Thursday, May 28, 2015

ಈ ರಾಷ್ಟ್ರವನ್ನುಳಿಸಿದ ನಿಜ ಮಹಾತ್ಮಾ ಸ್ವಾತಂತ್ರ್ಯ ವೀರ ಸಾವರ್ಕರ್!

 8 ಜುಲೈ 1910, ಎಸ್. ಎಸ್ ಮೋರಿಯ ಎಂಬ ಹಡಗು ಫ್ರಾನ್ಸ್‌ನ ಬಂದರು ಮರ್‌ಸೈಲ್ಸ್ (Marseilles) ತಲುಪಿತ್ತು. ಹಡಗಿನಲ್ಲಿದ್ದ ಒಬ್ಬ ಮಹಾನ್ ಕ್ರಾಂತಿಕಾರಿ ಶರೀರಬಾಧೆ ತೀರಿಸುವ ನೆಪದಲ್ಲಿ ಹಡಗಿನ ಶೌಚಾಲಯ ಪ್ರವೇಶಿಸಿ, ಬಾಗಿಲಿನ ಚಿಲಕ ಹಾಕಿ, ತನ್ನ ಬಟ್ಟೆಯಿಂದ ಕಿಟಕಿಯನ್ನು ಮುಚ್ಚಿ, ಯಾರಿಗೂ ಕಾಣದಂತೆ ಹಡಗಿನ ಪಾರ್ಶ್ವದ ಕಂಡಿಯ ಮೂಲಕ  ಸಮುದ್ರಕ್ಕೆ ಧುಮುಕಿದ. ಕಂಡಿಯ ಮೂಲಕ ಹಾರುವಾಗ ಮೈ ಕೈಯ ಚರ್ಮ ಕೆಲವೆಡೆ ತರಚಿ ಹೋಯಿತು. ಆತ  ಸಮುದ್ರದಲ್ಲಿ ಈಜುವುದನ್ನು ಗಮನಿಸಿದ ಕಾವಲುಗಾರರು ಆತನತ್ತ ಗುಂಡು ಹಾರಿಸಿದರು. ಆತ ನೀರಲ್ಲಿ ಮುಳುಗಿ, ಆಗಾಗ ತಲೆಯೆತ್ತಿ, ಪುನಃ ಮುಳುಗಿ, ಈಜುತ್ತಾ ಈಜುತ್ತಾ ಗುಂಡೇಟು ತಪ್ಪಿಸುತ್ತಾ ನಾಟಕೀಯವಾಗಿ ಬಂದರಿನತ್ತ ತಲುಪಿದ.  ಒಂದೆಡೆ ದಂಡೆಗೆ ಅಪ್ಪಳಿಸುವ ಗುಂಡಿನ ದಾಳಿ, ಹಿಂಬಾಲಿಸುವ ಈಜುಗಾರರು ಮತ್ತು ದೋಣಿ, ಅವೆಲ್ಲವನ್ನೂ ತಪ್ಪಿಸಿಕೊಂಡು ದಡ ಸೇರಿದ ಸಾಹಸ ಹರಸಾಹಸವೇ ಆಗಿತ್ತು!  ಇತಿಹಾಸದಲ್ಲಿ ಹಿಂದೆಂದೂ ನಡೆಯದ ಅದ್ಭುತ ಘಟನೆ! ಇತಿಹಾಸ ಕಂಡ ಸಾಗರ ಸಾಹಸ! ಈ ಅಪ್ರತಿಮ ಸಾಹಸ ಮಾಡಿದ್ದು ಬೇರಾರು ಅಲ್ಲ ಅವರೇ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್.

ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನರಂತೆ ಕಾಡಿ, ರಾಷ್ಟ್ರ ಮುಕ್ತಿಯ ಮಹಾ ಯಜ್ಞದಲ್ಲಿ ಹವಿಸ್ಸಿನಂತೆ ಸರ್ವವನ್ನು ರಾಷ್ಟ್ರಕ್ಕೆ ಸಮರ್ಪಿಸಿ, ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಕಾಲ ಘೋರ ಕರಿನೀರಿನ ಶಿಕ್ಷೆಗೆ ಒಳಗಾದವರು ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ಅಪ್ರತಿಮ ವೀರ ವಿನಾಯಕ ದಾಮೋದರ ಸಾವರ್ಕರ್


1883 ಮೇ 28 ರಂದು ಜನಿಸಿದ ಸಾವರ್ಕರ್ ಚಿಕ್ಕಂದಿನಲ್ಲೇ ತಂದೆ ತಾಯಿ ಕಳೆದುಕೊಂಡು ಅಣ್ಣ ಬಾಬಾರಾವ್  ಸಾವರ್ಕರ್ ಅವರ ಆಶ್ರಯದಲ್ಲಿ ಬೆಳೆದರು. ಅಣ್ಣ ಸಾವರ್ಕರ್ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸಾವರ್ಕರ್ ತಾರುಣ್ಯದಲ್ಲಿ “ಮಿತ್ರಮೇಳ” ಎಂಬ ಗುಂಪು ಹುಟ್ಟುಹಾಕಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ನಂತರ “ಅಭಿನವ ಭಾರತ” ಎಂಬ ಸಂಘಟನೆ ಸ್ಥಾಪಿಸಿ ವಿದೇಶೀ ವಸ್ತುಗಳನ್ನು ಸುಡುವ ಹೋಳಿ( ಗಾಂಧೀಜಿ ಮುಂದೆ ಇದೆ ವಿಧಾನ ಅನುಸರಿಸಿದರು) ಆಚರಿಸಿದರು. ಪುಣೆಯ ಫಾರ್ಗುಸನ್ ಕಾಲೇಜಿನಲ್ಲಿ ಬಿ. ಎ ಪದವಿ ಮುಗಿಸಿ ಮುಳ್ಳನ್ನು ಮುಳ್ಳಿನಿಂದ ತೆಗಯಬೇಕೆಂದು ನಿರ್ಧರಿಸಿ ಕಾನೂನು ಪದವಿ ಪಡೆಯಲು ಇಂಗ್ಲೆಂಡಿಗೆ ಹಾರಿದರು. ಶ್ಯಾಮ್ ಜೀ ಕೃಷ್ಣ ವರ್ಮ   ಭಾರತ ಭವನದಲ್ಲಿ ಯುವಕರನ್ನು ಸಂಘಟಿಸಿ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯದ ಜ್ಯೋತಿ ಮೊಳಗಿಸಿದರು.1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಉತ್ಕೃಷ್ಟವಾದ ಗ್ರಂಥ ಬರೆದದರು. ಮದನಲಾಲ್ ಧಿಂಗ್ರಾ ಎಂಬ ಬಿಸಿ ರಕ್ತದ ಯುವಕರಲ್ಲಿ ಭಾರತದ ಬಗ್ಗೆ ಅಭಿಮಾನ ಮೂಡಿಸಿದರು. ಮುಂದೆ ಸಾವರ್ಕರ್ ಪ್ರೇರಣೆಯಿಂದ ಧಿಂಗ್ರಾ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ವಿಷ ಬೀಜಬಿತ್ತುತ್ತಿದ್ದ ಕರ್ಜನ್ ವಾಲಿಯಾನನ್ನು ಗುಂಡಿಕ್ಕಿ ಕೊಂದ. ಸಾದಾ ಸಾವರ್ಕರ್ ಬಂಧಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರು ಸಾವರ್ಕರ್ ರನ್ನು ಬಂಧಿಸಿದರು.ಪೊಲೀಸರು ಹಡಗಿನಲ್ಲಿ ಸಾವರ್ಕರ್ ಅವರನ್ನು ಹಡಗಿನಲ್ಲಿ ಭಾರತಕ್ಕೆ ಕರದೊಯ್ಯುವಾಗ ಆಶ್ಚರ್ಯಕರ ರೀತಿಯಲ್ಲಿ ಹಡಗಿನ ಕಿಟಕಿ ಹೊಡೆದು ಸಮುದ್ರಕ್ಕೆ ಹಾರಿ ಈಜಿಕೊಂಡು ಫ್ರಾನ್ಸ್ ಸೇರಿಕೊಂಡರು. ಫ್ರಾನ್ಸ್ ನಲ್ಲಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದು ಸಾವರ್ಕರ್ ಭಾವಿಸಿದ್ದರು ಆದರೆ ಬ್ರಿಟಿಷರ ಲಂಚಕ್ಕೆ ಬಲಿಯಾದ ಫ್ರಾನ್ಸ್ ಪೊಲೀಸರು ಸಾವರ್ಕರ್ ರನ್ನು ಬ್ರಿಟಿಷ್ ಪೋಲೀಸರ ಸುಪರ್ದಿಗೆ ವಹಿಸಿದರು. ಬ್ರಿಟಿಷ್ ಸರ್ಕಾರ ಸಾವರ್ಕರ್ ಗೆ 2 ಜೀವಾವಧಿ ಶಿಕ್ಷೆ ವಿಧಿಸಿತು ಅಂದರೆ ಒಟ್ಟು 50 ವರ್ಷ ಕರಿನೀರಿನ ಶಿಕ್ಷೆ. ಆಗಿನ ಕಾಲದಲ್ಲಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ನೀಡಲಾಗುತ್ತಿದ್ದ ಅತ್ಯಂತ ಕಟೋರ ಶಿಕ್ಷೆಯಾಗಿತ್ತು. ಅದರೂ ಸಾವರ್ಕರ್ ಕುಗ್ಗದೆ ಜೈಲಿನಲ್ಲಿ ಕೈದಿಗಳ ಹಕ್ಕುಗಳಿಗೆ ಹೋರಾಡಿದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದರು. 11 ವರ್ಷಗಳ ನಂತರ ಕರಿನೀರಿನ ಶಿಕ್ಷೆಯಿಂದ ಮುಕ್ತಿ ಹೊಂದಿ ಭಾರತದ ಸಾಮಾನ್ಯ ಜೈಲಿಗೆ ಸ್ಥಳಾಂತರವಾದರು. ಖಿಲಾಪತ್ ಚಳುವಳಿಯಿಂದ ನೊಂದು ಹಿಂದುತ್ವದ ಕುರಿತು ಕೃತಿ ರಚಿಸಿ ಹಿಂದೂ ಧರ್ಮದ ಉದ್ದಾರಕ್ಕಾಗಿ ಶ್ರಮಿಸಿದರು. ಜೈಲಿನಿಂದ ಬಿಡುಗಡೆಯಾಗಿ “ಹಿಂದೂ ಮಹಾಸಭಾ” ಎಂಬ ಪಕ್ಷ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತಾತ್ಯಾರಾವ್ ಎಂದು ಪ್ರಸಿದ್ದರಾದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಅಸಂಖ್ಯಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.  
                  
ನಮಗೆ ಸ್ವಾತಂತ್ರ್ಯ ದೊರಕಿದ್ದು ನೇತಾಜಿ ಮತ್ತು ಸಾವರ್ಕರ್ ಅವರಿಂದ!

ಬರಿ ಅಹಿಂಸೆಯಿಂದ ನಮಗೆ ಸ್ವಾತಂತ್ರ್ಯ ಬರಲಿಲ್ಲ. ಸಾವರ್ಕರ್, ನೇತಾಜಿ ಮತ್ತು ಅಸಂಖ್ಯಾ ಕ್ರಾಂತಿಕಾರಿಗಳ ಬಲಿದಾನದಿಂದಲೇ ನಮಗೆ ಸ್ವಾತಂತ್ರ್ಯ ದೊರಕಿದ್ದು.
ಎರಡನೇ ಮಹಾಯುದ್ದ ಮುಗಿದ ನಂತರ ಸೈನ್ಯದಲ್ಲಿ ನೇತಾಜಿಯವರ ಅಜಾದ್ ಹಿಂದ್ ಫೌಜ್ ನ ಪ್ರಭಾವ ಹೆಚ್ಚಾಗಿ ಬಂಡಾಯ ಶುರುವಾಯಿತು. ನೌಕ ಪಡೆ ಬ್ರಿಟಿಷರ ವಿರುದ್ದ ತಿರುಗಿಬಿದ್ದಿತು. ಸೇನೆಯ ಸಹಾಯವಿಲ್ಲದೇ ದೇಶವನ್ನು ಆಳುವುದು ಆಸಾಧ್ಯ ಎಂಬ ಸತ್ಯ ಬ್ರಿಟಿಷರಿಗೆ ತಿಳಿಯಿತು. ಇದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ನೇತಾಜಿಗೆ ಸೇನೆ ಸ್ಥಾಪಿಸಲು ಪ್ರೇರಣೆ ನೀಡಿದವರು ಸಾವರ್ಕರ್. ಇದರ ಜೊತೆಗೆ ಎರಡನೇ ಮಹಾಯುದ್ದದ ಸಂದರ್ಭದಲ್ಲಿ   ದೇಶವನ್ನು ಸುತ್ತಿ, ಯುವಕರನ್ನು ಸಂಘಟಿಸಿ ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿದರು ಸಾವರ್ಕರ್.  ನಮಗೆ ಸ್ವಾತಂತ್ರ್ಯ ದೊರಕಿದ್ದು ಸಾವರ್ಕರ್ ರಿಂದಲೇ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ.

ಅಂದು ಸಾವರ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶವನ್ನು ಸುತ್ತಿ ಯುವಕರನ್ನು ಜಾಗೃತಿ ಮೂಡಿಸಿದ ಪರಿಣಾಮ ನಮ್ಮ ದೇಶ ಉಳಿಯಿತು. ಇದರಿಂದ ಸೈನ್ಯದಲ್ಲಿ ಶೇ. 20 ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ. 70 ಕ್ಕೆ ಏರಿತು. ಈ ಸಂದರ್ಭದಲ್ಲಿ ಸೇನೆಗೆ ಸೇರಬೇಡಿ ಎಂದು ಕಾಂಗ್ರೆಸ್ ಕರೆ ಕೊಟ್ಟಿತು. ಸ್ವಾತಂತ್ರ್ಯ ಬಂದ ನಂತರ ಸೈನ್ಯದಲ್ಲಿದ್ದ ಎಲ್ಲ ಮುಸ್ಲಿಂ ಸೈನಿಕರು ಪಾಕಿಸ್ತಾನಕ್ಕೆ ಹೋದರು. ಈ ಸಂದರ್ಭದಲ್ಲಿ ಸೈನ್ಯದಲ್ಲಿ ಹಿಂದುಗಳೇ ಇಲ್ಲದೇ ಹೋಗಿದ್ದರೆ ಭಾರತದ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಭಾರತದ ಕೆಂಪು ಕೋಟೆಯ ಮೇಲೆ ತಿರಂಗಾ ಹಾರದೆ ಪಾಕಿಸ್ತಾನದ ಧ್ವಜ  ಹಾರುವ ಎಲ್ಲ ಸಾಧ್ಯತೆಗಳಿತ್ತು. ನಮ್ಮ ದೇಶವನ್ನು ಉಳಿಸಿದ ನಿಜ ಮಹಾತ್ಮಾ ಸಾವರ್ಕರ್.

ಸರ್ವವನ್ನು ದೇಶಕ್ಕೆ ಅರ್ಪಿಸಿದ ಮಹಾನ್ ಪುರುಷ ಸಾವರ್ಕರ್ ನಮ್ಮ ದೇಶದ ಮಹಾತ್ಮಾ ನಾಗ ಬೇಕಿತ್ತು. ಆದರೆ ಇಂತಹ ಮಹಾತ್ಮನನ್ನು ನೆಹರು ವಿನಾಕಾರಣ ಗಾಂಧಿ ಹತ್ಯೆಯಲ್ಲಿ ಅರೋಪಿಯನ್ನಾಗಿಸಿ ಅವಮಾನಿಸಿದರು. ಆರೋಪ ಸಾಬೀತಾಗದೆ ಸಾವರ್ಕರ್ ಬಿಡುಗಡೆ ಹೊಂದಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ನೆಹರು ಸಾವರ್ಕರ್ ಶಿಕ್ಷೆ ಅನುಭವಿಸಿದ ಅಂಡಮಾನ್ ಜೈಲನ್ನು ನಾಶಮಾಡಿ ಆಸ್ಪತ್ರೆ ಕಟ್ಟಿಸಲು ಮುಂದಾದರು ಆದರೆ ಅದು ಸಾಧ್ಯವಾಗಲಿಲ್ಲ. ಮಹಾನ್ ಕುತಂತ್ರಿ ನೆಹರು ತನ್ನ ಸ್ವಾರ್ಥಕ್ಕಾಗಿ ಸಾವರ್ಕರ್ ಗೆ ನೋವು ಕೊಟ್ಟರು.ಕೊನೆಗೆ ನೆಹರು ಸತ್ತಾಗ ಶಾಸ್ತ್ರೀಜಿ ಸಾವರ್ಕರ್ ಗೆ ಸರ್ಕಾರದಿಂದ ಪಿಂಚಣಿ ಬರುವ ವ್ಯವಸ್ಥೆ ಮಾಡಿಸಿ ಅವರಿಗೆ ಗೌರವ ಸಲ್ಲಿಸಿದರು.1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು. ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ  ಮಿಡಿದರು. ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ  ಶ್ರದ್ದಾಂಜಲಿ ಸಲ್ಲಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ನಾಡ ಮುಕ್ತಿಯ ಯಜ್ಞದಲ್ಲಿ ಹವಿಸ್ಸಿನಂತೆ ತನ್ನನ್ನು ತಾನು ರಾಷ್ಟ್ರಕ್ಕೆ ಸಮರ್ಪಿಸಿದ ಮಹಾನ್ ವೀರ, ದೇಶಕ್ಕಾಗಿ ಐದು ದಶಕಗಳ ಕಾಲ ಕಟೋರ ಕರಿನೀರಿನ ಶಿಕ್ಷೆಗೊಳಗಾದ ಮಹಾನ್ ದೇಶಭಕ್ತನ ಕುರಿತು ನಮ್ಮ ಪಠ್ಯಪುಸ್ತಕದಲ್ಲಿ ಕೇವಲ ಎರಡು ಸಾಲಿದೆ. ಇದು ನಾವು ಸಾವರ್ಕರ್ ಗೆ ನೀಡಿರುವ ಪುರಸ್ಕಾರ! ಪಠ್ಯಪುಸ್ತಕದಲ್ಲಿ ಇಲ್ಲದಿದ್ದರೇನು ನಾವು ನಮ್ಮ ಹೃದಯದಲ್ಲಿ ಸಾವರ್ಕರ್ ಗೆ ಉಚ್ಚ ಸ್ಥಾನವನ್ನು ನೀಡೋಣ, ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸೋಣ.

ಇಂದು  ಅವರ ಜನ್ಮ ದಿನ. ಮಹಾನ್ ನಾಯಕನಿಗೆ ನನ್ನ ನಮನಗಳು.

ಸ್ವಾತಂತ್ರ್ಯ ಲಕ್ಷ್ಮಿಗೆ ಜಯವಾಗಲಿ.

ರವಿತೇಜ ಶಾಸ್ತ್ರೀ  

ಉತ್ತಿಷ್ಠ ಭಾರತ    

                                     

1 comment:

  1. Brother surely well written , great write up , good tribute to savarkar. But INDIA HOUSE was established by Shyamji krishna verma not Shyama prasad mukherjee

    ReplyDelete