Friday, November 14, 2014

ಭಾರತಕ್ಕೆ ಚಾಚಾ ನೀಡಿದ ಬಳುವಳಿಗಳು!


ನಾವು ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುತ್ತೇವೆ. ಇದರ ಉದ್ದೇಶ  ನಾವು ಕಟ್ಟುವ ಮನೆ ಸದೃಢವಾಗಿ, ದೀರ್ಘ ಕಾಲ ಬಾಳಬೇಕು ಎಂದು. ಇದು ದೇಶಕ್ಕೂ ಅನ್ವಯಿಸುತ್ತದೆ. ದೇಶದ ಉನ್ನತಿ ಸದೃಢ ಮತ್ತು ಬಲಿಷ್ಠ ಅಡಿಪಾಯವನ್ನು ಅವಲಂಬಿಸಿದೆ. ಅಡಿಪಾಯ ಸರಿಯಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ ದುರದೃಷ್ಟವಶಾತ್ ಭಾರತಕ್ಕೆ ಭದ್ರವಾದ ಅಡಿಪಾಯ ದೊರಕಲೇ ಇಲ್ಲ.  ಸ್ವಾತಂತ್ರ್ಯದ ನಂತರ ನಮ್ಮನ್ನು ಆಳಿದ ನಾಯಕರಾದ ನೆಹರು ಮತ್ತು ಗಾಂಧಿ ದೇಶವನ್ನು ಸಮರ್ಪಕವಾಗಿ ಮುನ್ನಡೆಸಲಿಲ್ಲ. ಅವರು ಮಾಡಿದ ಅನಾಹುತಗಳ ಸರಮಾಲೆಗಳ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ.
ಈ ಅನಾಹುತ ಶುರುವಾಗಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ. ಅತಿಯಾದ ಹುಚ್ಚು ನೆಹರು ಪ್ರೇಮ ಅವರಿಗೆ ಆವರಿಸಿತ್ತು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾರಾಗಬೇಕೆಂದಾಗ ಆಗಿನ ಕಾಂಗ್ರೆಸ್ ನ ಬಹುಪಾಲು ಮಂದಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ರ ಪರವಾಗಿ ಮತ ಹಾಕಿದರು. ಆದರೂ ತಮ್ಮ ಪ್ರಿಯ ಶಿಷ್ಯ ನೆಹರೂವನ್ನು ಪ್ರಧಾನಿ ಗಾದಿಯಲ್ಲಿ ಕುಳ್ಳಿರಿಸಿ ಅನಾಹುತಗಳ ಸರಮಾಲೆಗೆ ಮೊದಲ ಮಣಿಯನ್ನು ಪೋಣಿಸಿದರು ಗಾಂಧೀಜಿ. ಗಾಂಧಿಯವರನ್ನು ಗೌರವಿಸುತ್ತಿದ್ದ ಪಟೇಲರು ಪ್ರತಿಭಟಿಸದೆ ತಮ್ಮ ದೊಡ್ಡತನವನ್ನು ಮೆರೆದರು. ಈಗಿನ ರಾಜಕಾರಣಿಗಳಂತೆ ಪಟೇಲರು ನಡೆದುಕೊಳ್ಳಲಿಲ್ಲ. ನೆಹರು ಪ್ರಧಾನಿಯಾದ ನಂತರ ಮಾಡಿದ್ದೆಲ್ಲವೂ ಅನಾಹುತಗಳೇ. ಅಭಿವೃದ್ದಿಯ ಕಡೆಗೆ ನುಗ್ಗಬೇಕಿದ್ದ ದೇಶವನ್ನು ಪಾತಾಳಕ್ಕೆ ನೂಕಿದ ಮಹಾನ್ ಪ್ರಧಾನಿ ನಮ್ಮ ಚಾಚ ನೆಹರು. ಅವರು ಭಾರತಕ್ಕೆ ಕೊಟ್ಟ ಬಳುವಳಿಗಳು ಅಸಂಖ್ಯ.  ಅಡಿಪಾಯ ಸರಿಯಿದ್ದರೆ ತಾನೇ  ಮನೆ ಉತ್ತಮವಾಗಿರೋದು. ನೆಹರುವಿನ ಅನಾಹುತಗಳ ಬಳುವಳಿಗಳ ಪರಿಚಯ ಇಲ್ಲಿದೆ.

ಕಾಶ್ಮೀರ ಸಮಸ್ಯೆಯ ಜನಕ :
 ಭಾರತದ ಎಲ್ಲ ಸಣ್ಣಪುಟ್ಟ ರಾಜ್ಯ, ಸಂಸ್ಥಾನಗಳನ್ನು ಏಕೀಕರಣಗೊಳಿಸುವ ಕೆಲಸವನ್ನು ಸರ್ದಾರ್ ಪಟೇಲ್ ವಹಿಸಿಕೊಂಡಿದ್ದರು. ತಮ್ಮ ದಿಟ್ಟ ನಿರ್ಧಾರ ಮತ್ತು ಅಚಲ ಇಚ್ಚಾಶಕ್ತಿಯಿಂದ ಪಟೇಲರು ಎಲ್ಲ ರಾಜ್ಯಗಳನ್ನು ಭಾರತಕ್ಕೆ ಸೇರಿಸಿ ಉಕ್ಕಿನ ಮನುಷ್ಯರೆನಿಸಿದರು. ಆದರೆ ಕಾಶ್ಮೀರದ ಏಕೀಕರಣವನ್ನು ಪಟೇಲರಿಗೆ ವಹಿಸದೆ ತಾವೇ ನಿರ್ವಹಿಸುವುದಾಗಿ ಹೇಳಿ ತಮ್ಮ ಅವಿವೇಕಿ ನಿರ್ಧಾರಗಳಿಂದ ನೆಹರು  ಕಾಶ್ಮೀರ ಸಮಸ್ಯೆಯನ್ನು ಹುಟ್ಟುಹಾಕಿದರು. ನೆಹರು ನಿರ್ಧಾರದಿಂದ ಕಾಶ್ಮೀರ ಭಾರತದ ಕೈತಪ್ಪುವ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪಟೇಲರು ಸೇನೆಯನ್ನು ನುಗ್ಗಿಸಿ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಸೇರಲು ನಿರ್ಧರಿಸಿದ್ದ ಆದರೆ ಷೇಕ್ ಅಬ್ದುಲ್ಲಾನ ಮಾತು ಕೇಳಿದ ನೆಹರು ಸಮಸ್ಯೆಗಳನ್ನು ಸೃಷ್ಟಿಸಿದರು. ಕಾಶ್ಮೀರದ ಸಮಸ್ಯೆ ಉಲ್ಬಣಗೊಂಡಾಗ ನೆಹರು ವಿಶ್ವ ಸಂಸ್ಥೆಯ ಕದ ತಟ್ಟಿದ್ದರು. ನಮ್ಮ ಮನೆಯಲ್ಲಿ ಜಗಳವಾದಾಗ ಪಕ್ಕದ ಮನೆಯವನನ್ನು ಕರೆದು ರಾಜಿ ಮಾಡಿಸುವುದು ಮೂರ್ಖತನವಲ್ಲವೇ? ಇಂತಹ ಸಣ್ಣ ಸಣ್ಣ ಸಂಗತಿಗಳೂ ನೆಹರುಗೆ ತಿಳಿಯಲಿಲ್ಲ. ತಮ್ಮ ಹಟ ಸಾಧಿಸಿದರು. ಆದರ ಪರಿಣಾಮ ಕಾಶ್ಮೀರ ಸಮಸ್ಯೆ ಇನ್ನು ಜೀವಂತ.


ಭಾರತದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ ಮಹಾನ್(?) ಪುರುಷ  ನೆಹರು :
“ ಯಾವುದೇ ಪ್ರಭುತ್ವವಾದರೂ ದೇಶದ ಆರ್ಥ ನೀತಿ ಭದ್ರವಾದ ನೆಲೆಗಟ್ಟಿನ ಮೇಲೆ ನಿಲ್ಲಬೇಕು. ನಮ್ಮ ಅರ್ಥ ನೀತಿ ನಮ್ಮ ನಾಯಕರ( ನೆಹರು ಅವರ) ಆತುರದಿಂದ ಅತಂತ್ರದಾರಿಗೆ ಹೋಗಿದೆ ಎಂದು ನಮಗೆ ಭಯವಾಗುತ್ತಿದೆ, ವೆಚ್ಚದಲ್ಲಿ ವಿತರಣೆ ಸಾಲದೇ ಹೋಗಿದೆ. ಅನಿರ್ವಾರ್ಯವಾದ ಒಂದು ಮಟ್ಟಕ್ಕಿಂತ ಹೆಚ್ಚಾಗಿ ಹಣ ಪೋಲಾಗುತ್ತಿದೆ. ಅಭಿವೃದ್ದಿ ಸಿದ್ದಿಸದೆ ನಮಗೆ ನಷ್ಟವಾಗುತ್ತಿದೆ.” ಈ ರೀತಿ ಕಳವಳ ವ್ಯಕ್ತ ಪಡಿಸಿದವರು ಕನ್ನಡದ ಆಸ್ತಿ ಮಾಸ್ತಿಯವರು.
ಭಾರತದ ಆರ್ಥಿಕತೆ ಬಲಗೊಳಿಸಬೇಕಾದರೆ ಸಣ್ಣ ಮತ್ತು ಮಧ್ಯಮ ಕೈ ಗಾರಿಕೆಗಳು ಉದ್ದಾರವಾಗಬೇಕೆಂದು  ಗಾಂಧೀಜಿ ನಂಬಿದ್ದರು ಆದರೆ ಗಾಂಧಿ ಶಿಷ್ಯ. ನೆಹರುಗೆ ಇದರ ಮೇಲೆ ನಂಬಿಕೆಯೇ ಇರಲಿಲ್ಲ. ದೊಡ್ಡ ದೊಡ್ಡ ಯಂತ್ರಗಳ ಕೈಗಾರಿಕೆಗಳಿಂದ ದೇಶ ಉದ್ದಾರವಾಗುತ್ತದೆ ಎಂದು ಅವರು ನಂಬಿದರು. ವಿದೇಶಗಳಿಂದ ಬಂಡವಾಳವನ್ನು ತಂದು ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿದರು. ಆದರೆ ಅರ್ಥಿಕ ಅಶಿಸ್ತಿನ ಪರಿಣಾಮ ಬಾರಿ ನಷ್ಟ ಉಂಟಾಯಿತು, ರಷ್ಯಾ ಮತ್ತು ಬೇರೆ ರಾಷ್ಟ್ರಗಳ ನೀತಿಗಳನ್ನು ಪಾಲಿಸಿದರ ಪರಿಣಾಮ ಭಾರತದ ಸಾಲ ಹೆಚ್ಚಾಯಿತು.
ವೆಚ್ಚದ ನಿಯಂತ್ರಣ ಪದವೇ ನೆಹರುಗೆ ತಿಳಿದಿರಲಿಲ್ಲವೇನೋ. ಕಾಂಗ್ರೆಸ್ ಅಧಿವೇಶನಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದರು. ನೆಹರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳೆಲ್ಲ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿತೆ ಹೊರತು ಏನು ಮಾಡಲಿಲ್ಲ. ಇಂದು ನಾವು ವಿತ್ತೀಯ ಕೊರತೆ (Fiscal Deficit) ಸಮಸ್ಯೆ ಎದುರಿಸುತ್ತಿದ್ದೇವೆ ಇದರ ಜನಕ ನಮ್ಮ ನೆಹರೂನೆ! ವಿಶ್ವ ಬ್ಯಾಂಕ್ ನಿಂದ ಸಾಲ ತರಿಸಿಕೊಂಡ ನೆಹರೂ ಸರ್ಕಾರ ತೀರಿಸಲು ಆಗದೆ ಮತ್ತಷ್ಟು ಸಾಲ ಮಾಡಿತು. ವೆಚ್ಚ ನಿಯಂತ್ರಣ ಶೂನ್ಯ. ಪರಿಣಾಮ ಎಲ್ಲ ಭಾರತೀಯರ  ತಲೆ ಮೇಲೆ ಸಾಲದ ಹೊರೆ. ನಮ್ಮ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ಅರ್ಥಿಕ ಪ್ರಗತಿಯನ್ನು ಸಾಧಿಸಿವೆ. ಆದರೆ ಭಾರತ ಇನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ. ಇದಕ್ಕೆ ಮೂಲ ಕಾರಣ ನೆಹರು.

ಸೆಕ್ಯುಲರಿಸಂ ಮತ್ತು ತುಷ್ಟೀಕರಣದ ಪಿತಾಮಹ :
ಸೆಕ್ಯುಲರಿಸಂ ಎಂಬ ಕೊಳಕು ಇಂದು ದೇಶದಲ್ಲಿದೆ. ಈ ಕೊಳಕನ್ನು ಸೃಷ್ಟಿಸಿದ್ದೆ ನೆಹರು. ಜಾತ್ಯತೀತ ಎಂದರೆ ಎಲ್ಲ ಧರ್ಮಗಳು ಒಂದೇ ಎಲ್ಲರೂ ಸಮಾನರು ಎಂದರ್ಥ. ಆದರೆ ನೆಹರು ಪಾಲಿಗೆ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವುದೇ ಸೆಕ್ಯುಲರಿಸಂ. ತಮ್ಮ ಗುರು ಗಾಂಧಿಯಿಂದ ವರವಂತೆ ಪಡೆದ ತುಷ್ಟೀಕರಣ ನೀತಿಯನ್ನು ಗಾಂಧಿಯ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ  ಗಾಂಧಿಗಿಂತ ಹೆಚ್ಚಾಗಿ ಪಾಲಿಸಿದರು ನಮ್ಮ ನೆಹರು. ಪರಿಣಾಮ ಪಾಕಿಸ್ಥಾನದ  ಹುಚ್ಚಾಟ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸವನ್ನು ಇಂದಿಗೂ ಎದುರಿಸುತ್ತಿದ್ದೇವೆ. ಒವೈಸಿ ಎಂಬ ಮತಾಂಧ ಇಂದು “ ಐದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ಮುಗಿಸುತ್ತೇನೆ, ಭಾರತದ ಮೇಲೆ ಪಾಕಿಸ್ತಾನ ಯುದ್ದ ಸಾರಿದರೆ ಮುಸ್ಲಿಮರು ಭಾರತದ ವಿರುದ್ದ ಹೋರಾಡಬೇಕು”  ಸಲಹೆ ನೀಡುತ್ತಾನೆ. ಇಂತಹ ಮತಾಂಧರ ಬೆಳವಣಿಗೆಗೆ ಗಾಂಧಿ ಮತ್ತು ನೆಹ್ರೂನೆ ಕಾರಣ.   
ಇವತ್ತು ಬುದ್ದಿ ಜೀವಿಗಳು ಎಂದು ಆರಚುವ, ತಲೆಯಲ್ಲಿ ಲದ್ದಿ ತುಂಬಿರುವ ಲದ್ದಿಜೀವಿಗಳು ಇದೇ ನೆಹರುವಿನ ಬಳುವಳಿಯಾದ  ಸೆಕ್ಯುಲರಿಸಂನಿಂದಲೇ ಸಮಾಜದ ಸ್ವಾಸ್ಥ್ಯವನ್ನು ಆಳು ಮಾಡುತ್ತಿರುವುದು. ಈ ಬುದ್ದಿಜೀವಿಗಳು ಎನ್ನುವ ದುರ್ಬುದ್ಧಿಜೀವಿಗಳ ಜನಕ ನೆಹರು ಅಂದರೆ ಯಾವುದೇ ತಪ್ಪಿಲ್ಲ ಎನಿಸುತ್ತದೆ.
ಹಿಮಾಲಯನ್ ಬ್ಲಂಡರ್ :
ನೆಹರುಗೆ ಕಮ್ಯುನಿಸ್ಟ್ ವಾದವೆಂದರೆ ಅದೇನೋ ಹುಚ್ಚು ಪ್ರೀತಿ. ಈ ಪ್ರೀತಿಯಿಂದಲೇ ಕೃಷ್ಣ ಮೆನನ್ ಎಂಬ ಪಕ್ಕ ಕಮ್ಯುನಿಸ್ಟ್ ಮನುಷ್ಯನನ್ನು ನೆಹರು ರಕ್ಷಣ ಸಚಿವರನ್ನಾಗಿ ಮಾಡಿದ್ದು. ಈತ ಮಂತ್ರಿಯಾಗಿದ್ದಾಗ ಭಾರತಕ್ಕಿಂತ ಹೆಚ್ಚಾಗಿ ಚೀನಾಗೆ ನಿಷ್ಠೆ ತೋರಿಸುತ್ತಿದ್ದ. ಇವನು ಮಾಡಿದ ಅನಾಹುತಗಳು ಒಂದೇ ಎರಡೆ. ಇದರ ಪರಿಣಾಮವೇ 1962 ರ ಚೀನಾ ಮತ್ತು ಭಾರತದ ನಡುವಿನ ಯುದ್ದದ ಸೋಲು .
ನೆಹರುಗೆ ತನ್ನನ್ನು ತಾನು ದೊಡ್ಡ ಶಾಂತಿ ಪ್ರಿಯ ಎಂದು ಗುರುತಿಸಿಕೊಳ್ಳಬೇಕೆಂಬ ಖಯಾಲಿ. ಅರ್ಲಿಪ್ತ ನೀತಿ ನಮ್ಮದು ಎಂದು ಭಾಷಣ ಮಾಡುತ್ತಿದ ಮಹಾನ್ ಮಾತುಗಾರ ನೆಹರು. ಇದರಿಂದ ರಕ್ಷಣ ಇಲಾಖೆಗೆ ಮಹತ್ವವೇ ಸಿಗಲಿಲ್ಲ. ಯಾವ ಸಿದ್ದತೆಗಳು ಇರಲಿಲ್ಲ. ಶಸ್ತ್ರಾಸ್ತ್ರ ಖರೀದಿಯ ಬಗ್ಗೆ ತಿರಸ್ಕಾರ ನೆಹರೂಗಿತ್ತು. ಯಾವುದೇ ಸಿದ್ದತೆಯಿಲ್ಲದೆ ಯುದ್ದ ಘೋಷಣೆ ಮಾಡಿದರು. ಆಪಾರ ಸಾವು ನೋವುಗಳು ಸಂಭವಿಸಿದವು. ಅದೆಷ್ಟೋ ನೆಲವನ್ನು ಭಾರತ ಕಳೆದುಕೊಂಡಿತು. ಕೃಷ್ಣ ಮೆನನ್ ಮತ್ತು ನೆಹರು ಮಾಡಿದ ಅನಾಹುತಗಳಿಂದ ಸಾಕಷ್ಟು ಸೈನಿಕರು ಯುದ್ದ ಉಪಕರಣವಿಲ್ಲದೆ, ನೀರು, ಆಹಾರವಿಲ್ಲದೆ ಯುದ್ದ ಮಾಡಿ ಅಪಾರ ನೋವುಗಳನ್ನು ಅನುಭವಿಸಿದರು.
ಇವಷ್ಟೇ ಅಲ್ಲ ಭಾಷಾವಾರು ಪ್ರಾಂತ್ಯ ರಚನೆಯಾದಾಗ ನೆಹರು ನೀತಿಗಳಿಂದ ಸಾಕಷ್ಟು ಅನ್ಯಾಯಗಳಾದವು. ನೆಹರು ಸಾವರ್ಕರ್, ಅಂಬೇಡ್ಕರ್ ರಂತ ಮಹಾನ್ ಪುರುಷರಿಗೆ ನಾನಾ ತೊಂದರೆಗಳನ್ನು ಕೊಟ್ಟರು. ಸಾವರ್ಕರ್ ಮೇಲೆ ಸುಖಾಸುಮ್ಮನೆ ಗಾಂಧಿ ಹತ್ಯೆಯ ಆರೋಪ ಹೊರೆಸಿ ಅವರನ್ನು ಅವಮಾನಿಸಿದರು. ದೇಶ ಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ  ನಿಷೇಧ ಹೇರಿದರು. ಹೀಗೆ ತಮಗೇ ಯಾರು ವಿರುದ್ದವಾಗಿದ್ದರೋ ಅವರೆನ್ನೆಲ್ಲ ಮುಗಿಸಬೇಕು ಎನ್ನುವುದೇ ನೆಹರುವಿನ ಸಿದ್ದಾಂತವಾಗಿತ್ತು                 
 ನೆಹರುವಿನ ಬ್ಲಂಡರ್ ಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಮೀರುತ್ತ ಹೋಗುತ್ತದೆ. ನೆಹರೂ ತನ್ನ ವಂಶವನ್ನು ಬೆಳೆಸಿದ್ದು ಸಹ ಅನಾಹುತವೇ. ಪ್ರಧಾನಿಯಾಗಿದ್ದಾಗಲೇ ತನ್ನ ಮಗಳು ಇಂದಿರಾಳನ್ನು ಪ್ರಭಾವಿಯಾಗಿ ಬೆಳೆಸಿದರು ನೆಹರು. ನೆಹರು ನಂತರ ಯಾರು ಎಂಬ ಪ್ರಶ್ನೆ ಬಂದಾಗ ನೆಹರುಗೆ “ವೈ ನಾಟ್ ಇಂದಿರಾ” ಎಂದು ನೆಹರು ಬಂಟರು ಅವರಿಗೆ ಸಲಹೆ ಕೊಟ್ಟಿದ್ದರಂತೆ. ಆಗ ನೆಹರು “ನಾಟ್ ನೌ” ಎಂದಷ್ಟೇ ಉತ್ತರಿಸಿದ್ದರು. ಅವರು ನಿರಾಕರಿಸಲಿಲ್ಲ. ನೆಹರು ಮಾಡಿದ ಅನಾಹುತಗಳನ್ನೇ ಇಂದಿರಾ ಮುಂದುವರೆಸಿದರು, ಕಾಂಗ್ರೆಸ್ ಅನ್ನು ವಿಭಜಿಸಿದರು. ಅಮ್ಮನ ನೆರಳಿನಲ್ಲೇ ನಡೆದ ರಾಜೀವ್ ಗಾಂಧಿ ಸಹ ಇದನ್ನೇ ಮುಂದುವರೆಸಿದರು. ರಾಜೀವ್ ಗಾಂಧಿಯ ನಂತರ ಕಾಂಗ್ರೆಸ್ ನಿಷ್ಟರು  ವಿದೇಶೀ ಮುಖ ಸೋನಿಯಾ ಗಾಂಧಿಯನ್ನು  ತಂದು ನಿಲ್ಲಿಸಿದರು. ಹತ್ತು ವರ್ಷ ದೇಶ ಆಳಿದ ಸೋನಿಯಾ ಮಾಡಿದ್ದು ಅನಾಹುತಗಳೇ, ದೇಶವನ್ನು ಹಳ್ಳಕ್ಕೆ ದೂಡುವ ಕೆಲಸಗಳೇ. ಈಗ ರಾಜೀವ್ ಕುಡಿ ರಾಹುಲ್ ಗೆ ಅಧಿಕಾರ ಸಿಕ್ಕರೆ ಮುಂದೆ ಆಗೋದು ಅನಾಹುತವೇ. ಒಟ್ಟಿನಲ್ಲಿ  ನೆಹರು ವಂಶ ಮಾಡಿದ್ದು ಅನಾಹುತಗಳೇ ಮಾಡೋದು ಅನಾಹುತಗಳೇ.  
ನಮ್ಮ ದೇಶದ ಯಾವುದೇ ಜ್ವಲಂತ ಸಮಸ್ಯೆಯನ್ನು ಅವಲೋಕಿಸಿ ಕಾರಣ ಹುಡುಕಿದರೆ ಅದು ನೆಹರು, ಗಾಂಧಿ ಮತ್ತು ನೆಹರು ಕುಟಂಬದ ವರವೇ ಆ ಸಮಸ್ಯೆಯಾಗಿರುತ್ತದೆ. ಅಡಿಪಾಯ ಸರಿಯಿದ್ದರೆ ತಾನೇ ಮನೆ ಚೆನ್ನಾಗಿರೋದು.

ರವಿತೇಜ ಶಾಸ್ತ್ರೀ                                                                                        
           
                                                                                  

           

Wednesday, November 12, 2014

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!
 
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಎಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
ಹೆಣ್ಣಿಗೆ ದೇವರ ಸ್ಥಾನವನ್ನು ನೀಡಿದ ಶ್ರೇಷ್ಠ ಪರಂಪರೆ ನಮ್ಮದು. ನದಿಗಳು, ಪರ್ವತಗಳನ್ನು ಹೆಣ್ಣಿನ ರೂಪದಲ್ಲಿ ಕಂಡು ಗೌರವಿಸಿದ ಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿ.
ಜಗದ ಜನರೆಲ್ಲ ಭೂಮಿಯನ್ನು ಜಡವಸ್ತು ಎಂದು ಭಾವಿಸಿದ್ದ ಸಂದರ್ಭದಲ್ಲಿ ಭೂವಿಗೆ ಮಾತೃ ಸ್ಥಾನ ನೀಡಿ ವಿಶ್ವದ ಕಣ್ತೆರೆಸಿದ ದೇಶ ಭಾರತ. ಹೆಣ್ಣಿಗೆ ಮಹತ್ತರ ಸ್ಥಾನ ನೀಡಿ ಗೌರವಿಸಿದ ಶ್ರೇಷ್ಠ ದೇಶ ನಮ್ಮದು.
ಆದರೆ ಇಂದು ನಡೆಯುತ್ತಿರುವುದೇನು? ಹೆಣ್ಣನ್ನು ದೇವತೆಯೆಂದು ಪೂಜಿಸಿದ ಭಾರತದಲ್ಲೇ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ,  ಅತ್ಯಾಚಾರಗಳ ಸರಮಾಲೆಗಳು. ಹಸುಳೆ, ಕಂದಮ್ಮಗಳ ಮೇಲೆ ಅತ್ಯಾಚಾರಗಳು ಕಾಮುಕರ ಅಟ್ಟಹಾಸಕ್ಕೆ ಭಾರತ ನಲುಗಿ ಹೋಗಿದೆ. ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿದ ಭಾರತದಲ್ಲಿ ಇಂದು ಹೆಣ್ಣಿಗೆ ರಕ್ಷಣೆಯೇ ಇಲ್ಲ.
ಕಳೆದ ವರ್ಷ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಜನರನ್ನು ರೊಚ್ಚಿಗೆಬ್ಬಿಸಿತ್ತು. ಈ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾದವು. ಈಗ ಈ ಪೈಚಾಚಿಕ ಕೃತ್ಯಗಳು ಕರ್ನಾಟಕದಲ್ಲೂ ವರದಿಯಾಗಿವೆ. ನಂದಿತಾಗಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಅಮಾನವೀಯ. ಹದಿಮೂರು ವರ್ಷದ ಆ ಪೋರಿಯನ್ನು ಹಿಂಸಿಸಿ, ಅತ್ಯಾಚಾರ ಮಾಡಿದ ಘೋರ ಕೃತ್ಯವನ್ನು ನೆನೆದಾಗ ದುಃಖವಾಗುತ್ತದೆ.
ಹೆಣ್ಣಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ರಾಜಕಾರಣಿಗಳಿಗೆ ಇವೆಲ್ಲ ಸಾಮಾನ್ಯ ಪ್ರಕರಣಗಳು. ಅತ್ಯಾಚಾರ ತಡೆಗಟ್ಟುವುದು ನಮ್ಮ ಕೆಲಸವಲ್ಲ ಎಂಬ ಅರ್ಥ ಬರುವಂತೆ ಅವಿವೇಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಇವೆಲ್ಲದರ ಮುಂದೆ ಮೌಲ್ಯಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಭಾರತ ಮೌಲ್ಯಗಳಿಗೆ ಬೆಲೆಕೊಟ್ಟ ರಾಷ್ಟ್ರ. ಸತ್ಯಕ್ಕಾಗಿ, ಅಪ್ಪನ ಮಾತಿಗೆಂದು ಇಡೀ ರಾಜ್ಯ ಅಧಿಕಾರವನ್ನು ತ್ಯಜಿಸಿ  ಅರಣ್ಯಕ್ಕೆ ತೆರಳಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶಗಳನ್ನು ಪಾಲಿಸಿದ ದೇಶ ನಮ್ಮದು. ಆದರೆ ಇಂದು ನಮ್ಮವರಿಗೆ ಒಳಿತು ಕೆಡಕಿನ ಅರಿವೆ ಇಲ್ಲ. ಸತ್ಯ, ಅಹಿಂಸೆ,ನ್ಯಾಯ, ಮಾನವೀಯತೆ ಇವೆಲ್ಲ ಗೊತ್ತೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ಫಲದಿಂದ ಇವೆಲ್ಲ ಮರೀಚಿಕೆಯಾಗಿಬಿಟ್ಟಿವೆ.
ಪ್ರಸ್ತುತ ಭಾರತದಲ್ಲಿ ಪ್ರತಿ ದಿನವೂ ಹಲವು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಾಮುಕರ ಅಟ್ಟಹಾಸಕ್ಕೆ ಪ್ರತಿ ದಿನವೂ ಮುಗ್ಧ ಹೆಣ್ಣು ಜೀವಗಳು ಬಲಿಯಾಗುತ್ತಿವೆ. ಇದೆಕ್ಕೆಲ್ಲ ಶಾಶ್ವತ ಪರಿಹಾರವಿಲ್ಲವೇ? ಈಗ ಬೆಳಕಿಗೆ ಬಂದಿರುವ ನಂದಿತಾ ಪ್ರಕರಣ ಜನರ ತಾಳ್ಮೆಯ ಕಟ್ಟಳೆಯನ್ನು ಮೀರಿ ಜನ ಆಂದೋಲನವಾಗಿದೆ. ಜನ ಬೀದಿಗೆ ಇಳಿದಿದ್ದಾರೆ. ನಿರ್ಭಯ ಪ್ರಕರಣದಲ್ಲೂ ಇದೇ ಆಯಿತು. ಒಂದಷ್ಟು ವ್ಯಾಪಕ ಪ್ರತಿಭಟನೆಗಳು ನಡೆದವು. ಆದರೆ ಅತ್ಯಾಚಾರಗಳು ಕಡಿಮೆಯಾದವೇ? ಕೇವಲ ಕಾನೂನಿಂದ ಮಾತ್ರ ಅತ್ಯಾಚಾರಗಳನ್ನು ನಿಲ್ಲಿಸಲು ಸಾಧ್ಯವೇ? ಜನ ಮನಸ್ಸು ಬದಲಾಗಬೇಕಲ್ಲವೇ?
ಅತ್ಯಾಚಾರಕ್ಕೆ ಕಾರಣ ಹುಡುಕುವಾಗ ನಾವು ಹೆಣ್ಣನ್ನೇ ದೂಷಿಸುತ್ತೇವೆ. ಹೆಣ್ಣಿನಲ್ಲೆ ಕಾರಣಗಳನ್ನು ಹುಡುಕುತ್ತೇವೆ. ಆಕೆಯ ವಸ್ತ್ರ ಸಂಹಿತೆಯೇ ಇದಕ್ಕೆಲ್ಲ ಕಾರಣ ಎನ್ನುತ್ತೇವೆ. ಹಸುಳೆಗಳ ಮೇಲೆ ಆತ್ಯಾಚಾರವಾಗುತ್ತಿವೆ. ಮುಗ್ಧ ಆರು ವರ್ಷದ ಕಂದಮ್ಮ ಮೈಮಾಟವನ್ನು ಪ್ರದರ್ಶಿಸುತ್ತದೆಯೇ? ಇದೆಲ್ಲ ಕಾರಣಗಳು ನೆಪವಷ್ಟೇ. 
ಅತ್ಯಾಚಾರಗಳು ನಿಲ್ಲಬೇಕಾದರೆ ಜನರ ಮನಸ್ಥಿತಿ ಬದಲಾಗಬೇಕು. ಹೆಣ್ಣನ್ನು ನೋಡುವ ದೃಷ್ಟಿ  ಬದಲಾಗಬೇಕು. ಹೆಣ್ಣನ್ನು ಭೋಗದ ವಸ್ತು ಎಂದುಕೊಳ್ಳುವುದನ್ನು ಮೊದಲು ಬಿಡಬೇಕು.  ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ಮನಸ್ಥಿತಿ ಬೆಳೆಯಬೇಕು. ಇದೆಲ್ಲ ಶಾಶ್ವತ ಪರಿಹಾರ "ಭಾರತೀಯತೆ" ಭಾರತೀಯ ಮೌಲ್ಯಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯುವಂತಾಗಬೇಕು. ಜಪಾನ್ ನಲ್ಲಿ ಅಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಹೇಳಿಕೊಡಲಾಗುತ್ತದೆ. ಅದನ್ನು ಮರೆಯದೆ ಅವರು ಪಾಲಿಸುತ್ತಾರೆ. ವಿಶ್ವಕಪ್ ಪಂದ್ಯವಾಳಿ ವೀಕ್ಷಿಸಿದ ಜಪಾನಿಗರು ಜಪಾನ್ ಸೋತರೂ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದರು. ಹಾಗೆಯೇ ಭಾರತದಲ್ಲೂ ಮೌಲ್ಯಧಾರಿತ ಶಿಕ್ಷಣ ಕಡ್ಡಾಯವಾಗಬೇಕು.
ಇದು ನಾವು ಎಚ್ಚೆತ್ತುಕೊಳ್ಳುವ ಸಮಯ.  ಪ್ರತಿನಿತ್ಯ ಭಾರತದಲ್ಲಿ 93 ಮಹಿಳೆಯರು ಅತ್ಯಾಚಾರಿಗಳಿಗೆ ಬಲಿಯಾಗುತ್ತಿದ್ದಾರೆ. ನಾವು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಠಿಣ ಕಾನೂನು ರೂಪಿಸಿ ಅತ್ಯಾಚಾರಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮತನವಾದ ಭಾರತೀಯತೆಯನ್ನು ನಾವು ಬೆಳೆಸಿಕೊಳ್ಳಬೇಕು ಇಲ್ಲದೇ ಹೋದರೆ ಮುಂದೊಂದು ದಿನ ಭಾರತ ಅತ್ಯಾಚಾರಿಗಳ ದೇಶವಾಗಿಬಿಟ್ಟೀತು ಎಚ್ಚರ!
ರವಿತೇಜ ಶಾಸ್ತ್ರೀ

Saturday, November 8, 2014

ಮತ್ತೊಮ್ಮೆ ಅನುಭವ ಮತ್ತು ಯುವ ಪ್ರತಿಭೆಯ ಸೆಣಸಾಟ

 
ಕಳೆದ ವರ್ಷ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿವನ್ನು ಅನುಭವ ಮತ್ತು ಯುವ ಪ್ರತಿಭೆಯ ಸೆಣಸಾಟ ಎಂದೇ ವಿಶ್ಲೇಷಿಸಿಲಾಗಿತ್ತು.  ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಯುವ ಪ್ರತಿಭೆ ವಿಶ್ವ ನಂಬರ್ ಒನ್ ನಾರ್ವೆಯ ಮಾಗ್ನಸ್ ಕಾರ್ಲಸನ್ ನಡುವೆ ನಡೆದ ಪಂದ್ಯವಾಳಿಗಲ್ಲಿ ಯುವ ಪ್ರತಿಭೆ ಕಾರ್ಲಸನ್ ಆನಂದ್ ರನ್ನು ಸೋಲಿಸಿ ಪ್ರಪ್ರಥಮ ಬಾರಿಗೆ ಚೆಸ್ ವಿಶ್ವ ಚಾಂಪಿಯನ್ ಪಟ್ಟ ಆಲಂಕರಿಸಿದರು.
 
ಯುವಪ್ರತಿಭೆಯ ಆಟದ ಮೋಡಿಗೆ ಮಂಕಾದ ಆನಂದ್ 12 ಪಂದ್ಯಾವಳಿಗಳಲ್ಲಿ ಒಂದೂ ಪಂದ್ಯ ಗೆಲ್ಲದೆ 3.5 - 6.5 ಅಂಕಗಳ ಅಂತರದಲ್ಲಿ ಸುಲಭವಾಗಿ ಶರಣಾದರು.

ಚೆಸ್ ವಿಮರ್ಶಕರು ಆನಂದ ಯುಗ ಅಂತ್ಯವಾಗಿ ಕಾರ್ಲಸನ್ ಯುಗ ಆರಂಭವಾಗಿದೆ. ಆನಂದ್ ಇನ್ನು ವಿದಾಯ ಹೇಳುವುದಕ್ಕೆ ಸೂಕ್ತ ಸಮಯ ಎಂದು ಟೀಕಿಸಿದರು.\
 

ಆದರೆ ನಂತರ ನಡೆದ ಕ್ಯಾಂಡೀಡೇಟ್ ಪಂದ್ಯಾವಳಿಯಲ್ಲಿ ಪುಟಿದೆದ್ದ ಆನಂದ್ ಮತ್ತೊಮ್ಮೆ ವಿಶ್ವ ಚಾಂಪಿಯನ್‌ಶಿಪ್ ಗೆ ಅರ್ಹತೆಗಳಿಸಿದರು. ತಾನು ಮಾಡಿದ ತಪ್ಪುಗಳಿಂದ ಕಲಿಯುವ ಆನಂದ್ ಈಗ ಮತ್ತೊಮ್ಮೆ ಕಾರ್ಲಸನ್ ರೊಡನೆ ಸೆಣಸಾಟ ನಡೆಸಲು ಸಿದ್ದರಾಗಿದ್ದಾರೆ. ಯುವಪ್ರತಿಭೆ ಮತ್ತು ಅನುಭವದ ಸೆಣಸಾಟಕ್ಕೆ ರಷ್ಯಾದ ಸೋಚಿಯಲ್ಲಿ ವೇದಿಕೆ ಸಿದ್ಧವಾಗಿದೆ.
 
ಇಂದಿನಿಂದ ಚೆಸ್ ಪಂದ್ಯಾವಳಿಗಳು ಆರಂಭವಾಗಲಿವೆ. ಚೆಸ್ ಪಂಡಿತರು ಕಾರ್ಲಸನ್ ಪ್ರಶಸ್ತಿ ಗೆಲ್ಲುವ ಫೇವರೇಟ್ ಎಂದು ವಿಮರ್ಶಿಸುತ್ತಿದ್ದಾರೆ. ಪಿಢೆ ರ್ಯಾಂಕ್ ಪ್ರಕಾರ ಕಾರ್ಲಸನ್ ಆನಂದ್ ಗಿಂತಲೂ ಹೆಚ್ಚು ರೇಟಿಂಗ್ ಹೊಂದಿದ್ದಾರೆ. ಆದರೂ ಪೀನಿಕ್ ಹಕ್ಕಿಯಂತೆ ಪುಟಿದೇಳುವ ಆನಂದ್ ರನ್ನು ನಿರ್ಲಕ್ಷ್ಯಿಸುವಂತಿಲ್ಲ.
ಭಾರತೀಯ ಕ್ರಿಕೆಟ್ ಗೆ ಸಚಿನ್ ಹೇಗೂ ಹಾಗೇ ಭಾರತೀಯ ಚೆಸ್ ಗೆ ಆನಂದ್. ಐದು ಬಾರಿ ಚಾಂಪಿಯನ್ ಆಗಿರುವ ಆನಂದ್ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಲಿ.

ನಾವೆಲ್ಲ ಆನಂದ್ ರನ್ನು ಬೆಂಬಲಿಸೋಣ.
 
ಶುಭವಾಗಲಿ ವಿಶಿ.
 
ರವಿತೇಜ ಶಾಸ್ತ್ರೀ