ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು
ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು
ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ
ಮರ ಹತ್ತಿದ್ದ ಹುಡುಗರು ಕಾಲ್ಕಿತ್ತರೆ, ಆ ಬಾಲಕ ಸಿಕ್ಕಿಬಿದ್ದ.ಮಾಲಿ ಹುಡುಗನಿಗೆ ಬೈದು,ಥಳಿಸಲಾರಂಭಿಸಿದ ಆ
ಬಾಲಕ ‘ನನ್ನನ್ನು ಬಿಟ್ಟು
ಬಿಡಿ,ನಾನು ಅಪ್ಪ ಇಲ್ಲದ
ಹುಡುಗ’ ಎಂದು
ಅಂಗಲಾಚಿದ.ಕರಗಿದ ಮಾಲಿ,’ಅಪ್ಪ ಇಲ್ಲದವನು ಇನ್ನು ಮೇಲೆ ಜವಾಬ್ದಾರಿಯುತವಾಗಿ ಇರುವುದನ್ನು ಕಲಿ’ ಎಂದು ಹೇಳಿ
ಬಿಟ್ಟುಬಿಟ್ಟ.ಅಲ್ಲಿಂದ ಇನ್ನೆಂದು ಇಂತ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ ಆ
ಹುಡುಗನಿಗೆ ಆಗ ೬-೭ ವರ್ಷವಿದ್ದಿರಬೇಕು.ಬಹುಷಃ ಅಂದೇ ಆತ ತನ್ನ ನಡೆ-ನುಡಿ
ಆದರ್ಶಪ್ರಾಯವಾಗಿರಬೇಕು ಅಂತ ನಿರ್ಧರಿಸಿಬಿಟ್ಟಿರಬೇಕು.ಅಂದುಕೊಂಡಂತೆ ಮಾಡಿಬಿಟ್ಟನಲ್ಲ
ಪುಣ್ಯಾತ್ಮ…!
ಮುಂದೆ ದೇಶದ ಎರಡನೇ ಪ್ರಧಾನಿಯಾಗಿ ತನ್ನ ಸರಳತೆ,ಸಜ್ಜನಿಕೆ,ಪಾರದರ್ಶಕತೆ,ನೈತಿಕತೆಯಿಂದಾಗಿ ಗಮನ ಸೆಳೆದ. ಆಯುಬ್ ಖಾನನ ಪಾಕಿಸ್ತಾನದ ಜುಟ್ಟು ಹಿಡಿದು ಬಗ್ಗಿಸಿದ, ಆ ವಾಮನ
ಮೂರ್ತಿಯ ಹೆಸರು ‘ಲಾಲ್ ಬಹಾದ್ದೂರ್ ಶಾಸ್ತ್ರೀಜಿ’.
ಶಾಸ್ತ್ರಿಯವರು ಶಾರದ ಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಗಳ ಮಗನಾಗಿ ೧೯೦೪ ಅಕ್ಟೋಬರ್ ೨ರಂದು ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದರು.ಗಾಂಧೀಜಿಯವರ ಅಸಹಕಾರ ಚಳುವಳಿ,ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮೂಂಚೂಣಿಯಲ್ಲಿದ್ದರು.ಅವರ ಪತ್ನಿಯ ಹೆಸರು ಲಲಿತ ದೇವಿ.ಅದು ಕ್ವಿಟ್ ಇಂಡಿಯಾ ಚಳುವಳಿಯ ಸಂಧರ್ಭ, ಹೋರಾಟಕ್ಕೆ ಹೊರಟು ನಿಂತಿದ್ದ ಶಾಸ್ತ್ರಿಯವರಿಗೆ,ಲಲಿತ ದೇವಿಯವರು ‘ಜೈಲುಗಳೆಲ್ಲ ಈಗಾಗಲೇ ತುಂಬಿವೆ ಇನ್ನು ನೀವೆಲ್ಲಿಗೆ ಹೊರಟಿರಿ’ ಅಂದರು , ಅದಕ್ಕೆ ನಸು ನಕ್ಕ ಶಾಸ್ತ್ರಿಗಳು ಹೀಗೆ ಹೇಳಿದ್ದರು ‘ನನ್ನ ಜಾಗ ಅಲ್ಲಿ ಮೊದಲೇ ಮೀಸಲಾಗಿಬಿಟ್ಟಿದೆ ಬಿಡು’.ಬಾಲ್ಯದಲ್ಲೇ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಮತ್ತು ಮಹಾತ್ಮರ ಪ್ರಭಾವಕ್ಕೊಳಗಾಗಿದ್ದ ಶಾಸ್ತ್ರಿಗಳು ತಮ್ಮ ನಿಷ್ಠೆ,ಸಜ್ಜನಿಕೆ ಹೆಸರುವಾಸಿಯಾದವರು.
ನೆಹರು ಮರಣದ ನಂತರ, ‘ನೆಹರೂ ನಂತರ ಯಾರು?’ ಅಂತ ಕೇಳುತಿದ್ದವರ ಎದುರಿಗೆ ಕಂಡಿದ್ದು ಶಾಸ್ತ್ರಿಗಳು.ಅದು ೬೪ರ ಇಸವಿ.ಎರಡು ವರ್ಷದ ಹಿಂದೆ ೬೨ರಲ್ಲಿ ಚೀನಿಗಳು ಮರೆಯಾಲಾರದ ಹೊಡೆತ ಕೊಟ್ಟಿದ್ದರು,ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಶಾಸ್ತ್ರಿಗಳು ಅಧಿಕಾರವಹಿಸಿಕೊಂಡಿದ್ದರು.ಅತ್ತ ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!
ಇತ್ತ ೬೨ರ ಯುದ್ಧದ ನಂತರ ದೇಶದ ರಕ್ಷಣಾ ವ್ಯವಸ್ತೆಯ ಮೇಲು ಅಪನಂಬಿಕೆಗಳು ಹುಟ್ಟಿದ್ದವು,ಇಂತ ಸಮಯದಲ್ಲೇ ಪಾಕಿಗಳು ಕಾಶ್ಮೀರದೊಳಕ್ಕೆ ನುಗ್ಗಿ ಬಂದಿದ್ದರು.ಜಮ್ಮುವಿನ ಚಾಮ್ಬ್ ಸೆಕ್ಟರ್ನೊಳಕ್ಕೆ ಬರೋಬ್ಬರಿ ೧೦೦ ಯುದ್ಧ ಟ್ಯಾಂಕುಗಳ ಜೊತೆಗೆ!
ಆ ದಿನ ರಾತ್ರಿ ಊಟಕ್ಕೆ ಅಂತ ಮನೆಗೆ ಬಂದ ಶಾಸ್ತ್ರಿಗಳನ್ನ ತುರ್ತಾಗಿ ಭೇಟಿಯಾಗಲು ಬಂದ ಮಿಲಿಟರಿ ಅಧಿಕಾರಿಗಳು,
‘ಸರ್ ,ಅವರು ಗಡಿ ದಾಟಿ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದ್ದಾರೆ.ಈಗ ನಾವು ಅವರ ದಿಕ್ಕು ತಪ್ಪಿಸಿ ಸಫಲರಾಗಬೇಕೆಂದರೆ ಲಾಹೋರ್ ಕಡೆ ನುಗ್ಗಬೇಕು’
‘ಸರಿ,ಹಾಗಿದ್ರೆ ಹೊರಡಿ ಲಾಹೋರ್ ಕಡೆ’
‘ಆದರೆ,ಲಾಹೋರ್ ಕಡೆ ನ್ನುಗುವುದು ಎಂದರೆ ಅಂತರಾಷ್ಟ್ರೀಯ ಗಡಿ ದಾಟಿದಂತೆ’
‘ಅವರು ಕಾಶ್ಮೀರಕ್ಕೆ ನುಗ್ಗಿಲ್ಲವೇ,ನಾವು ನುಗ್ಗೋಣ!’
ಅದು ೧೦-೧೫ ನಿಮಿಷಗಳ ಮಾತುಕತೆಯಲ್ಲಿ ತೆಗೆದುಕೊಂಡ ನಿರ್ಧಾರ.ಮುಂದೆ ಇದೆ ನಿರ್ಧಾರ ೧೯೬೫ ರ ಯುದ್ಧದಲ್ಲಿ ಆಯೂಬ್ ಖಾನನ ಪಾಕಿಸ್ತಾನ ‘ಲಾಲ್ ಬಹದ್ದೂರ್ ಶಾಸ್ತ್ರೀ’ ಎಂಬ ವಾಮನ ಮೂರ್ತಿಯೇದುರು ಮಂಡಿಯೂರಿ ಕುಳಿತು ಕೊಳ್ಳುವಂತೆ ಮಾಡಿದ್ದು!
ಯುದ್ಧ ಘೋಷಣೆಯಾದ ನಂತರ ಕೆಂಪುಕೋಟೆಯಲ್ಲಿ ದೇಶದ ಜನರನ್ನುದ್ದೇಶಿಸಿ ‘ಹತಿಯಾರೋನ್ ಕ ಜವಾಬ್ ಹತಿಯಾರೋನ್ ಸೆ ದೇಂಗೇ.ಹಮಾರ ದೇಶ್ ರಹೇಗ ತೋ ಹಮಾರ ತಿರಂಗ ರಹೇಗ (ಅಸ್ತ್ರಕ್ಕೆ ಪ್ರತಿಯಾಗಿ ಅಸ್ತ್ರದಲ್ಲೇ ಉತ್ತರ ನೀಡುತ್ತೇವೆ.ನಮ್ಮ ದೇಶ ಇದ್ದರೆ ನಮ್ಮ ತಿರಂಗವು ಇರುತ್ತದೆ) ಅಂದಿದ್ದರು,ಹಾಗೆ ಅಂತ ಸಮಯದಲ್ಲಿ ‘ಜೈ ಜವಾನ್-ಜೈ ಕಿಸಾನ್’ ಘೋಷಣೆ ಮಾಡುವ ಮೂಲಕ ಜನರ ಆತ್ಮಸ್ಥೈರ್ಯವನ್ನ ಹೆಚ್ಚಿಸಿದ್ದರು.
ನೆಹರು ಮಂತ್ರಿಮಂಡಲದಲ್ಲಿ ವಿವಿಧ ಖಾತೆಗಳನ್ನ ನಿರ್ವಹಿಸಿದ್ದ ಶಾಸ್ತ್ರಿಗಳು,ರೈಲ್ವೆ ಸಚಿವರಾಗಿದ್ದಾಗ ತಮಿಳುನಾಡಿನಲ್ಲಿ ನಡೆದ ರೈಲು ಅಪಘಾತದ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಿದ್ದರು,ಖುದ್ದು ನೆಹರು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು ಒಪ್ಪಲಿಲ್ಲ.ಶಾಸ್ತ್ರಿಗಳ ಮಗ ಅನಿಲ್ ಶಾಸ್ತ್ರಿಯವರು ಹೇಳಿದ್ದ ಪ್ರಸಂಗ ಹೀಗಿದೆ.ಅದೊಮ್ಮೆ ಅವರು ಕಾಶ್ಮೀರಕ್ಕೆ ಕಾರ್ಯ ನಿಮಿತ್ತ ಹೊರಡುವವರಿದ್ದರು.ಶಾಸ್ತ್ರಿಗಳ ಬಗ್ಗೆ ತಿಳಿದಿದ್ದ ನೆಹರು ಕೇಳಿದರು ‘ಕಾಶ್ಮೀರದಲ್ಲಿ ಈಗ ಹಿಮಪಾತವಾಗುತ್ತಿರುತ್ತದೆ,ನಿಮ್ಮಲ್ಲಿ ಚಳಿ ತಡೆಯುವ ಉಡುಪಿದೆಯೇ?’. ಶಾಸ್ತ್ರಿಗಳು ತಾವು ಧರಿಸಿದ್ದ ಕೋಟನ್ನ ತೋರಿಸಿದ್ದರು, ತಕ್ಷಣ ತಮ್ಮ ಬಳಿಯಿದ್ದ ಕೋಟನ್ನೇ ಶಾಸ್ತ್ರಿಗಳಿಗೆ ನೀಡಿದ್ದರಂತೆ ನೆಹರು.ಮರುದಿನ ಪತ್ರಿಕೆಗಳು ‘ನೆಹರುವಿನ ಜವಾಬ್ದಾರಿ ಈಗ ಶಾಸ್ತ್ರಿಗಳ ಮೇಲೆ ಬಿದ್ದಿದೆ’ ಅಂತ ವರದಿ ಮಾಡಿದ್ದವಂತೆ!’
೬೪ರ ಯುದ್ಧದ ವಿಜಯದ ನಂತರ ಭಾರತ-ಪಾಕ್ ನಡುವೆ ಸಂಧಾನಕ್ಕೆ ಬಂದಿದ್ದು ಸೋವಿಯತ್ ಯುನಿಯನ್.ತಾಷ್ಕೆಂಟ್ಗೆ ಹೊರಟು ನಿಂತಿದ್ದರು ಶಾಸ್ತ್ರಿಗಳು,ಆಗ ಭಾರತದ ಮುಗಿಲಲ್ಲಿ ಕಾರ್ಮೋಡ ಕವಿದಿತ್ತ!? ಗೊತ್ತಿಲ್ಲ.ತಾಷ್ಕೆಂಟ್ ಒಪ್ಪಂದಕ್ಕೆ ಹೊರಡುವ ಮುನ್ನ ಶಾಸ್ತ್ರಿಯವರ ತಾಯಿ,ಪತ್ರಕರ್ತರು ಹಾಗೂ ದೇಶದ ಬಹುತೇಕ ಜನರ ಆಶಯ ಒಂದೇ ಆಗಿತ್ತು ಅದು ಯುದ್ಧದಲ್ಲಿ ನಮ್ಮ ಪಡೆಗಳು ಗೆದ್ದ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ‘ಹಾಜಿಫೀರ್ ಮತ್ತು ತಿತ್ವ’ವನ್ನ ನಾವೇ ಉಳಿಸಿಕೊಳ್ಳಬೇಕು ಅನ್ನುವುದು.ತಾಷ್ಕೆಂಟ್ಗೆ ಹೊರಡುವ ಮುನ್ನ ಹಾಗೆ ಮಾಡುವೆ ಅಂತ ಹೊರಟಿದ್ದರು.
ಆದರೆ ಮಾತುಕತೆಯ ಸಮಯದಲ್ಲಿ ಸೋವಿಯತ್ನ ಅಧ್ಯಕ್ಷ ‘ಹಾಜಿಫೀರ್ ಮತ್ತು ತಿತ್ವ’ವನ್ನ ಅವರಿ ಬಿಟ್ಟುಕೊಡಿ ಅಂತ ಕೇಳಿದಾಗ,ಶಾಸ್ತ್ರಿಗಳು’ಹಾಗಿದ್ದರೆ,ನೀವು ಬೇರೊಬ್ಬ ಪ್ರಧಾನಿಯನ್ನ ಹುಡುಕಿಕೊಳ್ಳಿ’ಅಂದಿದ್ದರು.ಆದರೆ ನಂತರ ವಿಷಯ ಭದ್ರತಾ ಮಂಡಳಿಯವರೆಗೆ ಹೋಗುತ್ತದೆ ಅಂದಾಗ,ಪಾಕಿಸ್ತಾನ ಇನ್ಯಾವತ್ತು ಭಾರತದದೊಂದಿಗೆ ಅಸ್ತ್ರ ಪ್ರಯೋಗ ಮಾಡುವುದಿಲ್ಲ ಅನ್ನುವುದನ್ನ ಲಿಖಿತವಾಗಿ ಪಡೆದು,ಆ ಎರಡು ಜಾಗಗಳನ್ನ ಬಿಟ್ಟು ಕೊಡಲು ಒಪ್ಪಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿ ಬಿಟ್ಟರು!
ಒಪ್ಪಂದದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿದ ಕೆಲ ಪತ್ರಕರ್ತರು ‘ನೀವು ದೇಶವನ್ನ ಮಾರಿಕೊಂಡಿದ್ದಿರಿ’ ಅಂದಿದ್ದರು ಅಂತ ಶಾಸ್ತ್ರಿಗಳ ಪತ್ರಿಕಾ ಸಲಹೆಗಾರರಾಗಿದ್ದ ಕುಲದೀಪ್ ನಯ್ಯರ್ ಹೇಳುತ್ತಾರೆ.ಆ ಬಳಿಕ ಅವರ ಮನೆಗೆ ಕರೆ ಮಾಡಿದಾಗ ಅವರಮ್ಮ ಕೂಡ ಕೋಪದಿಂದ ಮಾತನಾಡಿರಲಿಲ್ಲವಂತೆ.ಬಹುಶ ಈ ಚಿಂತೆ ಹಾಗೂ ಒತ್ತಡಗಳೇ ಹೃದಾಯಘಾತಕ್ಕೆ ಕಾರಣವಾಗಿ ಶಾಸ್ತ್ರಿಗಳು ಕೊನೆಯುಸಿರೆಳೆದಿದ್ದರಾ?,ಇರಬೇಕು ಅನ್ನೋಣ ಅಂದ್ರೆ ‘ಅವ್ರ ಮೃತ ದೇಹದ ಶವ ಪರೀಕ್ಷೆ ಕೂಡ ಆಗಲಿಲ್ಲ,ಹಾಗೂ ಅವರ ಎದೆ,ಹೊಟ್ಟೆ,ಬೆನ್ನಿನ ಮೇಲೆ ನೀಲಿ ಗುರುತುಗಳಿದ್ದವು!’ ಅಂತ ಹೇಳುತ್ತಾರೆ ಅವರ ಇನ್ನೊಬ್ಬ ಮಗ ಸುನಿಲ್ ಶಾಸ್ತ್ರಿ.ಅವ್ರ ಅಂತ್ಯ ಮಾತ್ರ ೪೫ ವರ್ಷಗಳ ನಂತರವೂ ಇಂದಿಗೂ ನಿಗೂಡವಾಗಿಯೇ ಉಳಿದಿದೆ
ಶಾಸ್ತ್ರಿಗಳ ಅಂತ್ಯದೊಂದಿಗೆ ಈ ದೇಶದ ಜನ ಸಾಮಾನ್ಯರ ನಾಡಿ ಮಿಡಿತವನ್ನರಿತಿದ್ದ ಜನ ನಾಯಕ,ಸರಳತೆ-ಸಜ್ಜನಿಕೆಯ ಜನನಾಯಕನನ್ನ ದೇಶ ಕಳೆದುಕೊಂಡಿದ್ದಂತು ಕಟು ಸತ್ಯ!, ಅವರ ಕಣ್ಮರೆಯು ಭಾರತದ ಪ್ರಜಾಪ್ರಭುತ್ವವನ್ನ ವಂಶಾಡಳಿತದ ತೆಕ್ಕೆಗೆ ಸಿಕ್ಕಿಸಿತ್ತು. ಗಾಂಧಿಜಿ ಹುಟ್ಟಿದ ದಿನವೇ ಹುಟ್ಟಿ ಅವರು ಹೇಳುತಿದ್ದ ಆದರ್ಶಗಳನ್ನ ವಾಸ್ತವಕ್ಕೆ ತರುತಿದ್ದ ಶಾಸ್ತ್ರಿಗಳ ಅಕಾಲಿಕ ಕಣ್ಮರೆ ದೇಶಕ್ಕೆ ದೊಡ್ಡ ನಷ್ಟ.ಅಂತಹ ಪುಣ್ಯಾತ್ಮನ ಜನ್ಮದಿನವಿಂದು.ಭ್ರಷ್ಟಾಚಾರ,ವೋಟ್ ಬ್ಯಾಂಕ್ ರಾಜಕಾರಣದ ಈ ಕೆಟ್ಟ ಸಮಯದಲ್ಲಿ ಶಾಸ್ತ್ರಿಗಳನ್ತವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತ ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!
ಸಂಗ್ರಹ: ಎರಡು ವರ್ಷದ ಹಿಂದೆ ನಾನು ಸಂಗ್ರಹಿಸಿದ ಲೇಖನ ಲೇಖಕರ ಹೆಸರು ಮರೆತು ಹೋಗಿದೆ. ಈ ಲೇಖನದ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲಬೇಕು.