Wednesday, November 12, 2014

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!
 
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಎಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
ಹೆಣ್ಣಿಗೆ ದೇವರ ಸ್ಥಾನವನ್ನು ನೀಡಿದ ಶ್ರೇಷ್ಠ ಪರಂಪರೆ ನಮ್ಮದು. ನದಿಗಳು, ಪರ್ವತಗಳನ್ನು ಹೆಣ್ಣಿನ ರೂಪದಲ್ಲಿ ಕಂಡು ಗೌರವಿಸಿದ ಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿ.
ಜಗದ ಜನರೆಲ್ಲ ಭೂಮಿಯನ್ನು ಜಡವಸ್ತು ಎಂದು ಭಾವಿಸಿದ್ದ ಸಂದರ್ಭದಲ್ಲಿ ಭೂವಿಗೆ ಮಾತೃ ಸ್ಥಾನ ನೀಡಿ ವಿಶ್ವದ ಕಣ್ತೆರೆಸಿದ ದೇಶ ಭಾರತ. ಹೆಣ್ಣಿಗೆ ಮಹತ್ತರ ಸ್ಥಾನ ನೀಡಿ ಗೌರವಿಸಿದ ಶ್ರೇಷ್ಠ ದೇಶ ನಮ್ಮದು.
ಆದರೆ ಇಂದು ನಡೆಯುತ್ತಿರುವುದೇನು? ಹೆಣ್ಣನ್ನು ದೇವತೆಯೆಂದು ಪೂಜಿಸಿದ ಭಾರತದಲ್ಲೇ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ,  ಅತ್ಯಾಚಾರಗಳ ಸರಮಾಲೆಗಳು. ಹಸುಳೆ, ಕಂದಮ್ಮಗಳ ಮೇಲೆ ಅತ್ಯಾಚಾರಗಳು ಕಾಮುಕರ ಅಟ್ಟಹಾಸಕ್ಕೆ ಭಾರತ ನಲುಗಿ ಹೋಗಿದೆ. ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿದ ಭಾರತದಲ್ಲಿ ಇಂದು ಹೆಣ್ಣಿಗೆ ರಕ್ಷಣೆಯೇ ಇಲ್ಲ.
ಕಳೆದ ವರ್ಷ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಜನರನ್ನು ರೊಚ್ಚಿಗೆಬ್ಬಿಸಿತ್ತು. ಈ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾದವು. ಈಗ ಈ ಪೈಚಾಚಿಕ ಕೃತ್ಯಗಳು ಕರ್ನಾಟಕದಲ್ಲೂ ವರದಿಯಾಗಿವೆ. ನಂದಿತಾಗಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಅಮಾನವೀಯ. ಹದಿಮೂರು ವರ್ಷದ ಆ ಪೋರಿಯನ್ನು ಹಿಂಸಿಸಿ, ಅತ್ಯಾಚಾರ ಮಾಡಿದ ಘೋರ ಕೃತ್ಯವನ್ನು ನೆನೆದಾಗ ದುಃಖವಾಗುತ್ತದೆ.
ಹೆಣ್ಣಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ರಾಜಕಾರಣಿಗಳಿಗೆ ಇವೆಲ್ಲ ಸಾಮಾನ್ಯ ಪ್ರಕರಣಗಳು. ಅತ್ಯಾಚಾರ ತಡೆಗಟ್ಟುವುದು ನಮ್ಮ ಕೆಲಸವಲ್ಲ ಎಂಬ ಅರ್ಥ ಬರುವಂತೆ ಅವಿವೇಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಇವೆಲ್ಲದರ ಮುಂದೆ ಮೌಲ್ಯಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಭಾರತ ಮೌಲ್ಯಗಳಿಗೆ ಬೆಲೆಕೊಟ್ಟ ರಾಷ್ಟ್ರ. ಸತ್ಯಕ್ಕಾಗಿ, ಅಪ್ಪನ ಮಾತಿಗೆಂದು ಇಡೀ ರಾಜ್ಯ ಅಧಿಕಾರವನ್ನು ತ್ಯಜಿಸಿ  ಅರಣ್ಯಕ್ಕೆ ತೆರಳಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶಗಳನ್ನು ಪಾಲಿಸಿದ ದೇಶ ನಮ್ಮದು. ಆದರೆ ಇಂದು ನಮ್ಮವರಿಗೆ ಒಳಿತು ಕೆಡಕಿನ ಅರಿವೆ ಇಲ್ಲ. ಸತ್ಯ, ಅಹಿಂಸೆ,ನ್ಯಾಯ, ಮಾನವೀಯತೆ ಇವೆಲ್ಲ ಗೊತ್ತೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ಫಲದಿಂದ ಇವೆಲ್ಲ ಮರೀಚಿಕೆಯಾಗಿಬಿಟ್ಟಿವೆ.
ಪ್ರಸ್ತುತ ಭಾರತದಲ್ಲಿ ಪ್ರತಿ ದಿನವೂ ಹಲವು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಾಮುಕರ ಅಟ್ಟಹಾಸಕ್ಕೆ ಪ್ರತಿ ದಿನವೂ ಮುಗ್ಧ ಹೆಣ್ಣು ಜೀವಗಳು ಬಲಿಯಾಗುತ್ತಿವೆ. ಇದೆಕ್ಕೆಲ್ಲ ಶಾಶ್ವತ ಪರಿಹಾರವಿಲ್ಲವೇ? ಈಗ ಬೆಳಕಿಗೆ ಬಂದಿರುವ ನಂದಿತಾ ಪ್ರಕರಣ ಜನರ ತಾಳ್ಮೆಯ ಕಟ್ಟಳೆಯನ್ನು ಮೀರಿ ಜನ ಆಂದೋಲನವಾಗಿದೆ. ಜನ ಬೀದಿಗೆ ಇಳಿದಿದ್ದಾರೆ. ನಿರ್ಭಯ ಪ್ರಕರಣದಲ್ಲೂ ಇದೇ ಆಯಿತು. ಒಂದಷ್ಟು ವ್ಯಾಪಕ ಪ್ರತಿಭಟನೆಗಳು ನಡೆದವು. ಆದರೆ ಅತ್ಯಾಚಾರಗಳು ಕಡಿಮೆಯಾದವೇ? ಕೇವಲ ಕಾನೂನಿಂದ ಮಾತ್ರ ಅತ್ಯಾಚಾರಗಳನ್ನು ನಿಲ್ಲಿಸಲು ಸಾಧ್ಯವೇ? ಜನ ಮನಸ್ಸು ಬದಲಾಗಬೇಕಲ್ಲವೇ?
ಅತ್ಯಾಚಾರಕ್ಕೆ ಕಾರಣ ಹುಡುಕುವಾಗ ನಾವು ಹೆಣ್ಣನ್ನೇ ದೂಷಿಸುತ್ತೇವೆ. ಹೆಣ್ಣಿನಲ್ಲೆ ಕಾರಣಗಳನ್ನು ಹುಡುಕುತ್ತೇವೆ. ಆಕೆಯ ವಸ್ತ್ರ ಸಂಹಿತೆಯೇ ಇದಕ್ಕೆಲ್ಲ ಕಾರಣ ಎನ್ನುತ್ತೇವೆ. ಹಸುಳೆಗಳ ಮೇಲೆ ಆತ್ಯಾಚಾರವಾಗುತ್ತಿವೆ. ಮುಗ್ಧ ಆರು ವರ್ಷದ ಕಂದಮ್ಮ ಮೈಮಾಟವನ್ನು ಪ್ರದರ್ಶಿಸುತ್ತದೆಯೇ? ಇದೆಲ್ಲ ಕಾರಣಗಳು ನೆಪವಷ್ಟೇ. 
ಅತ್ಯಾಚಾರಗಳು ನಿಲ್ಲಬೇಕಾದರೆ ಜನರ ಮನಸ್ಥಿತಿ ಬದಲಾಗಬೇಕು. ಹೆಣ್ಣನ್ನು ನೋಡುವ ದೃಷ್ಟಿ  ಬದಲಾಗಬೇಕು. ಹೆಣ್ಣನ್ನು ಭೋಗದ ವಸ್ತು ಎಂದುಕೊಳ್ಳುವುದನ್ನು ಮೊದಲು ಬಿಡಬೇಕು.  ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ಮನಸ್ಥಿತಿ ಬೆಳೆಯಬೇಕು. ಇದೆಲ್ಲ ಶಾಶ್ವತ ಪರಿಹಾರ "ಭಾರತೀಯತೆ" ಭಾರತೀಯ ಮೌಲ್ಯಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯುವಂತಾಗಬೇಕು. ಜಪಾನ್ ನಲ್ಲಿ ಅಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಹೇಳಿಕೊಡಲಾಗುತ್ತದೆ. ಅದನ್ನು ಮರೆಯದೆ ಅವರು ಪಾಲಿಸುತ್ತಾರೆ. ವಿಶ್ವಕಪ್ ಪಂದ್ಯವಾಳಿ ವೀಕ್ಷಿಸಿದ ಜಪಾನಿಗರು ಜಪಾನ್ ಸೋತರೂ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದರು. ಹಾಗೆಯೇ ಭಾರತದಲ್ಲೂ ಮೌಲ್ಯಧಾರಿತ ಶಿಕ್ಷಣ ಕಡ್ಡಾಯವಾಗಬೇಕು.
ಇದು ನಾವು ಎಚ್ಚೆತ್ತುಕೊಳ್ಳುವ ಸಮಯ.  ಪ್ರತಿನಿತ್ಯ ಭಾರತದಲ್ಲಿ 93 ಮಹಿಳೆಯರು ಅತ್ಯಾಚಾರಿಗಳಿಗೆ ಬಲಿಯಾಗುತ್ತಿದ್ದಾರೆ. ನಾವು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಠಿಣ ಕಾನೂನು ರೂಪಿಸಿ ಅತ್ಯಾಚಾರಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮತನವಾದ ಭಾರತೀಯತೆಯನ್ನು ನಾವು ಬೆಳೆಸಿಕೊಳ್ಳಬೇಕು ಇಲ್ಲದೇ ಹೋದರೆ ಮುಂದೊಂದು ದಿನ ಭಾರತ ಅತ್ಯಾಚಾರಿಗಳ ದೇಶವಾಗಿಬಿಟ್ಟೀತು ಎಚ್ಚರ!
ರವಿತೇಜ ಶಾಸ್ತ್ರೀ

1 comment: