Thursday, February 17, 2011

Maretu Mareyada Veeraru

ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!

ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ ಮರ ಹತ್ತಿದ್ದ ಹುಡುಗರು ಕಾಲ್ಕಿತ್ತರೆ, ಆ ಬಾಲಕ ಸಿಕ್ಕಿಬಿದ್ದ.ಮಾಲಿ ಹುಡುಗನಿಗೆ ಬೈದು,ಥಳಿಸಲಾರಂಭಿಸಿದ ಆ ಬಾಲಕ ‘ನನ್ನನ್ನು ಬಿಟ್ಟು ಬಿಡಿ,ನಾನು ಅಪ್ಪ ಇಲ್ಲದ ಹುಡುಗ’ ಎಂದು ಅಂಗಲಾಚಿದ.ಕರಗಿದ ಮಾಲಿ,’ಅಪ್ಪ ಇಲ್ಲದವನು ಇನ್ನು ಮೇಲೆ  ಜವಾಬ್ದಾರಿಯುತವಾಗಿ ಇರುವುದನ್ನು ಕಲಿ’ ಎಂದು ಹೇಳಿ ಬಿಟ್ಟುಬಿಟ್ಟ.ಅಲ್ಲಿಂದ ಇನ್ನೆಂದು ಇಂತ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ ಆ ಹುಡುಗನಿಗೆ ಆಗ ೬-೭ ವರ್ಷವಿದ್ದಿರಬೇಕು.ಬಹುಷಃ ಅಂದೇ ಆತ ತನ್ನ ನಡೆ-ನುಡಿ ಆದರ್ಶಪ್ರಾಯವಾಗಿರಬೇಕು ಅಂತ ನಿರ್ಧರಿಸಿಬಿಟ್ಟಿರಬೇಕು.ಅಂದುಕೊಂಡಂತೆ ಮಾಡಿಬಿಟ್ಟನಲ್ಲ ಪುಣ್ಯಾತ್ಮ…!
ಮುಂದೆ ದೇಶದ ಎರಡನೇ ಪ್ರಧಾನಿಯಾಗಿ ತನ್ನ ಸರಳತೆ,ಸಜ್ಜನಿಕೆ,ಪಾರದರ್ಶಕತೆ,ನೈತಿಕತೆಯಿಂದಾಗಿ ಗಮನ ಸೆಳೆದ. ಆಯುಬ್ ಖಾನನ ಪಾಕಿಸ್ತಾನದ ಜುಟ್ಟು ಹಿಡಿದು ಬಗ್ಗಿಸಿದ, ಆ ವಾಮನ ಮೂರ್ತಿಯ ಹೆಸರು ‘ಲಾಲ್ ಬಹಾದ್ದೂರ್ ಶಾಸ್ತ್ರೀಜಿ’.
ಶಾಸ್ತ್ರಿಯವರು ಶಾರದ ಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಗಳ ಮಗನಾಗಿ ೧೯೦೪ ಅಕ್ಟೋಬರ್ ೨ರಂದು  ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದರು.ಗಾಂಧೀಜಿಯವರ ಅಸಹಕಾರ ಚಳುವಳಿ,ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮೂಂಚೂಣಿಯಲ್ಲಿದ್ದರು.ಅವರ ಪತ್ನಿಯ ಹೆಸರು ಲಲಿತ ದೇವಿ.ಅದು ಕ್ವಿಟ್ ಇಂಡಿಯಾ ಚಳುವಳಿಯ ಸಂಧರ್ಭ, ಹೋರಾಟಕ್ಕೆ ಹೊರಟು ನಿಂತಿದ್ದ ಶಾಸ್ತ್ರಿಯವರಿಗೆ,ಲಲಿತ ದೇವಿಯವರು ‘ಜೈಲುಗಳೆಲ್ಲ ಈಗಾಗಲೇ ತುಂಬಿವೆ ಇನ್ನು ನೀವೆಲ್ಲಿಗೆ ಹೊರಟಿರಿ’ ಅಂದರು , ಅದಕ್ಕೆ ನಸು ನಕ್ಕ ಶಾಸ್ತ್ರಿಗಳು ಹೀಗೆ ಹೇಳಿದ್ದರು ‘ನನ್ನ ಜಾಗ ಅಲ್ಲಿ ಮೊದಲೇ ಮೀಸಲಾಗಿಬಿಟ್ಟಿದೆ ಬಿಡು’.ಬಾಲ್ಯದಲ್ಲೇ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಮತ್ತು ಮಹಾತ್ಮರ ಪ್ರಭಾವಕ್ಕೊಳಗಾಗಿದ್ದ ಶಾಸ್ತ್ರಿಗಳು ತಮ್ಮ ನಿಷ್ಠೆ,ಸಜ್ಜನಿಕೆ ಹೆಸರುವಾಸಿಯಾದವರು.
ನೆಹರು ಮರಣದ ನಂತರ, ‘ನೆಹರೂ ನಂತರ ಯಾರು?’ ಅಂತ ಕೇಳುತಿದ್ದವರ ಎದುರಿಗೆ ಕಂಡಿದ್ದು ಶಾಸ್ತ್ರಿಗಳು.ಅದು ೬೪ರ ಇಸವಿ.ಎರಡು ವರ್ಷದ ಹಿಂದೆ ೬೨ರಲ್ಲಿ ಚೀನಿಗಳು ಮರೆಯಾಲಾರದ ಹೊಡೆತ ಕೊಟ್ಟಿದ್ದರು,ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಶಾಸ್ತ್ರಿಗಳು ಅಧಿಕಾರವಹಿಸಿಕೊಂಡಿದ್ದರು.ಅತ್ತ ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!
ಇತ್ತ ೬೨ರ ಯುದ್ಧದ ನಂತರ ದೇಶದ ರಕ್ಷಣಾ ವ್ಯವಸ್ತೆಯ ಮೇಲು ಅಪನಂಬಿಕೆಗಳು ಹುಟ್ಟಿದ್ದವು,ಇಂತ ಸಮಯದಲ್ಲೇ ಪಾಕಿಗಳು ಕಾಶ್ಮೀರದೊಳಕ್ಕೆ ನುಗ್ಗಿ ಬಂದಿದ್ದರು.ಜಮ್ಮುವಿನ ಚಾಮ್ಬ್ ಸೆಕ್ಟರ್ನೊಳಕ್ಕೆ ಬರೋಬ್ಬರಿ ೧೦೦ ಯುದ್ಧ ಟ್ಯಾಂಕುಗಳ ಜೊತೆಗೆ!
ಆ ದಿನ ರಾತ್ರಿ ಊಟಕ್ಕೆ ಅಂತ ಮನೆಗೆ ಬಂದ ಶಾಸ್ತ್ರಿಗಳನ್ನ ತುರ್ತಾಗಿ ಭೇಟಿಯಾಗಲು ಬಂದ ಮಿಲಿಟರಿ ಅಧಿಕಾರಿಗಳು,
‘ಸರ್ ,ಅವರು ಗಡಿ ದಾಟಿ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದ್ದಾರೆ.ಈಗ ನಾವು ಅವರ ದಿಕ್ಕು ತಪ್ಪಿಸಿ ಸಫಲರಾಗಬೇಕೆಂದರೆ ಲಾಹೋರ್ ಕಡೆ ನುಗ್ಗಬೇಕು’
‘ಸರಿ,ಹಾಗಿದ್ರೆ ಹೊರಡಿ ಲಾಹೋರ್ ಕಡೆ’
‘ಆದರೆ,ಲಾಹೋರ್ ಕಡೆ ನ್ನುಗುವುದು ಎಂದರೆ ಅಂತರಾಷ್ಟ್ರೀಯ ಗಡಿ ದಾಟಿದಂತೆ’
‘ಅವರು ಕಾಶ್ಮೀರಕ್ಕೆ ನುಗ್ಗಿಲ್ಲವೇ,ನಾವು ನುಗ್ಗೋಣ!’
ಅದು ೧೦-೧೫ ನಿಮಿಷಗಳ ಮಾತುಕತೆಯಲ್ಲಿ ತೆಗೆದುಕೊಂಡ ನಿರ್ಧಾರ.ಮುಂದೆ ಇದೆ ನಿರ್ಧಾರ ೧೯೬೫ ರ ಯುದ್ಧದಲ್ಲಿ ಆಯೂಬ್ ಖಾನನ ಪಾಕಿಸ್ತಾನ ‘ಲಾಲ್ ಬಹದ್ದೂರ್ ಶಾಸ್ತ್ರೀ’ ಎಂಬ ವಾಮನ ಮೂರ್ತಿಯೇದುರು ಮಂಡಿಯೂರಿ ಕುಳಿತು ಕೊಳ್ಳುವಂತೆ ಮಾಡಿದ್ದು!
ಯುದ್ಧ ಘೋಷಣೆಯಾದ ನಂತರ ಕೆಂಪುಕೋಟೆಯಲ್ಲಿ  ದೇಶದ ಜನರನ್ನುದ್ದೇಶಿಸಿ ‘ಹತಿಯಾರೋನ್ ಕ ಜವಾಬ್ ಹತಿಯಾರೋನ್ ಸೆ ದೇಂಗೇ.ಹಮಾರ ದೇಶ್ ರಹೇಗ ತೋ ಹಮಾರ ತಿರಂಗ ರಹೇಗ (ಅಸ್ತ್ರಕ್ಕೆ ಪ್ರತಿಯಾಗಿ ಅಸ್ತ್ರದಲ್ಲೇ ಉತ್ತರ ನೀಡುತ್ತೇವೆ.ನಮ್ಮ ದೇಶ ಇದ್ದರೆ ನಮ್ಮ ತಿರಂಗವು ಇರುತ್ತದೆ) ಅಂದಿದ್ದರು,ಹಾಗೆ ಅಂತ ಸಮಯದಲ್ಲಿ ‘ಜೈ ಜವಾನ್-ಜೈ ಕಿಸಾನ್’ ಘೋಷಣೆ ಮಾಡುವ ಮೂಲಕ ಜನರ ಆತ್ಮಸ್ಥೈರ್ಯವನ್ನ ಹೆಚ್ಚಿಸಿದ್ದರು.
ನೆಹರು ಮಂತ್ರಿಮಂಡಲದಲ್ಲಿ ವಿವಿಧ ಖಾತೆಗಳನ್ನ ನಿರ್ವಹಿಸಿದ್ದ ಶಾಸ್ತ್ರಿಗಳು,ರೈಲ್ವೆ ಸಚಿವರಾಗಿದ್ದಾಗ ತಮಿಳುನಾಡಿನಲ್ಲಿ ನಡೆದ ರೈಲು ಅಪಘಾತದ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಿದ್ದರು,ಖುದ್ದು ನೆಹರು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು ಒಪ್ಪಲಿಲ್ಲ.ಶಾಸ್ತ್ರಿಗಳ ಮಗ ಅನಿಲ್ ಶಾಸ್ತ್ರಿಯವರು ಹೇಳಿದ್ದ ಪ್ರಸಂಗ ಹೀಗಿದೆ.ಅದೊಮ್ಮೆ ಅವರು ಕಾಶ್ಮೀರಕ್ಕೆ ಕಾರ್ಯ ನಿಮಿತ್ತ ಹೊರಡುವವರಿದ್ದರು.ಶಾಸ್ತ್ರಿಗಳ ಬಗ್ಗೆ ತಿಳಿದಿದ್ದ ನೆಹರು ಕೇಳಿದರು ‘ಕಾಶ್ಮೀರದಲ್ಲಿ ಈಗ ಹಿಮಪಾತವಾಗುತ್ತಿರುತ್ತದೆ,ನಿಮ್ಮಲ್ಲಿ ಚಳಿ ತಡೆಯುವ ಉಡುಪಿದೆಯೇ?’. ಶಾಸ್ತ್ರಿಗಳು ತಾವು ಧರಿಸಿದ್ದ ಕೋಟನ್ನ ತೋರಿಸಿದ್ದರು, ತಕ್ಷಣ ತಮ್ಮ ಬಳಿಯಿದ್ದ ಕೋಟನ್ನೇ ಶಾಸ್ತ್ರಿಗಳಿಗೆ ನೀಡಿದ್ದರಂತೆ ನೆಹರು.ಮರುದಿನ ಪತ್ರಿಕೆಗಳು ‘ನೆಹರುವಿನ ಜವಾಬ್ದಾರಿ ಈಗ ಶಾಸ್ತ್ರಿಗಳ ಮೇಲೆ ಬಿದ್ದಿದೆ’ ಅಂತ ವರದಿ ಮಾಡಿದ್ದವಂತೆ!’
೬೪ರ ಯುದ್ಧದ ವಿಜಯದ ನಂತರ ಭಾರತ-ಪಾಕ್ ನಡುವೆ ಸಂಧಾನಕ್ಕೆ ಬಂದಿದ್ದು ಸೋವಿಯತ್ ಯುನಿಯನ್.ತಾಷ್ಕೆಂಟ್ಗೆ ಹೊರಟು ನಿಂತಿದ್ದರು ಶಾಸ್ತ್ರಿಗಳು,ಆಗ ಭಾರತದ ಮುಗಿಲಲ್ಲಿ ಕಾರ್ಮೋಡ ಕವಿದಿತ್ತ!? ಗೊತ್ತಿಲ್ಲ.ತಾಷ್ಕೆಂಟ್ ಒಪ್ಪಂದಕ್ಕೆ ಹೊರಡುವ ಮುನ್ನ ಶಾಸ್ತ್ರಿಯವರ ತಾಯಿ,ಪತ್ರಕರ್ತರು ಹಾಗೂ ದೇಶದ ಬಹುತೇಕ ಜನರ ಆಶಯ ಒಂದೇ ಆಗಿತ್ತು ಅದು ಯುದ್ಧದಲ್ಲಿ ನಮ್ಮ ಪಡೆಗಳು ಗೆದ್ದ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ‘ಹಾಜಿಫೀರ್ ಮತ್ತು ತಿತ್ವ’ವನ್ನ ನಾವೇ ಉಳಿಸಿಕೊಳ್ಳಬೇಕು ಅನ್ನುವುದು.ತಾಷ್ಕೆಂಟ್ಗೆ ಹೊರಡುವ ಮುನ್ನ ಹಾಗೆ ಮಾಡುವೆ ಅಂತ ಹೊರಟಿದ್ದರು.
ಆದರೆ ಮಾತುಕತೆಯ ಸಮಯದಲ್ಲಿ ಸೋವಿಯತ್ನ ಅಧ್ಯಕ್ಷ ‘ಹಾಜಿಫೀರ್ ಮತ್ತು ತಿತ್ವ’ವನ್ನ ಅವರಿ ಬಿಟ್ಟುಕೊಡಿ ಅಂತ ಕೇಳಿದಾಗ,ಶಾಸ್ತ್ರಿಗಳು’ಹಾಗಿದ್ದರೆ,ನೀವು ಬೇರೊಬ್ಬ ಪ್ರಧಾನಿಯನ್ನ ಹುಡುಕಿಕೊಳ್ಳಿ’ಅಂದಿದ್ದರು.ಆದರೆ ನಂತರ ವಿಷಯ ಭದ್ರತಾ ಮಂಡಳಿಯವರೆಗೆ ಹೋಗುತ್ತದೆ ಅಂದಾಗ,ಪಾಕಿಸ್ತಾನ ಇನ್ಯಾವತ್ತು ಭಾರತದದೊಂದಿಗೆ ಅಸ್ತ್ರ ಪ್ರಯೋಗ ಮಾಡುವುದಿಲ್ಲ ಅನ್ನುವುದನ್ನ ಲಿಖಿತವಾಗಿ ಪಡೆದು,ಆ ಎರಡು ಜಾಗಗಳನ್ನ ಬಿಟ್ಟು ಕೊಡಲು ಒಪ್ಪಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿ ಬಿಟ್ಟರು! :(
ಒಪ್ಪಂದದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿದ ಕೆಲ ಪತ್ರಕರ್ತರು ‘ನೀವು ದೇಶವನ್ನ ಮಾರಿಕೊಂಡಿದ್ದಿರಿ’ ಅಂದಿದ್ದರು ಅಂತ ಶಾಸ್ತ್ರಿಗಳ ಪತ್ರಿಕಾ ಸಲಹೆಗಾರರಾಗಿದ್ದ ಕುಲದೀಪ್ ನಯ್ಯರ್ ಹೇಳುತ್ತಾರೆ.ಆ ಬಳಿಕ ಅವರ ಮನೆಗೆ ಕರೆ ಮಾಡಿದಾಗ ಅವರಮ್ಮ ಕೂಡ ಕೋಪದಿಂದ ಮಾತನಾಡಿರಲಿಲ್ಲವಂತೆ.ಬಹುಶ ಈ ಚಿಂತೆ ಹಾಗೂ ಒತ್ತಡಗಳೇ ಹೃದಾಯಘಾತಕ್ಕೆ ಕಾರಣವಾಗಿ ಶಾಸ್ತ್ರಿಗಳು ಕೊನೆಯುಸಿರೆಳೆದಿದ್ದರಾ?,ಇರಬೇಕು ಅನ್ನೋಣ ಅಂದ್ರೆ ‘ಅವ್ರ ಮೃತ ದೇಹದ ಶವ ಪರೀಕ್ಷೆ ಕೂಡ ಆಗಲಿಲ್ಲ,ಹಾಗೂ ಅವರ ಎದೆ,ಹೊಟ್ಟೆ,ಬೆನ್ನಿನ ಮೇಲೆ ನೀಲಿ ಗುರುತುಗಳಿದ್ದವು!’ ಅಂತ ಹೇಳುತ್ತಾರೆ ಅವರ ಇನ್ನೊಬ್ಬ ಮಗ ಸುನಿಲ್ ಶಾಸ್ತ್ರಿ.ಅವ್ರ ಅಂತ್ಯ ಮಾತ್ರ ೪೫ ವರ್ಷಗಳ ನಂತರವೂ ಇಂದಿಗೂ ನಿಗೂಡವಾಗಿಯೇ ಉಳಿದಿದೆ :(
ಶಾಸ್ತ್ರಿಗಳ ಅಂತ್ಯದೊಂದಿಗೆ ಈ ದೇಶದ ಜನ ಸಾಮಾನ್ಯರ ನಾಡಿ ಮಿಡಿತವನ್ನರಿತಿದ್ದ ಜನ ನಾಯಕ,ಸರಳತೆ-ಸಜ್ಜನಿಕೆಯ ಜನನಾಯಕನನ್ನ ದೇಶ ಕಳೆದುಕೊಂಡಿದ್ದಂತು ಕಟು ಸತ್ಯ!, ಅವರ ಕಣ್ಮರೆಯು ಭಾರತದ ಪ್ರಜಾಪ್ರಭುತ್ವವನ್ನ ವಂಶಾಡಳಿತದ ತೆಕ್ಕೆಗೆ ಸಿಕ್ಕಿಸಿತ್ತು :(   ಗಾಂಧಿಜಿ ಹುಟ್ಟಿದ ದಿನವೇ ಹುಟ್ಟಿ ಅವರು ಹೇಳುತಿದ್ದ ಆದರ್ಶಗಳನ್ನ ವಾಸ್ತವಕ್ಕೆ ತರುತಿದ್ದ ಶಾಸ್ತ್ರಿಗಳ ಅಕಾಲಿಕ ಕಣ್ಮರೆ ದೇಶಕ್ಕೆ ದೊಡ್ಡ ನಷ್ಟ.ಅಂತಹ ಪುಣ್ಯಾತ್ಮನ ಜನ್ಮದಿನವಿಂದು.ಭ್ರಷ್ಟಾಚಾರ,ವೋಟ್ ಬ್ಯಾಂಕ್ ರಾಜಕಾರಣದ ಈ ಕೆಟ್ಟ ಸಮಯದಲ್ಲಿ ಶಾಸ್ತ್ರಿಗಳನ್ತವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತ  ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ! :)

ಗುಂಡಿಗೆ ಎದೆ ಕೊಟ್ಟು ಹೊರಟು ನಿಂತವನ ವಯಸ್ಸು ೧೩! ಮತ್ತು ಹೆಸರು “ನಾರಾಯಣ ಮಹಾದೇವ ಧೋನಿ”

ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ ‘ವಂದೇ ಮಾತರಂ’ ‘ಭಾರತ ಮಾತಾಕಿ ಜೈ’ ಘೋಷಣೆಗಳು ಮೊಳಗುತಿದ್ದವು. ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಆಟವಾಡುತಿದ್ದರೆ ಅವನು ಮಾತ್ರ ಬೆಳಿಗ್ಗೆ ಬೇಗ ಎದ್ದು, ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತನಗಿಂತಲೂ ಎತ್ತರವಿದ್ದ ಒಂದು ಬೊಂಬಿಗೆ ‘ತ್ರಿವರ್ಣ ಧ್ವಜ’ ಕಟ್ಟಿಕೊಂಡವನೇ ಮಲಗಿದ್ದ ತಾಯಿಯ ಬಳಿ ಹೋಗಿ ಅವಳನ್ನು ಎಬ್ಬಿಸಿ ಆಶೀರ್ವದಿಸುವಂತೆ ಕೇಳಿದ. ಶ್ವೇತ ವಸ್ತ್ರಧಾರಿಯಾಗಿ ‘ತ್ರಿವರ್ಣ ಧ್ವಜ’ವನ್ನಿಡಿದ ಮಗನನ್ನು ನೋಡಿ,
ಆ ತಾಯಿ ಕೇಳಿದಳು “ಎಲ್ಲಿ ಹೊರಟೆ ಮಗು?”
“ಅಮ್ಮ , ನಾನು ದುರ್ಗದ ಬಯಲಿನಲ್ಲಿ ನಡೆಯುತ್ತಿರುವ ‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ”
“ಆದರೆ ಮಗು, ಅಲ್ಲಿ ಹಿರಿಯರೇ ಇರುತ್ತಾರೆ ಕಣೋ!”
“ಅಮ್ಮ , ತಾಯಿ ಭಾರತಿಯ ಸೇವೆ ಮಾಡಲು ಹಿರಿಯರು ,ಕಿರಿಯರು ಯಾರದರೆನಮ್ಮ?” ಎಂದವನ ಮುಖದಲ್ಲಿನ ದಿವ್ಯ ತೇಜಸ್ಸನ್ನು ಕಂಡು ಆ ತಾಯಿ ಮಗನನ್ನು ಹರಸಿ ಬೀಳ್ಕೊಟ್ಟಳು.
ಹಾಗೆ ಹೊರಟು ನಿಂತವನ ವಯಸ್ಸು ೧೩, ಹೆಸರು “ನಾರಾಯಣ ಮಹಾದೇವ ಧೋನಿ”. ಗಂಡು ಮೆಟ್ಟಿದ ನಾಡು ಹುಬ್ಬಳಿಯ ಆ ಧೀರ ಬಾಲಕ ಓದುತಿದ್ದ ಶಾಲೆಯ ಹೆಸರು ‘ಲಾಮಿಂಗ್ಟನ್ ಹೈಸ್ಕೂಲ್’.
ದುರ್ಗದ ಬಯಲಿಗೆ ಬಂದು ನಾರಾಯಣ ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ.ಅವನ ಉತ್ಸಾಹ,ತೇಜಸ್ಸು ಕಂಡ ಹಿರಿಯರೆಲ್ಲ ಅವನನ್ನು ಅಪಾರ ಜನಸ್ತೋಮದ ಮುಂಚೂಣಿಯಲ್ಲಿ ಬಿಟ್ಟರು. ಇಡಿ ಜನಸಾಗರಕ್ಕೆ ಪುಟ್ಟ ಬಾಲಕ ‘ನಾರಾಯಣ’ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತ ಮಾತೆಯನ್ನು ಬಿಡಿಸಬಂದ ನಾಯಕನಂತೆ ಕಂಗೊಳಿಸುತಿದ್ದ.
‘ವಂದೇ ಮಾತರಂ’ ,’ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣೆಗಳು ಪ್ರತಿಧ್ವನಿಸುತಿದ್ದವು.ಆ ಹರತಾಳವನ್ನು ನೋಡುತ್ತಾ ರಸ್ತೆಯ ಬದಿ ತಮ್ಮಷ್ಟಕ್ಕೆ ತಾವಿದ್ದ ಜನ,ಪುಟ್ಟ ವೀರನ ನೋಡಿ ತಮ್ಮ ಬಗ್ಗೆ ಅಸಹ್ಯ ಪಟ್ಟುಕೊಂಡು ಅವರು ಹೋರಾಟದಲ್ಲಿ ಪಾಲ್ಗೊಂಡರು.ನೋಡನೋಡುತಿದ್ದಂತೆ ಅಲ್ಲೊಂದು ಜನಪ್ರವಾಹವೇ ಸೃಷ್ಟಿಯಾಯಿತು.
ಹಾಗೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ, ಆಂಗ್ಲ ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು.ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಪುಟ್ಟ ಬಾಲಕ ನಾರಾಯಣ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಘೋಷಣೆ ಕೂಗುತ್ತಲೇ ಇದ್ದ.ಅಷ್ಟರಲ್ಲಿ ನುಗ್ಗಿ ಬಂದ ಗುಂಡಿಗೆ ಎದೆ ಕೊಟ್ಟವನೇ ರಕ್ತದ ಮಡುವಲ್ಲಿ ಕುಸಿದು ಬಿದ್ದ.
ಜೀವನ್ಮರಣ ಹೋರಾಟ ನಡೆಸುತಿದ್ದ ನಾರಾಯಣನನ್ನು ನೋಡಲು ಆಸ್ಪತ್ರೆಗೆ ತೆರಳಿದ ಕೆಲ ಹಿರಿಯ ಅಧಿಕಾರಿಗಳು ಅವನಿಗೆ ಕೇಳಿದರು ‘ನಿನಗೇನು ಬೇಕು?’ “ಸ್ವರಾಜ್ಯ” ಎನ್ನುತ್ತಲೇ ನಾರಾಯಣ ಎಂಬ ಧೀರ ಬಾಲಕನ ಪ್ರಾಣ ಪಕ್ಷಿ ಹಾರಿತ್ತು.
ಇಂತ ವೀರರಿಂದಾಗಿಯೇ ಹುಬ್ಬಳ್ಳಿಯನ್ನು “ಗಂಡು ಮೆಟ್ಟಿದ ನಾಡು” ಅಂತ ಕರೆಯುತ್ತಾರೆನೋ?
ಇತಿಹಾಸದ ಪುಟದಲ್ಲಿ ಮರೆತು ಮರೆಯಾದ ಇಂತ ಅದೆಷ್ಟೋ ‘unsung hero’ ಗಳಿದ್ದಾರೋ ಅವರಿಗೆಲ್ಲ ನನ್ನ ನುಡಿನಮನಗಳು.

೧೯೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು ‘ಬದುಕಿದ್ದರಾ!?’

ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು  ‘ಮಹಾತ್ಮ ಗಾಂಧಿಜಿ’ಯವರನ್ನು.ಮಹಾತ್ಮರ ಸಲಹೆಯಂತೆ ‘ದೇಶ ಬಂಧು’ ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦  ಜನರ  ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.
ಬೋಸರು ೧೮೯೭ರ ಜನವರಿ ೨೩ ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ ೪ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.
೧೯೩೮ ರಲ್ಲಿ ನಡೆದ ೫೧ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.೧೯೩೯ರಲ್ಲಿ  ಮತ್ತೊಮ್ಮೆ  ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ‘ಪಟ್ಟಾಭಿ ಸೀತಾರಾಮಯ್ಯ’ ಹಾಗೂ ‘ಸುಭಾಷ್’ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.
ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ “ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು” ಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ  ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ‘ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.
ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು ೧೯೪೧ ರಲ್ಲಿ , ಬ್ರಿಟಿಷ್ ಸರ್ಕಾರ ೧೧ನೆ  ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.ಹಾಗೆ ಗೃಹ ಬಂಧನದಲ್ಲಿರುವಾಗಲೇ ಸುಭಾಷರು ಯಾರು ಊಹಿಸದ ಯೋಜನೆ ಮಾಡಿಬಿಟ್ಟಿದ್ದರು.ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.
ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ‘ಐ.ಎನ್.ಎ’ ಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .
ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು  ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು    ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ  ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ  “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!” ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.
೧೯೪೩ರ ಅಕ್ಟೋಬರ್ ೨೩ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ‘ಜರ್ಮನಿ,ಜಪಾನ್,ಚೀನಾ,ಸಿಂಗಾಪುರ’ ಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ  ಸುಭಾಷರು ಅಧಿಕೃತವಾಗಿ ‘ಮಿತ್ರ ಕೂಟ’ಗಳ (ಅದೇಕೆ ‘ನಮ್ಮ’ ಇತಿಹಾಸದಲ್ಲೂ ಇವರು ‘ಮಿತ್ರ’ರೋ?) ಮೇಲೆ ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ  ‘ಐ.ಎನ್.ಎ’ ಅಭಿಯಾನ.
ಸುಭಾಷರು ‘ಐ.ಎನ್.ಎ’ ಸ್ಥಾಪಿಸಿದರು ಅಂತಲೇ ಓದಿಕೊಂಡು ಬಂದವರಿಗೆ, ಬಹುಷಃ ಈ ‘ಐ.ಎನ್.ಎ’ಯನ್ನು ಹುಟ್ಟು ಹಾಕಿದ್ದು ಮತ್ತೊಬ್ಬ ಹಿರಿಯ ಕ್ರಾಂತಿಕಾರೀ ‘ರಾಸ್ ಬಿಹಾರಿ ಬೋಸ್’ ಎಂಬುದು ತಿಳಿದಿರಲಿಕ್ಕಿಲ್ಲ. ಸುಭಾಷರು ಸ್ಥಾಪಿಸಿದ್ದು ‘ಇಂಡಿಯಾ ಲಿಜಾನ್’ ಅನ್ನುವ ಸಂಘಟನೆ. ರಾಸ್ ಬಿಹಾರಿ ಬೋಸರು ನಂತರ ಸುಭಾಷರ ಸುಪರ್ಧಿಗೆ ‘ಐ.ಎನ್.ಎ’ ಅನ್ನು ಹಸ್ತಾಂತರಿಸಿದರು. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಜಪಾನಿ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು.ಸುಭಾಷರು , ಟೋಜೋನೊಂದಿಗೆ ಮಾತಾಡಿ ಅವೆರಡನ್ನು ‘ಐ.ಎನ್.ಎ’ ಸುಪರ್ದಿಗೆ ತೆಗೆದುಕೊಂಡು ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.
ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ‘ಐ.ಎನ್.ಎ’ ಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ‘ಇಂಫಾಲ್’ ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ  ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು ೧೯೪೫ರ ಆಗುಸ್ತ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು (!) ಅನ್ನುವ ಸುದ್ದಿಗಳು ಬಂದವು ಬಹಳಷ್ಟು ಐ.ಎನ್ ಎ ಸೈನಿಕರನ್ನು  ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ  ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನಡೆದ ‘ನೌಕ ದಳದ’ ಬಂಡಾಯ (ಅದಕ್ಕೂ ನೇತಾಜಿಯವರ ಐ .ಎನ್.ಎ ಪರೋಕ್ಷ ಕಾರಣವೆಂದರು ತಪ್ಪಿಲ್ಲ) ಬ್ರಿಟಿಷರಿಗೆ ಚರಮ ಗೀತೆಯಾಯಿತು.
ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ ೧೯೪೭ರ ಆಗಸ್ಟ್ನಲ್ಲಿ  ಇಲ್ಲಿಂದ ತೊಲಗಿದರು.ಭಾರತ ಸ್ವತಂತ್ರವಾಯಿತು.ಅವರೇನೋ ತೊಲಗಿದರು.ಭಾರತ ಸ್ವತಂತ್ರವು ಆಯಿತು,ಆದರೆ ಜನರನ್ನು ಬಹು ಕಾಲ ಕಾಡಿದ ಪ್ರಶ್ನೆ ಬ್ರಿಟಿಷರ ನಿದ್ದೆಗೆಡಿಸಿದ ಸುಭಾಷರು ‘ಬದುಕಿದ್ದಾರಾ!?’ ಬದುಕಿದ್ದರೆ ಎಲ್ಲಿದ್ದರು?ಸೆರೆಯಲ್ಲಿದ್ದರ? ಇದ್ದರೆ ಯಾರ ಸೆರೆಯಲ್ಲಿದ್ದರು? ಸ್ವತಂತ್ರ ಭಾರತದಲ್ಲಿ ಅಜ್ಞಾತರಾಗಿ ಬದುಕಿದ್ದರ? ಹಾಗೆ ಬದುಕುವಂತೆ ಮಾಡಿದ್ದು ಯಾರು?ಯಾಕೆ ಅವರ ಸಾವಿನ ಬಗ್ಗೆ ಸರ್ಕಾರಗಳಿಗೆ ಅಸಡ್ಡೆ? ಪ್ರಶ್ನೆಗಳು ಸಾವಿರಾರು ,ಆದರೆ ಉತ್ತರ ಕೊಡುವವರು ಯಾರು?
ಅಂದಿಗೆ ಹಿಟ್ಲರ್ ಮಣ್ಣಾಗಿದ್ದ,ಜಪಾನ್ ಸೋತು ಶರಣಾಯಿತು.ಸುಭಾಷರು ಗುಪ್ತ ಸಭೆಯೊಂದನ್ನು ನಡೆಸಿ ,ಜಪಾನಿ ಅಧಿಕಾರಿಗಳು ಹತ್ತಿದ್ದ  ವಿಮಾನವನ್ನ ಹತ್ತಿದರು,ಅವರೊಂದಿಗೆ ಇದ್ದ ಮತ್ತೊಬ್ಬ ‘ಐ.ಎನ್.ಎ’ ಅಧಿಕಾರಿಯ ಹೆಸರು ‘ಹಬಿಬುರ್ ರಹಮಾನ್’.ಮುಂದೆ ತೈಪೆಯಲ್ಲಿ ಆ ವಿಮಾನ ಅಪಘಾತಕ್ಕಿಡಾಗಿ ಸುಭಾಷರು ಮರಣ ಹೊಂದಿದರು ಅಂತ ತಾವು ಸಾಯುವವರೆಗೆ ಸಾಧಿಸುತ್ತಲೇ ಬಂದವರು ಇದೆ ರಹಮಾನ್ ಅವರು.ಹಾಗೆ ಅವರು ಹೇಳಿದ್ದ?ಅಥವಾ ಅವರಿಂದ ಹೇಳಿಸಲಾಯಿತ? ಗೊತ್ತಿಲ್ಲ.
ಸ್ವತಂತ್ರ ಬಂದು ಹತ್ತು ವರ್ಷಗಳ ನಂತರ ನಮ್ಮ ಮೊದಲ ಪ್ರಧಾನಿಯವರಿಗೆ ಜ್ಞಾನೋದಯವಾಗಿ ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ‘ಷಾ ನವಾಜ್ ಸಮಿತಿ’ ರಚಿಸಿದರು.ಆ ಸಮಿತಿಯವರಿಗೆ ಅದೇನು ಬೇರೆ ಕೆಲಸವಿತ್ತೋ , ದಿಡೀರ್ ಅಂತ ವರದಿ ಒಪ್ಪಿಸಿಯೇ ಬಿಟ್ಟರು.ಮುಂದೆ ‘ಖೊಸ್ಲಾ ಸಮಿತಿ’ ಎಲ್ಲ ಹೇಳಿದ್ದು ಒಂದೇ ಅವರು ವಿಮಾನಪಾಘತದಲ್ಲಿ ಮಡಿದರು ಅಂತ.ಖುದ್ದು ತೈಪೆ ಸರ್ಕಾರವೇ ಆ ದಿನ ಯಾವ ವಿಮಾನವು ಹಾರಿಲ್ಲ ಅಂದರೆ ಕೇಳುವವರು ಯಾರು ಇರಲಿಲ್ಲ.ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ‘ಮುಖರ್ಜಿ ಸಮಿತಿ’ ಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ ,ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು. ಯಾವ್ದು ನಿಜ?ಗೊತ್ತಿಲ್ಲ.
ನೇತಾಜಿ ನಿಗೂಡ ಅಂತ್ಯವನ್ನು  ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ(!) ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ಹಾಗೆ ಹಿಂದುಸ್ತಾನ್ ಟೈಮ್ಸ್ .ಕಾಂ ನಡೆಸಿದ ತನಿಖೆಯಲ್ಲಿ ಹೇಳುವುದೇನೆಂದರೆ ನೇತಾಜಿ ಅಂದು ಸಾಯಲಿಲ್ಲ ಮರಳಿ ಭಾರತಕ್ಕೆ ಬಂದು ‘ಭಗವಾನ್ ಜಿ’ ಯಾಗಿ ಉತ್ತರ ಭಾರತದಲ್ಲಿ ಅಜ್ಞಾತರಾಗಿ ಬದುಕಿ ೧೯೮೦ರ ದಶಕದಲ್ಲಿ ಮಡಿದರು ಅಂತ.ಇದು ನಿಜವಾದರೆ ಹಾಗೆ ಅವರು  ಅಜ್ಞಾತವಾಸ ಮಾಡಬೇಕಾಗಿ ಬಂದಿದ್ದರು ಹೇಗೆ?
ಈ ಎಲ್ಲದರ ಹಿಂದೆ ಯಾವುದೋ ಅಂತರಾಷ್ಟ್ರೀಯ ಪಿತೂರಿ ಇತ್ತ?ಯಾಕೆ ಅವರ ಸಾವಿನ ರಹಸ್ಯ ಬಯಲಾದರೆ ಇತರ ದೇಶಗಳ ಜೊತೆ ನಮ್ಮ ಸಂಬಂಧ ಹದಗೆಡುತ್ತದೆ? ಭಗವಾನ್ ಜಿ ಕೆಲವೊಂದು ಸಂಧರ್ಭಗಳಲ್ಲಿ ಅವರ ಸಹವರ್ತಿಗಳೊಂದಿಗೆ ಮಾತಾಡುವಾಗ ‘ಹಿಂದೆ ಕೆಲ  ಜನಗಳಿಂದಾದ ಅನುಭವದಿಂದ ಪಾಠ ಕಲಿತಿದ್ದೇನೆ’ ಅನ್ನುವ ಅರ್ಥ ಬರುವಂತೆ ಮಾತಡಿದ್ದಾದರೂ ಯಾಕೆ? ನೇತಾಜಿಯವರ ಸಹವರ್ತಿಗಳೇ,ಭಗವಾನ್ ಜಿಯವರ ಸಹವರ್ತಿಗಳಾಗಿದ್ದಾದರೂ ಹೇಗೆ?
ಅಂದು ಹಿಟ್ಲರ್ ಮಣ್ಣಾಗದೆ ಇದ್ದಿದ್ದರೆ ,ಜಪಾನ್ ಸೋಲದೆ ಇದ್ದಿದ್ದರೆ, ಐ.ಎನ್ .ಎ ದಿಗ್ವಿಜಯ ಸಾಧಿಸಿದ್ದರೆ ಭಾರತ ಸುಭಾಷರನ್ನು ಮಿಸ್ ಮಾಡ್ಕೋತ ಇರ್ಲಿಲ್ಲ . ಆದರೆ ವಿಧಿಯಾಟ ಬೇರೆಯಾಗಿತ್ತು.ಸುಭಾಷರನ್ನು ಮತ್ತೆ ಕಾಣುವ ಭಾಗ್ಯ ನಮಗೆ ಸಿಗಲೇ ಇಲ್ಲ   :(
ನೇತಾಜಿಯವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದರ ಮೂಲಕವಾದರೂ ಆ ಚೇತನಕ್ಕೆ ಚಿರ ಶಾಂತಿಯನ್ನು ಕೋರೋಣ.
ಜೈ ಹಿಂದ್

‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.

ಅವರು ಹುತಾತ್ಮರಾಗಿ ಇಂದಿಗೆ ೭೯ ವರ್ಷಗಳಾಯಿತು.ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ  ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್.ಚಂದ್ರ ಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು.ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ.ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ,ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ ಇವೆರಡು ಘಟನೆಗಳು ಭಗತ್ ಸಿಂಗ್ನ  ಮುಂದಿನ ಜೀವನ ದಿಕ್ಕನ್ನು ಬದಲಾಯಿಸಿದವು ಅನ್ನಬಹುದೇನೋ?
ಆ ನಂತರ ಅವನು ಆರಿಸಿಕೊಂಡಿದ್ದು ಕ್ರಾಂತಿ ಮಾರ್ಗವನ್ನ.ಕಾಲೇಜಿನ ದಿನಗಳಲ್ಲೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರವರ ‘ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್ ಸದಸ್ಯನಾಗಿ ಚಳುವಳಿಗೆ ಧುಮುಕಿದ.ಕಾಕೋರಿ ಪ್ರಕರಣದ ನಂತರ ಮೂಂಚೂಣಿ ಕ್ರಾಂತಿಕಾರಿ ನಾಯಕರಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರನ್ನ ಬ್ರಿಟಿಶ್ ಸರ್ಕಾರ ಗಲ್ಲಿಗೇರಿಸಿತು.ಭಗತ್ ಸಿಂಗ್ಗೆ ಗುರುವಿನಂತಿದ್ದ ಮತ್ತೊಬ್ಬ ಮಹಾನ್ ಹೋರಾಟಗಾರ ಚಂದ್ರ ಶೇಖರ್ ಆಜಾದ್ ಭೂಗತರಾಗಬೇಕಾಯಿತು.ಈ ಸಂಧರ್ಭದಲ್ಲಿ ಕ್ರಾಂತಿಕಾರಿಗಳ ನಾಯಕನಾಗಿ ಹೊಮ್ಮಿದವನು ಭಗತ್ ಸಿಂಗ್. ನೌಜವಾನ್ ಭಾರತ ಸಭಾದ ಸದಸ್ಯನು ಆಗಿದ್ದ ಭಗತ್, ದೆಹಲಿಯಲ್ಲಿ ಕರೆದಿದ್ದ ಕ್ರಾಂತಿಕಾರಿಗಳ ಸಭೆಯಲ್ಲಿ ನಮ್ಮ ಗುರಿ ಸ್ವಾತಂತ್ರ್ಯಗಳಿಸುವುದಷ್ಟೇ ಅಲ್ಲ.ಸ್ವಾತಂತ್ರ್ಯ ನಂತರದ ಸಮಗ್ರ ಭಾರತ ಹೇಗಿರಬೇಕು ಎಂಬ ಚಿತ್ರಣವು ಇತ್ತು ಅವನಿಗಿತ್ತು.ಇಪ್ಪತ್ತರ ಆಸು ಪಾಸಿನ ಹುಡುಗ ಆ ಮಟ್ಟಕ್ಕೆ ಯೋಚಿಸಬಲ್ಲವನಾಗಿದ್ದ.
‘ಸೈಮನ್ ಕಮಿಷನ್’ ವಿರುದ್ಧ ಗುಡುಗಿದ ಲಾಲ ಲಜಪತ ರಾಯ್ ಅವರನ್ನ ಪೊಲೀಸರು ಹೊಡೆದು ಕೊಂದಾಗ,ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದುಕೊಳ್ಳಲು ಶಪತ ಮಾಡಿದರು ಮತ್ತು ಅದರಂತೆ ಕಾರ್ಯ ರೂಪಕ್ಕೆ ತರಲು ಭಗತ್ನೊಂದಿಗೆ ಕೈ ಜೋಡಿಸಿದವರು ರಾಜಗುರು,ಸುಖದೇವ್ ಮತ್ತು ಜೈ ಗೋಪಾಲ್. ಅವರು ಬಲಿತೆಗೆದು ಕೊಳ್ಳಬೇಕಿದ್ದಿದ್ದು  ಪೋಲಿಸ್ ಮುಖ್ಯಸ್ಥ ಸ್ಕಾಟ್ ಅನ್ನು,ಆದರೆ ಜೈ ಗೋಪಾಲ್ ಇಶಾರೆ ಮಾಡುವಾಗ ತಪ್ಪಿ ತೋರಿಸಿದ್ದು ಅವನ ಕೆಳಗಿನ ಅಧಿಕಾರಿ ಸ್ಯಾಂಡರ್ಸ್ನನ್ನ.ಅವನನ್ನು ಹತ್ಯೆಗೈದು ಅಲ್ಲಿಂದ ತಪ್ಪಿಸಿಕೊಂಡ ಭಗತ್ ಮತ್ತು ಸಂಗಡಿಗರು ವೇಷ ಬದಲಿಸಿ ಕೆಲಕಾಲ ದೂರವಿದ್ದರು.
ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ ಅವನು ಹೇಳಿದ್ದು “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು”.ಹಾಗೆ ಭಗತ್ನೊಂದಿಗೆ ಅಲ್ಲಿ ಶರಣಾದ ಮತ್ತೊಬ್ಬ ಕ್ರಾಂತಿಕಾರಿ ಭಟುಕೇಶ್ವರ್ ದತ್ತ.ಆ ನಂತರ ಬ್ರಿಟಿಶ್ ಸರ್ಕಾರಕ್ಕೆ  ಸ್ಯಾನ್ದರ್ಸ್ನ ಹತ್ಯೆಯ ರೂವಾರಿ ಭಗತ್ ಅನ್ನುವುದನ್ನು ತಿಳಿಯಿತು ಉಳಿದ ಎಲ್ಲ ಸಂಗಡಿಗರ ಬಂಧನವೂ ಆಯಿತು.
ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ಎಲ್ಲ ಕ್ರಾಂತಿಕಾರಿಗಳು ಭಗತ್ ನೇತೃತ್ವದಲ್ಲಿ ಉಪವಾಸಕ್ಕಿಳಿದರು.ಆಗ ಅವರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡುತಿದ್ದ ಆಗಿನ ಮಹಾನ್ (?) ನಾಯಕರ ಮಧ್ಯೆ ಅವರೊಬ್ಬ ಮಹಮ್ಮದ್ ಅಲಿ ಜಿನ್ನಾ ಮಾತ್ರ ಬಹಿರಂಗವಾಗೇ “ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” ಅಂದಿದ್ದರು.
ಎಲ್ಲ ಆರೋಪಗಳು ಸಾಬಿತಾದ ಮೇಲೆ ಭಗತ್ ಸಿಂಗ್,ರಾಜ್ ಗುರು,ಸುಖ್ದೇವ್ ಅವರಿಗೆ ೧೯೩೧ರ ಮಾರ್ಚ್ ೨೩ರನ್ದು ಮರಣದಂಡನೆ ಶಿಕ್ಷೆ ವಿಧಿಸಲಾಯಿತು.ಇದನ್ನ ವಿರೋಧಿಸಿ ಹಲ ಹೋರಾಟಗಳು,ಮನವಿ ಪತ್ರಗಳು,ಸಹಿ ಸಂಗ್ರಹಣೆ ಎಲ್ಲ ನಡೆದವು ಆದರೆ ಯಾವುದು ಪ್ರಯೋಜನಕ್ಕೆ ಬರಲಿಲ್ಲ.ಭಗತ್ ಸಿಂಗ್ ಅವರ ತಂದೆ ಕಿಶನ್ ಸಿಂಗ್ ಅವರು ಬ್ರಿಟಿಷರಿಗೆ ಶಿಕ್ಷೆಯನ್ನ ರದ್ದು ಪಡಿಸುವಂತೆ ಮನವಿ ಮಾಡಿದಾಗ ಖುದ್ದು ಭಗತ್ ಸಿಂಗ್  “ನಾನು ಬದುಕುವುದಕ್ಕಿಂತ ಬಲಿದಾನ ಮಾಡುವುದರಿಂದಲೇ ಬ್ರಿಟಿಶ್ ಸಾಮ್ರಾಜ್ಯದ ಪತನವಾಗುತ್ತದೆ” ಅಂದವನೇ ಆ ಪತ್ರವ ಹಿಂಪಡೆಯುವಂತೆ ಮಾಡಿದ್ದ.
ಇನ್ನು ಭಗತ್ ಹಾಗು ಸಂಗಡಿಗರ ಶಿಕ್ಷೆಯನ್ನ,ಗಾಂಧೀಜಿಯವರು ‘ಗಾಂಧೀ-ಇರ್ವಿನ್’ ಒಪ್ಪಂದದ ಸಮಯದಲ್ಲಿ ಪಟ್ಟು ಹಿಡಿದು ಕುಳಿತಿದ್ದರೆ ತಪ್ಪಿಸಬಹುದಿತ್ತು ಅನ್ನುವ ಮಾತುಗಳಿವೆ.ಆ ಬಗ್ಗೆ ಹಲವು ವಿವಾದಗಳು ಸಮರ್ಥನೆಗಳು ಇವೆ.ಕ್ರಾಂತಿಕಾರಿಗಳ ಪರವಾಗಿರುವವರು ‘ಗಾಂಧೀಜಿ ಅಂತ ಪ್ರಯತ್ನವನ್ನೇ ಮಾಡಲಿಲ್ಲ’ ಅಂದರೆ, ಗಾಂಧೀ ಪರವಾದವರು “ಗಾಂಧೀಜಿ ಸರ್ವ ಪ್ರಯತ್ನವನ್ನು ಮಾಡಿದ್ದರು ಆದರೆ ಸಫಲರಾಗಲಿಲ್ಲ” ಅನ್ನುತ್ತಾರೆ. ಇವೆಲ್ಲದರ ಮಧ್ಯೆ ಕಾಡುವ ವಿಷಯವೆಂದರೆ ಶಿಕ್ಷೆಗೆ ಎರಡು  ದಿನ ಮೊದಲು ಸುಖ್ ದೇವ್ ಗಾಂಧೀಜಿಗೆ ಬರೆದ ಅನ್ನುವ ಪತ್ರ(ಅದು ಅವರಿಗೆ ತಲುಪಿದ್ದು ಅವನ ಮರಣದ ನಂತರ).ಪತ್ರದ ಒಕ್ಕಣೆ “ಅವರಲ್ಲಿ ಒಬ್ಬ”.  ಆ ಪತ್ರದಲ್ಲಿ ಸುಖ್ ದೇವ್  ಹೀಗೆ ಬರೆಯುತ್ತಾನೆ
“ನೀವು ನಿಮ್ಮ ಚಳುವಳಿ ನಿಲ್ಲಿಸಿದಿರಿ.ಹಾಗಾಗಿ ನಿಮ್ಮವರೆಲ್ಲ ಬಿಡುಗಡೆಯಾಗಿದ್ದಾರೆ.ಆದರೆ ನಾವು ಕ್ರಾಂತಿಕಾರಿಗಳು ಏನು ಮಾಡಬೇಕು?ನಮ್ಮ ಗತಿ ಏನು?೧೯೧೫ ರಿಂದಲೂ ಗದರ್ ಪಾರ್ಟಿಯ ಜನ ಜೈಲಿನಲ್ಲಿ ಕೊಳೆಯುತಿದ್ದಾರೆ.ಬಬ್ಬರ್ ಅಖಾಲಿ,ಕಾಕೋರಿ,ಮಾಚುವ ಬಜಾರ್,ಲಾಹೋರ್ ಪೀತೂರಿ ಕೇಸಿನಲ್ಲಿ ಸಿಕ್ಕಿರುವ ಕ್ರಾಂತಿಕಾರಿಗಳೆಲ್ಲ ಕಂಬಿ ಎಣಿಸುತಿದ್ದಾರೆ.ಅವುಗಳೆಲ್ಲದರ ವಿಚಾರಣೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ.ಎಷ್ಟೋ ಜನ ಕ್ರಾಂತಿಕಾರಿಗಳ ಪತ್ತೆಯೇ ಇಲ್ಲ.ಅವರೆಲ್ಲ ಏನಾದರು ಯಾರಿಗೂ ಗೊತ್ತಿಲ್ಲ.ಹಾಗೆ ನಾಪತ್ತೆಯಾದವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ.ಜೈಲಿನಲ್ಲಿರುವ ಅರ್ಧದಷ್ಟು ಮಂದಿಗೆ ಮರಣದಂಡನೆಯಾಗುವುದು ಖಾತ್ರಿ.ಈ ಬಗ್ಗೆ ನಿಮಗೆ ಯಾಕೆ ಆಸಕ್ತಿ ಇಲ್ಲ”.
ಭಗತ್ ಸಿಂಗ್,ಸುಖ ದೇವ್.ರಾಜ್ ಗುರು ಅವರ ಬಲಿದಾನ ಭಾರತೀಯರಲ್ಲಿ ಹೋರಾಟ ಕಿಚ್ಚು ಹಚ್ಚುವಲ್ಲಿ ಸಫಲವಾಯಿತು.ಹಾಗೆ ಅವರು ಹಚ್ಚಿದ ಕ್ರಾಂತಿ ಜ್ಯೋತಿಗೆ ನಿರ್ಣಾಯಕ ತಿರುವು ಕೊಟ್ಟವರು ಸಮರ ಸೇನಾನಿ ಸುಭಾಷ್ ಚಂದ್ರ ಬೋಸ್.೪೭ರಲ್ಲಿ ಸ್ವಾತಂತ್ರ್ಯವೇನೋ ಸಿಕ್ಕಿತು.ಆದರೆ ನಂತರೆ ನಮ್ಮ ಇತಿಹಾಸದ ಪುಸ್ತಕದಲ್ಲಿ ಕ್ರಾಂತಿಕಾರಿಗಳೆಲ್ಲ ಮೂಲೆ ಸೇರಿಬಿಟ್ಟರಲ್ಲ.ಭಗತ್ ಸಿಂಗ್,ರಾಜ್ ಗುರು,ಸುಖ್ ದೇವ್,ಚಂದ್ರ ಶೇಖರ್ ಆಜಾದ್,ಲಾಲ ಹರದಯಾಳ್,ಖುದೀರಾಂ ಬೋಸ್,ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ ಖಾನ್,ಅರ್ಜುನ್ ಸಿಂಗ್,ಮೋಹನ್ ಸಿಂಗ್,ರಾಸ್ ಬಿಹಾರಿ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಬಗ್ಗೆ ಹೆಚ್ಚೆಂದರೆ ಒಂದೆರಡು ಸಾಲುಗಳಿದ್ದವು ಅಷ್ಟೇ.ಇದ್ದುದ್ದರಲ್ಲಿ ಸ್ವಲ್ಪ ಕಾಣಿಸಿಕೊಂಡವರು ಸುಭಾಷ್ ಮಾತ್ರ.
ಸೇರಿಸಿದಿದ್ದರೆ ಪರವಾಗಿಲ್ಲ ಆದರೆ, ೨೦೦೬-೦೭ ರ ಸುಮಾರಿನಲ್ಲಿ ಮೊಬೈಲ್ಗಳಿಗೆ ಒಂದು ಸಂದೇಶ ಬರುತಿತ್ತು ‘ಭಗತ್ ಸಿಂಗ್ ನನ್ನು ಕ್ರಾಂತಿಕಾರಿ ಉಗ್ರಗಾಮಿ ಎಂದು ಕೇಂದ್ರ ಸರ್ಕಾರದ ಪುಸ್ತಕದಲ್ಲಿ (ಬಹುಷಃ ಯು.ಪಿ.ಎಸ್.ಸಿನಲ್ಲಿರಬೇಕು) ಬರೆಯಲಾಗಿದೆ.ಇದರ ವಿರುದ್ಧ ಧ್ವನಿಯೆತ್ತಿ ಇದನ್ನ ಎಲ್ಲರಿಗೂ ತಿಳಿಸಿ” ಅಂತ.ಆ ಸಂದೇಶವನ್ನ ಕಳಿಸಿದರೆ ಹಲವಾರು ಗೆಳೆಯರು ನಕ್ಕಿದ್ದರು.ಅವರಿಗೆ ಅದೊಂದು ದೊಡ್ಡ ವಿಷಯವೂ ಆಗಿರಲಿಲ್ಲ.ತನ್ನ ಮಾತೃ ಭೂಮಿಯ ಜನರೇ ಹೀಗೆ ಮುಂದೊಂದು ದಿನ ನನ್ನನ್ನು ಉಗ್ರಗಾಮಿ ಎಂದು ಕರೆದಾರು ಅನ್ನೋ ವಿಷಯ ಅವನಿಗೆ ಮೊದಲೇ ತಿಳಿದಿದ್ದರೆ, ಅವನು ನೇಣುಗಂಬವನ್ನ ಏರುತ್ತಲೇ ಇರಲಿಲ್ಲವೇನೋ!?
मरके कैसे जीते है
इस दुनिया को बतलाने
तेरे लाल चले है माहे
अब तेरी लाज बचाने
(ಸತ್ತು ಬದುಕುವುದೇ ಹೇಗೆಂದು
ತೋರಿಸಲು ಹೊರಟೆವು
ನಿನ್ನ ಮಕ್ಕಳು,ತಾಯಿ
ನಿನ್ನ ಮಾನ ಉಳಿಸಲು ಇಂದು)
ಎಂದು ಹಾಡುತ್ತ ಹೊರಟವನು ‘ಸತ್ತು ಬದುಕುವುದು ಹೇಗೆ ಅನ್ನುವುದನ್ನ ಜಗತ್ತಿಗೆ ಹೇಳಿಕೊಟ್ಟು ಹೋದ.’
ಆ ಅಮರ ಸೇನಾನಿಗಳ ನೆನಪಿಗೆ ನನ್ನ ನುಡಿ ನಮನ.
ಇಂಕ್ವಿಲಾಬ್ ಜಿನ್ದಾಬಾದ್.

No comments:

Post a Comment