"ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ." ..... ಭಗತ್ ಸಿಂಗ್
ಪ್ರಪಂಚದ ಯಾವುದೇ ರಾಷ್ಟ್ರದ ಇತಹಾಸದ ಪುಟಗಳನ್ನು ತಿರುವಿಹಾಕಿದರೂ ಸಹ ಭಗತ್ ಸಿಂಗ್ ರಷ್ಟು ಚಿಕ್ಕ ವಯಸ್ಸಿನಲ್ಲೇ ಮಾನವ ಇತಿಹಾಸದಲ್ಲಿ ಅಚ್ಚಳಿಯದ ಛಾಪೊತ್ತಿರುವ ಅಪ್ರತಿಮ ಸಾಹಸಿಗರು ಕಾಣಸಿಗುವುದಿಲ್ಲ. ಧುಮ್ಮಿಕ್ಕುವ ಜಲಪಾತದಂತಹ ಹುಮ್ಮಸ್ಸು, ಎದೆ ಝಲ್ಲೆನ್ನಿಸುವ ಧೈರ್ಯ, ಎಂಥಹವರನ್ನೂ ವಿದ್ಯುತ್-ಸಂಚಲನಕ್ಕೀಡು ಮಾಡುವಂಥಹ ವ್ಯಕ್ತಿತ್ವ ಮತ್ತು ಬದುಕಿದ್ದಷ್ಟು ದಿನವೂಹುಲಿಯಂತೆ ಮುನ್ನುಗ್ಗುತ್ತಿದ್ದ ಭಗತ್, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ತಮ್ಮದೇಆದ ವಿಶೇಷ ಸ್ಥಾನವನ್ನು ಸೃಷ್ಟಿಸಿದ್ದಾರೆ. ಯುವ ಜನರ ಸ್ಫೂರ್ತಿ ಮತ್ತು ಕೆಚ್ಚೆದೆಯ ಪ್ರತೀಕದಂತಿದ್ದ ಅವರ ಜನಪ್ರಿಯತೆಯು ಕೋಟ್ಯಾಂತರ ಯುವಜನರ ಎಚ್ಚರಿಕೆ ಘಂಟೆಯ ಪ್ರತಿಧ್ವನಿಗಳಾಗಿ ಮಾರ್ಪಟ್ಟು ಬ್ರಿಟೀಷರಪಾಲಿಗೆ ಆಗಂತುಕನಂತೆ ಅಪ್ಪಳಿಸಿತೆಂದರೆ ಉತ್ಟ್ರೇಕ್ಷೆಯೆಂದೇನೂ ಅನಿಸದು. ಅವರು ಭಾರತೀಯ ಯುವಜನತೆಯ ವೀರೋಚಿತ ಹೋರಾಟಗಳು ಮತ್ತು ಸಾಹಸ ಶೌರ್ಯಗಳ ಮತ್ತೊಂದು ಮುಖವೆತ್ತಂತಿದ್ದರು.