Thursday, February 27, 2014

ಚಂದ್ರ ಶೇಖರ್ ಅಜಾದ್ ಅಮರ್ ರಹೇ....

ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನಿಸುತ್ತಾ, ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರ ಶೇಖರ ಆಜಾದ್. ವೀರ ಭದ್ರ ತಿವಾರಿ ಎಂಬ ಮಿತ್ರನ ದ್ರೋಹಕ್ಕೆ ಬಲಿಯಾಗಿ ಪೋಲಿಸರ ಕೈಗೆ ಸಿಕ್ಕರೂ, ಧೃತಿಗೆಡದೆ ಸುಮಾರು ೩೦ಕ್ಕೂ ಪೋಲೀಸರ ಅಕ್ರಮಣವನ್ನು ಒಬ್ಬಂಟಿಯಾಗಿ ಎದುರಿಸಿ, ಕೊನೆಗೆ ತನ್ನಲ್ಲಿರುವ ಗುಂಡು ಖಾಲಿಯಾಗುತ್ತಿದಂತೆ, ಅಂತಿಮ ಗುಂಡನ್ನು ತನಗೆ ತಾನೇ ಹಾರಿಸಿಕೊಂಡು ತಾಯಿ ಭಾರತಿಗೆ ತನ್ನ ಪ್ರಾಣವನ್ನು ಅರ್ಪಿಸಿದ ಅಮರ ಕ್ರಾಂತಿಕಾರಿ ಚಂದ್ರ ಶೇಖರ್ ಅಜಾದ್.ಅಬ್ಬಾ!.. ಆ ಸಿಂಹದ ಕಥೆ ಕೇಳಿದಾಗ ಮೈ ರೋಮಾಂಚಿತವಾಗುತ್ತದೆ. ದೇಶ ಭಕ್ತಿಯ ಮೂರ್ತರೂಪ ಚಂದ್ರಶೇಖರ್ ಅಜಾದ್.ಇಂದು ಅವರ ಬಲಿದಾನದ ದಿನ.ಅಮರ ಕ್ರಾಂತಿಕಾರಿಗೆ ನುಡಿನಮನಗಳು.ಚಂದ್ರ ಶೇಖರ್ ಅಜಾದ್ ಅಮರ್ ರಹೇ....ವಂದೇ ಮಾತರಂ.

Wednesday, February 26, 2014

ಪ್ರಪ್ರಥಮಗಳ ಸರದಾರ ಸ್ವಾತಂತ್ರ್ಯ ವೀರ ಸಾವರ್ಕರ್



• ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟ ಮೊದಲ ವಿದ್ಯಾರ್ಥಿ.

• ಭಾರತದಲ್ಲಿ ವಿದೇಶೀ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ.

• ಸ್ವರಾಜ್ಯ ಎಂದು ಉಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ‘ ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಸಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು.

• ದಾಸ್ಯರಕ್ಕಸನ ಎದೆ ಮೆಟ್ಟಲು ಪ್ರಯತ್ನ ಪಟ್ಟುದ್ದಕ್ಕಾಗ...ಿ ತಾನು ಗಳಿಸಿದ ಬಿ.ಎ, ಪದವಿಯನ್ನು ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ.

• ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್ ಹಿಂದುಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ಪರರಾಷ್ಟ್ರಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಮೊಟ್ಟಮೊದಲ ಭಾರತೀಯ ತರುಣ.

• ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದಂತ ಜಗತ್ತಿನ ಮೊಟ್ಟಮೊದಲ ಮೊದಲ ಲೇಖಕ.

• ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಮೊಟ್ಟಮೊದಲ ರಾಜಕೀಯ ಆರೋಪಿ.

• ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟಮೊದಲ ರಾಜಕೀಯ ಕೈದಿ.

• ವಿಶ್ವದ ರಾಜಕೀಯ ಚರಿತ್ರೆಯಲ್ಲೇ, ಐವತ್ತು ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು.

• ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ, ಇಲ್ಲದಿದ್ದರೂ ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿ ಪಾಠ ಮಾಡಿ 14 ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ.

ಕೃಪೆ: ಸಾವರ್ಕರ್ ಕುರಿತು ದಿ. ಶಿವರಾಮು ರಚಿಸಿರುವ "ಆತ್ಮಾಹುತಿ" ಕೃತಿ.

Thursday, February 13, 2014

ನಮೋ ಬ್ರಿಗೇಡ್ ನ ಗುರಿ ನೇರ ಮತ್ತು ಸ್ಪಷ್ಟ ನರೇಂದ್ರ ಮೋದಿ ಫಾರ್ ಪಿ.ಎಂ.

ನಮೋ ಬ್ರಿಗೇಡ್ ಈ ಹೆಸರು ಕರ್ನಾಟಕದ ಜನರಿಗೇ ಚಿರುಪರಿಚಿತ ಹಾಗೆಯೇ  ಬಹು ಚರ್ಚಿತವಾದ ಸಂಘಟನೆ ಸಹ ಹೌದು. ನಮೋ ಬ್ರಿಗೇಡ್ ಕುರಿತು ಸಾಕಷ್ಟು ಜನರಿಗೇ ಸರಿಯಾಗಿ ತಿಳಿದಿಲ್ಲ, ನಮೋ ಬ್ರಿಗೇಡ್ ನ ಬಗ್ಗೆ ತಿಳಿಸುವುದೇ ನನ್ನ ಈ ಲೇಖನದ ಆಶಯ.
     ನಮೋ ಬ್ರಿಗೇಡ್ ಎಂದರೆ ನರೇಂದ್ರ ಮೋದಿ ಬ್ರಿಗೇಡ್. ಅಭಿವೃದ್ದಿಯ ಹರಿಕಾರ ನರೇಂದ್ರ ಮೋದಿಯರನ್ನು ಪ್ರಧಾನಿ ಮಾಡಬೇಕೆಂದು ಬಯಸುವ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ರಾಜಕೀಯೇತರ ಸಂಘಟನೆಯೇ ನಮೋ ಬ್ರಿಗೇಡ್.  ನರೇಂದ್ರ ಮೋದಿಯಂತ ದೇಶಭಕ್ತನನ್ನು ಪ್ರಧಾನಿಯಾಗಿಸಬೇಕೆಂದು ಕಾರ್ಯ ನಿರ್ವಹಿಸುತ್ತಿರುವ ನವ ಉತ್ಸಾಹಿ ತರುಣರ ಗುಂಪೇ ನಮೋ ಬ್ರಿಗೇಡ್.

ನಮೋ ಬ್ರಿಗೇಡ್  ಕಾರ್ಯಕರ್ತರೆಲ್ಲರೂ ದೇಶ ಭಕ್ತರು. ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್, ಮದನಲಾಲ್ ಧಿಂಗ್ರಾ ರಂತ ಮಹಾನ್ ದೇಶಭಕ್ತರು ನಮೋ ಬ್ರಿಗೇಡ್ ಕಾರ್ಯಕರ್ತರಿಗೆ ಆದರ್ಶ ಪುರುಷರು. ಈ ಮಹಾನ್ ಸ್ವಾತಂತ್ರ್ಯ ಸೇನಾನಿಗಳು ತಾಯಿ  ಭಾರತೀಯನ್ನು ಬ್ರಿಟಿಷ್ ರಾಣಿಯ  ದಾಸ್ಯದ ಸಂಕೋಲೆಯಿಂದ ಬಿಡಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅದೇ ರೀತಿ ಇಂದು ತಾಯಿ ಭಾರತೀ ಇಟಲಿ ರಾಣಿಯ ಗುಲಾಮಿತನದ ಸಂಕೋಲೆಯಲ್ಲಿ ಸಿಲುಕಿದ್ದಾಳೆ ಆ ತಾಯಿಯನ್ನು ರಕ್ಷಿಸಬೇಕೆಂಬುದೇ ನಮೋ ಬ್ರಿಗೇಡ್ ಕಾರ್ಯಕರ್ತರ ಗುರಿ. ಈ ದೇಶದ ಸ್ವಾತಂತ್ಯಕ್ಕಾಗಿ ಆರೂವರೆ ಲಕ್ಷಕ್ಕೂ ಹೆಚ್ಚು ಜನ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.  ಆ ತ್ಯಾಗದ ಮುಂದೆ ನಮ್ಮ  ಕಾರ್ಯ ಅಳಿಲು ಸೇವೆ ಎಂಬುದು ನಮೋ ಬ್ರಿಗೇಡ್  ಕಾರ್ಯಕರ್ತರ ಅಂಬೋಣ.
       ಆರಂಭವಾದ ಕೆಲ ಸಮಯದಲ್ಲಿ ಬಹು ಎತ್ತರಕ್ಕೆ ಬೆಳೆದ ಸಂಘಟನೆ ನಮೋ ಬ್ರಿಗೇಡ್. ನಮೋ ಬ್ರಿಗೇಡ್ ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ಅಮೇರಿಕಾ, ದುಬೈ ಸೇರಿ 200ಕ್ಕೂ ಹೆಚ್ಚು ನಮೋ ಬ್ರಿಗೇಡ್ ಶಾಖೆಗಳಿವೆ. ವಿಶ್ವದಾದ್ಯಂತ ಹರಡಿರುವ ಶಾಖೆಗಳ ಮೂಲಕ ನಮೋ ಬ್ರಿಗೇಡ್ ಮೋದಿಯವರ ಸಾಧನೆ, ಅಭಿವೃದ್ದಿ ಮತ್ತು ದೇಶಕ್ಕೆ ಅವರ ಅವಶ್ಯಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ನಮೋ ಭಾರತ್, ನಮೋ ತೇರು, ಚುನಾವಣಾ ಗುರುತಿನ ಚೀಟಿ ಅಭಿಯಾನ, ಕಮಿಟ್ಮೆಂಟ್ ಕಾರ್ಡ್ ವಿತರಣ ಅಭಿಯಾನ ಮುಂತಾದ ಕಾರ್ಯಕ್ರಮಗಳ ಮೂಲಕ “ಮನೆ ಮನೆಗೆ ಮೋದಿ” ಎಂಬ ಸಂದೇಶದ ಮೂಲಕ  ನಮೋ ಬ್ರಿಗೇಡ್ ಜನ ಜಾಗೃತಿಯ ಕಾರ್ಯವನ್ನು ನಿರ್ವಹಿಸುತ್ತಿದೆ.
       ಸವಾಲುಗಳು, ಟೀಕೆಗಳು, ವೃಥಾ ಆರೋಪಗಳಿಂದ ಯಾವ ಸಂಘಟನೆಯೂ ಹೊರತಾಗಿಲ್ಲ. ಅದೇ ರೀತಿ  ಈ ಸವಾಲು, ಟೀಕೆ, ಆರೋಪಗಳು ನಮೋ ಬ್ರಿಗೇಡ್ ನ ಬೆನ್ನೇರಿದವು. ಕಟು ಟೀಕೆಗಳನ್ನು ಎದುರಿಸುದ ಪರಿಣಾಮವಾಗಿಯೇ ನರೇಂದ್ರ ಮೋದಿ ಬಹುದೊಡ್ಡ ನಾಯಕರಾಗಿ ಬೆಳೆಯಲು ಸಾಧ್ಯವಾಗಿದ್ದು. ನಮೋ ಬ್ರಿಗೇಡ್ ಟೀಕೆಗಳಿಗೆ ಕಿವಿಗೊಡದೆ ತನ್ನ ನಿಸ್ವಾರ್ಥ ಸೇವೆ ಮುಂದುವರಿಸಿದೆ. ಕೆಲವರು ನಮೋ ಬ್ರಿಗೇಡ್ ಬಿಜೆಪಿಯ ಬಿ ಟೀಮ್, ಪ್ರಚಾರಕ್ಕಾಗಿ ನಮೋ ಬ್ರಿಗೇಡ್ ಇದನ್ನೆಲ್ಲಾ ಮಾಡುತ್ತಿದೆ, ನಮೋ ಬ್ರಿಗೇಡ್ ಗೆ  ಅಪರಿಚಿತ ಮೂಲಗಳಿಂದ ಅಪಾರವಾದ ದೇಣಿಗೆ ಬರುತ್ತಿದೆ ಎಂದು ಜರಿಯುವವರಿಗೆ ಉತ್ತರ ನೀಡಲೇಬೇಕು.
     ನಮೋ ಬ್ರಿಗೇಡ್ ಮತ್ತು ಅದರ ಕಾರ್ಯಕರ್ತರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ನಮೋ ಬ್ರಿಗೇಡ್ ಯಾವ ಕಾರ್ಯಕರ್ತರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ನಮೋ ಬ್ರಿಗೇಡ್ ಮೋದಿಯವರಿಗಾಗಿ ಬಿಜೆಪಿ ಬೆಂಬಲಿಸುತ್ತದೆ ಅಷ್ಟೆ. ನಮೋ ಬ್ರಿಗೇಡ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅಭ್ಯರ್ಥಿಯ ಆಯ್ಕೆಯಲ್ಲಿ ನಮೋ ಬ್ರಿಗೇಡ್  ಬಿಜೆಪಿಗೆ  ಸಲಹೆ ನೀಡುವುದಾಗಲಿ ಅಥವಾ ತನ್ನ ಇಚ್ಚೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಕೆಲಸವನ್ನು ನಮೋ ಬ್ರಿಗೇಡ್ ಮಾಡುವುದಿಲ್ಲ. ನಮೋ ಬ್ರಿಗೇಡ್ ನ ಯಾವುದೇ ಕಾರ್ಯಕರ್ತರು ಚುನಾವಣೆಗೆ ನಿಲ್ಲುವುದಿಲ್ಲ.       
        ನಮೋ ಬ್ರಿಗೇಡ್ ಪ್ರಚಾರಕ್ಕಾಗಿ ಯಾವುದನ್ನೂ ಮಾಡುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳುವ ಯಾವ ಉದ್ದೇಶವೂ ನಮೋ ಬ್ರಿಗೇಡ್ಗಿಲ್ಲ. ನಮೋ ಬ್ರಿಗೇಡ್ ಗಾಗಿ ತಮ್ಮ ಕೆಲಸವನ್ನೇ ತೊರೆದ ಅನೇಕ ಕಾರ್ಯಕರ್ತರಿದ್ದಾರೆ. ಇವರ ಉದ್ದೇಶ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕೆಂಬುವುದೇ ಹೊರತು ಪ್ರಚಾರ ಗಿಟ್ಟಿಸಿಕೊಳ್ಳುವುದಲ್ಲ. ನಮೋ ಬ್ರಿಗೇಡ್ ಕಾರ್ಯಕರ್ತರೆಲ್ಲರೂ ಈ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ನಮೋ ಬ್ರಿಗೇಡ್ ಮಿಷನ್ ಗಾಗಿ ಕೆಲಸ ಮಾಡುತ್ತದೆಯೇ ಹೊರತು ಟೆಲಿವಿಷನ್ ಗಾಗಿ ಅಲ್ಲ.    
     ನಮೋ ಬ್ರಿಗೇಡ್ ಗೆ ಯಾವುದೇ ರಾಜಕೀಯ ಪಕ್ಷ, ಸಂಘಟನೆಯಿಂದ ದೇಣಿಗೆ ಬರುವುದಿಲ್ಲ. ನಮೋ ಬ್ರಿಗೇಡ್ ಕಾರ್ಯಕರ್ತರೆ ನಮೋ ಬ್ರಿಗೇಡ್ ಚಟುವಟಿಕೆಗಳಿಗೆ ಹಣ ಒದಗಿಸುತ್ತಾರೆ. ಪ್ರತಿ ಶಾಖೆಯು ಇದೇ ರೀತಿ ಕಾರ್ಯ ನಿರ್ವಹಿಸುತ್ತದೆ. ನಮೋ ಸಾರ್ವಜನಿಕರಿಂದ ಯಾವುದೇ ಹಣವನ್ನು ಸಂಗ್ರಹಿಸುವುದಿಲ್ಲ. ನಮೋ ಬ್ರಿಗೇಡ್ ಕಾರ್ಯಕರ್ತರು ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ದೇಶಕ್ಕಾಗಿ, ದೇಶದ ಒಳಿತಿಗಾಗಿ ಯಾವುದೇ ವೈಯಕ್ತಿಕ ಫಲವಿಲ್ಲದೆ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ನಮೋ ಬ್ರಿಗೇಡ್ ನ ಏಕೈಕ ಗುರಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡುವುದು. ಅದು ಈ 2014 ಚುನಾವಣೆ ಮಾತ್ರ ಸೀಮಿತ. ಚುನಾವಣೆ ಮುಗಿದ ನಂತರ ನಮೋ ಬ್ರಿಗೇಡ್ ವಿಸರ್ಜಿತವಾಗುತ್ತದೆ, ನಂತರ ನಮೋ ಬ್ರಿಗೇಡ್ ಗೆ ಯಾವುದೇ ಕೆಲಸವಿಲ್ಲ.ಮೋದಿ ಪ್ರಧಾನಿಯಾದ ನಂತರ ನಮೋ ಬ್ರಿಗೇಡ್ ಆಗಲಿ ಅಥವಾ ನಮೋ ಬ್ರಿಗೇಡ್ ಕಾರ್ಯಕರ್ತರೆ ಆಗಲಿ ತಮ್ಮ ವೈಯಕ್ತಿಕ ಕೆಲಸ ಮುಂದಿಟ್ಟುಕೊಂಡು ಮೋದಿಯವರ ಬಳಿಗೆ ಹೋಗುವುದಿಲ್ಲ. ನಮೋ ಬ್ರಿಗೇಡ್ ಮೋದಿಯವರು ಪ್ರಧಾನಿಯಾಗಬೇಕು, ಭಾರತ ಜಗದ್ಗುರುವಾಗಬೇಕೆಂದು ಬಯಸುತ್ತದೆ. ಈ ಬಗ್ಗೆ ಅದಕ್ಕೆ  ಸ್ಪಷ್ಟ ನಿಲುವುವಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಏಕೆಂದರೆ ನಮೋ ಬ್ರಿಗೇಡ್ ನ ಗುರಿ ನೇರ ಮತ್ತು ಸ್ಪಷ್ಟ ನರೇಂದ್ರ ಮೋದಿ ಫಾರ್ ಪಿ.ಎಂ.


ರವಿತೇಜ ಶಾಸ್ತ್ರೀ  

Sunday, February 9, 2014

ಸತ್ಯ ನಾಡೆಲ್ಲ ನಮ್ಮ ಹೆಮ್ಮೆಯ ಪ್ರತೀಕವೋ ಅಥವಾ ನಮ್ಮ ವ್ಯವಸ್ಥೆಯ ದೌರ್ಬಲ್ಯವೋ?

ಫೆಬ್ರವರಿ 4ರಂದು ವಿಶ್ವದ ಐ.ಟಿ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಹೊಸ ಸಿ.ಇ,ಓ ಆಗಿ ಭಾರತೀಯ ಮೂಲದವರಾದ ಸತ್ಯ ನಾಡೆಲ್ಲ ಅವರನ್ನು ನೇಮಿಸಿತು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸತ್ಯ ನಾಡೆಲ್ಲ ನಮ್ಮ ಕಂಪನಿಗೆ  ನೀಡಿರುವ ಕೊಡುಗೆ ಮತ್ತು ಅವರ ಪ್ರತಿಭೆಯನ್ನು ಪರಿಗಣಿಸಿ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ನಮ್ಮ ಭಾರತೀಯ ಮಾಧ್ಯಮಗಳು ಸತ್ಯ ನಾಡೆಲ್ಲ ಭಾರತದ ಹೆಮ್ಮೆ ಎಂದು ಬಣ್ಣಿಸಿದವು. ಆದರೆ ಇಲ್ಲಿ ನಾವು ಪರಾಮರ್ಶಿಸುವ ವಿಷಯವೆಂದರೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರು ಭಾರತದಲ್ಲೇಕೆ ಯಶಸ್ವಿಯಾಗಲಿಲ್ಲ? ಇದು ನಮ್ಮ ವ್ಯವಸ್ಥೆಯ ದೌರ್ಬಲ್ಯವಲ್ಲವೇ? ಸತ್ಯ ನಾಡೆಲ್ಲ ಎಷ್ಟು ಪ್ರತಿಭಾವಂತರೆಂದರೆ ಅವರು ಮುಖ್ಯಸ್ಥರಾದ  ಪ್ರತಿ ವಿಭಾಗದಲ್ಲೂ ಅವರು ಮೈಕ್ರೋಸಾಫ್ಟ್ ಗೆ ಹೆಚ್ಚು ಲಾಭ ತಂದುಕೊಟ್ಟಿದ್ದಾರೆ  ಹಾಗಾಗಿಯೇ ಬಿಲ್ ಗೇಟ್ಸ್ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು. ಇಂತಹ ವ್ಯಕ್ತಿ ಭಾರತದಲ್ಲೇ ನೆಲಸಿ, ಅವರಿಗೆ ವಿಪುಲ ಅವಕಾಶಗಳು ದೊರಕಿ ಮೈಕ್ರೋಸಾಫ್ಟ್ ನಂತಹ ಕಂಪನಿಯನ್ನು ಭಾರತದಲ್ಲಿ ಹುಟ್ಟುಹಾಕಿದಿದ್ದರೆ ಭಾರತ ಐ.ಟಿ ಕ್ಷೇತ್ರದಲ್ಲಿ ಅಮೆರಿಕಾಕ್ಕೆ ಸರಿಸಮನಾಗಿ ನಿಲ್ಲುತ್ತಿರುತ್ತಿಲ್ಲವೇ? ಏಕೆ  ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ನಮಗೆ ಸಿಗಲಿಲ್ಲ?  

         ನಾಡೆಲ್ಲ ಭಾರತದಲ್ಲಿ ಯಶಸ್ವಿಯಾಗದೇ ಇರುವುದಕ್ಕೆ ಕಾರಣ ನಮ್ಮ ವ್ಯವಸ್ಥೆ, ನಮ್ಮ ವ್ಯವಸ್ಥೆಯ ದೌರ್ಬಲ್ಯ. ನಮ್ಮ ವ್ಯವಸ್ಥೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಅವರಿಗೆ ವಿಪುಲ ಅವಕಾಶ ನೀಡಿದಿದ್ದರೆ, ಸತ್ಯ ನಾಡೆಲ್ಲ ನಮ್ಮ ಆಸ್ತಿಯಾಗುತ್ತಿದ್ದರು. ಆದರೆ ನಮ್ಮ ಸರ್ಕಾರಗಳು ಐ.ಟಿ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡದೇ ಇರುವುದರಿಂದ  ಬಹಳಷ್ಟು ಪ್ರತಿಭಾವಂತರನ್ನು ಭಾರತ ಇಂದು ಕಳೆದುಕೊಳ್ಳುತ್ತಿದೆ.
          ನಮ್ಮ ಸರ್ಕಾರಗಳು ಯುವಕರನ್ನು ಪ್ರೋತ್ಸಾಹಿಸಿ, ಐ.ಟಿ ಉದ್ಯಮಗಳನ್ನು ತೆರೆಯಲು ವಿಪುಲ ಅವಕಾಶಗಳನ್ನು ಕೊಟ್ಟಿದ್ದಿದ್ದೆರೆ ಇಂದು ಆಪಲ್, ಐ.ಬಿ.ಎಂ, ಮೈಕ್ರೋಸಾಫ್ಟ್, ಸ್ಯಾಮ್ ಸ್ಯಾಂಗ್ ಕಂಪೆನಿಗಳನ್ನು ಮೀರಿಸುವಂತಹ ಕಂಪನಿಗಳು ಭಾರತದಲ್ಲಿರುತ್ತಿದ್ದವು. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕಾ ಭಾರತೀಯರ ಮೇಲೆ ಅವಲಂಬಿತವಾಗಿದೆ.  3.22 ಮಿಲಿಯನ್ ಭಾರತೀಯರು ಅಮೆರಿಕಾದಲ್ಲಿದ್ದಾರೆ. ಅಮೆರಿಕಾದಲ್ಲಿರುವ 38% ವೈದ್ಯರು, 12% ವಿಜ್ಞಾನಿಗಳು, 36% ನಾಸಾ ಉದ್ಯೋಗಿಗಳು, 34% ಮೈಕ್ರೋಸಾಫ್ಟ್ ಉದ್ಯೋಗಿಗಳು, 28% ಐ.ಬಿ.ಎಂ ಉದ್ಯೋಗಿಗಳು ಭಾರತದವರು. ಅಮೇರಿಕಾದ ಆದಾಯದಲ್ಲಿ ಭಾರತೀಯರ ಕೊಡುಗೆಯು ಇದೆ. ಈ ವಿಷಯ ಅರಿತ ಅಮೇರಿಕಾ ಅಧ್ಯಕ್ಷ ಒಬಾಮ  ನಾವು ಭಾರತೀಯರನ್ನು ನೋಡಿ ಕಲಿಯಬೇಕೆಂದು ತಮ್ಮ ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
     ಭಾರತೀಯರು ಸರಸ್ವತಿ ಪುತ್ರರು. ನಾವು  ಸರಸ್ವತಿಯನ್ನು ವಿದ್ಯಾ ದೇವಿಯೆಂದು ಪೂಜಿಸುತ್ತೇವೆ. ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು ಭಾರತದಲ್ಲಿ. 4ನೇ  ನಳಂದಾ ವಿಶ್ವವಿದ್ಯಾಲಯದಲ್ಲಿ 4500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಇತರ ದೇಶಗಳು  ಕಣ್ತೆರೆಯುವ ಮೊದಲೇ ಭಾರತ ಜಗತ್ತಿಗೆ ಶಿಕ್ಷಣದ ಬೆಳಕನ್ನು ನೀಡಿತ್ತು. ಮುಂದೆ ಭಾರತವನ್ನು ಆಕ್ರಮಿಸಿದ ಬ್ರಿಟಿಷರು ನಮ್ಮ ಸ್ವಾಭಿಮಾನವನ್ನು ಹೊಸಕಿ ಹಾಕಲು ನಮ್ಮ ಚರಿತ್ರೆಯನ್ನೇ ತಿರುಚಿದರು.
        ನಮ್ಮ ದೇಶವನ್ನು ಬಹುಪಾಲು ಆಳಿದ ಕಾಂಗ್ರೆಸ್ ಜನರಲ್ಲಿ ಸ್ವಾಭಿಮಾನವನ್ನು ಬೆಳೆಸುವ ಪ್ರಯತ್ನವನ್ನೇ ಮಾಡಲಿಲ್ಲ. ಯುವಕರಿಗೆ ವಿಪುಲ ಅವಕಾಶ ನೀಡಲಿಲ್ಲ. ಜಾತಿಯ ಆಧಾರದ ಮೇಲೆ ಮೀಸಲಾತಿ ನೀಡಿ ಪ್ರತಿಭಾವಂತರ ಆಸೆಗಳಿಗೆ ಮಣ್ಣೆರಚಿತು. ಮುಂದೆ ಅಟಲ್ ಬಿಹಾರಿ ವಾಜಪೇಯಿ ಮೀಸಲಾತಿಯನ್ನು ತೆಗೆಯಲು ಮುಂದಾದ ಕಾಂಗ್ರೆಸ್ ವಿರೋಧಿಸಿತು. ಕೆಳ ವರ್ಗದ ಜನರನ್ನು ಕಾಂಗ್ರೆಸ್ ತನ್ನ ವೋಟ್  ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿತು. ಪ್ರತಿಭೆಯಿದ್ದ ಯುವಜನತೆ ಅವಕಾಶಕ್ಕಾಗಿ ಪರದೇಶಗಳಿಗೆ ಹೋಗಬೇಕಾಗಿ ಬಂತು. ಸತ್ಯ ನಾಡೆಲ್ಲ ರಂತ ಪ್ರತಿಭಾವಂತರು ಇದೇ ಹಾದಿಯನ್ನು ಅನುಸರಿಸದರು. ಇದಕ್ಕೆ ಪರಿಹಾರ ಬೇಕೆಂದರೆ ನರೇಂದ ಮೋದಿಯಂತ ದೂರ ದೃಷ್ಟಿ ಉಳ್ಳ ನಾಯಕರು ಪ್ರಧಾನಿಯಾಗಬೇಕು.  
    ಸುಮ್ಮನೆ ಮಾತಿನಲ್ಲಿ ಬೊಗಳೆ ಬಿಡುವ ನಾಯಕರ ನಡುವೆ ನರೇಂದ್ರ ಮೋದಿ ವಿಭಿನ್ನವಾಗಿ ಕಾಣುತ್ತಾರೆ. ಮೋದಿ ಭಾರತದಲ್ಲಿ ಮೈಕ್ರೋಸಾಫ್ಟ್, ಆಪಲ್ ನಂತಹ ಕಂಪನಿ ಆರಂಭವಾಗಬೇಕೆಂದು ಬಯಸುತ್ತಾರೆ. ಗುಜರಾತ್ನಲ್ಲಿ ಈಗಾಗಲೇ ಉದ್ಯಮಕ್ಕೆ ಪ್ರೋತ್ಸಾಹ  ಮಾಡುವ ಮೂಲಕ ಗುಜರಾತನ್ನು ಉದ್ಯಮ ಸ್ನೇಹಿ ರಾಜ್ಯವನ್ನಾಗಿಸಿದ್ದಾರೆ. ಇಂತಹ ವ್ಯಕ್ತಿ ಭಾರತದ ಪ್ರಧಾನಿಯಾದರೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ಭಾರತಕ್ಕೆ ಸಿಗುತ್ತದೆ. ಇದರಿಂದಾಗಿ ಮೈಕ್ರೋಸಾಫ್ಟ್, ಆಪಲ್ ನಂತ ಕಂಪೆನಿಗಳನ್ನು ಮೀರಿಸುವ ಕಂಪನಿಗಳು ಭಾರತದಲ್ಲಿ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಆಗಾಗಲಿ ಎಂಬ ನೀರಿಕ್ಷೆಯಲ್ಲಿ...
ರವಿತೇಜ ಶಾಸ್ತ್ರೀ