Saturday, September 27, 2014

ಭಗತ್ ಸಿಂಗ್ ನ ಭವ್ಯ ವ್ಯಕ್ತಿತ್ವದ ಅನಾವರಣ

“ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ಕ್ರಾಂತಿಯ ಕತ್ತಿಯು ವಿಚಾರಗಳ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ”. ಹೀಗೆಂದವನು ಭಗತ್ ಸಿಂಗ್. ತನ್ನ ಇಪ್ಪತ್ಮೊರನೆ ವಯಸ್ಸಿಗೆ ಸ್ವರ್ವಸ್ವವನ್ನು ತೊರೆದು, ಹಸನ್ಮುಖಿಯಾಗಿ ಗಲ್ಲಿಗೇರಿ ಕೋಟ್ಯಾಂತರ ಯುವಜನತೆಯ ಸ್ಪೂರ್ತಿಯಾದ ಭಗತ್ ಸಿಂಗ್ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಸ್ಥಾನವನ್ನು ಆಲಂಕರಿಸಿದ್ದಾನೆ, ಅಂದಿನ ಯುವಜನತೆಯ ಆಶಾಕಿರಣವಾಗಿದ್ದ ಭಗತ್ ಸಿಂಗ್ ನ ವ್ಯಕ್ತಿತ್ವ ಬಲು ಆಕರ್ಷಕ. ಆತನ  ವ್ಯಕ್ತಿತ್ವ ಇಂದಿನ ಯುವಜನತೆಗೂ ಆದರ್ಶ. ಭಗತ್ ಸಿಂಗ್ ನ ವ್ಯಕ್ತಿತ್ವದ ನಾನಾ ಮಜಲುಗಳನ್ನು ಅನಾವರಣಗೊಳಿಸುವ ಪುಟ್ಟ ಪ್ರಯತ್ನವಿದು.
ಜನ್ಮಜಾತ ಕ್ರಾಂತಿಕಾರಿ: 
ಭಗತ್ ಸಿಂಗ್ ಹುಟ್ಟಿದ್ದೇ ಕ್ರಾಂತಿಕಾರಿಯಾಗಲು, ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು, ಎಂದರೆ ಅತಿಶಯೋಕ್ತಿಯಲ್ಲ. ಭಗತ್ ಸಿಂಗ್ ನ ಇಡೀ ಕುಟುಂಬವೇ ಕ್ರಾಂತಿಕಾರಿ ಕುಟುಂಬವಾಗಿತ್ತು, ಭಗತ್ ಸಿಂಗ್ ರ ತಾತ ಅರ್ಜನ್ ಸಿಂಹ ಆರ್ಯ ಸಮಾಜದ ಸದಸ್ಯರಾಗಿದ್ದರು. ರಣಜಿತ್ ಸಿಂಹನ ಸೈನ್ಯದಲ್ಲಿದ್ದರು. ತಂದೆ ಕಿಶನ್ ಸಿಂಹರು ಸಹ ತಂದೆಯ ಹಾದಿಯನ್ನೇ ಹಿಡಿದ್ದರು. ಚಿಕ್ಕಪ್ಪಂದಿರಾದ ಅಜಿತ್ ಸಿಂಹ ಮತ್ತು ಸ್ವರ್ಣ ಸಿಂಹರು ಶ್ರೇಷ್ಠ ಕ್ರಾಂತಿಕಾರಿಗಳಾಗಿದ್ದರು. ಇಂತಹ ಕುಟುಂಬದಲ್ಲಿ ಮತ್ತೊಬ್ಬ  ಕ್ರಾಂತಿಕಾರಿ ಹುಟ್ಟದೇ ಮತ್ಯಾರು ಹುಟ್ಟಲು ಸಾಧ್ಯ?
ಅರ್ಜುನನ ಮಗ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವುದನ್ನು ಹೇಗೆ ಕಲಿತಿದ್ದನೋ ಹಾಗೆಯೇ ಭಗತ್ ಸಿಂಗ್ ಗರ್ಭದಲ್ಲಿರುವಾಗಲೇ ಕ್ರಾಂತಿಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ಭಗತ್ ಸಿಂಗ್ ಜನ್ಮಜಾತ ಕ್ರಾಂತಿಕಾರಿಯಾಗಿದ್ದ.


ಕರುಣಾಮಯಿ ಮತ್ತು ಸ್ನೇಹಮಯಿ:

ಭಗತ್ ಸಿಂಗ್ ನ ಕ್ರಾಂತಿಕಾರಿ ಸ್ವಭಾವವನ್ನು  ಬದಿಗಿಟ್ಟು ಆತನ ಸ್ವಭಾವವನ್ನು ವಿಶ್ಲೇಷಿಸಿದರೆ ಆತ ಕರುಣಾಮಯಿ, ಸ್ನೇಹಮಯಿ ಮತ್ತು ಹಾಸ್ಯ ಪ್ರವೃತ್ತಿಯುಳ್ಳನಾಗಿದ್ದನೆಂದು ತಿಳಿಯುತ್ತದೆ.
ಭಗತ್ ಸಿಂಗ್ ಕ್ರಾಂತಿ ಮಾರ್ಗವನ್ನು ಹಿಡಿದಿದ್ದ ಆದರೆ ಆತ ಅಹಿಂಸಾವಾದದಲ್ಲಿ ನಂಬಿಕೆ ಹೊಂದಿದ್ದ. ಪ್ರಾಣಿಗಳನ್ನು ಮನುಷ್ಯರಂತೆ ಕಾಣುತ್ತಿದ್ದ. ಭಗತ್ ಸಿಂಗ್ ರ ಜಮೀನಿನಲ್ಲಿ ಕೆಲಸ ಮಾಡಲು ತುಂಬಾ ಬಡತನವಿದ್ದ  ಆಳುಗಳು ಬರುತ್ತಿದ್ದರು. ಭಗತ್ ಸಿಂಗ್ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದ, ಅವರೊಂದಿಗೆ ಬೆರೆಯುತ್ತಿದ್ದ.  ಕಷ್ಟದಲ್ಲಿರುವರಿಗೆ ಹಣದ  ಸಹಾಯವನ್ನೂ ಮಾಡುತ್ತಿದ್ದ. ಮಂಗಳಸಿಂಹ ಎಂಬ ಆಳು ತುಂಬಾ ಸಾಲ ಮಾಡಿ ಅದನ್ನು ಪಾವತಿಸಲು ಆಗದೆ ಕಷ್ಟಪಡುತ್ತಿದ್ದ. ಈ ಸಾಲವನ್ನು ಭಗತ್ ಸಿಂಗ್  ತೀರಿಸಿ  ಹೆಚ್ಚು ಸಾಲಮಾಡಬೇಡ ಎಂದು ಮಂಗಳಸಿಂಹನಿಗೆ ಬುದ್ದಿ ಹೇಳಿದ್ದ.
ಶತ್ರುವಿನಲ್ಲೂ ಸ್ನೇಹವನ್ನು ಬಯಸುವ ಶ್ರೇಷ್ಠ ವ್ಯಕ್ತಿತ್ವ ಭಗತ್ ಸಿಂಗ್ ಅವರದ್ದಾಗಿತ್ತು. ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಮಾತುಗಳಿಂದ ಎಲ್ಲರನ್ನು ತನ್ನ ಮಿತ್ರರನ್ನಾಗಿಸುತ್ತಿದ್ದ ಭಗತ್  ಸ್ನೇಹಮಯಿಯಾಗಿದ್ದ. ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಸಾಕಷ್ಟು ಬ್ರಿಟಿಷ್ ಪುರುಷ ಮತ್ತು ಸ್ತ್ರೀಯರು ಅವನನ್ನು ಭೇಟಿ ಮಾಡಲು ಬರುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಭಗತ್ ಸಿಂಗ್ ನೊಂದಿಗೆ ಕಟ್ಟುನಿಟ್ಟಾಗಿರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ತನ್ನ 
ಹಾಸ್ಯಮಯ ಸ್ವಭಾವದಿಂದ ಅವರ ಮನವನ್ನು ಗೆಲ್ಲುತ್ತಿದ್ದ ಭಗತ್ ಸಿಂಗ್.

ಶ್ರೇಷ್ಠ ಮಾನವತಾವಾದಿ:

ಭಗತ್ ಸಿಂಗ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿದ ಪ್ರಕರಣದಲ್ಲಿ ತನಗೆ ಗಲ್ಲು ಶಿಕ್ಷೆಯಾಗುತ್ತದೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿದಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ  ನನ್ನಂತವರ ಬಲಿದಾನ ಅವಶ್ಯಕವೆಂದು ಆತ ಭಾವಿಸಿದ್ದ. ಆದರೆ ತನ್ನಿಂದ ಮತ್ತೊಬ್ಬರಿಗೆ ತೊಂದರೆಯಾಗುವುದನ್ನು ಭಗತ್ ಸಿಂಗ್ ಸಹಿಸುತ್ತಿರಲಿಲ್ಲ. ಅಸೆಂಬ್ಲಿ ಸ್ಪೋಟದ ನಂತರ ಭಗತ್ ಸಿಂಗ್ ಮತ್ತು ಆತನ ಗುಂಪಿನ ಎಲ್ಲ ಕ್ರಾಂತಿಕಾರಿಗಳ ಬಂಧನವಾಯಿತು. ಬ್ರಿಟಿಷರು ಈ ಕ್ರಾಂತಿಕಾರಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದರು. ಇದರಿಂದ ತೀವ್ರ ದುಃಖಿತನಾಗಿದ್ದ ಭಗತ್ ಸಿಂಗ್ “ ನನ್ನಿಂದ ನನ್ನ ಅಮಾಯಕ ಸ್ನೇಹಿತರು ದುಃಖಕ್ಕೆ ಒಳಗಾಗುತ್ತಿದ್ದಾರೆ “  ಎಂದು ಮರುಕಪಡುತ್ತಿದ್ದ.
ಒಮ್ಮೆ ಕೋರ್ಟಿನಲ್ಲಿ ಸರ್ಕಾರಿ ಸಾಕ್ಷಿ ಹಂಸರಾಜ್ ಬೊಹರಾ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದ. ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆಯೇ ಸರಿ ಎಂದು ಅವನು ಹೇಳಿಕೆ ನೀಡುತ್ತಿದ್ದ. ಭಗತ್ ಸಿಂಗ್ ಅವನನ್ನೇ ದಿಟ್ಟಿಸಿ ನೋಡುತ್ತಿದ್ದ.  ಸ್ವಲ್ಪ ಸಮಯದ ನಂತರ ಭಗತ್ ಸಿಂಗ್ ನ ಕಣ್ಣಿನಲ್ಲಿ ಅಶ್ರುಧಾರೆ. ಮಹಾನ್ ಕ್ರಾಂತಿಕಾರಿ ಕಣ್ಣಿರು ಸುರಿಸಿದ. ಇದಕ್ಕೆ ಪ್ರತಿಯಾಗಿ ಹಂಸರಾಜನು ಕಣ್ಣಿರು ಸುರಿಸಿದ್ದ. ಭಗತ್ ಸಿಂಗ್ ಗಲ್ಲು ಶಿಕ್ಷೆಯನ್ನು ನೆನೆದು ಅತ್ತನೆ? ಮೃತ್ಯುವನ್ನು ವರದಾನದ ರೂಪದಲ್ಲಿ ಪಡೆದ ಆತ ಆಳಲು ಸಾಧ್ಯವೇ ? ಭಗತ್ ಸಿಂಗ್ ಹಂಸರಾಜನ ಸ್ಥಿತಿಯನ್ನು ಕಂಡು ಅತ್ತಿದ್ದ. ಬ್ರಿಟಿಷರು ಅವನಿಂದ ಸಾಕ್ಷಿ ಹೇಳಿಸಲು ಕೊಟ್ಟ ಭೀಕರ ಶಿಕ್ಷೆಯನ್ನು ನೆನೆದು ನನ್ನ ತಪ್ಪಿನಿಂದ ಹಂಸರಾಜ ನೋವು ಅನುಭವಿಸಬೇಕಾಯಿತು ಎಂದು ಪಶ್ಚಾತಾಪದಿಂದ ಅವನು ಕಣ್ಣಿರು ಸುರಿಸಿದ್ದ.


ಕ್ರಾಂತಿಯ ದಾರ್ಶನಿಕ:

ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಜನರು ಹೋರಾಡಿದರು. ಆದರೆ ಬಹಳಷ್ಟು ಹೋರಾಟಗಾರರು ಸ್ವಾತಂತ್ರ್ಯ ಭಾರತದ ಕನಸನಷ್ಟೇ ಕಂಡಿದ್ದರು. ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕೆಂಬುದರ ಬಗ್ಗೆ ಅವರು ಯೋಚಿಸಿರಲಿಲ್ಲ. ವೀರ ಸಾವರ್ಕರ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಈ ಕುರಿತು ಯೋಚಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸಮೃದ್ದ ರಾಷ್ಟ್ರವಾಗಬೇಕೆಂದು ಭಗತ್ ಸಿಂಗ್  ಬಯಸಿದ್ದ. ಸಾಮ್ರಾಜ್ಯವಾದವನ್ನು ಕಿತ್ತೆಸೆದು ಸಮಾಜವಾದವನ್ನು ಪ್ರತಿಷ್ಟಾಪಿಸಬೇಕು, ಸರ್ವರೂ ಸುಖದಿಂದ ಬಾಳಬೇಕೆಂದು ಭಗತ್ ಸಿಂಗ್ ಯೋಚಿಸಿದ್ದ. ಅತಿ ಚಿಕ್ಕ ವಯಸ್ಸಿನಲ್ಲೆಯೇ ಅಮೋಘ ದೂರದೃಷ್ಟಿಯ ಯೋಚನಾಲಹರಿಯನ್ನು  ಹೊಂದಿದ್ದ ಭಗತ್ ಸಿಂಗ್ ನನ್ನು ಭಾರತದ ಕ್ರಾಂತಿಯ ದಾರ್ಶನಿಕನೆಂದು ಕರೆಯಬಹುದು.
                            
ಉತ್ತಮ ಲೇಖಕ:

23 ನೇ ವಯಸ್ಸಿಗೆಯೇ ತನ್ನ ಆತ್ಮಕತೆ ಬರೆದವವನು ಭಗತ್ ಸಿಂಗ್! ಅಲ್ಪಾವಧಿಯಲ್ಲಿಯೇ ಇಂತಹ ಸಾಧನೆಗೈದ ಭಗತ್ ಸಿಂಗ್ ನನ್ನು ಶ್ರೇಷ್ಠ ಲೇಖಕನೆನ್ನಬಹುದು. 300ಕ್ಕೂ ಹೆಚ್ಚು ಕೃತಿಗಳನ್ನು ಓದಿದ್ದ ಭಗತ್ ಸಿಂಗ್, ಹಲವು ಲೇಖನಗಳು ಮತ್ತು  ಗ್ರಂಥಗಳನ್ನು ರಚಿಸಿದ್ದ. ‘ ಐಡಿಯಲ್ ಆಫ್ ಸೋಷಿಯಲಿಸಂ’ , ‘ ದಿ ಡೋರ್ ಟು ಡೆತ್’ , ‘ದಿ ರೆವೆಲ್ಯೂಷನರೀಸ್ ಆಫ್ ಇಂಡಿಯಾ ವಿತ್ ದಿ ಶಾರ್ಟ್ ಬಯಾಗ್ರಾಫಿಕ್ ಸ್ಕೆಚಸ್ ಆಫ್ ದಿ ರೆವೆಲ್ಯೂಷನರೀಸ್’ ಈ ಕೃತಿಗಳನನ್ನು  ಭಗತ್ ಸಿಂಗ್ ಬರೆದಿದ್ದ . ತನ್ನ ಬರವಣಿಗೆಯ ಮೂಲಕ ದೇಶವನ್ನು ಬಡಿದೆಬ್ಬಿಸಬೇಕೆಂದು ಭಗತ್ ಸಿಂಗ್ ಬಯಸಿದ್ದ ಆದರೆ ಆತನ ಆಸೆ ಈಡೇರಲಿಲ್ಲ. ಈ ಯಾವ ಕೃತಿಗಳು ಪ್ರಕಟವಾಗಲೇ ಇಲ್ಲ. ಆ ಕೃತಿಗಳು ದೊರತಿದ್ದರೆ ಭಗತ್ ಸಿಂಗ್ ನ ಬಗ್ಗೆ ಮತ್ತಷ್ಟು ತಿಳಿಯಬಹುದಿತ್ತೇನೋ ಆದರೆ ಅದು ಸಾಧ್ಯವಾಗಲಿಲ್ಲ. ಇದು ದೌರ್ಭಾಗ್ಯದ ಸಂಗತಿ.
  
ಇಷ್ಟೇ ಅಲ್ಲದೇ ಭಗತ್ ಸಿಂಗ್ ಶ್ರೇಷ್ಠ ನಾಯಕನೂ ಆಗಿದ್ದ  ನೌ ಜವಾನ್ ಭಾರತ್ ಸಭಾ ಮತ್ತು ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಎಂಬ ಸಂಘಟನೆಗಳನ್ನು  ಮುನ್ನೆಡೆಸಿದ ರೀತಿ ಆತನ ಶ್ರೇಷ್ಠ ನಾಯಕತ್ವ ಗುಣಕ್ಕೆ ಸಾಕ್ಷಿ. ಭಗತ್ ಸಿಂಗ್ ಉತ್ತಮ ನಾಟಕ ಕಲಾವಿದ ಮತ್ತು ಹಾಡುಗಾರನೂ ಸಹ ಆಗಿದ್ದ. ಲಾಹೋರ್ ನ ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ ನಾಟಕಗಳಲ್ಲಿ ಅಭಿನಯಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದ. ಸುಂದರವಾಗಿ ಮತ್ತು ಅದ್ಭುತವಾಗಿ ಹಾಡುವ ಕಲೆಯನ್ನೂ ಭಗತ್ ಸಿಂಗ್ ರೂಡಿಸಿಕೊಂಡಿದ್ದ.

ಬಾಲ್ಯದಲ್ಲಿ ಹೊಲದಲ್ಲಿ ಬಂದೂಕು ಬೆಳೆಯುತ್ತೆನೆಂದ ಹೊತ್ತಿನಿಂದ ಹಿಡಿದು ಕೊನೆಗೆ ನಗುನಗುತ್ತಾ ಗಲ್ಲುಗಂಬವೇರುವರೆಗೂ ಭಗತ್ ಸಿಂಗ್ ಮಾಡಿದ್ದು ಸ್ವಾತಂತ್ರ್ಯ ಲಕ್ಷ್ಮಿಯ ಜಪ. ಇಂತಹ ಮಹಾನ್ ಕ್ರಾಂತಿಕಾರಿಯ ಗುಣಗಳನ್ನು ಅರಿಯುವುದೇ ನಾವು ಆತನಿಗೆ ಸಲ್ಲಿಸುವ ನಿಜವಾದ ಗೌರವ.

ಇಂದು ಸೆಪ್ಟೆಂಬರ್ 28. ಕ್ರಾಂತಿ ಶಿರೋಮಣಿ ಭಗತ್ ಸಿಂಗ್ ಜನಿಸಿದ ಪುಣ್ಯ ದಿನ. ಆ ಹುತಾತ್ಮ ಜನಿಸಿ ಇಂದಿಗೆ 107 ವರ್ಷಗಳಾಯಿತು. ಆ ಧೀರ ಹುತಾತ್ಮನನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಗತ್ ಸಿಂಗ್ ಗೆ ನುಡಿನಮನಗಳು.

ಇಂಕ್ವಿಲಾಬ್ ಜಿಂದಾಬಾದ್ 
       
ರವಿತೇಜ ಶಾಸ್ತ್ರೀ
ಉತ್ತಿಷ್ಠ ಭಾರತ                                                                                          

                                                              

No comments:

Post a Comment