Thursday, October 2, 2014

ಶಾಸ್ತ್ರೀಜಿಯವರ ಸಾವಿನ ಸುತ್ತ ಅನುಮಾನಗಳ ಹುತ್ತ!!

ಭಾರತ ಕಂಡ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪ್ರಧಾನಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಗ್ರಗಣ್ಯರು. ತತ್ವ, ಆದರ್ಶ ಸಹಿತ ರಾಜಕಾರಣವನ್ನು ಮಾಡಿದ ವಾಮನಮೂರ್ತಿ ಅವರು. ಕಳಂಕರಹಿತ ರಾಜಕಾರಣಕ್ಕೆ ಮತ್ತೊಂದು ಹೆಸರು ಶಾಸ್ತ್ರೀಜಿ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ.

ದೇಶದ ಎರಡನೇ ಪ್ರಧಾನಿಯಾಗಿ, ಶ್ರೇಷ್ಠ ಸ್ವಾಭಿಮಾನಿಯಾಗಿ ಭಾರತವನ್ನು ಶಾಸ್ತ್ರೀಜಿ ಮುನ್ನೆಡೆಸಿಡ ರೀತಿ ಅದ್ಭುತ. ಕೀಟಲೆ ಬುದ್ದಿಯ ಪಾಕಿಸ್ತಾನದ ವಿರುದ್ದ ಯುದ್ದ ಸಾರಿ ಪಾಕ್ ಪ್ರಧಾನಿ ಆಯುಬ್ ಖಾನ್ ನ  ಸೊಕ್ಕನನ್ನು ಅಡಗಿಸಿದ ಶಾಸ್ತ್ರೀಜಿ ಭಾರತದ ತಾಕತ್ತನ್ನು ಇಡೀ ಜಗತ್ತಿಗೆ ಅಂದು ತೋರಿಸಿದ್ದರು.


ಸ್ವಂತ ಗೃಹವನ್ನು ಮಾಡಿಕೊಳ್ಳದ ಏಕೈಕ ಗೃಹ ಮಂತ್ರಿ, ಹಣವನ್ನೇ ಮಾಡದ ನೀತಿವಂತ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರೀಜಿ. ಇಂದು ಲೂಟಿ ಮಾಡಲೆಂದೇ ರಾಜಕೀಯಕ್ಕೆ ಬರುವ ಕಪಟ ರಾಜಕಾರಣಿಗಳಿಗೆ ಶಾಸ್ತ್ರೀಜಿ ಆದರ್ಶವಾಗಬೇಕು. ಗಾಂಧಿಯ ತತ್ವಗಳನ್ನು ಕೊನೆಯ ಉಸಿರು ಪಾಲಿಸಿದ ಸಜ್ಜನ ಅವರು. ಸ್ವಚ್ಛ  ರಾಜಕಾರಣದ  ಈ ಮಾಣಿಕ್ಯ ಮರೆಯಾಯಿತು, ತೆರೆಮರೆಗೆ ಸರಿದು ಬಿಟ್ಟಿತು. ತಮ್ಮ ಹೆಸರಿಗೆ ‘ಗಾಂಧಿ’ ಪದವನ್ನು ಸಿಕ್ಕಿಸಿಕೊಂಡ ಡೋಂಗಿ ಗಾಂಧಿಗಳು ಮರೆಮಾಚುವ ಕೆಲಸವನ್ನು ನಾಜೂಕಾಗಿ ಮಾಡಿ ಮುಗಿಸಿಬಿಟ್ಟರು.

ಶಾಸ್ತ್ರೀಜಿಯವರ ಸಾವಿನ ಅಧ್ಯಾಯದ ಸತ್ಯಗಳು ಮರೀಚಿಕೆಯಾಗಿಯೇ ಉಳಿದುಬಿಟ್ಟಿದೆ.  ದೇಶಕ್ಕಾಗಿ ಶ್ರಮಿಸಿದ ಆ ಪುಣ್ಯಾತ್ಮನ ಸಾವು ಒಂದು ದುರಂತವೇ ಸರಿ. ಅವರ ಸಾವಿನ ಸತ್ಯಗಳನ್ನು ಮುಚ್ಚಿಟ್ಟು ಮಹಾನ್ ನಾಯಕನಿಗೆ ಮಾಡಿದ ಅವಮಾನ ಬಹಳ ಖೇದಕರ ವಿಚಾರ.
ಶಾಸ್ತ್ರೀಜಿ ಇಹಲೋಕ ಲೋಕ ತ್ಯಜಿಸಿ 48 ವರ್ಷಗಳಾದರೂ ಅವರ ಸಾವಿನ ಕಾರಣ ಇಂದಿಗೂ ನಿಗೂಢ. ಹಲವು ಒಳಸಂಚಿನ ಸಿದ್ದಾಂತಗಳಿವೆ. ಒಂದೊಂದು ಸಿದ್ದಾಂತಗಳು ಒಂದೊಂದು ರೀತಿಯಲ್ಲಿ ತಿಳಿಸುತ್ತವೆ.  ಯಾವುದು ಸತ್ಯ ಎಂದು  ನಿರ್ಧರಿಸುವುದು ಬಹಳ ಕಷ್ಟ.  ಮಹಾನ್ ನಾಯಕನ ಸಾವಿನ ಸತ್ಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವಿದು. ಅವರ ಹುಟ್ಟುಹಬ್ಬದ ಈ ಹೊತ್ತಿನಲ್ಲಿ ಸತ್ಯಗಳನ್ನು ಅರಿಯುವುದು ಬಹುಮುಖ್ಯವೆಂಬುದು ನನ್ನ ಭಾವನೆ.
ತಾಷ್ಕೆಂಟ್ ಒಪ್ಪಂದದ ನಂತರ ಜನವರಿ 11 1966 ರಂದು ಲಾಲ್ ಬಹದ್ದೂರ್ ಶಾಸ್ತ್ರೀ ಹೃದಯಾಘಾತದಿಂದ ಮೃತಪಟ್ಟರು ಎಂದು ಇತಿಹಾಸ ನಮ್ಮನ್ನು ನಂಬಿಸುತ್ತದೆ. ಆದರೆ ಈ ಕೆಳಗಿನ  ಸಂಗತಿಗಳು ಇದು ಸುಳ್ಳು ಎನ್ನುವುದಕ್ಕೆ ಪುಷ್ಟಿ ನೀಡುತ್ತವೆ.
·         ಒಬ್ಬ ವ್ಯಕ್ತಿ ಮೃತ ಪಟ್ಟರೆ ಅವರ ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಆದರೆ ಶಾಸ್ತ್ರೀಜಿಯವರ ಮರಣೋತ್ತರ ಪರೀಕ್ಷೆ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಒಬ್ಬ ಪ್ರಭಾವಿ ವ್ಯಕ್ತಿ, ಒಂದು ದೇಶದ ಪ್ರಧಾನಿಯ ಮರಣೋತ್ತರ ಪರೀಕ್ಷೆ ನಡೆಯದಿರುವುದು ಬಹಳಷ್ಟು ಅನುಮಾನಗಳನ್ನು ಸೃಷ್ಟಿಸುತ್ತದೆ.
·         1965 ಭಾರತ- ಪಾಕ್ ಯುದ್ದದಲ್ಲಿ ಭಾರತ ಮುಕ್ಕಾಲು ಭಾಗ ಗೆದ್ದುಬಿಟ್ಟಿತ್ತು. ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿತ್ತು. ಈ ಸಂಧರ್ಭದಲ್ಲಿ ಶಾಂತಿ ಮಾತುಕತೆ ನಡೆದು ಯುದ್ದ ನಿಂತಿತ್ತು. ಯುದ್ದದ ಹೀರೋ ಶಾಸ್ತ್ರೀಜಿಯಾಗಿದ್ದರು. ರಷ್ಯಾಗೆ ಹೋಗುವ ಮುನ್ನ ಶಾಸ್ತ್ರೀಜಿ ಆರೋಗ್ಯವಾಗಿದ್ದರು. ಆರೋಗ್ಯವಾಗಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿತು ಎಂದರೆ ನಂಬುವುದು ಅಸಾಧ್ಯ.
·         ಶಾಸ್ತ್ರೀಜಿಯವರ ಸಾವಿನ ಬಗ್ಗೆ ಮೊದಲ ಬಾರಿಗೆ ತನಿಖೆ ನಡೆಸಿದ ರಾಜ್ ನರೈನ್ ತನಿಖೆಯ ಯಾವುದೇ ಆಧಾರಗಳು ಇಂದಿಗೂ ಸರ್ಕಾರದ ಬಳಿ ಇಲ್ಲ. ಇದು ಮರೆಯಾಯಿತೋ? ಮರೆಮಾಚಲಾಯಿತೋ?
·         2009ರಲ್ಲಿ ಲೇಖಕ ಅನೂಜ್ ಧರ್ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯ ಮೂಲಕ ಶಾಸ್ತ್ರೀಜಿಯವರ ಸಾವಿನ ಕುರಿತು ಸೂಕ್ತ ದಾಖಲೆ ನೀಡಿ ಎಂದು ಪ್ರಧಾನಿಯ ಕಚೇರಿಗೆ ಕೇಳಿಕೊಂಡಾಗ “ನಮ್ಮ ಬಳಿ ಕೇವಲ ಒಂದು ದಾಖಲೆ ಇದೆ, ಆದರೆ ಅದನ್ನು ನೀಡಿದರೆ ದೇಶದ ಏಕತೆ ಮತ್ತು ಸಾರ್ವಭೌಮತೆ, ಸುರಕ್ಷೆತೆಗೆ ದಕ್ಕೆಯಾಗುತ್ತದೆ” ಎಂದು ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿತ್ತು. ಪ್ರಧಾನಿಯ ಸಾವಿಗೆ ಒಂದು ದಾಖಲೆ ಸಾಕೇ? ಎಂಬುದೇ ಇಲ್ಲಿ ಪ್ರಶ್ನೆ.
·         ಶಾಸ್ತ್ರೀಜಿ ಅವರ ಪತ್ನಿ ಲಲಿತಾ ಶಾಸ್ತ್ರೀ  ಶಾಸ್ತ್ರೀಜಿಯವರು ಆರೋಗ್ಯವಂತರಾಗಿದ್ದರು ಅವರಿಗೆ ಹೃದಯಾಘಾತವೆಂದರೆ ನಂಬುವುದು ಆಸಾಧ್ಯ. ಮತ್ತು ಶಾಸ್ತ್ರೀಜಿಯವರ ಮೃತ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ಆರೋಪಿಸಿದ್ದರು. ಶಾಸ್ತ್ರೀಜಿಯವರಿಗೆ ವಿಷವೂಣಿಸಿ ಕೊಲೆ ಮಾಡಲಾಯಿತೆ?
·         ಶಾಸ್ತ್ರೀಜಿಯವರ ಸಾವಿನ ಕುರಿತು ಸಾಕ್ಷಿ ಹೇಳಲು ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರು. ಒಬ್ಬರು ಆರ್. ಎನ್ ಚಾಗ್ ಶಾಸ್ತ್ರೀಜಿಯವರ ಅರೋಗ್ಯ ನೋಡಿಕೊಳ್ಳಲು ತಾಷ್ಕೆಂಟ್ ಗೆ ಹೋಗಿದ್ದ ವೈದ್ಯ. ಮತ್ತೊಬ್ಬರು ರಾಮ್ ನಾಥ್, ಶಾಸ್ತ್ರೀಜಿಯವರ ಸೇವಕ. ಆರ್. ಎನ್ ಚಾಗ್ ದೆಹಲಿಯಲ್ಲಿ ಸಾಕ್ಷಿ ಹೇಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿರುವಾಗ ಟ್ರಾಕ್ ಅವರ ವಾಹನಕ್ಕೆ ಒಡೆದು ಮೃತಪಟ್ಟರು. ರಾಮ್ ನಾಥ್ ಸಹ ಸಾಕ್ಷಿ ಹೇಳಲು ಪ್ರಯಾಣಿಸುತ್ತಿರುವಾಗ ಚಲಿಸುತ್ತಿದ್ದ ವಾಹನ ಅವರ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ನೆನಪಿನ ಶಕ್ತಿಯನ್ನೇ ಕಳೆದುಕೊಳ್ಳಬೇಕಾಯಿತು. ಇದು ಕಾಕತಾಳೀಯವೇ? ಕಾಕತಾಳೀಯ ಎಂದು ನಂಬುವುದು ಮೂರ್ಖತನವೇ ಸರಿ.

ಈ ಎಲ್ಲ ಸಂಗತಿಗಳು ಶಾಸ್ತ್ರೀಜಿಯವರ ಸಾವು ಸಹಜ ಸಾವಲ್ಲ ಎಂದು ಹೇಳುತ್ತವೆ. ಅರೋಗ್ಯಕರವಾಗಿದ್ದ ವ್ಯಕ್ತಿ ಹೇಗೆ ಸಾಯಲು ಸಾಧ್ಯ? ತಮ್ಮ ಜೀವಮಾನದಲ್ಲಿ ಒಮ್ಮೆಯೂ ಶಾಸ್ತ್ರೀಜಿಯವರಿಗೆ ಹೃದಯಾಘಾತವಾಗಿರಲಿಲ್ಲ. ಅಂತಹವರಿಗೆ ಹೃದಯಘಾತವಾಯಿತೇ? ಅವರಿಗೆ ವಿಷ ನೀಡಿ ಕೊಲೆ ಮಾಡಿರಬಹುದೆಂಬ ವದಂತಿಗಳೆ ಸತ್ಯದಂತೆ ಕಾಣಿಸುತ್ತದೆ. ಸಾಕ್ಷಿಗಳು ಅಸಹಜ ಸಾವೆಂದು ದೃಡಪಡಿಸುತ್ತವೆ ಆದರೆ ಕೊಂದವರು ಯಾರು? ಮರಣೋತ್ತರ ಪರೀಕ್ಷೆ ನಡೆಸದೇ ಇರುವುದು, ಸಾವಿನ ಸೂಕ್ತ ತನಿಖೆಯ ಅನುಪಸ್ಥಿತಿ. ಸಾಕ್ಷಿಗಳ ಅಸಹಜ ಸಾವು ಇವೆಲ್ಲವೂ ಸಾಕಷ್ಟು ಪ್ರಶ್ನೆ, ಅನುಮಾನ, ಗೊಂದಲಗಳನ್ನು ಹುಟ್ಟುಹಾಕುತ್ತದೆ.

ಇಂದಿರೆಯ ಕೈವಾಡವೋ? ಅಥವಾ ಸಿ.ಐ.ಎ ನ ಕುತಂತ್ರವೋ?    

ಶಾಸ್ತ್ರೀಜಿಯವರನ್ನು ಕೊಂದವರು ಯಾರು ಎಂದಾಗ ಸಹಜವಾಗಿಯೇ ನೆಹರೂವಿನ ಏಕ ಮಾತ್ರ ಪುತ್ರಿ ಇಂದಿರಾ ಗಾಂಧಿಯತ್ತ ಬೆರಳು ತೋರಿಸುತ್ತದೆ. ಪ್ರಧಾನಿ ಪಟ್ಟವನ್ನು ಗಳಿಸಲು ಇಂದಿರಾ ಗಾಂಧಿ ಶಾಸ್ತ್ರೀಜಿಯವರನ್ನು ಕೊಲ್ಲಿಸಿದರು ಎಂಬ ಅನುಮಾನ ಉಂಟಾಗುತ್ತದೆ. ಆದರೆ 1965 ರಲ್ಲಿ ಇಂದಿರಾ ಕ್ಯಾಬಿನೆಟ್ ಮಂತ್ರಿ ಸಹ ಆಗಿರಲಿಲ್ಲ. ಆಕೆ ಪ್ರಭಾವಿಯಾಗಿದ್ದು ಪ್ರಧಾನಿಯಾದ ನಂತರ. ಅಧಿಕಾರ ಏನು ಇಲ್ಲದೇ ವಿದೇಶದಲ್ಲಿ ಒಬ್ಬ ವ್ಯಕ್ತಿಯನ್ನು, ಪ್ರಧಾನಿಯನ್ನು ಕೊಲೆ ಮಾಡಿಸುವುದು ಸುಲಭದ ಕೆಲಸವಲ್ಲ. ಆಗಾಗಿ ಇಂದಿರಾಗಾಂಧಿಯ ಕೈವಾಡ ಈ ಕೊಲೆಯಲ್ಲಿಲ್ಲ ಎಂದು ನಂಬಬಹುದು.   
    
ರಾಬರ್ಟ್ ಕ್ರೌಲಿ ಎಂಬಾತ ತನ್ನ ಒಂದು ಸಂದರ್ಶನದಲ್ಲಿ ಶಾಸ್ತ್ರೀಜಿಯವರನ್ನು ಕೊಲೆ ಮಾಡಿದ್ದು ಅಮೇರಿಕಾದ  ಗುಪ್ತಚರ ಸಂಸ್ಥೆ ಸಿ.ಐ.ಎ  ಎಂದು ಆರೋಪಿಸಿದ್ದಾನೆ. 1965ರ ಯುದ್ದದಲ್ಲಿ ಪಾಕಿಸ್ತಾನಕ್ಕೆ ಅಮೇರಿಕ ಬೆಂಬಲ ನೀಡಿತ್ತು. ಅಮೇರಿಕಾದ ವಿರೋಧಿ ರಷ್ಯಾ ಭಾರತವನ್ನು ಬೆಂಬಲಿಸಿತ್ತು. ಭಾರತ ಮುಕ್ಕಾಲು ಭಾಗ ಪಾಕಿಸ್ತಾನವನ್ನು ಸೋಲಿಸಿತ್ತು. ಯುದ್ದದ ಗೆಲುವಿನ ರೂವಾರಿ ಶಾಸ್ತ್ರೀಜಿಯವರೆ ಆಗಿದ್ದರು. ಶಾಸ್ತ್ರೀಜಿ ಅಮೇರಿಕಾಗೆ ಶತ್ರುವಿನಂತೆ ಕಂಡಿದ್ದರು. ಪರಮಾಣು ಒಪ್ಪಂದವನ್ನು ಶಾಸ್ತ್ರೀಜಿ ನಿರಾಕರಿಸಿದ್ದರು. ತನ್ನ ಎದುರಾಳಿಗಳನ್ನು ಮುಗಿಸುವ ಕೆಲಸವನ್ನು ಅಮೇರಿಕಾ ಗುಪ್ತಚರ ಸಂಸ್ಥೆ ಸಿ.ಐ.ಎ ಗೆ ವಹಿಸಿತ್ತು. ರಷ್ಯದಲ್ಲಿ ತನ್ನ ಪ್ರಭಾವ ಬಳಿಸಿದ ಸಿ.ಐ.ಎ ಶಾಸ್ತ್ರೀಜಿಯವರಿಗೆ ವಿಷ ನೀಡಿ ಕೊಲೆ ಮಾಡಿರಬಹುದು.   
                                                     

ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಈ ಸತ್ಯ ಅವರಿಗೆ ಗೊತ್ತಾಯಿತು. ಆದರೆ ತನ್ನ ಕುರ್ಚಿಗೆ ಇದರಿಂದ ತೊಂದರೆ ಎಂದು ಭಾವಿಸಿ ಎಲ್ಲ ಸತ್ಯಗಳನ್ನು ಮರೆಮಾಚಿದರು. ಆಧಾರಗಳನ್ನು ನಾಶಪಡಿಸಿದರು. ಶಾಸ್ತ್ರೀಜಿಯವರಿಗೆ ಹುತಾತ್ಮ ಪದವಿ ಸಿಗಬಾರದು ಎಂದು ವ್ಯವಸ್ಥಿತ ಸಂಚು ರೂಪಿಸಿದ ಇಂದಿರಾ ಶಾಸ್ತ್ರೀಜಿಯವರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಪ್ರಯತ್ನಿಸಿದರು. ಇದಕ್ಕಾಗಿ ಇಂದಿರಾಗಾಂಧಿ ಸರ್ಕಾರ ಶಾಸ್ತ್ರೀಜಿಯವರ ಸಾವಿನ ತನಿಖೆಯನ್ನು ಮಾಡಲಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.

ಶಾಸ್ತ್ರೀಜಿಯವರ ಸಾವಿನ ನಿಜ ಕಾರಣ ತಿಳಿಯಬೇಕಾದರೆ ಸೂಕ್ತ ತನಿಖೆಯಾಗಬೇಕು ಆಧಾರಗಳಿಲ್ಲದೆ ಇದೇ ನಿಜವೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಸೂಕ್ತ ತನಿಖೆ ಮಾತ್ರ ಎಲ್ಲ ಅನುಮಾನ, ಗೊಂದಲಗಳಿಗೆ ಉತ್ತರ ನೀಡಬಲ್ಲದು. ಶಾಸ್ತ್ರೀಜಿಯವರ ಸಾವಿನ ಕುರಿತು ತನಿಖೆ ನಡೆಸಿ ಅವರ ಸಾವಿನ ಕಾರಣವನ್ನು ಜಗತ್ತಿಗೆ ತಿಳಿಯಪಡಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
ಈಗ ಹೊಸ ಸರ್ಕಾರ ಬಂದಿದೆ. ಮೋದಿಯಂತ ಶ್ರೇಷ್ಠ ನಾಯಕ ನಮಗೆ ದೊರಕಿದ್ದಾರೆ. ಅವರು ಸೂಕ್ತ ತನಿಖೆಗೆ ಆದೇಶಿಸುತ್ತಾರೆ ಎಂಬ ನಂಬಿಕೆ ನನಗಿದೆ .

ಆ ನೀರಿಕ್ಷೆಯಲ್ಲಿ

ರವಿತೇಜ ಶಾಸ್ತ್ರೀ

                             

Saturday, September 27, 2014

ಭಗತ್ ಸಿಂಗ್ ನ ಭವ್ಯ ವ್ಯಕ್ತಿತ್ವದ ಅನಾವರಣ

“ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ಕ್ರಾಂತಿಯ ಕತ್ತಿಯು ವಿಚಾರಗಳ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ”. ಹೀಗೆಂದವನು ಭಗತ್ ಸಿಂಗ್. ತನ್ನ ಇಪ್ಪತ್ಮೊರನೆ ವಯಸ್ಸಿಗೆ ಸ್ವರ್ವಸ್ವವನ್ನು ತೊರೆದು, ಹಸನ್ಮುಖಿಯಾಗಿ ಗಲ್ಲಿಗೇರಿ ಕೋಟ್ಯಾಂತರ ಯುವಜನತೆಯ ಸ್ಪೂರ್ತಿಯಾದ ಭಗತ್ ಸಿಂಗ್ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಸ್ಥಾನವನ್ನು ಆಲಂಕರಿಸಿದ್ದಾನೆ, ಅಂದಿನ ಯುವಜನತೆಯ ಆಶಾಕಿರಣವಾಗಿದ್ದ ಭಗತ್ ಸಿಂಗ್ ನ ವ್ಯಕ್ತಿತ್ವ ಬಲು ಆಕರ್ಷಕ. ಆತನ  ವ್ಯಕ್ತಿತ್ವ ಇಂದಿನ ಯುವಜನತೆಗೂ ಆದರ್ಶ. ಭಗತ್ ಸಿಂಗ್ ನ ವ್ಯಕ್ತಿತ್ವದ ನಾನಾ ಮಜಲುಗಳನ್ನು ಅನಾವರಣಗೊಳಿಸುವ ಪುಟ್ಟ ಪ್ರಯತ್ನವಿದು.
ಜನ್ಮಜಾತ ಕ್ರಾಂತಿಕಾರಿ: 
ಭಗತ್ ಸಿಂಗ್ ಹುಟ್ಟಿದ್ದೇ ಕ್ರಾಂತಿಕಾರಿಯಾಗಲು, ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು, ಎಂದರೆ ಅತಿಶಯೋಕ್ತಿಯಲ್ಲ. ಭಗತ್ ಸಿಂಗ್ ನ ಇಡೀ ಕುಟುಂಬವೇ ಕ್ರಾಂತಿಕಾರಿ ಕುಟುಂಬವಾಗಿತ್ತು, ಭಗತ್ ಸಿಂಗ್ ರ ತಾತ ಅರ್ಜನ್ ಸಿಂಹ ಆರ್ಯ ಸಮಾಜದ ಸದಸ್ಯರಾಗಿದ್ದರು. ರಣಜಿತ್ ಸಿಂಹನ ಸೈನ್ಯದಲ್ಲಿದ್ದರು. ತಂದೆ ಕಿಶನ್ ಸಿಂಹರು ಸಹ ತಂದೆಯ ಹಾದಿಯನ್ನೇ ಹಿಡಿದ್ದರು. ಚಿಕ್ಕಪ್ಪಂದಿರಾದ ಅಜಿತ್ ಸಿಂಹ ಮತ್ತು ಸ್ವರ್ಣ ಸಿಂಹರು ಶ್ರೇಷ್ಠ ಕ್ರಾಂತಿಕಾರಿಗಳಾಗಿದ್ದರು. ಇಂತಹ ಕುಟುಂಬದಲ್ಲಿ ಮತ್ತೊಬ್ಬ  ಕ್ರಾಂತಿಕಾರಿ ಹುಟ್ಟದೇ ಮತ್ಯಾರು ಹುಟ್ಟಲು ಸಾಧ್ಯ?
ಅರ್ಜುನನ ಮಗ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವುದನ್ನು ಹೇಗೆ ಕಲಿತಿದ್ದನೋ ಹಾಗೆಯೇ ಭಗತ್ ಸಿಂಗ್ ಗರ್ಭದಲ್ಲಿರುವಾಗಲೇ ಕ್ರಾಂತಿಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ಭಗತ್ ಸಿಂಗ್ ಜನ್ಮಜಾತ ಕ್ರಾಂತಿಕಾರಿಯಾಗಿದ್ದ.


ಕರುಣಾಮಯಿ ಮತ್ತು ಸ್ನೇಹಮಯಿ:

ಭಗತ್ ಸಿಂಗ್ ನ ಕ್ರಾಂತಿಕಾರಿ ಸ್ವಭಾವವನ್ನು  ಬದಿಗಿಟ್ಟು ಆತನ ಸ್ವಭಾವವನ್ನು ವಿಶ್ಲೇಷಿಸಿದರೆ ಆತ ಕರುಣಾಮಯಿ, ಸ್ನೇಹಮಯಿ ಮತ್ತು ಹಾಸ್ಯ ಪ್ರವೃತ್ತಿಯುಳ್ಳನಾಗಿದ್ದನೆಂದು ತಿಳಿಯುತ್ತದೆ.
ಭಗತ್ ಸಿಂಗ್ ಕ್ರಾಂತಿ ಮಾರ್ಗವನ್ನು ಹಿಡಿದಿದ್ದ ಆದರೆ ಆತ ಅಹಿಂಸಾವಾದದಲ್ಲಿ ನಂಬಿಕೆ ಹೊಂದಿದ್ದ. ಪ್ರಾಣಿಗಳನ್ನು ಮನುಷ್ಯರಂತೆ ಕಾಣುತ್ತಿದ್ದ. ಭಗತ್ ಸಿಂಗ್ ರ ಜಮೀನಿನಲ್ಲಿ ಕೆಲಸ ಮಾಡಲು ತುಂಬಾ ಬಡತನವಿದ್ದ  ಆಳುಗಳು ಬರುತ್ತಿದ್ದರು. ಭಗತ್ ಸಿಂಗ್ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದ, ಅವರೊಂದಿಗೆ ಬೆರೆಯುತ್ತಿದ್ದ.  ಕಷ್ಟದಲ್ಲಿರುವರಿಗೆ ಹಣದ  ಸಹಾಯವನ್ನೂ ಮಾಡುತ್ತಿದ್ದ. ಮಂಗಳಸಿಂಹ ಎಂಬ ಆಳು ತುಂಬಾ ಸಾಲ ಮಾಡಿ ಅದನ್ನು ಪಾವತಿಸಲು ಆಗದೆ ಕಷ್ಟಪಡುತ್ತಿದ್ದ. ಈ ಸಾಲವನ್ನು ಭಗತ್ ಸಿಂಗ್  ತೀರಿಸಿ  ಹೆಚ್ಚು ಸಾಲಮಾಡಬೇಡ ಎಂದು ಮಂಗಳಸಿಂಹನಿಗೆ ಬುದ್ದಿ ಹೇಳಿದ್ದ.
ಶತ್ರುವಿನಲ್ಲೂ ಸ್ನೇಹವನ್ನು ಬಯಸುವ ಶ್ರೇಷ್ಠ ವ್ಯಕ್ತಿತ್ವ ಭಗತ್ ಸಿಂಗ್ ಅವರದ್ದಾಗಿತ್ತು. ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಮಾತುಗಳಿಂದ ಎಲ್ಲರನ್ನು ತನ್ನ ಮಿತ್ರರನ್ನಾಗಿಸುತ್ತಿದ್ದ ಭಗತ್  ಸ್ನೇಹಮಯಿಯಾಗಿದ್ದ. ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಸಾಕಷ್ಟು ಬ್ರಿಟಿಷ್ ಪುರುಷ ಮತ್ತು ಸ್ತ್ರೀಯರು ಅವನನ್ನು ಭೇಟಿ ಮಾಡಲು ಬರುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಭಗತ್ ಸಿಂಗ್ ನೊಂದಿಗೆ ಕಟ್ಟುನಿಟ್ಟಾಗಿರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ತನ್ನ 
ಹಾಸ್ಯಮಯ ಸ್ವಭಾವದಿಂದ ಅವರ ಮನವನ್ನು ಗೆಲ್ಲುತ್ತಿದ್ದ ಭಗತ್ ಸಿಂಗ್.

ಶ್ರೇಷ್ಠ ಮಾನವತಾವಾದಿ:

ಭಗತ್ ಸಿಂಗ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿದ ಪ್ರಕರಣದಲ್ಲಿ ತನಗೆ ಗಲ್ಲು ಶಿಕ್ಷೆಯಾಗುತ್ತದೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿದಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ  ನನ್ನಂತವರ ಬಲಿದಾನ ಅವಶ್ಯಕವೆಂದು ಆತ ಭಾವಿಸಿದ್ದ. ಆದರೆ ತನ್ನಿಂದ ಮತ್ತೊಬ್ಬರಿಗೆ ತೊಂದರೆಯಾಗುವುದನ್ನು ಭಗತ್ ಸಿಂಗ್ ಸಹಿಸುತ್ತಿರಲಿಲ್ಲ. ಅಸೆಂಬ್ಲಿ ಸ್ಪೋಟದ ನಂತರ ಭಗತ್ ಸಿಂಗ್ ಮತ್ತು ಆತನ ಗುಂಪಿನ ಎಲ್ಲ ಕ್ರಾಂತಿಕಾರಿಗಳ ಬಂಧನವಾಯಿತು. ಬ್ರಿಟಿಷರು ಈ ಕ್ರಾಂತಿಕಾರಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದರು. ಇದರಿಂದ ತೀವ್ರ ದುಃಖಿತನಾಗಿದ್ದ ಭಗತ್ ಸಿಂಗ್ “ ನನ್ನಿಂದ ನನ್ನ ಅಮಾಯಕ ಸ್ನೇಹಿತರು ದುಃಖಕ್ಕೆ ಒಳಗಾಗುತ್ತಿದ್ದಾರೆ “  ಎಂದು ಮರುಕಪಡುತ್ತಿದ್ದ.
ಒಮ್ಮೆ ಕೋರ್ಟಿನಲ್ಲಿ ಸರ್ಕಾರಿ ಸಾಕ್ಷಿ ಹಂಸರಾಜ್ ಬೊಹರಾ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದ. ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆಯೇ ಸರಿ ಎಂದು ಅವನು ಹೇಳಿಕೆ ನೀಡುತ್ತಿದ್ದ. ಭಗತ್ ಸಿಂಗ್ ಅವನನ್ನೇ ದಿಟ್ಟಿಸಿ ನೋಡುತ್ತಿದ್ದ.  ಸ್ವಲ್ಪ ಸಮಯದ ನಂತರ ಭಗತ್ ಸಿಂಗ್ ನ ಕಣ್ಣಿನಲ್ಲಿ ಅಶ್ರುಧಾರೆ. ಮಹಾನ್ ಕ್ರಾಂತಿಕಾರಿ ಕಣ್ಣಿರು ಸುರಿಸಿದ. ಇದಕ್ಕೆ ಪ್ರತಿಯಾಗಿ ಹಂಸರಾಜನು ಕಣ್ಣಿರು ಸುರಿಸಿದ್ದ. ಭಗತ್ ಸಿಂಗ್ ಗಲ್ಲು ಶಿಕ್ಷೆಯನ್ನು ನೆನೆದು ಅತ್ತನೆ? ಮೃತ್ಯುವನ್ನು ವರದಾನದ ರೂಪದಲ್ಲಿ ಪಡೆದ ಆತ ಆಳಲು ಸಾಧ್ಯವೇ ? ಭಗತ್ ಸಿಂಗ್ ಹಂಸರಾಜನ ಸ್ಥಿತಿಯನ್ನು ಕಂಡು ಅತ್ತಿದ್ದ. ಬ್ರಿಟಿಷರು ಅವನಿಂದ ಸಾಕ್ಷಿ ಹೇಳಿಸಲು ಕೊಟ್ಟ ಭೀಕರ ಶಿಕ್ಷೆಯನ್ನು ನೆನೆದು ನನ್ನ ತಪ್ಪಿನಿಂದ ಹಂಸರಾಜ ನೋವು ಅನುಭವಿಸಬೇಕಾಯಿತು ಎಂದು ಪಶ್ಚಾತಾಪದಿಂದ ಅವನು ಕಣ್ಣಿರು ಸುರಿಸಿದ್ದ.


ಕ್ರಾಂತಿಯ ದಾರ್ಶನಿಕ:

ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಜನರು ಹೋರಾಡಿದರು. ಆದರೆ ಬಹಳಷ್ಟು ಹೋರಾಟಗಾರರು ಸ್ವಾತಂತ್ರ್ಯ ಭಾರತದ ಕನಸನಷ್ಟೇ ಕಂಡಿದ್ದರು. ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕೆಂಬುದರ ಬಗ್ಗೆ ಅವರು ಯೋಚಿಸಿರಲಿಲ್ಲ. ವೀರ ಸಾವರ್ಕರ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಈ ಕುರಿತು ಯೋಚಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸಮೃದ್ದ ರಾಷ್ಟ್ರವಾಗಬೇಕೆಂದು ಭಗತ್ ಸಿಂಗ್  ಬಯಸಿದ್ದ. ಸಾಮ್ರಾಜ್ಯವಾದವನ್ನು ಕಿತ್ತೆಸೆದು ಸಮಾಜವಾದವನ್ನು ಪ್ರತಿಷ್ಟಾಪಿಸಬೇಕು, ಸರ್ವರೂ ಸುಖದಿಂದ ಬಾಳಬೇಕೆಂದು ಭಗತ್ ಸಿಂಗ್ ಯೋಚಿಸಿದ್ದ. ಅತಿ ಚಿಕ್ಕ ವಯಸ್ಸಿನಲ್ಲೆಯೇ ಅಮೋಘ ದೂರದೃಷ್ಟಿಯ ಯೋಚನಾಲಹರಿಯನ್ನು  ಹೊಂದಿದ್ದ ಭಗತ್ ಸಿಂಗ್ ನನ್ನು ಭಾರತದ ಕ್ರಾಂತಿಯ ದಾರ್ಶನಿಕನೆಂದು ಕರೆಯಬಹುದು.
                            
ಉತ್ತಮ ಲೇಖಕ:

23 ನೇ ವಯಸ್ಸಿಗೆಯೇ ತನ್ನ ಆತ್ಮಕತೆ ಬರೆದವವನು ಭಗತ್ ಸಿಂಗ್! ಅಲ್ಪಾವಧಿಯಲ್ಲಿಯೇ ಇಂತಹ ಸಾಧನೆಗೈದ ಭಗತ್ ಸಿಂಗ್ ನನ್ನು ಶ್ರೇಷ್ಠ ಲೇಖಕನೆನ್ನಬಹುದು. 300ಕ್ಕೂ ಹೆಚ್ಚು ಕೃತಿಗಳನ್ನು ಓದಿದ್ದ ಭಗತ್ ಸಿಂಗ್, ಹಲವು ಲೇಖನಗಳು ಮತ್ತು  ಗ್ರಂಥಗಳನ್ನು ರಚಿಸಿದ್ದ. ‘ ಐಡಿಯಲ್ ಆಫ್ ಸೋಷಿಯಲಿಸಂ’ , ‘ ದಿ ಡೋರ್ ಟು ಡೆತ್’ , ‘ದಿ ರೆವೆಲ್ಯೂಷನರೀಸ್ ಆಫ್ ಇಂಡಿಯಾ ವಿತ್ ದಿ ಶಾರ್ಟ್ ಬಯಾಗ್ರಾಫಿಕ್ ಸ್ಕೆಚಸ್ ಆಫ್ ದಿ ರೆವೆಲ್ಯೂಷನರೀಸ್’ ಈ ಕೃತಿಗಳನನ್ನು  ಭಗತ್ ಸಿಂಗ್ ಬರೆದಿದ್ದ . ತನ್ನ ಬರವಣಿಗೆಯ ಮೂಲಕ ದೇಶವನ್ನು ಬಡಿದೆಬ್ಬಿಸಬೇಕೆಂದು ಭಗತ್ ಸಿಂಗ್ ಬಯಸಿದ್ದ ಆದರೆ ಆತನ ಆಸೆ ಈಡೇರಲಿಲ್ಲ. ಈ ಯಾವ ಕೃತಿಗಳು ಪ್ರಕಟವಾಗಲೇ ಇಲ್ಲ. ಆ ಕೃತಿಗಳು ದೊರತಿದ್ದರೆ ಭಗತ್ ಸಿಂಗ್ ನ ಬಗ್ಗೆ ಮತ್ತಷ್ಟು ತಿಳಿಯಬಹುದಿತ್ತೇನೋ ಆದರೆ ಅದು ಸಾಧ್ಯವಾಗಲಿಲ್ಲ. ಇದು ದೌರ್ಭಾಗ್ಯದ ಸಂಗತಿ.
  
ಇಷ್ಟೇ ಅಲ್ಲದೇ ಭಗತ್ ಸಿಂಗ್ ಶ್ರೇಷ್ಠ ನಾಯಕನೂ ಆಗಿದ್ದ  ನೌ ಜವಾನ್ ಭಾರತ್ ಸಭಾ ಮತ್ತು ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಎಂಬ ಸಂಘಟನೆಗಳನ್ನು  ಮುನ್ನೆಡೆಸಿದ ರೀತಿ ಆತನ ಶ್ರೇಷ್ಠ ನಾಯಕತ್ವ ಗುಣಕ್ಕೆ ಸಾಕ್ಷಿ. ಭಗತ್ ಸಿಂಗ್ ಉತ್ತಮ ನಾಟಕ ಕಲಾವಿದ ಮತ್ತು ಹಾಡುಗಾರನೂ ಸಹ ಆಗಿದ್ದ. ಲಾಹೋರ್ ನ ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ ನಾಟಕಗಳಲ್ಲಿ ಅಭಿನಯಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದ. ಸುಂದರವಾಗಿ ಮತ್ತು ಅದ್ಭುತವಾಗಿ ಹಾಡುವ ಕಲೆಯನ್ನೂ ಭಗತ್ ಸಿಂಗ್ ರೂಡಿಸಿಕೊಂಡಿದ್ದ.

ಬಾಲ್ಯದಲ್ಲಿ ಹೊಲದಲ್ಲಿ ಬಂದೂಕು ಬೆಳೆಯುತ್ತೆನೆಂದ ಹೊತ್ತಿನಿಂದ ಹಿಡಿದು ಕೊನೆಗೆ ನಗುನಗುತ್ತಾ ಗಲ್ಲುಗಂಬವೇರುವರೆಗೂ ಭಗತ್ ಸಿಂಗ್ ಮಾಡಿದ್ದು ಸ್ವಾತಂತ್ರ್ಯ ಲಕ್ಷ್ಮಿಯ ಜಪ. ಇಂತಹ ಮಹಾನ್ ಕ್ರಾಂತಿಕಾರಿಯ ಗುಣಗಳನ್ನು ಅರಿಯುವುದೇ ನಾವು ಆತನಿಗೆ ಸಲ್ಲಿಸುವ ನಿಜವಾದ ಗೌರವ.

ಇಂದು ಸೆಪ್ಟೆಂಬರ್ 28. ಕ್ರಾಂತಿ ಶಿರೋಮಣಿ ಭಗತ್ ಸಿಂಗ್ ಜನಿಸಿದ ಪುಣ್ಯ ದಿನ. ಆ ಹುತಾತ್ಮ ಜನಿಸಿ ಇಂದಿಗೆ 107 ವರ್ಷಗಳಾಯಿತು. ಆ ಧೀರ ಹುತಾತ್ಮನನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಗತ್ ಸಿಂಗ್ ಗೆ ನುಡಿನಮನಗಳು.

ಇಂಕ್ವಿಲಾಬ್ ಜಿಂದಾಬಾದ್ 
       
ರವಿತೇಜ ಶಾಸ್ತ್ರೀ
ಉತ್ತಿಷ್ಠ ಭಾರತ