾರತ ವಿಶ್ವದ ಬಲಿಷ್ಠ ಆರ್ಥಿಕತೆಯಾಗಬೇಕೆಂಬುದು ನನ್ನ ಹೆಬ್ಬಯಕೆ. ಭಾರತ Advanced Economy ಎಂದು ಪಠ್ಯಪುಸ್ತಕದಲ್ಲಿ ಮುದ್ರಣವಾಗುವ ಕಾಲ ಬಹಳಷ್ಟು ದೂರವಿಲ್ಲ ಎಂದು ನಾನು ನಂಬಿದ್ದೇನೆ.  

ವಂದೇಮಾತರಂ 
ರವಿತೇಜ ಶಾಸ್ತ್ರೀ               

Monday, December 2, 2013

ಭಾರತದ ಯುಗಪುರುಷ ವೀರ ಸಾವರ್ಕರ್


ತನ್ನ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ವಿನಾಯಕ ದಾಮೋದರ್ ಸಾವರ್ಕರ್. ತಮ್ಮ ಬದುಕಿನ ಪ್ರತಿ ಹಂತದಲ್ಲೂ ಹಲವಾರು ಕಷ್ಟಗಳನ್ನು ಅನುಭವಿಸಿ ಭಾರತದ ಯುಗಪುರುಷರಂತೆ ಕಾಣುತ್ತಾರೆ ಸಾವರ್ಕರ್. 1883 ಮೇ 28 ರಂದು ಜನಿಸಿದ ಸಾವರ್ಕರ್ ಚಿಕ್ಕಂದಿನಲ್ಲೇ ತಂದೆತಾಯಿ ಕಳೆದುಕೊಂಡು ಅಣ್ಣ ಬಾಬಾರಾವ್  ಸಾವರ್ಕರ್ ಅವರ ಆಶ್ರಯದಲ್ಲಿ ಬೆಳೆದರು. ಅಣ್ಣ ಸಾವರ್ಕರ್ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸಾವರ್ಕರ್ ತಾರುಣ್ಯದಲ್ಲಿ “ಮಿತ್ರಮೇಳ” ಎಂಬ ಗುಂಪು ಹುಟ್ಟುಹಾಕಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ನಂತರ “ಅಭಿನವ ಭಾರತ” ಎಂಬ ಸಂಘಟನೆ ಸ್ಥಾಪಿಸಿ ವಿದೇಶೀ ವಸ್ತುಗಳನ್ನು ಸುಡುವ ಹೋಳಿ( ಗಾಂಧೀಜಿ ಮುಂದೆ ಇದೆ ವಿಧಾನ ಅನುಸರಿಸಿದರು) ಆಚರಿಸಿದರು. ಪುಣೆಯ ಫಾರ್ಗುಸನ್ ಕಾಲೇಜಿನಲ್ಲಿ ಬಿ. ಎ ಪದವಿ ಮುಗಿಸಿ ಮುಳ್ಳನ್ನು ಮುಳ್ಳಿನಿಂದ ತೆಗಯಬೇಕೆಂದು ನಿರ್ಧರಿಸಿ ಕಾನೂನು ಪದವಿ ಪಡೆಯಲು ಇಂಗ್ಲೆಂಡಿಗೆ ಹಾರಿದರು. ಶ್ಯಾಮ್ ಪ್ರಸಾದ್ ಮುಖರ್ಜೀಯವರ  ಭಾರತ ಭವನದಲ್ಲಿ ಯುವಕರನ್ನು ಸಂಘಟಿಸಿ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯದ ಜ್ಯೋತಿ ಮೊಳಗಿಸಿದರು.1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಉತ್ಕೃಷ್ಟವಾದ ಗ್ರಂಥ ಬರೆದದರು. ಮದನಲಾಲ್ ಧಿಂಗ್ರಾ ಎಂಬ ಬಿಸಿ ರಕ್ತದ ಯುವಕರಲ್ಲಿ ಭಾರತದ ಬಗ್ಗೆ ಅಭಿಮಾನ ಮೂಡಿಸಿದರು. ಮುಂದೆ ಸಾವರ್ಕರ್ ಪ್ರೇರಣೆಯಿಂದ ಧಿಂಗ್ರಾ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ವಿಷ ಬೀಜಬಿತ್ತುತ್ತಿದ್ದ ಕರ್ಜನ್ ವಾಲಿಯಾನನ್ನು ಗುಂಡಿಕ್ಕಿ ಕೊಂದ. ಸಾದಾ ಸಾವರ್ಕರ್ ಬಂಧಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರು ಸಾವರ್ಕರ್ ರನ್ನು ಬಂಧಿಸಿದರು.ಪೊಲೀಸರು ಹಡಗಿನಲ್ಲಿ ಸಾವರ್ಕರ್ ಅವರನ್ನು ಹಡಗಿನಲ್ಲಿ ಭಾರತಕ್ಕೆ ಕರದೊಯ್ಯುವಾಗ ಆಶ್ಚರ್ಯಕರ ರೀತಿಯಲ್ಲಿ ಹಡಗಿನ ಕಿಟಕಿ ಹೊಡೆದು ಸಮುದ್ರಕ್ಕೆ ಹಾರಿ ಈಜಿಕೊಂಡು ಫ್ರಾನ್ಸ್ ಸೇರಿಕೊಂಡರು. ಫ್ರಾನ್ಸ್ ನಲ್ಲಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದು ಸಾವರ್ಕರ್ ಭಾವಿಸಿದ್ದರು ಆದರೆ ಬ್ರಿಟಿಷರ ಲಂಚಕ್ಕೆ ಬಲಿಯಾದ ಫ್ರಾನ್ಸ್ ಪೊಲೀಸರು ಸಾವರ್ಕರ್ ರನ್ನು ಬ್ರಿಟಿಷ್ ಪೋಲೀಸರ ಸುಪರ್ದಿಗೆ ವಹಿಸಿದರು. ಬ್ರಿಟಿಷ್ ಸರ್ಕಾರ ಸಾವರ್ಕರ್ ಗೆ 2 ಜೀವಾವಧಿ ಶಿಕ್ಷೆ ವಿಧಿಸಿತು ಅಂದರೆ ಒಟ್ಟು 50 ವರ್ಷ ಕರಿನೀರಿನ ಶಿಕ್ಷೆ. ಆಗಿನ ಕಾಲದಲ್ಲಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ನೀಡಲಾಗುತ್ತಿದ್ದ ಅತ್ಯಂತ ಕಟೋರ ಶಿಕ್ಷೆಯಾಗಿತ್ತು. ಅದರೂ ಸಾವರ್ಕರ್ ಕುಗ್ಗದೆ ಜೈಲಿನಲ್ಲಿ ಕೈದಿಗಳ ಹಕ್ಕುಗಳಿಗೆ ಹೋರಾಡಿದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದರು. 11 ವರ್ಷಗಳ ನಂತರ ಕರಿನೀರಿನ ಶಿಕ್ಷೆಯಿಂದ ಮುಕ್ತಿ ಹೊಂದಿ ಭಾರತದ ಸಾಮಾನ್ಯ ಜೈಲಿಗೆ ಸ್ಥಳಾಂತರವಾದರು. ಖಿಲಾಪತ್ ಚಳುವಳಿಯಿಂದ ನೊಂದು ಹಿಂದುತ್ವದ ಕುರಿತು ಕೃತಿ ರಚಿಸಿ ಹಿಂದೂ ಧರ್ಮದ ಉದ್ದಾರಕ್ಕಾಗಿ ಶ್ರಮಿಸಿದರು. ಜೈಲಿನಿಂದ ಬಿಡುಗಡೆಯಾಗಿ “ಹಿಂದೂ ಮಹಾಸಭಾ” ಎಂಬ ಪಕ್ಷ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತಾತ್ಯಾರಾವ್ ಎಂದು ಪ್ರಸಿದ್ದರಾದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಅಸಂಖ್ಯಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ನೇತಾಜಿಗೆ ವಿದೇಶದಲ್ಲಿ ಸೇನೆ ಕಟ್ಟಲು ಪ್ರೇರಣೆಯಾದವರು ಸಾವರ್ಕರ್. ಸಾವರ್ಕರ್ ಭಾರತದ ಸ್ವಾತಂತ್ರ್ಯ ಗಳಿಸಲು ಪರೋಕ್ಷವಾಗಿ ಕಾರಣರಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಭಾರತದ ವಿಭಜನೆ ವಿರೋಧಿಸಿದ ಸಾವರ್ಕರ್ ವಿಭಜನೆಯಿಂದ ನೊಂದರು. ಆದರೆ ಇಂತಹ ಮಹಾತ್ಮನನ್ನು ನೆಹರು ವಿನಾಕಾರಣ ಗಾಂಧಿ ಹತ್ಯೆಯಲ್ಲಿ ಅರೋಪಿಯನ್ನಾಗಿಸಿ ಅವಮಾನಿಸಿದರು. ಆರೋಪ ಸಾಬೀತಾಗದೆ ಸಾವರ್ಕರ್ ಬಿಡುಗಡೆ ಹೊಂದಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ನೆಹರು ಸಾವರ್ಕರ್ ಶಿಕ್ಷೆ ಅನುಭವಿಸಿದ ಅಂಡಮಾನ್ ಜೈಲನ್ನು ನಾಶಮಾಡಿ ಆಸ್ಪತ್ರೆ ಕಟ್ಟಿಸಲು ಮುಂದಾದರು ಆದರೆ ಅದು ಸಾಧ್ಯವಾಗಲಿಲ್ಲ. ಮಹಾನ್ ಕುತಂತ್ರಿ ನೆಹರು ತನ್ನ ಸ್ವಾರ್ಥಕ್ಕಾಗಿ ಸಾವರ್ಕರ್ ಗೆ ನೋವು ಕೊಟ್ಟರು.ಕೊನೆಗೆ ನೆಹರು ಸತ್ತಾಗ ಶಾಸ್ತ್ರೀಜಿ ಸಾವರ್ಕರ್ ಗೆ ಸರ್ಕಾರದಿಂದ ಪಿಂಚಣಿ ಬರುವ ವ್ಯವಸ್ಥೆ ಮಾಡಿಸಿ ಅವರಿಗೆ ಗೌರವ ಸಲ್ಲಿಸಿದರು.   1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು. ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ  ಮಿಡಿದರು. ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ  ಶ್ರದ್ದಾಂಜಲಿ ಸಲ್ಲಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಈಗಲೂ ಸಹ ಕಾಂಗ್ರೇಸ್ ಸರ್ಕಾರ ಮಹಾನ್ ನಾಯಕ ಸಾವರ್ಕರ್ ರ ಬಗ್ಗೆ ಇತಿಹಾಸ ಪುಟದಲ್ಲಿ ಸ್ಥಾನ ನೀಡದೆ ಅವರಿಗೆ ಅವಮಾನಿಸಿದೆ. ನಮ್ಮ ಶಾಲೆಯ ಇತಿಹಾಸ ಪುಸ್ತಕದಲ್ಲಿ ಸಾವರ್ಕರ್ ಕುರಿತು ಪಾಠವೇ ಇಲ್ಲ. ಸದಾ ದೇಶಕ್ಕಾಗಿ ಪರಿತಪಿಸಿದ ಸಾವರ್ಕರ್ ಬಗ್ಗೆ ಇಂದು ನಮ್ಮ ಯುವಕರಿಗೆ ತಿಳಿದಿಲ್ಲ.  ತಿಳಿದಿದ್ದರೆ ಅದು ಬೆರಳಣಿಕೆಯಷ್ಟು ಮಂದಿಗೆ ಮಾತ್ರ. ಇಂದಿನ ಯುವಪೀಳಿಗೆಗೆ  ಇಂತಹ ಮಹಾನ್ ನಾಯಕರ ಕುರಿತು ಅರಿಯಬೇಕು. ನಿಜವಾದ ನಾಯಕರು ಯಾರು?ಮತ್ತು  ತಮ್ಮನ್ನೇ ಬಹುದೊಡ್ಡ ನಾಯಕರು ಬಿಂಬಿಸಿಕೊಂಡ ನಾಯಕರು ಯಾರು ಗೊತ್ತಾಗಬೇಕು . ಸಾವರ್ಕರ್ ರಂತ ಮಹಾನ್ ದೇಶ ಭಕ್ತರ ನಮ್ಮ ಯುವಕರು ತಿಳಿಯಬೇಕು ಆಗ ಮಾತ್ರ ನಾವು ಅಂತಹ  ಯುಗಪುರುಷನಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ವಂದೇ ಮಾತರಂ
ಭಾರತ್ ಮಾತಾಕಿ ಜೈ
ರವಿತೇಜ ಶಾಸ್ತ್ರೀ 

Sunday, December 1, 2013

ಭಾರತದ ರಾಷ್ಟ್ರಪಿತ ಗಾಂಧೀಜಿಯಲ್ಲ ನೇತಾಜಿ !!


ಭಾರತದ ರಾಷ್ಟ್ರಪಿತ ಯಾರು? ಎಂದು ಯಾರಿಗಾದರೂ ಪ್ರಶ್ನೆ ಕೇಳಿ ಉತ್ತರ ಸಿದ್ದ ಮಹಾತ್ಮಾ ಗಾಂಧೀಜಿ ಎಂದು ತಟ್ಟನೆ ಉತ್ತರ ಕೊಟ್ಟುಬಿಡುತ್ತಾರೆ. ಆದರೆ ಒಮ್ಮೆ ನಾವು ಏಕೆ ಗಾಂಧೀಜಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆಯುತ್ತೇವೆ?, ರಾಷ್ಟ್ರಪಿತ ಎಂದರೆ ಅರ್ಥವೇನು?, ಬಿರುದು ಗಳಿಸಲು ಇರುವ ಯೋಗ್ಯತೆಯೇನು? ಆ ಸ್ಥಾನಕ್ಕೆ ಗಾಂಧೀಜಿ ಯೋಗ್ಯರಾಗಿದ್ದರೆ? ಎಂಬ ಪ್ರಶ್ನೆಗಳ ಬಗ್ಗೆ ಯೋಚಿಸುವ ಗೋಜಿಗೆ ನಾವು ಹೋಗುವುದಿಲ್ಲ. ಹಾಗಾದರೆ ರಾಷ್ಟ್ರಪಿತ ಅಂದರೆ ಏನು? ತನ್ನ ದೇಶದ, ರಾಜ್ಯದ ಅಥವಾ ರಾಷ್ಟ್ರದ ಸ್ಥಾಪನೆಗೆ ಪ್ರೇರಕ ಶಕ್ತಿಯಾದ ವ್ಯಕ್ತಿಗೆ ನೀಡುವ ಬಿರುದೇ ರಾಷ್ಟ್ರಪಿತ.(ವಿಕಿಪೀಡಿಯದ ಪ್ರಕಾರ). ಹಾಗಾದರೆ ಗಾಂಧೀಜಿಯನ್ನು ಏಕೆ ರಾಷ್ಟ್ರಪಿತ ಎಂದು ಕರೆಯುತ್ತಾರೆ? ಈ ಕುರಿತು ಐಶ್ವರ್ಯ ಎಂಬ ಬಾಲಕಿ  R.T.I ಅರ್ಜಿ ಸಲ್ಲಿಸಿದಾಗ ಇದರ ಬಗ್ಗೆ  ತಿಳಿಸಲು ನಮ್ಮಲ್ಲಿ ಯಾವುದೇ ಕಡಕವಿಲ್ಲವೆಂದು ಸರ್ಕಾರ ತಿಳಿಸಿತು. ಈ ವಿಷಯದ ಬಗ್ಗೆ ನಾನು ಇಂಟರ್ನೆಟ್ನಲ್ಲಿ ಹುಡುಕಿದಾಗ ಸಿಕ್ಕ ಮಾಹಿತಿ ಪ್ರಕಾರ 1944 ರಲ್ಲಿ ನೇತಾಜಿ ಸಿಂಗಾಪುರದಿಂದ ರೇಡಿಯೋದಲ್ಲಿ ದೇಶವನ್ನು ಕುರಿತು ಮಾತನಾಡುವಾಗ ಅವರು ಮೊದಲ ಬಾರಿಗೆ ಗಾಂಧಿಯನ್ನು Father of the Nation ಎಂದು ಸಂಬೋದಿಸಿದರಂತೆ. ಮತ್ತೆ ಗಾಂಧಿ ಸತ್ತಾಗ ನೆಹರೂ “ Our Father of the Nation is no more “ ಎಂದು ಹೇಳಿದರಂತೆ. ತಮ್ಮನ್ನು ರಾಷ್ಟ್ರಪಿತ ಎಂದು ಕರೆದ ಮಹಾನ್ ಚೇತನಕ್ಕೆ ದ್ರೋಹ ಬಗೆದ ಗಾಂಧಿ ಹೇಗೆ ಭಾರತದ ರಾಷ್ಟ್ರಪಿತನಾಗುತ್ತಾರೆ. ಅಷ್ಟಕ್ಕೂ ಮೇಲೆ ಹೇಳಿದ ವಾಖ್ಯಾನದಂತೆ( ವಿಕಿಪೀಡಿಯ) ಗಾಂಧಿ ಭಾರತದ ಸ್ಥಾಪನೆಗೆ ಪ್ರೇರಕ  ಶಕ್ತಿಯಾಗಿದ್ದರೆ, ಖಂಡಿತ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಗಾಂಧಿಯಿಂದ ಅಲ್ಲ. ಎರಡನೇ ಮಹಾಯುದ್ದದ ನಂತರ ನೇತಾಜಿಯವರ I.N.A ಪ್ರಭಾವ ದೇಶದಲ್ಲಿ ಹೆಚ್ಚಾಗಿ ಸೇನೆಯಲ್ಲಿ ಬಂಡಾಯದ ಕಾವು ಹರಡಿತು. ಇದರಿಂದ ಬ್ರಿಟಿಷರು ಇನ್ನು ನಮಗೆ ದೇಶವಾಳುವುದು ಕಷ್ಟ ಎಂದು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರು.ಹೀಗೆ ನೇತಾಜಿ ಬ್ರಿಟಿಷರಿಗೆ ಪ್ರತಿ ಹಂತದಲ್ಲೂ ನಡುಕ ಹುಟ್ಟಿಸಿದ್ದರು. ಭಾರತದಲ್ಲಿರುವಾಗ ಬ್ರಿಟಿಷರು ಅತಿ ಹೆಚ್ಚು ಹೆದರಿದ್ದು ಇಬ್ಬರಿಗೆ ಮಾತ್ರ. ಒಬ್ಬರು ಸಾವರ್ಕರ್ ಮತ್ತೊಬ್ಬರು ಸುಭಾಷ್ ಚಂದ್ರ ಬೋಸ್. ಹೀಗೆ ನೇತಾಜಿ ಭಾರತದ ಸ್ಥಾಪನೆಗೆ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದರು. ಭಾರತದ ರಾಷ್ಟ್ರಪಿತನೆಂದು ಕರೆಸಿಕೊಳ್ಳಲು ಯೋಗ್ಯರಾಗಿದ್ದರು. ಗಾಂಧೀಜಿ ಮತ್ತು ನೇತಾಜಿ ಇಬ್ಬರ ಬದುಕನ್ನು ತುಲನೆಮಾಡಿದಾಗ ನೇತಾಜಿ ಗಾಂಧೀಜಿಗಿಂತ ಉಚ್ಚ ಸ್ಥಾನದಲ್ಲಿ ನಿಲ್ಲುತ್ತಾರೆ.


ನೇತಾಜಿ Vs ಗಾಂಧೀಜಿ


      ನೇತಾಜಿ ಮತ್ತು ಗಾಂಧೀಜಿ ನಡುವಿನ ಹೋಲಿಕೆ ಮಾಡುವುದು ಹೆಚ್ಚು ಸೂಕ್ತವೆನಿಸಿತು.
·         ಸುಭಾಷ್ ಚಂದ್ರ ಬೋಸರು ಹುಟ್ಟಿನಿಂದಲೇ ಪರಮ ದೇಶಭಕ್ತರಾಗಿದ್ದರು. ಸುಭಾಷರು ತಾರುಣ್ಯದಲ್ಲಿ ಬಂಗಾಳದ ವಿಭಜನೆಯ ಚಳುವಳಿ “ವಂಗಬಂಗ” ದಿಂದ ಪ್ರೆರಿತರಾಗಿದ್ದರು. ಈ ಸಮಯದಲ್ಲಿ ನೇತಾಜಿ ಆಟೋಟಗಳಿಗಿಂತ ಓದಿನಲ್ಲಿ ಆಸಕ್ತರಾಗಿದ್ದರು. ಧಾರ್ಮಿಕ ವಿಷಯಗಳ ಬಗ್ಗೆ ಅವರಿಗೆ ಆಸಕ್ತಿಯಿತ್ತು. ನೇತಾಜಿ ಭಗವದ್ಗೀತೆ, ಯೋಗ, ಆತ್ಮ ಸಂಯಮ, ಮನೋನಿಗ್ರಹಗಳ ಬಗ್ಗೆ ತಿಳಿದಿದ್ದರು. ರಾಮಕೃಷ್ಣ, ವಿವೇಕಾನಂದರತ್ತ ಆಕರ್ಷಿತರಾಗಿದ್ದರು. ಆದರೆ ಗಾಂಧೀಜಿ ಇಂಗ್ಲೆಂಡಿನಿಂದ ಹಿಂದಿರುವತನತ ಗಾಂಧಿ ಗೀತೆಯನ್ನೇ ಓದಿರಲಿಲ್ಲ. ಇಂಗ್ಲೆಂಡಿನಲ್ಲಿ ಗಾಂಧಿ ಕಾನೂನು ಪದವಿ ಓದುವಾಗ  ಆಂಗ್ಲರ ಸಂಸ್ಕೃತಿಗೆ ಮನಸೋತು ಪಿಟೀಲು ಕಲಿಯುತ್ತ, ಹೆಂಗಸರೊಡನೆ ನರ್ತಿಸುವ ಮೋಹದಲ್ಲಿ ತೊಡಗಿದ್ದರು. ಗಾಂಧೀಜಿ ಹುಟ್ಟಿನಿಂದಲೇ ದೇಶಭಕ್ತರಾಗಿರಲಿಲ್ಲ. ಆದರೆ ಸುಭಾಷರು ಕೇಂಬ್ರಿಜ್ನಲ್ಲಿ I.C.S ಓದುವಾಗ ಇಂಗ್ಲಿಷರ ಸಂಸ್ಕೃತಿ ಮನಸ್ಸಿಗೆ ಒಗ್ಗದೆ ತುಮುಲದಲ್ಲಿದ್ದರು.

·         ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೇಗೆ ಬಂದರು ಗೊತ್ತಾ? 1910 ರಲ್ಲಿ ದೇಶದಲ್ಲಿ ಹಿಂಸಾಚಾರ, ಕೊಲೆ ಹೆಚ್ಚಾಗಿ ಆಗಿನ ವೈಸ್ ರಾಯ್ ಮಿಂಟೋ ಹೆದರಿ ಇಲ್ಲಿ ತಮಗೇ ಭದ್ರತೆವಿಲ್ಲವೆಂದು ಇಂಗ್ಲೆಂಡಿಗೆ ಪತ್ರ ಬರೆದ. ಬ್ರಿಟಿಷ ಸರ್ಕಾರ ಮಿಂಟೋನನ್ನು ಹಿಂತೆಗೆದುಕೊಂಡು ಲಾರ್ಡ್ ಹಾರ್ಡಿ೦ಜನನನ್ನು ವೈಸ್ ರಾಯ್ ಆಗಿ ಕಳುಹಿಸಿತು. ಅವನಿಗೂ ಭಯವಾಗಿ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ದಕ್ಷಿಣ ಆಫ್ರಿಕಾದಿಂದ ಗಾಂಧಿಯನ್ನು ಕರೆಸುವುದು ವಾಸಿ ಎಂದ. ಇದಕ್ಕೆಂದೆ ಬ್ರಿಟಿಷರು  1912ರಲ್ಲಿ ಗೋಪಾಲಕೃಷ್ಣ ಗೋಖಲೆಯವರನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿ ಗಾಂಧಿಯನ್ನು ಕರೆಸಿಕೊಂಡರು.
( ಈ ಕುರಿತು ನಾರಾಯಣಚಾರ್ಯ ಬರೆದಿರುವ “ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ” ಪುಸ್ತಕದಲ್ಲಿ ಉಲ್ಲೇಖವಿದೆ.) ಆಗ ಮುಂಬೈಯಲ್ಲಿ ದಕ್ಷಿಣ ಆಫ್ರಿಕೆಯಿಂದ ಬಂದಿಳಿದದೊಡನೆಯೇ ಗಾಂಧಿಯವರು ಬ್ರಿಟಿಷರ ಬಾಂಬೆ ಗವರ್ನರ್ ಸಾಹೇಬರಿಗೆ ಪತ್ರ ಬರೆದು   “ ನಿಮ್ಮ ಆಜ್ಞೆಯನ್ನು ಇನ್ನು ಪಾಲಿಸುವ ಮಾತು ಕೊಡುತ್ತೇನೆ “ ಎಂದರು. ನಂತರ ಒಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಂಧಿ       ‘ ನಾನು ನಿಮಗೆ ವಿಧೇಯನಾಗಿರುತ್ತೇನೆ ’ ಎಂದು ಘೋಷಿಸಿದರು. ಆದರೆ ಬೋಸರು ಕಾಲೇಜಿನಲ್ಲಿ ಓದುವಾಗ ಆಂಗ್ಲ ಪ್ರಾಧ್ಯಾಪಕನೊಬ್ಬ ಭಾರತೀಯರ ಬಗ್ಗೆ ಕೀಳು ಭಾಷೆಯಲ್ಲಿ ವ್ಯಂಗ್ಯವಾಡಿದಾಗ ಅವನನ್ನು ಯುವ ಬೋಸ್ ಹೊಡೆದಿದ್ದರು. ಚಿನ್ನದ ಮೊಟ್ಟೆ ಇಡುವ I.C.S ಪದವಿಯನ್ನು ನಿರಾಕರಿಸಿದರು.

·         ಗಾಂಧೀಜಿಗೆ ಭಾರತ ಸ್ವಾತಂತ್ರ್ಯ ಹೋರಾಟ ಹೇಗಿರಬೇಕೆಂಬ ಸ್ಪಷ್ಟ ನಿಲುವು ಇರಲಿಲ್ಲ. ಆದರೆ ನೇತಾಜಿ ಸ್ವಾತಂತ್ರ್ಯ ಭಾರತ ಹೋರಾಟದ ಕುರಿತು ಹೀಗೆ ಹೇಳುತ್ತಾರೆ. “ In India we want a party that will not only strive for its freedom , but also produce a national constitution and after winning freedom will put into operation the whole program of national reconstruction. There can be no question of Constitutional Assembly… Likewise there can be no question of giving up power.” ( ಭಾರತದಲ್ಲಿ ಈಗ ಬೇಕಾಗಿರುವುದು ಬರೀ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಯತ್ನಿಸುವ ಒಂದು ಪಕ್ಷವಲ್ಲ. ಅದು ಭಾರತದ ಸಂವಿಧಾನವನ್ನು ತಯಾರು ಮಾಡುವಂಥದ್ದಾಗಿರಬೇಕು. ಸ್ವಾತಂತ್ರ್ಯ ಬಂದ ನಂತರ ಅದನ್ನು ಚಾಲ್ತಿಯಲ್ಲಿ ತರುವಂಥದ್ದು, ಅದರಲ್ಲಿ ಸಮಗ್ರ ಭಾರತದ ಪುನಾರಚನೆಯನ್ನು ಒಳಗೊಂಡುದ್ದು ಆಗಿರಬೇಕು. ಇದಕ್ಕೆ ಪ್ರತ್ಯೇಕ ವಿಧಾಯಕ ಸಭೆಯ ಅವಶ್ಯಕತೆಯೇ ಏಳುವುದಿಲ್ಲ.. ಹಾಗೆಯೇ ನಮ್ಮ ಹಕ್ಕು, ಪ್ರಭುತ್ವವನ್ನು ಬಿಟ್ಟುಕೊಡುವ ಪ್ರಶ್ನೆಯೇ ಏಳುವುದಿಲ್ಲ.)

·         ಗಾಂಧೀಜಿಯರಲ್ಲಿ ನನಗೆ ನಾಯಕತ್ವ ಗುಣವೇ ಕಾಣಿಸುವುದಿಲ್ಲ. ನಾಯಕನಿರಬೇಕಾದ ಸ್ಪಷ್ಟ ನಿಲುವು ಅವರಿಗೆ ಇರಲಿಲ್ಲ ಅದಕ್ಕಾಗಿಯೇ ಅವರು ಅಸಹಕಾರ ಚಳುವಳಿಯನ್ನು ಸಣ್ಣ ಕಾರಣಕ್ಕೆ ನಿಲ್ಲಿಸಿದರು. ಆದರೆ ನೇತಾಜಿಗೆ ಭಾರತ ಸ್ವಾತಂತ್ರ್ಯವಾಗಬೇಕೆಂದು ಪಣತೊಟ್ಟು ಹೊರ ದೇಶಗಳಿಗೆ ಹೋಗಿ ಸಹಾಯ ಹಸ್ತ ಚಾಚಿ 80000 ಸೈನಿಕರಿರುವ I.N.A ಸೈನ್ಯ ಕಟ್ಟಿದರು. ಇದು ಅವರ ನಾಯಕತ್ವ ಗುಣದ ನಿದರ್ಶನ.

·         ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯಿಂದ ಮಾತ್ರ ಸ್ವಾತಂತ್ರ್ಯ ಗಳಿಸಲು ಸದ್ಯವೆಂದು ನಂಬಿ ಮುಸ್ಲಿಮರ ಖಿಲಪತ್ ಚಳುವಳಿಗೆ ಸಹಕಾರ ಕೊಟ್ಟು ಸ್ವಾತಂತ್ಯ ಚಳುವಳಿಯ ದಿಕ್ಕನ್ನು ತಪ್ಪಿಸಿ ಅಮಾಯಕ ಹಿಂದೂಗಳ ಸಾವಿಗೆ ಕಾರಣರಾದರು.(ಮೊಪ್ಲ ಚಳುವಳಿಯ ಪರಿಣಾಮದಿಂದ) ಆದರೆ ನೇತಾಜಿ ಎಂದಿಗೂ ಈ ರೀತಿ ಯೋಚಿಸಿರಲಿಲ್ಲ. ಐ.ಎನ್. ಎ ದ ಸೇನಾಧಿಕಾರಿ ಷಾ ನವಾಜ್ ಖಾನ್ ದ್ರೋಹ ಬಗೆದಾಗ(ನೆಹರುವಿನ ಕುತಂತ್ರಕ್ಕೆ ಬಲಿಯಾಗಿ) ನೇತಾಜಿ ಅವರಿಗೆ ಶಿಕ್ಷೆ ಕೊಡದೆ ಈ ರೀತಿ ಹೇಳಿದರು. “ ನೋಡಿ ನಾವು ಹಿಂದುಗಳು ಬಹುಸಂಖ್ಯಾತರೇ ಇದ್ದೇವೆ! ಆಮೇಲೆ ಈ ಮುಸ್ಲಿಮರೂ ತಾವು ಭಾರತೀಯರೆಂದು ಚಿಂತಿಸಿ ಒಂದಾಗುವ ಕಾಲ ಬಂದೇ ಬರುತ್ತದೆ. ಮುಸ್ಲಿಮರಾಗಿ ಜೀವಿಸುವುದನ್ನು ಬಿಟ್ಟಾರು. ಈಗ ಸಣ್ಣ ವಿಷಯಕ್ಕೆ ಅವರ ಮನಸ್ಸು ನೋಯಿಸುವುದು ಬೇಡ ” ಎಂದರು.  ಆದರೆ ಗಾಂಧೀಜಿ ಮುಸ್ಲಿಮರಿಗೆ ರಾಷ್ಟ್ರೀಯತೆಯನ್ನು ಕಲಿಸದೆ ಮತಾಂಧತೆ ಬೆಳೆಸಿ ದೇಶವನ್ನು ವಿಭಜಿಸಿದರು.

·         ನೇತಾಜಿ ಹಿಡಿದ ಕೆಲಸವನ್ನು ಮುಗಿಸದೆ ಸುಮ್ಮನಿರುವ ಮನುಷ್ಯರಾಗಿರಲಿಲ್ಲ. ಎರಡನೆ ಮಹಾಯುದ್ದ ಮುಗಿದು ಬ್ರಿಟಿಷರಿಗೆ ಜಯವಾಗಿ ತಮಗೇ ಸಹಾಯ ಮಾಡಿದ ಜರ್ಮನಿ, ಜಪಾನ್ ಸೋತಾಗ ನೇತಾಜಿ ಕುಗ್ಗದೆ ತಮ್ಮ ಹೋರಾಟ ಮುಂದುವರಿಸಿ ರಶಿಯಾಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಬಂಗಾರದ ವಸ್ತು, ನಗ, ನಾಣ್ಯ ಇತ್ತಂತೆ. ಇದರ ಅರ್ಥ ಯುದ್ದದ ನಂತರವೂ ನೇತಾಜಿ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಸಜ್ಜಾಗಿದ್ದರು. ಆದರೆ ಗಾಂಧೀಜಿಯ ಹೋರಾಟದಲ್ಲಿ ಇಂತಹ ಚಲವೇ ಇರಲಿಲ್ಲ. ಅವರು ಹೆದರು ಪುಕ್ಕಲರಾಗಿದ್ದರು, ಅವರು ಸಾವರ್ಕರ್, ನೇತಾಜಿ, ಭಗತ್ ಸಿಂಗ್ ರಂತೆ ಬ್ರಿಟಿಷರಿಗೆ ಎದೆಗೆ ಎದೆಗೊಟ್ಟು ನಿಂತವರಲ್ಲ. ಅಷ್ಟಕ್ಕೂ ಗಾಂಧಿ ಸಾವರ್ಕರ್ ರಂತೆ ಆಗಿನ ಬಹುದೊಡ್ಡ ಶಿಕ್ಷೆ ಕರಿನೀರಿನ ಶಿಕ್ಷೆ ಅನುಭವಿಸಲಿಲ್ಲ ಬದಲಿಗೆ ಗಾಂಧಿ ಆಘಾಖಾನರ ಅರಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸಿದವರು.
                                 ಹೀಗೆ ನೇತಾಜಿ ಗಾಂಧೀಜಿಗಿಂತ ಶ್ರೇಷ್ಟ ವ್ಯಕ್ತಿ, ಹೋರಾಟಗಾರ,ದೂರದೃಷ್ಟಿತ್ವಯುಳ್ಳ ನಾಯಕರಾಗಿದ್ದರು. ಗಾಂಧೀಜಿಗಿಂತ ಮೇರು ವ್ಯಕ್ತಿತ್ವಯುಳ್ಳ ನೇತಾಜಿಯನ್ನು “ಭಾರತದ ರಾಷ್ಟ್ರಪಿತ” ಎಂದು ಕರೆಯುವುದು ಸೂಕ್ತವೆನಿಸುವುದಿಲ್ಲವೇ?

ನೇತಾಜಿಯ ಸಾವಿನ ಇತಿಹಾಸ ಒಂದು ನೋವಿನ ಅಧ್ಯಾಯ

ನೇತಾಜಿ ಸುಭಾಸ್ ಚಂದ್ರ ಬೋಸ್ 1945 ಅಗಸ್ಟ್ 18ರಂದು ಸಿಂಗಪುರದಿಂದ ಹೊರಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟರು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಆದರೆ ನೇತಾಜಿ ಅಂದು ಸಾಯಲಿಲ್ಲ. ಅವತ್ತು ಅಲ್ಲಿ ವಿಮಾನವೇ ಹಾರಲಿಲ್ಲ. ಅಗಸ್ಟ್ 23 1945ರಂದು ನೇತಾಜಿ ಸ್ಯೆಗಾನಿನಿಂದ ಬಾಂಬರ್ ವಿಮಾನದಲ್ಲಿ ಹೊರಟು ರಶಿಯಾ ಸೇರಿದ್ದರು. ಆದರೆ ನೆಹರು ನೇತಾಜಿ ಆಪ್ತ ಹಬೀಬುರ್ ರೆಹಮಾನ್ ಅವರಿಂದ ನೇತಾಜಿ ಸತ್ತರು ಎಂದು ಹೇಳಿಸಿದರು. ನಂತರ ನೇತಾಜಿ ರಶಿಯಾದಲ್ಲಿ ನೆಲೆಸಿದ್ದಾರೆ ಎಂದು ನೆಹರು ಬ್ರಿಟಿಷ್ ಪ್ರಧಾನಿ ಆಟ್ಲಿಗೆ ಪತ್ರ ಬರೆದರು. ಮತ್ತು ನೇತಾಜಿಯ ಸಾವಿನ ರಹಸ್ಯದ ಕಡತಗಳನ್ನು ಮರೆಮಾಚಿದರು.ಈ ಕುರಿತು ತಿಳಿದವರನ್ನು ಹೆದರಿಸಿ ಸುಳ್ಳನ್ನೇ ಸತ್ಯವೆಂದು ಜನರಿಗೇ ನಂಬಿಸಿದರು. ನೇತಾಜಿ ಏನಾದರು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ.  ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ ಪುಸ್ತಕದ ಪ್ರಕಾರ  1955ರಲ್ಲಿ ನೇತಾಜಿ ಭಾರತಕ್ಕೆ ಬಂದು ಯೋಗಿಬಾಬ, ಭಗವಾನ್ ಜಿಯಾಗಿ ಕೊನೆಗೆ 1988ರಲ್ಲಿ ಮಡಿದರು.

ದೇಶಕ್ಕಾಗಿ ಪರಿತಪಿಸಿದ ಮಹಾನ್ ನಾಯಕರ ಸಾವಿನ ಇತಿಹಾಸವನ್ನು ತಿರುಚಿಸಿದ್ದು ದುರಂತವೇ ಸರಿ. ಈಗ ನಾವು ಹೊಸ ಇತಿಹಾಸದ ಸತ್ಯವನ್ನು ಅರಿಯಬೇಕು. ಹೊಸ ಇತಿಹಾಸವನ್ನು ಬರೆಯುವಂತಾಗಬೇಕು ಅದೇ ನಾವು ನೇತಾಜಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿ.
ಭಾರತದ ನಿಜವಾದ ರಾಷ್ಟ್ರಪಿತ ನೇತಾಜಿ ಎಂದು ಲೇಖನ ಓದಿದವರಿಗೆ  ಅರಿವಾದರೆ ಲೇಖನ ಬರೆದ ನನ್ನ ಈ ಶ್ರಮ ಸಾರ್ಥಕ.   
  
ಜೈ ಹಿಂದ್      

ರವಿತೇಜ ಶಾಸ್ತ್ರೀ