ತುಷ್ಟೀಕರಣವೆಂದರೆ ಮತಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರಿಗೆ ವಿವಿಧ ಸೌಲಭ್ಯಗಳನ್ನು ನೀಡುವುದು. ಈ ತುಷ್ಟೀಕರಣ ಇಂದು ರಾಜಕೀಯದ ಭಾಗವಾಗಿಬಿಟ್ಟಿದೆ. ತುಷ್ಟೀಕರಣವಿಲ್ಲದೇ ರಾಜಕೀಯವೇ ಎಂಬಂತಹ ಪರಿಸ್ಥಿತಿ ಇಂದು ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನಿರ್ಮಾಣವಾಗಿದೆ.
ಹೆಮ್ಮರವಾಗಿ ಬೆಳೆದಿರುವ ಈ ತುಷ್ಟೀಕರಣದ ಬೇರನ್ನು ಹುಡುಕಲು ಸ್ವಾತಂತ್ರ್ಯ ಪೂರ್ವಕ್ಕೆ ತೆರಳಬೇಕು. ತುಷ್ಟೀಕರಣ ರಾಜಕಾರಣ ಶುರುವಾಗಿದ್ದು 1920-1930 ರ ದಶಕದಲ್ಲಿ. ತುಷ್ಟೀಕರಣದ ಸಸಿ ನೆಟ್ಟಿದ್ದು ಭಾರತೀಯ ಕಾಂಗ್ರೆಸ್. ಅಂದು ಕಾಂಗ್ರೆಸ್ ಗೆ ಹಿಂದೂ ಮುಸ್ಲಿಂ ಏಕತೆ ಸಾಧಿಸದೆ ಸ್ವಾತಂತ್ರ್ಯ ಗಳಿಸುವುದು ಅಸಾಧ್ಯ ಎಂಬ ಭ್ರಮೆ ಆವರಿಸಿತ್ತು. ಒಡೆದು ಆಳುವ ನೀತಿಯನ್ನು ಆನುಸರಿಸುತ್ತಿದ್ದ ಬ್ರಿಟಿಷರು ಧರ್ಮದ ಆಧಾರದ ಮೇಲೆ ಈ ದೇಶವನ್ನು ಒಡೆಯಲು ಪ್ರಯತ್ನಿಸಿದರು. ಹಿಂದೂ- ಮುಸ್ಲಿಂ ಒಟ್ಟಾಗಿ ಬಂದರೆ ಮಾತ್ರ ಸ್ವಾತಂತ್ರ್ಯ ನೀಡುತ್ತೇವೆ ಎಂದು ನಂಬಿಸಿದರು.
ಮುಸ್ಲಿಮರನ್ನು ಓಲೈಸಿಕೊಳ್ಳಲು ಅಂದಿನ ಕಾಂಗ್ರೆಸ್ ನಾಯಕರಾದ ಗಾಂಧಿ ಮತ್ತು ನೆಹರೂ ತುಷ್ಟೀಕರಣವೆಂಬ ಸಸಿಯನ್ನು ನೆಟ್ಟರು. ಮುಸ್ಲಿಮರನ್ನು ತಮ್ಮೆಡೆಗೆ ಸೆಳೆಯುವ ಸಲುವಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದರು. ಇಲ್ಲಿ ಮುಸ್ಲಿಮರೆ ಪ್ರತಿನಿಧಿ, ಮುಸ್ಲಿಮರೆ ಮತದಾರರು. ತುಷ್ಟೀಕರಣದ ಸಸಿ ಬೆಳೆಸಲು ಕಾಂಗ್ರೆಸ್ ನೀರುಣಿಸಿತು. ಆಗ ರಾಜಕೀಯದಲ್ಲಿ ಕೂಸಾಗಿದ್ದ ಮುಸ್ಲಿಂ ಲೀಗ್ ಬೆಳೆಯಿತು. ಇದರ ಪರಿಣಾಮ ಮುಸ್ಲಿಮರು ರಾಷ್ಟ್ರೀಯರಾಗುವ ಬದಲು ಮತಾಂಧರಾದರು. ಮುಸ್ಲಿಂ ಲೀಗ್ ಪ್ರತ್ಯೇಕ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು.
ಕಾಂಗ್ರೆಸ್ ಬೆಳೆಸಿದ ಮುಸ್ಲಿಂ ತುಷ್ಟೀಕರಣವೆಂಬ ಗಿಡ ಕೊಟ್ಟ ಫಲವೇನು ಗೋತ್ತೇ? ಅದೇ ಖಿಲಾಫತ್ ಚಳುವಳಿ. ಯಾವುದೋ ದೂರ ದೇಶದಲ್ಲಿ ಖಲೀಫನ ಪದಚ್ಯುತಿಯನ್ನು ಖಂಡಿಸುವ ಆಂದೋಲನ ಈ ಖಿಲಾಫತ್ ಚಳುವಳಿ. ಈ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಇದರ ಪರಿಣಾಮ ಮುಸ್ಲಿಂ ಮತಾಂಧರು ದಂಗೆಯೆದ್ದು ಕೇರಳದಲ್ಲಿ ಅಮಾಯಕ ಹಿಂದೂಗಳ ಮಾರಣಹೋಮ ಮಾಡಿದರು. ಇದು ತುಷ್ಟೀಕರಣ ನೀಡಿದ ವಿಷಫಲ. ಹಿಂದೂ - ಮುಸ್ಲಿಂ ಏಕತೆಯ ಭ್ರಮೆಯಲ್ಲಿದ್ದ ಗಾಂಧಿಗೆ ತುಷ್ಟೀಕರಣದ ಘೋರ ಪರಿಣಾಮಗಳು ಅರಿವಿಗೆ ಬರಲಿಲ್ಲ.
ಮುಸ್ಲಿಂ ತುಷ್ಟೀಕರಣದಿಂದ ಲಾಭ ಪಡೆದ ಮುಸ್ಲಿಂ ಲೀಗ್ ಮುಂದೆ ಪ್ರತ್ಯೇಕ ದೇಶದ ಬೇಡಿಕೆಯನ್ನು ಇಟ್ಟಿತು. ಇದರ ಪರಿಣಾಮ ನಮಗೆಲ್ಲರಿಗೂ ತಿಳಿದೆ ಇದೆ. ಭಾರತ ಇಬ್ಭಾಗವಾಗಿ ಎರಡು ಹೋಳಾಯಿತು. ಭಾರತದ ವಿಭಜನೆಯೂ ಸಹ ತುಷ್ಟೀಕರಣದ ವಿಷಫಲವೇ. ವಿಭಜನೆಯ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದವು. ಆದರೂ ನಮ್ಮ ರಾಜಕಾರಣಿಗಳಿಗೆ ಅರ್ಥವಾಗಲೇ ಇಲ್ಲ. ಸ್ವಾತಂತ್ರ್ಯ ಬಂದ ನಂತರವೂ ಕಾಂಗ್ರೆಸ್ ಮತಕ್ಕಾಗಿ ತುಷ್ಟೀಕರಣವನ್ನು ಮುಂದುವರೆಸಿತು. ದೇಶದ ಮೊದಲ ಪ್ರಧಾನಿಯಾದ ನೆಹರೂ ಸಾಹೇಬರು ತುಷ್ಟೀಕರಣದ ಗಿಡವನ್ನು ಮರವಾಗಿ ಬೆಳೆಸಿದರು ಇದರ ಪರಿಣಾಮವೇ ಕಾಶ್ಮೀರ ಸಮಸ್ಯೆ. ಕಾಶ್ಮೀರದಲ್ಲಿ ಇಂದು ಪ್ರತ್ಯೇಕವಾದಿಗಳು ನಮ್ಮ ಸೇನೆಯ ಮೇಲೆಯೇ ಆಕ್ರಮಣ ಮಾಡುತ್ತಾರೆ. ಮುಂದೆ ಆರವತ್ತು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಮುಂದುವರೆಸಿತು. ತುಷ್ಟೀಕರಣದಿಂದ ಅಲ್ಪಾಸಂಖ್ಯಾತರು ದೇಶ ನಿಷ್ಠರಾಗುವ ಬದಲು ಧರ್ಮ ನಿಷ್ಠರಾದರು. ಇಂದು ದೇಶದ ಬಹುದೊಡ್ಡ ಪಿಡುಗು ಎಂದೇ ಪರಿಗಣಿಸುವ ಭಯೋತ್ಪಾದನೆಯೂ ಸಹ ತುಷ್ಟೀಕರಣದ ವಿಷಫಲವೇ.
2014 ರಲ್ಲಿ ವಿಜಯಿಯಾಗಿ ಅಧಿಕಾರ ಹಿಡಿದ ಮೋದಿ ತುಷ್ಟೀಕರಣ ರಾಜಕಾರಣಕ್ಕೆ ತಿಲಾಂಜಲಿ ನೀಡುತ್ತಾರೆ ಎಂದು ದೇಶ ಭಾವಿಸಿತ್ತು. ಆದರೆ ಇಂದು ಮೋದಿಯೂ ಸಹ ತುಷ್ಟೀಕರಣದ ಮರಕ್ಕೆ ಪೋಷಣೆ ಮಾಡಲು ಹೊರಟಿದ್ದಾರೆ. ಹಿಂದೂತ್ವದಿಂದಲೇ ಬೆಳೆದ ಬಿಜೆಪಿಗೆ ಇಂದು ಹಿಂದೂತ್ವವೇ ಬೇಡವಾಗಿದೆ. ವಿಶ್ವಕ್ಕೆ ಹಾಲು ನೀಡುವ ಗೋ ಮಾತೆ ಇಂದು ಯಾರ ಬೆಂಬಲವು ಇಲ್ಲದೆ ತಬ್ಬಲಿಯಾಗಿದ್ದಾಳೆ. ಹಿಂದೂಗಳ ಶ್ರದ್ದಾ ಪುರುಷ ರಾಮನ ಭವ್ಯ ರಾಮಮಂದಿರ ನಿರ್ಮಾಣದ ಕನಸು ಕನಸಾಗಿಯೇ ಉಳಿಯುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನೇತಾಜಿ ಮತ್ತು ಶಾಸ್ತ್ರೀಜಿಯಂತ ದೇಶಭಕ್ತರ ಸಾವಿನ ರಹಸ್ಯ ಬಯಲಾಗುವುದು ಮರೀಚಿಕೆಯಾಗಿದೆ. ನಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆತಟ್ಟಿ ಹೇಳಿದ ಮೋದಿ ಇಂದು ಸೆಕ್ಯುಲರ್ ಆಗಲು ಹೊರಟಿದ್ದಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡು ವಿದೇಶ ಪ್ರವಾಸ ಮಾಡಿ ಮೋದಿ ವಿಶ್ವಸಂಸ್ಥೆಯಿಂದ ಜೂನ್ 22ರಂದು ವಿಶ್ವ ಯೋಗ ದಿನಾಚರಣೆ ಮಾಡಲು ಮಾನ್ಯತೆಗಳಿಸಿದರು. ಆದರೆ ಯಾರೋ ಮತಾಂಧರು ಸೂರ್ಯ ನಮಸ್ಕಾರವನ್ನು ವಿರೋಧಿಸಿದರು ಎಂದು ಯೋಗದಿಂದ ಸೂರ್ಯ ನಮಸ್ಕಾರವನ್ನೇ ಇಂದು ಕೈಬಿಟ್ಟಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿದ್ದಾರೆ. ಶ್ರದ್ದಾ ಪುರುಷ ಶ್ರೀರಾಮ ಮಂದಿರದ ನಿರ್ಮಾಣ ಇಂದು ಮೋದಿಗೆ ಬೇಡವಾಗಿದೆ. ತಬ್ಬಲಿ ಗೋ ಮಾತೆಯ ಹತ್ಯೆಯನ್ನು ನಿಷೇಧಿಸಲು ಅವರು ಮೀನಮೇಷ ಎಣಿಸುತ್ತಿದ್ದಾರೆ. ಇದೇ ನೀತಿಯನ್ನು ಹಿಂದಿನ ಸರ್ಕಾರ ಕಾಂಗ್ರೆಸ್ ಅನುಸರಿಸಿತ್ತು. ಇದನ್ನೇ ಮೋದಿಯೂ ಮುಂದುವರೆಸಿದರೆ ಮೋದಿಗೂ ಕಾಂಗ್ರೆಸ್ ಏನು ವ್ಯತ್ಯಾಸವಿದೆ ಹೇಳಿ. ಹಿಂದೂತ್ವವಿಲ್ಲದೇ ಈ ದೇಶದ ಉಳಿವು ಅಸಾಧ್ಯ ಎಂಬದನ್ನು ಮೋದಿ ಮರೆತಂತಿದೆ.
ಈ ತುಷ್ಟೀಕರಣವೆಂಬುದು ಇಳಿಜಾರಿನಂತೆ. ಒಮ್ಮೆ ಇಳಿಜಾರಿನಲ್ಲಿ ಕಾಲಿಟ್ಟರೆ ಜಾರುತ್ತಾ ಸಾಗಬೇಕು. ಈ ತುಷ್ಟೀಕರಣದಿಂದ ಭಾರತ ಘೋರ ಪರಿಣಾಮಗಳನ್ನು ಎದುರಿಸಿದೆ. ಇದನ್ನೇ ಮುಂದುವೆರಸಿದರೆ ಭಾರತ ಮತ್ತಷ್ಟು ಘೋರ ಪರಿಣಾಮಗಳನ್ನು ಎದುರಿಸಬೇಕಾದೀತು. ಈಗ ಎಚ್ಚೆತ್ತುಕೊಳ್ಳುವ ಸಮಯ ಎಚ್ಚೆತ್ತುಕೊಂಡರೆ ಈ ದೇಶ ಉಳಿದೀತು ಎಚ್ಚರ!
ರವಿತೇಜ ಶಾಸ್ತ್ರೀ