ಭಾರತೀಯ ಸಂಸ್ಕೃತಿಯನ್ನು “ಸಾ ಪ್ರಥಮ ಸಂಸ್ಕೃತಿ ವಿಶ್ವವರಃ” ಎಂದು ಕರೆಯುತ್ತಾರೆ. ಅಂದರೆ  ಭಾರತೀಯ
ಸಂಸ್ಕೃತಿಯೇ ಜಗತ್ತಿನ ಪ್ರಥಮ ಮತ್ತು ಶ್ರೇಷ್ಠ ಸಂಸ್ಕೃತಿ ಎಂದರ್ಥ. ಭಾರತೀಯ ಸಂಸ್ಕೃತಿ  ಆಧ್ಯಾತ್ಮಿಕ ಸಂಸ್ಕೃತಿಯೆಂದು ಗೌರವಿಸಲ್ಪಟ್ಟಿದೆ.
ಪಾಶ್ಚಾತ್ಯ  ಸಂಸ್ಕೃತಿ ಭೌತಿಕತೆ (Materialsim)
ಯನ್ನು ಅವಲಂಬಿಸಿದ್ದರೆ ಭಾರತೀಯ ಸಂಸ್ಕೃತಿ ಅಧ್ಯಾತ್ಮಿಕತೆ(Spiritualism)ಯನ್ನು
ಅವಲಂಬಿಸಿದೆ.  ನಮ್ಮ ಸಂಸ್ಕೃತಿ ಮೌಲ್ಯಗಳು,
ನೈತಿಕತೆ, ಭಾವನೆಗಳ  ಆಧಾರದ ಮೇಲೆ ನಿಂತಿದೆ.
ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮೌಲ್ಯಗಳು, ಭಾವನೆಗಳಿಗೆ  ಬೆಲೆಯೇ ಇಲ್ಲ. ಪಾಶ್ಚಾತ್ಯರಿಗೆ ಎಲ್ಲವೂ ವ್ಯಾಪಾರದ
ಸರಕು. ಪ್ರೀತಿ ಎಂಬುದು ತೋರ್ಪಡಿಕೆಯ ವಸ್ತು ಅವರಿಗೆ. ಆದರೆ ನಮ್ಮಲ್ಲಿ ಹಾಗಿಲ್ಲ ನಮ್ಮಲ್ಲಿ
ಭಾವನೆಗಳೇ, ನಂಬಿಕೆ ವಿಶ್ವಾಸಗಳೇ ಬದುಕಿನ ಬುನಾದಿ. ನಮಗೆ ವ್ಯಾಪಾರವು ಒಂದು ಭಾವನೆಯಾಗಿ ನಂಬಿಕೆ
ವಿಶ್ವಾಸಗಳ ವ್ಯವಹಾರವಾಗಿ ಕಾಣುತ್ತೆ. ನಮಗೆ ನಮ್ಮ ಭಾವನೆಗಳನ್ನು ತಲುಪಿಸಲು ಕಾರ್ಡುಗಳ.
ಬಿಗಿದಪ್ಪುಗೆಗಳ ಹಂಗು ಬೇಕಿಲ್ಲ . ಕಣ್ಣ ನೋಟದಲ್ಲೇ ಸಾವಿರ ಮಾತುಗಳನ್ನಾಡುವ ಸಂಸ್ಕಾರ ನಮ್ಮದು,
ಪ್ರೇಮವೆಂಬುದಕ್ಕೆ ನಮ್ಮಲ್ಲಿ  ಪಾವಿತ್ರ್ಯತೆಯಿದೆ.
ಸಂತೆಯಲ್ಲಿ ಬಿಕರಿಗಿಟ್ಟ ವಸ್ತುಗಳಂತಲ್ಲ, ಹೀಗಿರುವಾಗ  ವ್ಯಾಲೆಂಟೈನ್ ಡೇ ಯಂತಹ ಆಚರಣೆಗಳನ್ನು ಅನುಕರಣೆ ಮಾಡುತ್ತಾ
ನಮ್ಮ ಸಂವೇದನೆಗಳನ್ನು, ಸೂಕ್ಷ್ಮತೆಗಳನ್ನು ಕಳೆದುಕೊಳ್ಳುತ್ತಿದ್ದೀವಿ ಅಂತ ಅನಿಸುವುದಿಲ್ಲವೇ? 
ನಮ್ಮ ದೇಶ ಗುಲಾಮಿತನದಿಂದ ಮುಕ್ತಗೊಂಡು ಸಾಕಷ್ಟು ವರ್ಷಗಳಾದರೂ ಗುಲಾಮಿ
ಮಾನಸಿಕತೆಯಿಂದ ನಾವು ಇನ್ನು ಹೊರಬಂದಿಲ್ಲ. ವ್ಯಾಲೆಂಟೈನ್ ಡೇ ಎಂಬ ಪಾಶ್ಚಾತ್ಯರ ಅಂಧಾನುಕರಣೆಯನ್ನು
ಅನುಸರಿಸುತ್ತಾ ಗುಲಾಮರಾಗುತ್ತಿದ್ದೇವೆ. ಪ್ರೀತಿ, ಪ್ರೇಮಕ್ಕೆ ನಮ್ಮ ಸಂಸ್ಕೃತಿ ಶ್ರೇಷ್ಠ ಸ್ಥಾನವನ್ನು
ನೀಡಿದೆ. ಪ್ರೀತಿಯೆಂಬುದು  ಉದಾತ್ತ ಭಾವನೆ ಅದು
ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಇದನ್ನು ಅರಿಯದ ಇಂದಿನ ಯುವಜನತೆ ಡೇಗಳ ಆಚರಣೆಯಲ್ಲಿ ತೊಡಗಿದೆ.
ವ್ಯಾಲೆಂಟೈನ್ ಡೇ ಪಾಶ್ಚಾತ್ಯರ ವಿಕೃತ ರೂಡಿಯಾಗಿದೆ. ಇದರಿಂದ ಸಾಕಷ್ಟು ಅನಾಹುತಗಳಾಗುತ್ತಿವೆ.
ಗ್ರೀಟಿಂಗ್ ಕಾರ್ಡ್ ಕಂಪನಿಗಳು ತಮ್ಮ ವ್ಯಾಪಾರವನ್ನು ವೃದ್ದಿಸಿಕೊಳ್ಳಲು ವ್ಯಾಲೆಂಟೈನ್ ಡೇ
ಯನ್ನು ಪ್ರಚಾರ ಮಾಡುತ್ತಿವೆ. 
ವ್ಯಾಲೆಂಟೈನ್ ಡೇ ಎಂದರೆ ಏನು? ಈ ವ್ಯಾಲೆಂಟೈನ್ ಯಾರು? ಎಂಬ ವಿಚಾರಗಳು
ಸಾಕಷ್ಟು ಜನರಿಗೆ ತಿಳಿದಿಲ್ಲ. ಮೂರನೇ ಶತಮಾನದಲ್ಲಿ ರೋಮ್ ರಾಜನಾದ ಕ್ಲೌದಿಯಸ್ ಯುವಕರು ವಿವಾಹವಾಗದೇ
ಸೇನೆಯಲ್ಲಿ ಸೇರಬೇಕೆಂದು ಆದೇಶ ಹೊರಡಿಸಿದನು. ಈ ಆದೇಶಕ್ಕೆ ಬಗ್ಗದೇ  “ ವ್ಯಾಲೆಂಟೈನ್ “ ಎಂಬ ಕ್ರೈಸ್ತ ಧರ್ಮ ಗುರುವು ಯುವಕ ಯುವತಿಯರಿಗೆ
ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನಿಗೆ ವಿಷಯ ತಿಳಿದಾಗ ಧರ್ಮಗುರುವನ್ನು ಸೆರೆಮನೆಗೆ
ತಳ್ಳಿದನು ಮತ್ತು ಗಲ್ಲು ಶಿಕ್ಷೆ ವಿಧಿಸಿದನು. ಸೆರೆಮನೆಯಲ್ಲಿ ಸಂತನು ಸೆರೆಮನೆಯ ಅಧಿಕಾರಿಯ
ಪುತ್ರಿಯನ್ನು ಪ್ರೇಮಿಸ ತೊಡಗಿದನು. ಗಲ್ಲು ಶಿಕ್ಷೆ ಹಿಂದಿನ ದಿನ ಅವನು ಆ ಯುವತಿಗೆ “ ನಿನ್ನ
ವ್ಯಾಲೆಂಟೈನ್ “ ಎಂದು ಪತ್ರವನ್ನು ಬರೆದು ಕಳುಹಿಸಿದನು. ಈ ವ್ಯಾಲೆಂಟೈನ್ ಹುತಾತ್ಮನಂತೆ ಅವನ
ಸಲುವಾಗಿ ವ್ಯಾಲೆಂಟೈನ್ ಡೇ ಯನ್ನು ಆಚರಿಸಲಾಗುತ್ತಿದೆ. 14ನೇ ಶತಮಾನದವರೆಗೂ ವ್ಯಾಲೆಂಟೈನ್ ಡೇ
ಮತ್ತು ಪ್ರೀತಿಗೂ ಯಾವುದೇ ಸಂಬಂಧವಿರಲ್ಲ. ಬಹು ರಾಷ್ಟೀಯ ಕಂಪನಿಗಳು ಜನರನ್ನು ವಂಚಿಸಿ ತಮ್ಮ
ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಈ ವ್ಯಾಲೆಂಟೈನ್ ಡೇ ಯನ್ನು ಸೃಷ್ಟಿಸಿದ್ದಾರೆ. 
ಆಧುನಿಕತೆಯ ಹೆಸರಿನಲ್ಲಿ ಇಂದಿನ ಯುವಜನತೆ ಈ ಡೇಗಳೆಂಬ ವಿಕೃತಿಗಳನ್ನು
ಆಚರಿಸುತ್ತಿದೆ. ಇಂತಹ ಆಚರಣೆಗಳ ಮೂಲಕ ಯುವಕರು ಮದ್ಯಪಾನ ಮಾಡುವುದು, ಮಾದಕ ವಸ್ತುಗಳ ಸೇವನೆ
ಮಾಡುವುದು, ಪಬ್ ಗೆ ಹೋಗಿ ಲಿಂಗ ಭೇದವಿಲ್ಲದೆ ಕುಣಿಯುವುದು, ಯುವತಿಯರನ್ನು ಪೀಡಿಸುವುದು,
ಆತ್ಯಾಚಾರ ಮಾಡುವುದು ಮುಂತಾದ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿದೆ. ಯುವಕರನ್ನು ದಾರಿ ತಪ್ಪಿಸಲು
ಡ್ರಗ್ ಮಾಫಿಯಾ ಕೆಲಸ ಮಾಡುತ್ತಿದೆ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ
ಅಂಧಾನುಕರಣೆಯಿಂದ ಯುವಜನತೆ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸ್ವಾತಂತ್ರ್ಯದ
ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ. 
ಈ ವ್ಯಾಲೆಂಟೈನ್ ಡೇ ಆಚರಣೆಯಿಂದ ಹಲವಾರು ಅನಾಹುತಗಳು ಜರುಗುತ್ತಿವೆ. ಒಂದು
ಅಂಕಿ ಅಂಶದ ಪ್ರಕಾರ ಪ್ರೇಮಿಗಳ ದಿನದಂದು 202 ಆತ್ಯಾಚಾರ ಪ್ರಕರಣಗಳು ಜರುಗಿದೆ. ಮದ್ಯ
ಸೇವೆನೆಯಿಂದ 318 ಅಪಘಾತಗಳು ನಡೆದಿದೆ. 315 ಯುವತಿಯರು ನಾಪತ್ತೆಯಾಗಿದ್ದಾರೆ,  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾಲೆಂಟೈನ್ ಡೇ ದಿವಸ
ಗುಲಾಬಿ ಹೂಗಳ ಮಾರಾಟ ಹೆಚ್ಚಾಗಿ ನಡೆಯುತ್ತದೆ ಎಂದು ನೀವು ಭಾವಿಸಬಹುದು ಆದರೆ ಆತಂಕಕಾರಿ
ವಿಷಯವೇನು ಗೊತ್ತೇ? ಗುಲಾಬಿ ಹೂಗಿಂತ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳು ಹೆಚ್ಚು
ಮಾರಾಟವಾಗಿವೆ!. 2012 ವರ್ಷದ ಮಾಹಿತಿಯ ಪ್ರಕಾರ ಆನ್ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್ ಡೀಲ್.
ಕಾಮ್ ನಿಂದ ಭಾರತದಲ್ಲಿ ವ್ಯಾಲೆಂಟೈನ್ ಡೇ ದಿನದಂದು  ಒಂದೂವರೆ ಲಕ್ಷ ಕಾಂಡೋಮ್ ಮಾರಾಟವಾಗಿತ್ತು. ಕಾಂಡೋಮ್
ಕಂಪನಿಯ ವರದಿಯ ಪ್ರಕಾರ ವ್ಯಾಲೆಂಟೈನ್ ಡೇ ಅವಧಿಯಲ್ಲಿ ಕಾಂಡೋಮ್ ಮಾರಾಟ 25% ಹೆಚ್ಚಾಗುತ್ತದೆ.    
ದೇಶ ಕಟ್ಟುವ ಜವಾಬ್ದಾರಿ ಹೊರಬೇಕಾದ ಯುವಜನತೆ ಇಂದು ವ್ಯಾಲೆಂಟೈನ್ ಡೇ ಎಂಬ
ಆಚರಣೆಗಳ ಮೂಲಕ ತಮ್ಮ ಅಮೂಲ್ಯ ಜೀವನವನ್ನುಹಾಳು ಮಾಡಿಕೊಳ್ಳುತ್ತಿದ್ದಾರೆ. ಸ್ವೇಚ್ಛೆಯನ್ನೇ
ಸ್ವಾತಂತ್ರ್ಯವೆಂದು ಭಾವಿಸಿ ತಮ್ಮ ಕಾಲುಗಳಿಗೆ ತಾವೇ ಕೊಡಲಿಯೇಟು ಹಾಕಿಕೊಳ್ಳುತ್ತಿದೆ.  ಈ ಎಲ್ಲ ವಿಕೃತಿಗಳನ್ನು ಬಿಟ್ಟು ನಮ್ಮ  ಶ್ರೇಷ್ಠ ಸಂಸ್ಕೃತಿಯನ್ನು ನಮ್ಮ ಯುವಜನತೆ ಅನುಸರಿಸಬೇಕು.
ಪ್ರೇಮಿಗಳ ದಿನವನ್ನು ವಿರೋಧಿಸುವ ಭರದಲ್ಲಿ ಪ್ರೀತಿ, ಪ್ರೇಮವನ್ನು ನಿರಾಕರಿಸಲಾಗದು. ಓದಿ,
ಕಲಿತು, ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಸಮಯದಲ್ಲಿ ಪ್ರೀತಿಯ ಗುಂಗಿಗೆ ಬಿದ್ದು
ಬದುಕನ್ನು ಹಾಳುಮಾಡಿಕೊಳ್ಳುವುದು ಬುದ್ದಿವಂತಿಕೆಯಲ್ಲ. ಈ ವ್ಯಾಲೆಂಟೈನ್ ಡೇ ಅರ್ಥಹೀನ ಆಚರಣೆಗಳನ್ನು
ದಿಕ್ಕರಿಸಿ ಜಗತ್ತಿನ ಕಣ್ತೆರೆಸಿದ ನಮ್ಮ  ಶ್ರೇಷ್ಠ ಸಂಸ್ಕೃತಿಯನ್ನು ಪಾಲಿಸುತ್ತಾ ನಮ್ಮತನವನ್ನು
ನಾವು ಉಳಿಸಿಕೊಳ್ಳುವ ತುರ್ತು ಅವಶ್ಯಕತೆ ಇದೆ. 
ರವಿತೇಜ ಶಾಸ್ತ್ರೀ                                                                                     
               
