Monday, August 24, 2015

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದು ಹೇಗೆ? ಒಂದು ಸತ್ಯ ಕತೆ!!

ಹಿಂದಿ ಚಿತ್ರ ಗೋಲ್ಮಾಲ್ ನಲ್ಲಿ ಹಾಸ್ಯಕಾರನ ಪಾತ್ರ ನಿರ್ವಹಿಸಿದ ಉತ್ಪಾಲ್ ಸಿಂಗ್  ಎಂಬುವವರನ್ನು ಪಶ್ಚಿಮ ಬಂಗಾಳ ಸರ್ಕಾರ ಡಿಸೆಂಬರ್ 27 1965 ರಂದು ಬಂಧಿಸಿದರು. ಪಶ್ಚಿಮ ಬಂಗಾಳ ಸರ್ಕಾರ ಇವರಿಗೆ ಹೆದರಿತ್ತು! ಕಾರಣವೇನು ಗೊತ್ತೇ?? ಉತ್ಪಾಲ್ ಸಿಂಗ್  ನಮ್ಮ ಇತಿಹಾಸ ತಿಳಿಸದ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ಅಧ್ಯಾಯದ ಕುರಿತು ಒಂದು ನಾಟಕವನ್ನು ಬರೆದಿದ್ದರು. ಬಹುಮುಖ್ಯ ಅಧ್ಯಾಯವೇ ಭಾರತೀಯ ನೌಕಾ ದಂಗೆ 1946.  

1946ರಲ್ಲಿ ಬ್ರಿಟಿಷರು ಬಹಳ ಸಂಕಷ್ಟದಲ್ಲಿ ಸಿಲುಕಿದರು. ಭಾರತೀಯ ಸೈನಿಕರು ತಮ್ಮ ನಿಷ್ಠೆಯನ್ನು ಬದಲಿಸಿದ್ದರು, ಭಾರತೀಯ ಸೇನೆ ಬ್ರಿಟಿಷರ ಹಿಡಿತದಿಂದ ಕೈತಪ್ಪಿತ್ತು. 25 ವರ್ಷಗಳಲ್ಲಿ ಇಂತಹ ಕಠಿಣ ಪರಿಸ್ಥಿತಿ ಬ್ರಿಟಿಷರಿಗೆ ಎದುರಾಗಿರಲಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳುವ ಆಯ್ಕೆಯೂ ಬ್ರಿಟಿಷರಿಗೆ ಇರಲಿಲ್ಲ. 1945 ರಲ್ಲಿ ಸುಭಾಷ್ ಚಂದ್ರ ಬೋಸ್ ಮಡಿದರು ಎಂಬ ವರದಿ ಪ್ರಕಟವಾಯಿತು. ಸುಭಾಷರ ಕಣ್ಮರೆಯ ನಂತರ ಇಂಡಿಯನ್ ನ್ಯಾಷನಲ್ ಆರ್ಮಿ ಪತನವಾಯಿತು. ಎನ್. ಮುಖ್ಯ ಅಧಿಕಾರಿಗಳಾದ ಷಾ ನವಾಜ್ ಖಾನ್, ಪ್ರೇಮ್  ಸೆಹಗಲ್ಗುರ್ಭಶ್ ಸಿಂಗ್ ಮುಂತಾದವರನ್ನು ಯುದ್ದ ಕೈದಿಗಳಂತೆ ಬಂಧಿಸಿ ಕೆಂಪುಕೋಟೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಸಂದರ್ಭದಲ್ಲಿ ನಮ್ಮ ನೆಹರೂ ಮೂವರನ್ನು ಸಮರ್ಥಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು. ಅವರೇ ಮಹಾತ್ಮಾ ಗಾಂಧಿ, ಅಬ್ದುಲ್ ಕಲಾಂ ಅಜಾದ್ ಮತ್ತು ಮೊಹಮ್ಮದ್ ಅಲಿ ಜಿನ್ನಾ. ಈ ನಾಲ್ಕು ಜನ ಬ್ರಿಟಿಷರೊಂದಿಗೆ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿದ್ದರು. ಅದೇನು ಗೊತ್ತೇ? ನೇತಾಜಿ ಇನ್ನು ಬದುಕಿದ್ದಾರೆಂದು ಅನೇಕರು ನಂಬಿದ್ದರು, ನೇತಾಜಿ ಭಾರತಕ್ಕೆ ಮರಳಿದರೆ ಅವನ್ನು ನಿಮಗೆ ಒಪ್ಪಿಸುತ್ತೇವೆಂದು ಗಾಂಧಿ ಮತ್ತು ನೆಹರೂ ಬ್ರಿಟಿಷರೊಂದಿಗೆ  ಒಪ್ಪಂದ ಮಾಡಿಕೊಂಡಿದ್ದರು.

ಐ. ಎನ್. ಎ ಅಧಿಕಾರಿಗಳ ವಿಚಾರಣೆಯನ್ನು ಸಾರ್ವಜನಿಕವಾಗಿ ನಡೆಸಲಾಯಿತು. ನೇತಾಜಿಯ ಮೇಲಿದ್ದ ಪ್ರೀತಿ, ಅನುಕಂಪ ಐ. ಎನ್. ಸೈನ್ಯದ  ಸಾಹಸಗಳು ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚನ್ನು ಹತ್ತಿಸಿತು. ಇದರಿಂದ ಸ್ಫೂರ್ತಿಯಾದ ನೌಕಾದಳದ ನಾವಿಕರು  ಸಂಪರ್ಕ ಸಾಧನಗಳ ಮೂಲಕ ಐ.ಎನ್. ಎ ಕತೆಗಳನ್ನು ಎಲ್ಲ ಸಿಬ್ಬಂದಿಗಳಿಗೂ ಮುಟ್ಟಿಸಿದರು. ನೌಕಾ ದಳದಲ್ಲಿ ಸರಿಯಾದ ಸೌಕರ್ಯಗಳಿಂದ ವಂಚಿತರಾಗಿದ್ದ ನಾವಿಕರು ಬ್ರಿಟಿಷರ ವಿರುದ್ದ ಬಂಡಾಯದ ಭಾವುಟ ಹಾರಿಸಿದರು.
ಹೀಗೆ ಭಾರತೀಯ ನೌಕಾ ದಂಗೆ ಫೆಬ್ರವರಿ 18 1946ರಂದು ಆರಂಭವಾಯಿತು. ಅದೇ ದಿನ ಸಂಜೆ ದಂಗೆಯ ಸಮಿತಿಯನ್ನು ರೂಪಿಸಲಾಯಿತು. ಎಂ. ಸ್ ಖಾನ್ ಮತ್ತು ಮದನ್ ಸಿಂಗ್ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಾಂಬೆಯಲ್ಲಿ ಆರಂಭವಾದ ದಂಗೆ ಕರಾಚಿ, ಕಲ್ಕತ್ತಾ, ಕೊಚ್ಚಿ ಮತ್ತು ವಿಶಾಖಪಟ್ಟಣ ಮುಂತಾದ ಕಡೆಗೆ ಹರಡಿತು. 78ಕ್ಕೂ ಹೆಚ್ಚು ನೌಕೆಗಳು, 20,೦೦೦ಕ್ಕೂ ಹೆಚ್ಚು  ನಾವಿಕರು ದಂಗೆಗೆ ಸಂಪೂರ್ಣ ಬೆಂಬಲ ನೀಡಿದರು. ನೌಕಾ ದಂಗೆಯಿಂದ ಪ್ರೇರಿತರಾದ ವಾಯುಸೇನೆ ದಂಗೆಗೆ ಬೆಂಬಲ ವ್ಯಕ್ತ ಪಡಿಸಿತು. ಪೊಲೀಸರು ದಂಗೆಗೆ ಸಂಪೂರ್ಣ ಸಹಾಯ ಮಾಡಿದರು. ಭೂದಳದ ಸೈನಿಕರು ಈ ದಂಗೆಯಿಂದ ಪ್ರೇರಿತರಾಗಿ ಬ್ರಿಟಿಷರ ಆಜ್ಞೆಯನ್ನು ಪಾಲಿಸದೆ ಧಿಕ್ಕರಿಸಿದರು. ಹಲವು ನೌಕೆಗಳಲ್ಲಿ ಭಾರತೀಯ ತಿರಂಗಾ ಹಾರಿತು. ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನೌಕಾ ದಳ, ವಾಯು ಸೇನೆ, ಭೂ ದಳ ಮತ್ತು ಪೊಲೀಸರು ಬ್ರಿಟಿಷರ ವಿರುದ್ದ ತಿರುಗಿ ಬಿದ್ದರು.
ದೇಶ ವಿಭಜನೆಯ ಚರ್ಚೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ಈ ನೌಕಾ ದಂಗೆಯನ್ನು ಬೆಂಬಲಿಸುವ ಬದಲು ವಿರೋಧಿಸಿ ಸೈನ್ಯದ ನಡೆಯನ್ನು ಖಂಡಿಸಿದರು. ಯಾವ ರಾಷ್ಟೀಯ ನಾಯಕರೂ ನೌಕಾ ದಂಗೆಯನ್ನು ಬೆಂಬಲಿಸಲಿಲ್ಲ. ನೌಕ ದಳದ ನಾವಿಕರು ಬ್ರಿಟಿಷರನ್ನು ಎದುರು ಹಾಕಿಕೊಂಡಿದ್ದರು ಸಂಬಳ ಕೊಡುವ ಧಣಿಯ ವಿರುದ್ದವೇ ತಿರುಗಿಬಿದ್ದಿದ್ದರು. 25೦ ವರ್ಷಗಳ ಇತಿಹಾಸದಲ್ಲಿ ಸಾಧಿಸದಿದ್ದ ಶೌರ್ಯವನ್ನು ನಮ್ಮ ಸೈನಿಕರು ಸಾಧಿಸಿದ್ದರು. ಸುಭಾಷರು ಇಂತಹ ಸನ್ನಿವೇಶವನ್ನು ಉಹಿಸಿದ್ದರು ತನ್ನ ಐ. ಎನ್ . ಎ ಭಾರತೀಯರಿಗೆ ಪ್ರೇರಣೆಯಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಅವರು ನಂಬಿದ್ದರು. ಅವರ ನಂಬಿಕೆ ಸುಳ್ಳಾಗಲಿಲ್ಲ.

ಅಹಿಂಸಾ ಸತ್ಯಾಗ್ರಹಗಳು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿತು ಎಂಬುದು ಅಪ್ಪಟ ಸುಳ್ಳು. ಸುಭಾಷ್ ಚಂದ್ರ ಬೋಸ್, ಐ. ಎನ್.ಎ ಮತ್ತು ಭಾರತೀಯ ನೌಕಾ ದಂಗೆ ನಮ್ಮನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿತು ಎಂಬುದು ನಮ್ಮ ಇತಿಹಾಸದ ಪುಟಗಳು ತಿಳಿಸದ ಕಟು ಸತ್ಯ!. ಸೈನ್ಯದ ಸಹಾಯವಿಲ್ಲದೇ ಇನ್ನು ಭಾರತವನ್ನು ಆಳುವುದು ಅಸಾಧ್ಯ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು.
ಒಮ್ಮೆ ಕಲ್ಕತ್ತಾದ ಹೈ ಕೋರ್ಟ್ ನ್ಯಾಯಾಧೀಶ ಪಿ. ಬಿ ಚಕ್ರಬೋರ್ತಿ ಅವರು ಬ್ರಿಟಿಷ್ ಪ್ರಧಾನಿ ಕ್ಲೆಮೆಟ್ ಅಟ್ಲಿ ಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಪ್ರಶ್ನಿಸಿದರು. ನೀವು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಗಾಂಧಿಯ ಪ್ರಭಾವ ಎಷ್ಟಿತ್ತು? ಎಂದು ಪ್ರಶ್ನೆ ಕೇಳಿದಾಗ ಕೃತ ನಗೆ ಬೀರಿದ ಅಟ್ಲಿ ಕನಿಷ್ಠ ಎಂದು ಉತ್ತರಿಸಿದ್ದನು. ಹಾಗಾದರೆ ನೀವು 1947 ರಲ್ಲಿ ಭಾರತವನ್ನು ಬಿಟ್ಟು ಹೋಗಲು ಕಾರಣವೇನು ಎಂದು ಮರು ಪ್ರಶ್ನೆ ಹಾಕಿದಾಗ ಅಟ್ಲಿಯ ಉತ್ತರ ಇದಾಗಿತ್ತು.

“ ಭಾರತೀಯ ಸೈನಿಕರಲ್ಲಿ ಬ್ರಿಟಿಷ್ ನಿಷ್ಠೆಯ ಸಂಪೂರ್ಣ ಸವೆತ, ಐ. ಎನ್. ಎನ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಚಟುವಟಿಕೆಗಳು “
ಈ ಎಲ್ಲ ಸತ್ಯಗಳು ಉತ್ಪಾಲ್ ಸಿಂಗ್ ಬರೆದ ನಾಟಕದಲ್ಲಿತ್ತು. ಸತ್ಯ ಹೊರಬರುತ್ತದೆ ಎಂದು ಹೆದರಿದ ಕಾಂಗ್ರೆಸ್ ಸರಕಾರ ಉತ್ಪಾಲ್ ಸಿಂಗ್ ನನ್ನು ಬಂಧಿಸಿತು. ಈ ಯಾವ ಸತ್ಯಗಳನ್ನು ನಮ್ಮ ಇತಿಹಾಸದ ಪುಟಗಳು ತಿಳಿಸುವುದೇ ಇಲ್ಲ.        
  

ರವಿತೇಜ ಶಾಸ್ತ್ರೀ                    

Wednesday, June 10, 2015

ತುಷ್ಟೀಕರಣವೆಂಬ ಇಳಿಜಾರಿನಲ್ಲಿ ಕಾಲಿಟ್ಟ ಮೋದಿ!


ತುಷ್ಟೀಕರಣವೆಂದರೆ ಮತಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರಿಗೆ ವಿವಿಧ ಸೌಲಭ್ಯಗಳನ್ನು ನೀಡುವುದು.  ಈ ತುಷ್ಟೀಕರಣ ಇಂದು ರಾಜಕೀಯದ ಭಾಗವಾಗಿಬಿಟ್ಟಿದೆ. ತುಷ್ಟೀಕರಣವಿಲ್ಲದೇ ರಾಜಕೀಯವೇ ಎಂಬಂತಹ ಪರಿಸ್ಥಿತಿ ಇಂದು ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನಿರ್ಮಾಣವಾಗಿದೆ.

ಹೆಮ್ಮರವಾಗಿ ಬೆಳೆದಿರುವ ಈ ತುಷ್ಟೀಕರಣದ ಬೇರನ್ನು ಹುಡುಕಲು ಸ್ವಾತಂತ್ರ್ಯ ಪೂರ್ವಕ್ಕೆ ತೆರಳಬೇಕು. ತುಷ್ಟೀಕರಣ ರಾಜಕಾರಣ ಶುರುವಾಗಿದ್ದು 1920-1930 ರ ದಶಕದಲ್ಲಿ. ತುಷ್ಟೀಕರಣದ ಸಸಿ ನೆಟ್ಟಿದ್ದು ಭಾರತೀಯ ಕಾಂಗ್ರೆಸ್. ಅಂದು ಕಾಂಗ್ರೆಸ್ ಗೆ ಹಿಂದೂ ಮುಸ್ಲಿಂ ಏಕತೆ ಸಾಧಿಸದೆ ಸ್ವಾತಂತ್ರ್ಯ ಗಳಿಸುವುದು ಅಸಾಧ್ಯ ಎಂಬ ಭ್ರಮೆ ಆವರಿಸಿತ್ತು. ಒಡೆದು ಆಳುವ ನೀತಿಯನ್ನು ಆನುಸರಿಸುತ್ತಿದ್ದ ಬ್ರಿಟಿಷರು ಧರ್ಮದ ಆಧಾರದ ಮೇಲೆ ಈ ದೇಶವನ್ನು ಒಡೆಯಲು ಪ್ರಯತ್ನಿಸಿದರು. ಹಿಂದೂ- ಮುಸ್ಲಿಂ ಒಟ್ಟಾಗಿ ಬಂದರೆ ಮಾತ್ರ ಸ್ವಾತಂತ್ರ್ಯ ನೀಡುತ್ತೇವೆ ಎಂದು ನಂಬಿಸಿದರು.

ಮುಸ್ಲಿಮರನ್ನು ಓಲೈಸಿಕೊಳ್ಳಲು ಅಂದಿನ ಕಾಂಗ್ರೆಸ್ ನಾಯಕರಾದ ಗಾಂಧಿ ಮತ್ತು ನೆಹರೂ ತುಷ್ಟೀಕರಣವೆಂಬ ಸಸಿಯನ್ನು ನೆಟ್ಟರು. ಮುಸ್ಲಿಮರನ್ನು ತಮ್ಮೆಡೆಗೆ ಸೆಳೆಯುವ ಸಲುವಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದರು. ಇಲ್ಲಿ ಮುಸ್ಲಿಮರೆ ಪ್ರತಿನಿಧಿ, ಮುಸ್ಲಿಮರೆ ಮತದಾರರು. ತುಷ್ಟೀಕರಣದ ಸಸಿ ಬೆಳೆಸಲು ಕಾಂಗ್ರೆಸ್ ನೀರುಣಿಸಿತು. ಆಗ ರಾಜಕೀಯದಲ್ಲಿ ಕೂಸಾಗಿದ್ದ ಮುಸ್ಲಿಂ ಲೀಗ್ ಬೆಳೆಯಿತು. ಇದರ ಪರಿಣಾಮ ಮುಸ್ಲಿಮರು ರಾಷ್ಟ್ರೀಯರಾಗುವ ಬದಲು ಮತಾಂಧರಾದರು. ಮುಸ್ಲಿಂ ಲೀಗ್ ಪ್ರತ್ಯೇಕ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು.

ಕಾಂಗ್ರೆಸ್ ಬೆಳೆಸಿದ ಮುಸ್ಲಿಂ ತುಷ್ಟೀಕರಣವೆಂಬ ಗಿಡ ಕೊಟ್ಟ ಫಲವೇನು ಗೋತ್ತೇ? ಅದೇ ಖಿಲಾಫತ್ ಚಳುವಳಿ. ಯಾವುದೋ ದೂರ ದೇಶದಲ್ಲಿ ಖಲೀಫನ ಪದಚ್ಯುತಿಯನ್ನು ಖಂಡಿಸುವ ಆಂದೋಲನ ಈ ಖಿಲಾಫತ್ ಚಳುವಳಿ. ಈ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಇದರ ಪರಿಣಾಮ ಮುಸ್ಲಿಂ ಮತಾಂಧರು ದಂಗೆಯೆದ್ದು ಕೇರಳದಲ್ಲಿ ಅಮಾಯಕ ಹಿಂದೂಗಳ ಮಾರಣಹೋಮ ಮಾಡಿದರು. ಇದು ತುಷ್ಟೀಕರಣ ನೀಡಿದ ವಿಷಫಲ. ಹಿಂದೂ - ಮುಸ್ಲಿಂ ಏಕತೆಯ ಭ್ರಮೆಯಲ್ಲಿದ್ದ ಗಾಂಧಿಗೆ ತುಷ್ಟೀಕರಣದ ಘೋರ ಪರಿಣಾಮಗಳು ಅರಿವಿಗೆ ಬರಲಿಲ್ಲ.

ಮುಸ್ಲಿಂ ತುಷ್ಟೀಕರಣದಿಂದ ಲಾಭ ಪಡೆದ ಮುಸ್ಲಿಂ ಲೀಗ್ ಮುಂದೆ ಪ್ರತ್ಯೇಕ ದೇಶದ ಬೇಡಿಕೆಯನ್ನು ಇಟ್ಟಿತು. ಇದರ ಪರಿಣಾಮ ನಮಗೆಲ್ಲರಿಗೂ ತಿಳಿದೆ ಇದೆ. ಭಾರತ ಇಬ್ಭಾಗವಾಗಿ ಎರಡು ಹೋಳಾಯಿತು. ಭಾರತದ ವಿಭಜನೆಯೂ ಸಹ ತುಷ್ಟೀಕರಣದ ವಿಷಫಲವೇ.  ವಿಭಜನೆಯ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದವು. ಆದರೂ ನಮ್ಮ ರಾಜಕಾರಣಿಗಳಿಗೆ ಅರ್ಥವಾಗಲೇ ಇಲ್ಲ. ಸ್ವಾತಂತ್ರ್ಯ ಬಂದ ನಂತರವೂ ಕಾಂಗ್ರೆಸ್ ಮತಕ್ಕಾಗಿ ತುಷ್ಟೀಕರಣವನ್ನು ಮುಂದುವರೆಸಿತು. ದೇಶದ ಮೊದಲ ಪ್ರಧಾನಿಯಾದ ನೆಹರೂ ಸಾಹೇಬರು ತುಷ್ಟೀಕರಣದ ಗಿಡವನ್ನು ಮರವಾಗಿ ಬೆಳೆಸಿದರು ಇದರ ಪರಿಣಾಮವೇ ಕಾಶ್ಮೀರ ಸಮಸ್ಯೆ.  ಕಾಶ್ಮೀರದಲ್ಲಿ ಇಂದು ಪ್ರತ್ಯೇಕವಾದಿಗಳು ನಮ್ಮ ಸೇನೆಯ ಮೇಲೆಯೇ ಆಕ್ರಮಣ ಮಾಡುತ್ತಾರೆ. ಮುಂದೆ ಆರವತ್ತು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಮುಂದುವರೆಸಿತು. ತುಷ್ಟೀಕರಣದಿಂದ ಅಲ್ಪಾಸಂಖ್ಯಾತರು ದೇಶ ನಿಷ್ಠರಾಗುವ ಬದಲು ಧರ್ಮ ನಿಷ್ಠರಾದರು. ಇಂದು ದೇಶದ ಬಹುದೊಡ್ಡ ಪಿಡುಗು ಎಂದೇ ಪರಿಗಣಿಸುವ ಭಯೋತ್ಪಾದನೆಯೂ ಸಹ ತುಷ್ಟೀಕರಣದ ವಿಷಫಲವೇ.

2014 ರಲ್ಲಿ ವಿಜಯಿಯಾಗಿ ಅಧಿಕಾರ ಹಿಡಿದ ಮೋದಿ ತುಷ್ಟೀಕರಣ ರಾಜಕಾರಣಕ್ಕೆ ತಿಲಾಂಜಲಿ ನೀಡುತ್ತಾರೆ ಎಂದು ದೇಶ ಭಾವಿಸಿತ್ತು. ಆದರೆ ಇಂದು ಮೋದಿಯೂ ಸಹ ತುಷ್ಟೀಕರಣದ ಮರಕ್ಕೆ ಪೋಷಣೆ ಮಾಡಲು ಹೊರಟಿದ್ದಾರೆ. ಹಿಂದೂತ್ವದಿಂದಲೇ ಬೆಳೆದ ಬಿಜೆಪಿಗೆ ಇಂದು ಹಿಂದೂತ್ವವೇ ಬೇಡವಾಗಿದೆ. ವಿಶ್ವಕ್ಕೆ ಹಾಲು ನೀಡುವ ಗೋ ಮಾತೆ ಇಂದು ಯಾರ ಬೆಂಬಲವು ಇಲ್ಲದೆ ತಬ್ಬಲಿಯಾಗಿದ್ದಾಳೆ. ಹಿಂದೂಗಳ ಶ್ರದ್ದಾ ಪುರುಷ ರಾಮನ ಭವ್ಯ ರಾಮಮಂದಿರ ನಿರ್ಮಾಣದ ಕನಸು ಕನಸಾಗಿಯೇ ಉಳಿಯುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನೇತಾಜಿ ಮತ್ತು ಶಾಸ್ತ್ರೀಜಿಯಂತ ದೇಶಭಕ್ತರ ಸಾವಿನ ರಹಸ್ಯ ಬಯಲಾಗುವುದು ಮರೀಚಿಕೆಯಾಗಿದೆ. ನಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆತಟ್ಟಿ ಹೇಳಿದ ಮೋದಿ ಇಂದು ಸೆಕ್ಯುಲರ್ ಆಗಲು ಹೊರಟಿದ್ದಾರೆ.

ಕಾಲಿಗೆ ಚಕ್ರ ಕಟ್ಟಿಕೊಂಡು ವಿದೇಶ ಪ್ರವಾಸ ಮಾಡಿ ಮೋದಿ ವಿಶ್ವಸಂಸ್ಥೆಯಿಂದ  ಜೂನ್ 22ರಂದು ವಿಶ್ವ ಯೋಗ ದಿನಾಚರಣೆ ಮಾಡಲು ಮಾನ್ಯತೆಗಳಿಸಿದರು. ಆದರೆ ಯಾರೋ ಮತಾಂಧರು ಸೂರ್ಯ ನಮಸ್ಕಾರವನ್ನು ವಿರೋಧಿಸಿದರು ಎಂದು ಯೋಗದಿಂದ ಸೂರ್ಯ ನಮಸ್ಕಾರವನ್ನೇ ಇಂದು ಕೈಬಿಟ್ಟಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿದ್ದಾರೆ. ಶ್ರದ್ದಾ ಪುರುಷ ಶ್ರೀರಾಮ ಮಂದಿರದ ನಿರ್ಮಾಣ ಇಂದು ಮೋದಿಗೆ ಬೇಡವಾಗಿದೆ. ತಬ್ಬಲಿ ಗೋ ಮಾತೆಯ ಹತ್ಯೆಯನ್ನು ನಿಷೇಧಿಸಲು ಅವರು ಮೀನಮೇಷ ಎಣಿಸುತ್ತಿದ್ದಾರೆ. ಇದೇ ನೀತಿಯನ್ನು ಹಿಂದಿನ ಸರ್ಕಾರ ಕಾಂಗ್ರೆಸ್ ಅನುಸರಿಸಿತ್ತು. ಇದನ್ನೇ ಮೋದಿಯೂ ಮುಂದುವರೆಸಿದರೆ ಮೋದಿಗೂ ಕಾಂಗ್ರೆಸ್ ಏನು ವ್ಯತ್ಯಾಸವಿದೆ ಹೇಳಿ. ಹಿಂದೂತ್ವವಿಲ್ಲದೇ ಈ ದೇಶದ ಉಳಿವು ಅಸಾಧ್ಯ ಎಂಬದನ್ನು ಮೋದಿ ಮರೆತಂತಿದೆ.

ಈ ತುಷ್ಟೀಕರಣವೆಂಬುದು ಇಳಿಜಾರಿನಂತೆ. ಒಮ್ಮೆ ಇಳಿಜಾರಿನಲ್ಲಿ ಕಾಲಿಟ್ಟರೆ ಜಾರುತ್ತಾ ಸಾಗಬೇಕು. ಈ ತುಷ್ಟೀಕರಣದಿಂದ ಭಾರತ ಘೋರ ಪರಿಣಾಮಗಳನ್ನು ಎದುರಿಸಿದೆ. ಇದನ್ನೇ ಮುಂದುವೆರಸಿದರೆ ಭಾರತ ಮತ್ತಷ್ಟು ಘೋರ ಪರಿಣಾಮಗಳನ್ನು ಎದುರಿಸಬೇಕಾದೀತು. ಈಗ ಎಚ್ಚೆತ್ತುಕೊಳ್ಳುವ ಸಮಯ ಎಚ್ಚೆತ್ತುಕೊಂಡರೆ ಈ ದೇಶ ಉಳಿದೀತು ಎಚ್ಚರ!

ರವಿತೇಜ ಶಾಸ್ತ್ರೀ

Thursday, May 28, 2015

ಈ ರಾಷ್ಟ್ರವನ್ನುಳಿಸಿದ ನಿಜ ಮಹಾತ್ಮಾ ಸ್ವಾತಂತ್ರ್ಯ ವೀರ ಸಾವರ್ಕರ್!

 8 ಜುಲೈ 1910, ಎಸ್. ಎಸ್ ಮೋರಿಯ ಎಂಬ ಹಡಗು ಫ್ರಾನ್ಸ್‌ನ ಬಂದರು ಮರ್‌ಸೈಲ್ಸ್ (Marseilles) ತಲುಪಿತ್ತು. ಹಡಗಿನಲ್ಲಿದ್ದ ಒಬ್ಬ ಮಹಾನ್ ಕ್ರಾಂತಿಕಾರಿ ಶರೀರಬಾಧೆ ತೀರಿಸುವ ನೆಪದಲ್ಲಿ ಹಡಗಿನ ಶೌಚಾಲಯ ಪ್ರವೇಶಿಸಿ, ಬಾಗಿಲಿನ ಚಿಲಕ ಹಾಕಿ, ತನ್ನ ಬಟ್ಟೆಯಿಂದ ಕಿಟಕಿಯನ್ನು ಮುಚ್ಚಿ, ಯಾರಿಗೂ ಕಾಣದಂತೆ ಹಡಗಿನ ಪಾರ್ಶ್ವದ ಕಂಡಿಯ ಮೂಲಕ  ಸಮುದ್ರಕ್ಕೆ ಧುಮುಕಿದ. ಕಂಡಿಯ ಮೂಲಕ ಹಾರುವಾಗ ಮೈ ಕೈಯ ಚರ್ಮ ಕೆಲವೆಡೆ ತರಚಿ ಹೋಯಿತು. ಆತ  ಸಮುದ್ರದಲ್ಲಿ ಈಜುವುದನ್ನು ಗಮನಿಸಿದ ಕಾವಲುಗಾರರು ಆತನತ್ತ ಗುಂಡು ಹಾರಿಸಿದರು. ಆತ ನೀರಲ್ಲಿ ಮುಳುಗಿ, ಆಗಾಗ ತಲೆಯೆತ್ತಿ, ಪುನಃ ಮುಳುಗಿ, ಈಜುತ್ತಾ ಈಜುತ್ತಾ ಗುಂಡೇಟು ತಪ್ಪಿಸುತ್ತಾ ನಾಟಕೀಯವಾಗಿ ಬಂದರಿನತ್ತ ತಲುಪಿದ.  ಒಂದೆಡೆ ದಂಡೆಗೆ ಅಪ್ಪಳಿಸುವ ಗುಂಡಿನ ದಾಳಿ, ಹಿಂಬಾಲಿಸುವ ಈಜುಗಾರರು ಮತ್ತು ದೋಣಿ, ಅವೆಲ್ಲವನ್ನೂ ತಪ್ಪಿಸಿಕೊಂಡು ದಡ ಸೇರಿದ ಸಾಹಸ ಹರಸಾಹಸವೇ ಆಗಿತ್ತು!  ಇತಿಹಾಸದಲ್ಲಿ ಹಿಂದೆಂದೂ ನಡೆಯದ ಅದ್ಭುತ ಘಟನೆ! ಇತಿಹಾಸ ಕಂಡ ಸಾಗರ ಸಾಹಸ! ಈ ಅಪ್ರತಿಮ ಸಾಹಸ ಮಾಡಿದ್ದು ಬೇರಾರು ಅಲ್ಲ ಅವರೇ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್.

ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನರಂತೆ ಕಾಡಿ, ರಾಷ್ಟ್ರ ಮುಕ್ತಿಯ ಮಹಾ ಯಜ್ಞದಲ್ಲಿ ಹವಿಸ್ಸಿನಂತೆ ಸರ್ವವನ್ನು ರಾಷ್ಟ್ರಕ್ಕೆ ಸಮರ್ಪಿಸಿ, ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಕಾಲ ಘೋರ ಕರಿನೀರಿನ ಶಿಕ್ಷೆಗೆ ಒಳಗಾದವರು ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ಅಪ್ರತಿಮ ವೀರ ವಿನಾಯಕ ದಾಮೋದರ ಸಾವರ್ಕರ್


1883 ಮೇ 28 ರಂದು ಜನಿಸಿದ ಸಾವರ್ಕರ್ ಚಿಕ್ಕಂದಿನಲ್ಲೇ ತಂದೆ ತಾಯಿ ಕಳೆದುಕೊಂಡು ಅಣ್ಣ ಬಾಬಾರಾವ್  ಸಾವರ್ಕರ್ ಅವರ ಆಶ್ರಯದಲ್ಲಿ ಬೆಳೆದರು. ಅಣ್ಣ ಸಾವರ್ಕರ್ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸಾವರ್ಕರ್ ತಾರುಣ್ಯದಲ್ಲಿ “ಮಿತ್ರಮೇಳ” ಎಂಬ ಗುಂಪು ಹುಟ್ಟುಹಾಕಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ನಂತರ “ಅಭಿನವ ಭಾರತ” ಎಂಬ ಸಂಘಟನೆ ಸ್ಥಾಪಿಸಿ ವಿದೇಶೀ ವಸ್ತುಗಳನ್ನು ಸುಡುವ ಹೋಳಿ( ಗಾಂಧೀಜಿ ಮುಂದೆ ಇದೆ ವಿಧಾನ ಅನುಸರಿಸಿದರು) ಆಚರಿಸಿದರು. ಪುಣೆಯ ಫಾರ್ಗುಸನ್ ಕಾಲೇಜಿನಲ್ಲಿ ಬಿ. ಎ ಪದವಿ ಮುಗಿಸಿ ಮುಳ್ಳನ್ನು ಮುಳ್ಳಿನಿಂದ ತೆಗಯಬೇಕೆಂದು ನಿರ್ಧರಿಸಿ ಕಾನೂನು ಪದವಿ ಪಡೆಯಲು ಇಂಗ್ಲೆಂಡಿಗೆ ಹಾರಿದರು. ಶ್ಯಾಮ್ ಜೀ ಕೃಷ್ಣ ವರ್ಮ   ಭಾರತ ಭವನದಲ್ಲಿ ಯುವಕರನ್ನು ಸಂಘಟಿಸಿ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯದ ಜ್ಯೋತಿ ಮೊಳಗಿಸಿದರು.1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಉತ್ಕೃಷ್ಟವಾದ ಗ್ರಂಥ ಬರೆದದರು. ಮದನಲಾಲ್ ಧಿಂಗ್ರಾ ಎಂಬ ಬಿಸಿ ರಕ್ತದ ಯುವಕರಲ್ಲಿ ಭಾರತದ ಬಗ್ಗೆ ಅಭಿಮಾನ ಮೂಡಿಸಿದರು. ಮುಂದೆ ಸಾವರ್ಕರ್ ಪ್ರೇರಣೆಯಿಂದ ಧಿಂಗ್ರಾ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ವಿಷ ಬೀಜಬಿತ್ತುತ್ತಿದ್ದ ಕರ್ಜನ್ ವಾಲಿಯಾನನ್ನು ಗುಂಡಿಕ್ಕಿ ಕೊಂದ. ಸಾದಾ ಸಾವರ್ಕರ್ ಬಂಧಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರು ಸಾವರ್ಕರ್ ರನ್ನು ಬಂಧಿಸಿದರು.ಪೊಲೀಸರು ಹಡಗಿನಲ್ಲಿ ಸಾವರ್ಕರ್ ಅವರನ್ನು ಹಡಗಿನಲ್ಲಿ ಭಾರತಕ್ಕೆ ಕರದೊಯ್ಯುವಾಗ ಆಶ್ಚರ್ಯಕರ ರೀತಿಯಲ್ಲಿ ಹಡಗಿನ ಕಿಟಕಿ ಹೊಡೆದು ಸಮುದ್ರಕ್ಕೆ ಹಾರಿ ಈಜಿಕೊಂಡು ಫ್ರಾನ್ಸ್ ಸೇರಿಕೊಂಡರು. ಫ್ರಾನ್ಸ್ ನಲ್ಲಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದು ಸಾವರ್ಕರ್ ಭಾವಿಸಿದ್ದರು ಆದರೆ ಬ್ರಿಟಿಷರ ಲಂಚಕ್ಕೆ ಬಲಿಯಾದ ಫ್ರಾನ್ಸ್ ಪೊಲೀಸರು ಸಾವರ್ಕರ್ ರನ್ನು ಬ್ರಿಟಿಷ್ ಪೋಲೀಸರ ಸುಪರ್ದಿಗೆ ವಹಿಸಿದರು. ಬ್ರಿಟಿಷ್ ಸರ್ಕಾರ ಸಾವರ್ಕರ್ ಗೆ 2 ಜೀವಾವಧಿ ಶಿಕ್ಷೆ ವಿಧಿಸಿತು ಅಂದರೆ ಒಟ್ಟು 50 ವರ್ಷ ಕರಿನೀರಿನ ಶಿಕ್ಷೆ. ಆಗಿನ ಕಾಲದಲ್ಲಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ನೀಡಲಾಗುತ್ತಿದ್ದ ಅತ್ಯಂತ ಕಟೋರ ಶಿಕ್ಷೆಯಾಗಿತ್ತು. ಅದರೂ ಸಾವರ್ಕರ್ ಕುಗ್ಗದೆ ಜೈಲಿನಲ್ಲಿ ಕೈದಿಗಳ ಹಕ್ಕುಗಳಿಗೆ ಹೋರಾಡಿದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದರು. 11 ವರ್ಷಗಳ ನಂತರ ಕರಿನೀರಿನ ಶಿಕ್ಷೆಯಿಂದ ಮುಕ್ತಿ ಹೊಂದಿ ಭಾರತದ ಸಾಮಾನ್ಯ ಜೈಲಿಗೆ ಸ್ಥಳಾಂತರವಾದರು. ಖಿಲಾಪತ್ ಚಳುವಳಿಯಿಂದ ನೊಂದು ಹಿಂದುತ್ವದ ಕುರಿತು ಕೃತಿ ರಚಿಸಿ ಹಿಂದೂ ಧರ್ಮದ ಉದ್ದಾರಕ್ಕಾಗಿ ಶ್ರಮಿಸಿದರು. ಜೈಲಿನಿಂದ ಬಿಡುಗಡೆಯಾಗಿ “ಹಿಂದೂ ಮಹಾಸಭಾ” ಎಂಬ ಪಕ್ಷ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತಾತ್ಯಾರಾವ್ ಎಂದು ಪ್ರಸಿದ್ದರಾದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಅಸಂಖ್ಯಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.  
                  
ನಮಗೆ ಸ್ವಾತಂತ್ರ್ಯ ದೊರಕಿದ್ದು ನೇತಾಜಿ ಮತ್ತು ಸಾವರ್ಕರ್ ಅವರಿಂದ!

ಬರಿ ಅಹಿಂಸೆಯಿಂದ ನಮಗೆ ಸ್ವಾತಂತ್ರ್ಯ ಬರಲಿಲ್ಲ. ಸಾವರ್ಕರ್, ನೇತಾಜಿ ಮತ್ತು ಅಸಂಖ್ಯಾ ಕ್ರಾಂತಿಕಾರಿಗಳ ಬಲಿದಾನದಿಂದಲೇ ನಮಗೆ ಸ್ವಾತಂತ್ರ್ಯ ದೊರಕಿದ್ದು.
ಎರಡನೇ ಮಹಾಯುದ್ದ ಮುಗಿದ ನಂತರ ಸೈನ್ಯದಲ್ಲಿ ನೇತಾಜಿಯವರ ಅಜಾದ್ ಹಿಂದ್ ಫೌಜ್ ನ ಪ್ರಭಾವ ಹೆಚ್ಚಾಗಿ ಬಂಡಾಯ ಶುರುವಾಯಿತು. ನೌಕ ಪಡೆ ಬ್ರಿಟಿಷರ ವಿರುದ್ದ ತಿರುಗಿಬಿದ್ದಿತು. ಸೇನೆಯ ಸಹಾಯವಿಲ್ಲದೇ ದೇಶವನ್ನು ಆಳುವುದು ಆಸಾಧ್ಯ ಎಂಬ ಸತ್ಯ ಬ್ರಿಟಿಷರಿಗೆ ತಿಳಿಯಿತು. ಇದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ನೇತಾಜಿಗೆ ಸೇನೆ ಸ್ಥಾಪಿಸಲು ಪ್ರೇರಣೆ ನೀಡಿದವರು ಸಾವರ್ಕರ್. ಇದರ ಜೊತೆಗೆ ಎರಡನೇ ಮಹಾಯುದ್ದದ ಸಂದರ್ಭದಲ್ಲಿ   ದೇಶವನ್ನು ಸುತ್ತಿ, ಯುವಕರನ್ನು ಸಂಘಟಿಸಿ ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿದರು ಸಾವರ್ಕರ್.  ನಮಗೆ ಸ್ವಾತಂತ್ರ್ಯ ದೊರಕಿದ್ದು ಸಾವರ್ಕರ್ ರಿಂದಲೇ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ.

ಅಂದು ಸಾವರ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶವನ್ನು ಸುತ್ತಿ ಯುವಕರನ್ನು ಜಾಗೃತಿ ಮೂಡಿಸಿದ ಪರಿಣಾಮ ನಮ್ಮ ದೇಶ ಉಳಿಯಿತು. ಇದರಿಂದ ಸೈನ್ಯದಲ್ಲಿ ಶೇ. 20 ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ. 70 ಕ್ಕೆ ಏರಿತು. ಈ ಸಂದರ್ಭದಲ್ಲಿ ಸೇನೆಗೆ ಸೇರಬೇಡಿ ಎಂದು ಕಾಂಗ್ರೆಸ್ ಕರೆ ಕೊಟ್ಟಿತು. ಸ್ವಾತಂತ್ರ್ಯ ಬಂದ ನಂತರ ಸೈನ್ಯದಲ್ಲಿದ್ದ ಎಲ್ಲ ಮುಸ್ಲಿಂ ಸೈನಿಕರು ಪಾಕಿಸ್ತಾನಕ್ಕೆ ಹೋದರು. ಈ ಸಂದರ್ಭದಲ್ಲಿ ಸೈನ್ಯದಲ್ಲಿ ಹಿಂದುಗಳೇ ಇಲ್ಲದೇ ಹೋಗಿದ್ದರೆ ಭಾರತದ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಭಾರತದ ಕೆಂಪು ಕೋಟೆಯ ಮೇಲೆ ತಿರಂಗಾ ಹಾರದೆ ಪಾಕಿಸ್ತಾನದ ಧ್ವಜ  ಹಾರುವ ಎಲ್ಲ ಸಾಧ್ಯತೆಗಳಿತ್ತು. ನಮ್ಮ ದೇಶವನ್ನು ಉಳಿಸಿದ ನಿಜ ಮಹಾತ್ಮಾ ಸಾವರ್ಕರ್.

ಸರ್ವವನ್ನು ದೇಶಕ್ಕೆ ಅರ್ಪಿಸಿದ ಮಹಾನ್ ಪುರುಷ ಸಾವರ್ಕರ್ ನಮ್ಮ ದೇಶದ ಮಹಾತ್ಮಾ ನಾಗ ಬೇಕಿತ್ತು. ಆದರೆ ಇಂತಹ ಮಹಾತ್ಮನನ್ನು ನೆಹರು ವಿನಾಕಾರಣ ಗಾಂಧಿ ಹತ್ಯೆಯಲ್ಲಿ ಅರೋಪಿಯನ್ನಾಗಿಸಿ ಅವಮಾನಿಸಿದರು. ಆರೋಪ ಸಾಬೀತಾಗದೆ ಸಾವರ್ಕರ್ ಬಿಡುಗಡೆ ಹೊಂದಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ನೆಹರು ಸಾವರ್ಕರ್ ಶಿಕ್ಷೆ ಅನುಭವಿಸಿದ ಅಂಡಮಾನ್ ಜೈಲನ್ನು ನಾಶಮಾಡಿ ಆಸ್ಪತ್ರೆ ಕಟ್ಟಿಸಲು ಮುಂದಾದರು ಆದರೆ ಅದು ಸಾಧ್ಯವಾಗಲಿಲ್ಲ. ಮಹಾನ್ ಕುತಂತ್ರಿ ನೆಹರು ತನ್ನ ಸ್ವಾರ್ಥಕ್ಕಾಗಿ ಸಾವರ್ಕರ್ ಗೆ ನೋವು ಕೊಟ್ಟರು.ಕೊನೆಗೆ ನೆಹರು ಸತ್ತಾಗ ಶಾಸ್ತ್ರೀಜಿ ಸಾವರ್ಕರ್ ಗೆ ಸರ್ಕಾರದಿಂದ ಪಿಂಚಣಿ ಬರುವ ವ್ಯವಸ್ಥೆ ಮಾಡಿಸಿ ಅವರಿಗೆ ಗೌರವ ಸಲ್ಲಿಸಿದರು.1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು. ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ  ಮಿಡಿದರು. ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ  ಶ್ರದ್ದಾಂಜಲಿ ಸಲ್ಲಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ನಾಡ ಮುಕ್ತಿಯ ಯಜ್ಞದಲ್ಲಿ ಹವಿಸ್ಸಿನಂತೆ ತನ್ನನ್ನು ತಾನು ರಾಷ್ಟ್ರಕ್ಕೆ ಸಮರ್ಪಿಸಿದ ಮಹಾನ್ ವೀರ, ದೇಶಕ್ಕಾಗಿ ಐದು ದಶಕಗಳ ಕಾಲ ಕಟೋರ ಕರಿನೀರಿನ ಶಿಕ್ಷೆಗೊಳಗಾದ ಮಹಾನ್ ದೇಶಭಕ್ತನ ಕುರಿತು ನಮ್ಮ ಪಠ್ಯಪುಸ್ತಕದಲ್ಲಿ ಕೇವಲ ಎರಡು ಸಾಲಿದೆ. ಇದು ನಾವು ಸಾವರ್ಕರ್ ಗೆ ನೀಡಿರುವ ಪುರಸ್ಕಾರ! ಪಠ್ಯಪುಸ್ತಕದಲ್ಲಿ ಇಲ್ಲದಿದ್ದರೇನು ನಾವು ನಮ್ಮ ಹೃದಯದಲ್ಲಿ ಸಾವರ್ಕರ್ ಗೆ ಉಚ್ಚ ಸ್ಥಾನವನ್ನು ನೀಡೋಣ, ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸೋಣ.

ಇಂದು  ಅವರ ಜನ್ಮ ದಿನ. ಮಹಾನ್ ನಾಯಕನಿಗೆ ನನ್ನ ನಮನಗಳು.

ಸ್ವಾತಂತ್ರ್ಯ ಲಕ್ಷ್ಮಿಗೆ ಜಯವಾಗಲಿ.

ರವಿತೇಜ ಶಾಸ್ತ್ರೀ  

ಉತ್ತಿಷ್ಠ ಭಾರತ    

                                     

Saturday, May 2, 2015

ಗಾಂಧಿ ಪಟೇಲರನ್ನು ಬಿಟ್ಟು ನೆಹರೂರನ್ನು ಪ್ರಧಾನಿ ಮಾಡಿದ್ದೇಕೆ?


"History is written by the victors" ಈ ಮಾತು ಅಕ್ಷರಶಃ ಸತ್ಯ. ಭಾರತದ ಇತಿಹಾಸವನ್ನು ಬರೆದಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ತಾನೇ ವಿಜಯಿ ಎಂದು ಬಿಂಬಿಸಿಕೊಂಡ ಕಾಂಗ್ರೆಸ್ ಪಕ್ಷ. ಸುಳ್ಳಿನ ಕಂತೆಗಳನ್ನು ಪೋಣಿಸಿ ಅದನ್ನೇ ನಿಜ ಇತಿಹಾಸವೆಂದು ನಮ್ಮನ್ನು ನಂಬಿಸಿದವರು ಕಾಂಗ್ರೆಸ್ ಮತ್ತು ಅದರ ಮುಂಚೂಣಿ ನಾಯಕರಾದ ಗಾಂಧಿ ಮತ್ತು ನೆಹರೂ.
ಅಧಿಕೃತ ಇತಿಹಾಸದ ಪ್ರಕಾರ, ಜವಾಹರಲಾಲ್ ನೆಹರೂ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಗೊಂಡರು ಮತ್ತು ಸರ್ದಾರ್ ಪಟೇಲ್ ಉಪ ಪ್ರಧಾನಿಯಾದರು. ಅರ್ಹತೆಗೆ ಅನುಗುಣವಾಗಿ ಈ ಆಯ್ಕೆ ನಡೆಯಿತು ಎಂದು ನಮ್ಮ  ಇತಿಹಾಸ ತಿಳಿಸುತ್ತದೆ. ಆದರೆ ಈ ಇತಿಹಾಸ ಮಹಾನ್ ದೇಶ ಭಕ್ತ, ಭಾರತದ ‘ ಉಕ್ಕಿನ ಮನುಷ್ಯ ’ ಸರ್ದಾರ್ ಪಟೇಲ್ ಗೆ ದ್ರೋಹ ಬಗೆದಿದೆ. ನಮ್ಮ ಇತಿಹಾಸ ಸಾಕಷ್ಟು ಸತ್ಯಗಳನ್ನು ಮರೆಮಾಚಿದೆ.  ಸ್ವಾತಂತ್ರ್ಯ ಬಂದ ನಂತರ  ದೇಶದ ಮೊದಲ ಪ್ರಧಾನಿಯ ಆಯ್ಕೆಯ ಸಂದರ್ಭದಲ್ಲಿ ಇಡೀ ಕಾಂಗ್ರೆಸ್ ಪಟೇಲರನ್ನು ಬೆಂಬಲಿಸಿತ್ತು. ದಕ್ಷ ಆಡಳಿತಗಾರರಾಗಿದ್ದ ಪಟೇಲರು ಪ್ರಧಾನಿಯಾಗಲು ಸೂಕ್ತ ವ್ಯಕ್ತಿಯಾಗಿದ್ದರು. ಆದರೂ ಪಟೇಲರು ಯಾಕೆ ಪ್ರಧಾನಿಯಾಗಲಿಲ್ಲ? ಗಾಂಧಿ ಪಟೇಲರನ್ನು ಬಿಟ್ಟು ನೆಹರೂರನ್ನು ಪ್ರಧಾನಿ ಮಾಡಿದ್ದೇಕೆ? ನಮ್ಮ ಇತಿಹಾಸ ತಿಳಿಸದ ಘೋರ ಸತ್ಯಗಳನ್ನು ನಾವು ಅರಿಯಬೇಕಿದೆ.

1946ರ ಹೊತ್ತಿಗೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದು ಖಾತ್ರಿಯಾಗಿತ್ತು. ಎರಡನೇ ಮಹಾಯುದ್ದ ಮುಗಿದಿತ್ತು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ನಿರ್ಧರಿಸಿದ್ದರು. ದೇಶದ ದೊಡ್ಡ ಪಕ್ಷ, ಸ್ವಾತಂತ್ರ್ಯ ಆಂದೋಲನದ ನೇತೃತ್ವ ವಹಿಸಿದ್ದ, 1946ರ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸಿದ್ದ ಕಾಂಗ್ರೆಸ್ ಮಧ್ಯಂತರ ಸರ್ಕಾರವನ್ನು ರಚಿಸಬೇಕಿತ್ತು. ಕಾಂಗ್ರೆಸ್ ಅಧ್ಯಕ್ಷರೇ ಮುಂದಿನ ಪ್ರಧಾನಿಯಾಗಬೇಕಿತ್ತು ಆದುದರಿಂದ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಹೆಚ್ಚಿನ ಮಹತ್ವ ದೊರೆಯಿತು. ಮೌಲಾನ ಅಬ್ದುಲ್ ಕಲಾಂ ಅಜಾದ್ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 6 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಹೆಚ್ಚಿನ ಕಾಂಗ್ರೆಸ್ ನಾಯಕರು ಜೈಲು ಸೇರಿದ್ದರು ಹಾಗಾಗಿ ಚುನಾವಣೆ ನಡೆದಿರಲಿಲ್ಲ. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಅಜಾದ್ ಉಸ್ತುಕರಾಗಿದ್ದರು. ಪ್ರಧಾನಿಯಾಗಬೇಕೆಂಬ ಆಸೆ ಅವರಿಗಿತ್ತು. ಆದರೆ ಅಜಾದ್ ಮತ್ತೊಮ್ಮೆ ಅಧ್ಯಕ್ಷರಾಗುವುದು ಗಾಂಧಿಗೆ ಇಷ್ಟವಿರಲಿಲ್ಲ. ಹಾಲಿ ಅಧ್ಯಕ್ಷರು ಪುನಃ ಅಧ್ಯಕ್ಷರಾಗುವುದು ಸರಿಯಲ್ಲ ಆದ್ದರಿಂದ ಅಜಾದ್ ಸ್ಪರ್ಧಿಸಬಾರದೆಂದು ಗಾಂಧಿ ಆದೇಶಿಸಿದ್ದರು.  ಗಾಂಧಿಯ ಮಾತನ್ನು ಮೀರುವ ಶಕ್ತಿ ಅಜಾದರಿಗೆ ಇರಲಿಲ್ಲ ಅವರು ತೆಪ್ಪಗಾದರು. ನೆಹರೂ ಬಿಟ್ಟು ಬೇರಾರೂ ಅಧ್ಯಕ್ಷರಾಗಬಾರದು ಎಂದು ಗಾಂಧಿ ತೀರ್ಮಾನಿಸಿದ್ದರು.

ಏಪ್ರಿಲ್ 29 1946ರಂದು ಅಧ್ಯಕ್ಷರನ್ನು ಆರಿಸಲು ಕೊನೆಯ ದಿನಾಂಕವಾಗಿತ್ತು. 15 ಕಾಂಗ್ರೆಸ್ ಸಮಿತಿಗಳಲ್ಲಿ  12 ಕಾಂಗ್ರೆಸ್ ಸಮಿತಿಗಳು ಗಾಂಧಿಯ ಆಸೆಯ ವಿರುದ್ದವಾಗಿ ಅಂದರೆ ಸರ್ದಾರ್  ಪಟೇಲರ ಹೆಸರನ್ನು  ಸೂಚಿಸಿದರು. ಇನ್ನು 3 ಸಮಿತಿಗಳು ಯಾರ ಹೆಸರನ್ನು ಸೂಚಿಸಲಿಲ್ಲ. ಇದರಿಂದ ತೀವ್ರ ಬೇಸತ್ತ ಗಾಂಧಿ ಆಚಾರ್ಯ ಕೃಪಲಾನಿಗೆ ಸದಸ್ಯರ ಮನವೊಲಿಸಬೇಕೆಂದು ಆದೇಶಿಸಿದರು. ಆಗ ಕೆಲವು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ನೆಹರು ಹೆಸರನ್ನು ಸೂಚಿಸಿದರು. ಆದರೆ ಅಧ್ಯಕ್ಷರನ್ನು ಆರಿಸುವ ಅವಕಾಶ ಕೇವಲ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಸದಸ್ಯರಿಗಿತ್ತು. ಆದರೆ ಯಾವೊಬ್ಬ ಪ್ರಾದೇಶಿಕ ಸಮಿತಿಯ ಸದಸ್ಯರು ನೆಹರೂ ಹೆಸರನ್ನು ಸೂಚಿಸಲಿಲ್ಲ. ಗಾಂಧಿ ತೀವ್ರವಾಗಿ ಅಸಮಾಧಾನಗೊಂಡರು. ಪರಿಸ್ಥಿತಿಯನ್ನು ತಿಳಿಸಿ ನೆಹರೂರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ನೆಹರೂ ನಾನು ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಲಾರೆ ಎಂದು ತಿಳಿಸಿದರು. ತಮ್ಮ ಪ್ರಿಯ ಶಿಷ್ಯ ನೆಹರೂರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಲೇ ಬೇಕೆಂದು ನಿಶ್ಚಯಿಸಿದ್ದ ಗಾಂಧಿ ಸರ್ದಾರ್ ಪಟೇಲರಿಗೆ ಸ್ಪರ್ಧೆಯಿಂದ ದೂರವಿರಬೇಕೆಂದು ಸೂಚಿಸಿದರು. ಗಾಂಧಿಯವರ ಬಗ್ಗೆ ಆಪಾರ ಅಭಿಮಾನ ಮತ್ತು ಗೌರವ ಹೊಂದಿದ್ದ ಪಟೇಲರು ಒಂದು ಕ್ಷಣವೂ ಯೋಚಿಸದೆ ಚುನಾವಣೆಯಿಂದ ಹಿಂದೆ ಸರಿದರು.  ಗಾಂಧಿಯ ಇಚ್ಚೆಯಂತೆ ನೆಹರೂರ ಪಟ್ಟಾಭಿಷೇಕಯಾಯಿತು.

ಇಲ್ಲಿ ಕಾಡುವ ಪ್ರಶ್ನೆಯೆಂದರೆ, ಸರ್ದಾರ್ ಪಟೇಲರು ಆಪಾರ ಬೆಂಬಲ ಹೊಂದಿದ್ದರೂ ಗಾಂಧಿ ಏಕೆ ಅವರವನ್ನು ಪ್ರಧಾನಿ ಮಾಡಲಿಲ್ಲ? ನೆಹರೂರನ್ನೇ ಆರಿಸಲು ಬಲವಾದ ಕಾರಣವಿತ್ತೆ? ಸರ್ದಾರ್ ಪಟೇಲರ ಸ್ಪರ್ಧೆಯಿಂದ ಹಿಂದೆ ಸರಿದಾಗ ರಾಜೇಂದ್ರ ಪ್ರಸಾದ್ ಅವರು ಅಸಮಾಧಾನಗೊಂಡು ಗಾಂಧಿ ‘ಗ್ಲಾಮರಸ್ ನೆಹರೂ’ ಗಾಗಿ ವಿಶ್ವಾಸಾರ್ಹ ಆಡಳಿತಗಾರನನ್ನು ತ್ಯಾಗಮಾಡಿದರು ಎಂದು ಹೇಳಿಕೆ ನೀಡಿದರು.
ಗ್ಲಾಮರಸ್ ಮತ್ತು ಆಧುನಿಕ ವ್ಯಕ್ತಿತ್ವ ಹೊಂದಿದ್ದರು ಎಂಬ ಕಾರಣಕ್ಕೆ ಗಾಂಧಿ ನೆಹರೂರನ್ನು ಪ್ರಧಾನಿ ಮಾಡಿದರು ಮತ್ತು ‘ನೆಹರೂ ಕುರುಡು ಪ್ರೇಮ’ ಎಂಬ ಕಾಯಿಲೆ ಗಾಂಧಿಗೆ ಬಂದಿತ್ತು. ಈ ಕುರುಡು ಪ್ರೇಮ ಶ್ರೇಷ್ಠ ದೇಶ ಭಕ್ತ ಆಡಳಿತಗಾರ ಪಟೇಲರಿಗೆ ಅನ್ಯಾಯ ಮಾಡಿತು. 1929 ಮತ್ತು 1937 ರ ಚುನಾವಣೆಯ ಸಂದರ್ಭದಲ್ಲಿಯೂ ಸಹ ಗಾಂಧಿ ನೆಹರೂರನ್ನೇ ಬೆಂಬಲಿಸಿ ಸರ್ದಾರ್ ಪಟೇಲರಿಗೆ ದ್ರೋಹ ಬಗೆದಿದ್ದರು. ಸರ್ದಾರ್ ಪಟೇಲರನ್ನು ಸಮಾಧಾನಗೊಳಿಸುವುದು ಸುಲಭ ಆದರೆ ಅಧಿಕಾರದಾಹಿ ನೆಹರೂರನ್ನು ಮನವೊಲಿಸುವುದು ಕಷ್ಟಕರ ಎಂಬ ಸಂಗತಿ ಗಾಂಧಿಗೆ ತಿಳಿದಿತ್ತು.  ಸದಾ ಸೂಟು ಬೂಟು ಧರಿಸಿಕೊಂಡು ಕಂಗೊಳಿಸುತ್ತಿದ್ದ, ಇಂಗ್ಲಿಷ್ ಮಾತಾನಾಡುತ್ತಿದ್ದ  ನೆಹರೂ ಪ್ರಧಾನಿಯಾದರೆ ಒಳ್ಳೆಯದು ಎಂಬ ಭ್ರಮೆ ಗಾಂಧಿಗಿತ್ತು. ಅಪ್ಪಟ ದೇಶೀ ಉಡುಗೆ ಧರಿಸುತ್ತಿದ್ದ ಮತ್ತು ದಕ್ಷ ಆಡಳಿತಗಾರರಾದ ಸರ್ದಾರ್ ಪಟೇಲರು ಗಾಂಧಿಗೆ ಬೇಡವಾಗಿತ್ತು.

ಆದರೆ ಅಂದು ಗಾಂಧಿ ತೆಗೆದುಕೊಂಡ ನಿರ್ಧಾರದಿಂದ ದೇಶ ದುಬಾರಿ ಬೆಲೆಯನ್ನು ತೆತ್ತ ಬೇಕಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ನೆಹರೂ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯದೆ ಸಾಲದ ಕೂಪಕ್ಕೆ ತಳ್ಳಿದರು. ಪ್ರಧಾನಿ ಆಯ್ಕೆ ಸಂದರ್ಭದಲ್ಲಿ ಗಾಂಧಿ ಉಪಯೋಗಿಸಿದ ವೀಟೋ ಪವರ್ ನಿಂದ ಭಾರತ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಯಿತು. ನೆಹರೂ ಬದಲು ಪಟೇಲರೇ ಪ್ರಧಾನಿಯಾಗಿದ್ದರೆ ದೇಶದ ಸ್ಥಿತಿ ಉತ್ತಮವಾಗಿರುತ್ತಿತ್ತು. ಸೂಟು ಬೂಟು ಧರಿಸಿದ ನೆಹರೂ ಸಾದಿಸಿದ್ದು ಏನೂ ಇಲ್ಲ. ಸ್ವದೇಶೀ ಚಿಂತನೆ, ಸತ್ಯಾಗ್ರಹವನ್ನೇ ನಂಬಿದ್ದ ಗಾಂಧಿಗೆ  ಪ್ರಧಾನಿ ಆಯ್ಕೆಯ ಸಂದರ್ಭದಲ್ಲಿ ಈ ತತ್ವ, ಆದರ್ಶಗಳು ನೆನಪಿಗೆ ಬಾರದೇ ಹೋದದ್ದು ಎಂತಹ ವಿಪರ್ಯಾಸವಲ್ಲವೇ?

ಸರ್ದಾರ್ ಪಟೇಲರ ಕಟು ವಿರೋಧಿಗಳಾದ  ಸಿ. ರಾಜಗೋಪಾಲಾಚಾರಿ ಮತ್ತು ಮೌಲಾನ ಅಬ್ದುಲ್ ಕಲಾಂ ಅಜಾದ್ ಗಾಂಧಿ ತೆಗೆದುಕೊಂಡ  ನಿರ್ಧಾರ ತಪ್ಪು ಎಂದು ಪ್ರತಿಪಾದಿಸಿದ್ದಾರೆ.
ಅಜಾದ್ ನಾನು ಪಟೇಲರನ್ನು ಬೆಂಬಲಿಸದೇ ತಪ್ಪು ಮಾಡಿದೆ, ನಾನು ಮಾಡಿದ ತಪ್ಪು ಕ್ಷಮೆಗೆ ಅರ್ಹವಲ್ಲ ಎಂದು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.  ರಾಜಗೋಪಾಲಾಚಾರಿ ನೆಹರೂ ಬದಲು ಪಟೇಲ್ ಪ್ರಧಾನಿಯಾಗಿ ನೆಹರೂ ವಿದೇಶಾಂಗ ಮಂತ್ರಿಯಾಗಬಹುದಿತ್ತೆಂದು ತಿಳಿಸಿದ್ದಾರೆ, ಪಟೇಲರಿಗಿಂತ ನೆಹರೂನೆ ಸೂಕ್ತ ಎಂದು ಭಾವಿಸಿದ್ದು ನನ್ನ ತಪ್ಪು ಎಂದು ಬರೆದಿದ್ದಾರೆ.
                           
ಸರ್ದಾರ್ ಪಟೇಲರ ನಿರ್ಧಾರದ ಕುರಿತು ಸಹ ಪ್ರಶ್ನೆಗಳು ಏಳುತ್ತವೆ. ಒಬ್ಬ ಮನುಷ್ಯ  ವ್ಯಕ್ತಿಗೆ  ನಿಷ್ಠೆಯಾಗಿರಬೇಕೋ? , ಒಂದು ಸಂಸ್ಥೆಗೋ?  ಅಥವಾ ದೇಶಕ್ಕೋ? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟರೆ ಸರ್ದಾರ್ ಪಟೇಲರು ಗಾಂಧಿಗೆ ಮಣಿಯಬಾರದಿತ್ತು ಎನಿಸುತ್ತದೆ. ಅವರು ಗಾಂಧಿಗಿಂತ ದೇಶಕ್ಕೆ ನಿಷ್ಠರಾಗಿದ್ದಿದ್ದರೆ ಎಷ್ಟೋ ಆನಾಹುತಗಳನ್ನು ತಪ್ಪಿಸಬಹುದಿತ್ತು. 1962ರಲ್ಲಿ ಭಾರತ ಹೀನಾಯವಾಗಿ ಚೀನಾಕ್ಕೆ ಶರಣಾಗುತ್ತಿರಲಿಲ್ಲ ಅಲ್ಲವೇ?

ಈ ಎಲ್ಲ ನಗ್ನ ಸತ್ಯಗಳನ್ನು ನಮ್ಮ ಇತಿಹಾಸ ನಮಗೆ ತಿಳಿಸುವುದೇ ಇಲ್ಲ. ಕಾಂಗ್ರೆಸ್ಸಿಗರು ಬರೆದ ಸುಳ್ಳು ಇತಿಹಾಸವನ್ನೇ ನಾವು ಓದುತ್ತಿದ್ದೇವೆ. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಾವು ಬೀಗುತ್ತೇವೆ ಆದರೆ ನಮ್ಮ ದೇಶದ ಮೊದಲ ಪ್ರಧಾನಿಯ ಆಯ್ಕೆ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವಾಗಿರುವುದು ದುರಂತವಲ್ಲದೇ ಮತ್ತೇನು?         
                                                                               
ರವಿತೇಜ ಶಾಸ್ತ್ರೀ